ಅನಂತಸ್ವಾಮಿ ಕಲ್ಲು ಬಸದಿ, ಹಿರಿಯಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ಶ್ರೀ ಅನಂತಸ್ವಾಮಿ ಕಲ್ಲು ಬಸದಿಯು ಕಾರ್ಕಳ ತಾಲ್ಲೂಕಿನ ಹಿರಿಯಂಗಡಿಯಲಿದೆ. ಇದು ಹಿರಿಯಂಗಡಿಯ ಪ್ರಸಿದ್ಧ ಬಸದಿಯಾಗಿದೆ.

ಹೊರಾಂಗಣ[ಬದಲಾಯಿಸಿ]

ಈ ಬಸದಿಯ ಎಡಭಾಗದಲ್ಲಿ ಗುರುಬಸದಿ ಹಾಗೂ ಬಲಬದಿಯಲ್ಲಿ ಆದಿನಾಥ ಸ್ವಾಮಿ ಬಸದಿ ಇದೆ. ಇದು ಕಾರ್ಕಳ ಜೈನಮಠಕ್ಕೆ ಸೇರಿದೆ

ಮಾರ್ಗ[ಬದಲಾಯಿಸಿ]

ತಾಲೂಕು ಕೇಂದ್ರದಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ತಲುಪಲು ಆನೆಕೆರೆಯಿಂದ ಹಿರಿಯಂಗಡಿ ರಸ್ತೆ ಮೂಲಕ ಸಾಗಬೇಕು.

ಇತಿಹಾಸ[ಬದಲಾಯಿಸಿ]

ಶ್ರೀ ಅನಂತನಾಥ ಕಲ್ಲು ಬಸದಿಯನ್ನು ವೀರಪಾಂಡ್ಯ ಭೈರವ ಅರಸರ ವಂಶಸ್ಥರು ಸ್ಥಾಪಿಸಿದ್ದಾರೆ. ಇದಕ್ಕೆ ಸರಿಸುಮಾರು ಏಳುನೂರು ವರ್ಷಗಳ ಇತಿಹಾಸವಿದೆ. ಇದನ್ನು ೧೯೯೮ ರಲ್ಲಿ ಜೀರ್ಣೋದ್ದಾರಗೊಳಿಸಲಾಗಿದೆ.

ಒಳಾಂಗಣ ವಿನ್ಯಾಸ[ಬದಲಾಯಿಸಿ]

ಮುಂಭಾಗದಲ್ಲಿ ಭದ್ರ ಮಂಟಪವಿದ್ದು ೧೬ ಕಂಬಗಳಿಂದ ಇದನ್ನು ನಿರ್ಮಿಸಲಾಗಿದೆ. ಈ ಬಸದಿಗೆ ಮೇಗಿನ ನೆಲೆ ಇಲ್ಲ. ಮುಂಭಾಗದಲ್ಲಿ ಮಾನಸ್ತಂಭವಿದ್ದು, ಅಲ್ಲಿರುವ ಸುತ್ತಮುತ್ತಲಿನ ೯ ಬಸದಿಗಳಿಗೆ ಇದೊಂದೇ ಮಾನಸ್ತಂಭವಾಗಿದೆ. ಬಸದಿಯ ಹಿಂಭಾಗದಲ್ಲಿ ಒಂದು ಪಾರಿಜಾತ ಹೂವಿನ ಗಿಡ ಹಾಗೂ ಬಸದಿಯ ಬಲಭಾಗದಲ್ಲಿ ಒಂದು ತೀರ್ಥ ಬಾವಿ ಇದೆ. ಸುತ್ತಲೂ ಮುರ ಕಲ್ಲಿನಿಂದ ಮಾಡಿದ ರಕ್ಷಣಾ ಗೋಡೆ ಇದೆ. ಅಂತೆಯೇ ಬಸದಿಯ ಮುಂಭಾಗದಲ್ಲಿರುವ ಗೋಪುರ ಮಂಟಪವು ಪಟ್ಟಕಗಳಿರುವ ೧೦ ಪ್ರಬಲ ಶಿಲಾಸ್ತಂಭಗಳಿಂದ ರೂಪಿತವಾದ ವಿಶೇಷ ಸಂದರ್ಭಗಳಲ್ಲಿ ಜನರಿಗೆ ಕುಳಿತುಕೊಳ್ಳಲು ಅನುಕೂಲಕರವಾಗಿದೆ. ಬಸದಿಯು ಉತ್ತರಾಭಿಮುಖವಾಗಿದೆ. ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ಯಾವುದೇ ದ್ವಾರಪಾಲಕರ ಚಿತ್ರಗಳಿಲ್ಲ. ಕಲ್ಲಿನ ದ್ವಾರದ ಮೇಲೆ ಚಿಕ್ಕದಾಗಿ ತೀರ್ಥಂಕರರ ಆಕೃತಿ ಇದೆ. ಬಸದಿಯ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳ ಮಂಟಪವಿದ್ದು ಅಲ್ಲಿ ೫ ಜಯ ಘಂಟೆಗಳನ್ನು ತೂಗುಹಾಕಲಾಗಿದೆ. ಈ ಕಂಬಗಳು ಚೌಕಾಕೃತಿಯಿಂದ ಕೂಡಿದ್ದು ಅದರ ಮೇಲೆ ಯಾವುದೇ ಕೆತ್ತನೆಗಳಿಲ್ಲ. ಇದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥಂಕರ ಮಂಟಪ ಎಂದು ಕರೆಯುತ್ತಾರೆ. ಈ ಮಂಟಪದಲ್ಲಿ ಗಂಧಕುಟಿ ಇಲ್ಲ. ತೀರ್ಥಂಕರ ಮಂಟಪದ ಮುಂದೆ ಶುಕನಾಸವಿದೆ. ಅನಂತರ ಕೊನೆಯಲ್ಲಿ ಗರ್ಭಗುಡಿ. ಒಟ್ಟಿನಲ್ಲಿ, ಗರ್ಭಗೃಹ ಸುಖನಾಸಗಳು ಚತುರಸ್ರವಾಗಿದ್ದು ಇಡೀ ಬಸದಿಯು ಆಯತಾಕಾರದ ಅಧಿಷ್ಠಾನದ ಮೇಲೆ ಶಿಲಾಮಯವಾಗಿ ನಿರ್ಮಾಣಗೊಂಡಿದೆ. ೧೨ ಬಲವಾದ ಕಂಬಗಳಿಂದ ಭದ್ರವಾಗಿದೆ. ಭಗವಾನ್ ಅನಂತನಾಥಸ್ವಾಮಿಯ ಸನ್ನಿಧಿಗೆ ಮುನ್ನಡೆಸುವ ಸ್ವರ್ಗ ಸೋಪಾನದಂತೆ ಭದ್ರ ಮಂಟಪ, ನಮಸ್ಕಾರ ಮಂಟಪ, ಶುಕನಾಸ, ಗರ್ಭಗೃಹಗಳು ಕಂಗೊಳಿಸುತ್ತಿವೆ. ಬಸದಿಗೆ ಪ್ರದಕ್ಷಿಣಾ ಪಥವಿದೆ.[೧]

ಈ ಬಸದಿಯಲ್ಲಿ ಮಾತೆ ಪದ್ಮಾವತಿ ಅಮ್ಮನವರ ವಿಗ್ರಹವಿಲ್ಲ.ಮೂಲ ಸ್ವಾಮಿಯದ ಶ್ರೀ ಅನಂತನಾಥ ಸ್ವಾಮಿಯ ವಿಗ್ರಹವು ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದೆ. ಇದರ ಎತ್ತರವು ಸುಮಾರು ಮೂರುವರೆ ಅಡಿ ಆಗಿದ್ದು ಖಡ್ಗಾಸನ ಭಂಗಿಯಲ್ಲಿದೆ. ಮೂರ್ತಿಯಲ್ಲಿ ಯಾವುದೇ ಮಕರ ತೋರಣಗಳ ಅಲಂಕಾರವಿಲ್ಲ. ಸ್ವಾಮಿಗೆ ನಿತ್ಯವೂ ಜಲಾಭಿಷೇಕ ಮಾಡಲಾಗುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಇಲ್ಲಿ ದಿನದ ಬೆಳಗಿನ ಹೊತ್ತು ಮಾತ್ರ ಪೂಜೆ ಮಾಡಲಾಗುತ್ತಿದೆ. ಆದರೆ ದೀಪಾವಳಿ ಪೂಜೆ, ನೂಲ ಹುಣ್ಣಿಮೆಯ ದಿನ ವಿಶೇಷ ಪೂಜೆ ಮಾಡಲಾಗುತ್ತದೆ. ಆದರೆ ದಶಲಕ್ಷಣ ಪರ್ವವನ್ನು ಆಚರಿಸುವುದಿಲ್ಲವಂತೆ. ಈ ಬಸದಿಯಲ್ಲಿ ಯಾವುದೇ ಕ್ಷೇತ್ರಪಾಲನ ವಿಗ್ರಹವಿಲ್ಲ. ಬಸದಿಯ ನೆಲವು ಶಿಲಾಮಯವಾಗಿದ್ದರೂ ಮಾಡು ಆಧುನಿಕ ಹಂಚುಗಳಿAದ ನಿರ್ಮಿತವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. pp. ೩೮.