ಅನಂತನಾಥ ಸ್ವಾಮಿ ಬಸದಿ, ಪಾದೂರು
ಅನಂತನಾಥ ಸ್ವಾಮಿ ಬಸದಿಯು ಕರ್ನಾಟಕ ರಾಜ್ಯದಲ್ಲಿನ ಜೈನ ಬಸದಿಗಳಲ್ಲೊಂದು.
ಸ್ಥಳ
[ಬದಲಾಯಿಸಿ]ಶ್ರೀ ಅನಂತನಾಥ ಸ್ವಾಮಿ ಬಸದಿಯು ಉಡುಪಿ ತಾಲೂಕು ಹೊಸಬೆಟ್ಟು ಗ್ರಾಮದ ಪಾದೂರಿನಲ್ಲಿದೆ. ಈ ಬಸದಿಯ ಪ್ರಾಕಾರಕ್ಕೆ ತಾಗಿಕೊಂಡು ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಹೊಸಬೆಟ್ಟು, ಶ್ರೀ ಧರ್ಮನಾಥ ಸ್ವಾಮಿ ಬಸದಿ ಕಾದು ೬ ಕಿ.ಮೀ ದೂರದಲ್ಲಿದೆ.
ಮಾರ್ಗ
[ಬದಲಾಯಿಸಿ]ಮೂಡುಬಿದಿರೆ, ಕಾರ್ಕಳ, ಬೆಳ್ಳಣ್, ಶಿರ್ವ, ಮಂಚಕಲ್. ಶಾಂತಿಗುಡ್ಡ, ಪಾದೂರು, ಹೊಸಬೆಟ್ಟು ಮಾರ್ಗವಾಗಿ ಬಸದಿಯನ್ನು ತಲುಪಬಹುದು. ಇನ್ನೊಂದು ಮಂಗಳೂರು ಮತ್ತು ಉಡುಪಿ ಮಾರ್ಗವಾಗಿಯೂ ಸಹ ಬರಬಹುದು.
ಇತಿಹಾಸ
[ಬದಲಾಯಿಸಿ]ಬಸದಿಯಲ್ಲಿ ಇರುವ ಕುಟುಂಬ ಕುತ್ಯಾರು ಅರಮನೆಗೆ ಸಂಬಂಧಿಸಿದ ಕುಟುಂಬವಾಗಿದೆ. ಶ್ರೀ ಜೈನ ಮಠ ಮೂಡುಬಿದಿರೆ ಬಸದಿಯು ಇಲ್ಲಿಯ ಸಂಸ್ಥಾನಕ್ಕೆ ಒಳಪಟ್ಟಿದೆ. ಈ ಬಸದಿಯ ನಿರ್ಮಾಣ ಶ್ರೀ ಲಕ್ಷ ಪರಸು ಕುಂದಯ್ಯ ಹೆಗ್ಡೆ ಕುತ್ಯಾರು ಅರಮನೆ ಅವರಿಂದ ಸುಮಾರು ೫೦೦ ರಿಂದ ೬೦೦ ವರ್ಷಗಳ ಪೂರ್ವದಲ್ಲಿ ನಿರ್ಮಾಣಗೊಂಡಿದೆ. ಬಸದಿಯು ಡಿಸೆಂಬರ್ ೨೦೧೦ರಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡು, ಧಾಮ ಸಂಪ್ರೋಕ್ಷಣಾದಿ ಕಾರ್ಯಗಳು ಜರುಗಿದೆ. ಈ ಹಿಂದೆ ಬಸದಿಗೆ ಮೇಗಿನ ನೆಲೆ ಇತ್ತು. ಅಲ್ಲಿ ಶ್ರೀ ಧರ್ಮನಾಥ ತೀರ್ಥಂಕರರು ಮೂಲ ನಾಯಕರಾಗಿದ್ದರು. ಈಗ ನೂತನ ನಿರ್ಮಾಣದಲ್ಲಿ ಮೇಗಿನ ನೆಲೆ ಇಲ್ಲ. ಮೇಗಿನ ನೆಲೆಯ ತೀರ್ಥಂಕರರು ಕೆಳಗಿನ ನೆಲೆಯಲ್ಲಿ ಪೂಜಿಸಲ್ಪಡುತ್ತಿದ್ದಾರೆ.[೧]
ಒಳಾಂಗಣ ವಿನ್ಯಾಸ
[ಬದಲಾಯಿಸಿ]ಬಸದಿಯಲ್ಲಿ ಸರಸ್ವತಿ, ೨೪ ತೀರ್ಥಂಕರರ ಕಂಚಿನ ಪ್ರತಿಮೆಗಳು, ಬ್ರಹ್ಮಯಕ್ಷ ಹಾಗೂ ಪದ್ಮಾವತೀ ಅಮ್ಮನವರ ಬಿಂಬಗಳಿವೆ. ಬಸದಿಯಲ್ಲಿರುವ ಗೋಪುರಗಳನ್ನು ಧಾರ್ಮಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಬಸದಿಯ ಎಡಬಲದಲ್ಲಿ ಸುಮಾರು ೩೧ ಇಂಚು ಎತ್ತರ ಕಲ್ಲಿನ ದ್ವಾರಪಾಲಕರು ಇದ್ದಾರೆ. ಮಂದಿರದಲ್ಲಿ ನಮಸ್ಕಾರ ಮಂಟಪವಿದೆ. ಬಸದಿಯಲ್ಲಿ ಎರಡು ಮಂಟಪಗಳು ಇದ್ದು ಅವು ನಮಸ್ಕಾರ ಮಂಟಪ ಮತ್ತು ಗರ್ಭಗುಡಿ. ಗಂಧಕುಟಿಯಲ್ಲಿ ಇತರ ತೀರ್ಥಂಕರರ ಕಂಚಿನ ವಿಗ್ರಹಗಳು, ಬ್ರಹ್ಮದೇವರು, ಶ್ರುತ ಬಿಂಬಗಳು ಇವೆ. ಕಾರಣಿಕ ಶ್ರೀ ಪದ್ಮಾವತಿ ದೇವಿಯ ಆರಾಧನೆಯು ಶ್ರದ್ಧಾ ಭಕಿಯಿಂದ ಜರಗುತ್ತಿದ್ದು ಪ್ರತಿ ಶುಕ್ರವಾರ ವಿಶೇಷ ರೀತಿಯಲ್ಲಿ ಸರ್ವಾಲಂಕಾರದೊಂದಿಗೆ ಪೂಜಿಸಲ್ಪಡುತ್ತಿದೆ. ಅಮ್ಮನವರ ಬಿಂಬ, ಮೂಲ ಸ್ವಾಮಿಯ ಬಿಂಬಕ್ಕೆ ಅನುಗುಣವಾಗಿ ಉತ್ತರಾಭಿಮುಖವಾಗಿ ಇದೆ. ಬಸದಿಯ ಎಡದಲ್ಲಿ ಕ್ಷೇತ್ರಪಾಲ ಹಾಗೂ ನಾಗದೇವರ ಬಿಂಬಗಳಿವೆ. ವೀಣಾಧಾರಿಯಾದ ನಾಗಬ್ರಹ್ಮರ ವಿಗ್ರಹವಿದೆ. ದಶದಿಕ್ಷಾಲಕರ ಶಿಲೆಗಳಿವೆ. ಪ್ರಾಂಗಣದಲ್ಲಿ ಕಲ್ಕುಡ ಕಲ್ಲುರ್ಟಿ ಹಾಗೂ ಕಾಳಮ್ಮ ದೈವಗಳ ಗುಡಿಗಳಿವೆ.
ಒಡವೆಗಳು
[ಬದಲಾಯಿಸಿ]ಅಮ್ಮನವರಿಗೆ ಚಿನ್ನದ ದೇಹ ಕವಚವಿರುತ್ತದೆ. ಬೆಳ್ಳಿಯ ಆಲಂಕಾರಿಕ ವಸ್ತುಗಳಾದ ಪೀಠ, ಕುಕ್ಕುಟೋರಗ ವಾಹನ, ಸರ, ಸತ್ತಿಗೆ ಪತಾಕೆ, ನೆರಿಗೆ ಮುಂತಾದ ವಸ್ತುಗಳಿವೆ. ಮೂಲನಾಯಕ ಕರಿಶಿಲೆ - ಖಡ್ಗಾಸನ ಭಂಗಿ, ಎತರ ೨೦ ಇಂಚು ಬೆಳ್ಳಿಯ ಪ್ರಭಾವಳಿ ಇದೆ. ಬಿಂಬವು ಅಷ್ಟ ಮಹಾಪ್ರಾತಿಹಾರ್ಯಗಳಿಂದ ಶೋಭಿತವಾಗಿದೆ.
ಪೂಜಾ ವಿಧಾನಗಳು
[ಬದಲಾಯಿಸಿ]ವಾರ್ಷಿಕ ಉತ್ಸವವು ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಜರಗುತ್ತದೆ. ಯಕ್ಷ - ಯಕ್ಷಿಯರಿಂದ ಒಡಗೂಡಿದೆ. ೨೦೧೦ರಲ್ಲಿ ವಜ್ರಲೇಪನ ಮಾಡಲಾಗಿದೆ. ಪ್ರತಿನಿತ್ಯ ಕ್ಷೀರಾಭಿಷೇಕ, ಜಲಾಭಿಷೇಕ ಹಾಗೂ ಗಂಧಾಭಿಷೇಕ ಜರಗುತ್ತದೆ. ಮಧ್ಯಾಹ್ನ ಪೂಜೆ ವಿಶೇಷವಾಗಿ ಜರುಗುತ್ತಿದ್ದು, ಇತರ ಕಾರಣಗಳಿಂದಾಗಿ ಬೆಳಿಗ್ಗೆ ಸಾಯಂಕಾಲದ ಪೂಜೆ ಸಂಕ್ಷಿಪ್ತವಾಗಿ ಜರಗುತ್ತಿದೆ. ಬಸದಿಯಲ್ಲಿ ಆಚರಿಸುವ ವಿಶೇಷ ಪೂಜೆಗಳ ಸಂದರ್ಭ, ನಾಗರ ಪಂಚಮಿ, ನೂಲ ಹುಣ್ಣಿಮೆ, ಕದಿರು ಕಟ್ಟುವುದು, ಸಿಂಹ ಮಾಸದ ಪೂಜೆಗಳು, ನವರಾತ್ರಿ ಪೂಜೆ, ವರ್ಧಮಾನ ತೀರ್ಥಂಕರರ ನಿರ್ವಾಣ ಪೂಜೆ, ಯುಗಾದಿ ಪೂಜೆ.
ಉಲ್ಲೇಖ
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೩೩೩-೩೩೪.