ಅನಂತನಾಥ ಸ್ವಾಮಿ ಬಸದಿ, ಪಡುಪಣಂಬೂರು
ಅನಂತನಾಥ ಸ್ವಾಮಿ ಬಸದಿಯು ಮಂಗಳೂರು ತಾಲ್ಲೂಕಿನ ಪಡುಪಣಂಬೂರು ಗ್ರಾಮದಲ್ಲಿದೆ. ಹತ್ತಿರದಲ್ಲಿ ಅರಮನೆ ಬಸದಿ, ಬೈಲಂಗಡಿ ಚಂದ್ರನಾಥ ಸ್ವಾಮಿ ಬಸದಿ, ಕಲ್ಲು ಬಸದಿಗಳಿವೆ.
ಬಸದಿಯ ಇತಿಹಾಸ
[ಬದಲಾಯಿಸಿ]ಬಸದಿಯನ್ನು ಸಾವಂತರು ಅರಸರು ಕಟ್ಟಿದ್ದಾರೆ ಎಂಬುದಾಗಿ ಹೇಳುತ್ತಾರೆ. ಸುಮಾರು ೧೫ರಿಂದ ೧೬ನೇ ಶತಮಾನದಲ್ಲಿ ನಿರ್ಮಾಣವಾಯಿತೆಂದು ಶಿಲಾಶಾಸನಗಳಿಂದ ತಿಳಿದುಬರುತ್ತದೆ.
ಬಸದಿಯ ವಿನ್ಯಾಸ
[ಬದಲಾಯಿಸಿ]ಸಂಪೂರ್ಣ ಶಿಲಾಮಯವಾಗಿರುವ ಈ ಬಸದಿ ಸುಂದರಕಲ್ಲಿನ ಕೆತ್ತನೆಗಳಿಂದ ಕೂಡಿದೆ. ಬಸದಿಗೆ ಮೇಗಿನ ನೆಲೆ ಇದೆ. ಆದರೆ ಮೂರ್ತಿಗಳನ್ನು ಕೆಳಗಿನ ನೆಲೆಗೆ ಸ್ಥಳಾಂತರಿಸಲಾಗಿದೆ. ಮೂಲ ನಾಯಕನಲ್ಲದೆ ಇಲ್ಲಿ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಮೂರ್ತಿಗಳಿವೆ. ಬಸದಿಯ ಎದುರು ಮಾನಸ್ತಂಭವಿದೆ. ಇದು ಚತುರ್ಮುಖದ್ದಾಗಿದೆ. ಇದರ ಪೂರ್ವ ಭಾಗದ ಮೇಲೆ ಶ್ರೀ ಚಂದ್ರನಾಥ ತೀರ್ಥಂಕರರು ಯೋಗಾಸನದಲ್ಲಿ ಕುಳಿತಿರುವ ಆಕೃತಿಯು, ಅದರ ಕೆಳಗೆ ರಂಗವಲ್ಲಿಯ ಕೆತ್ತನೆಯೂ ಇದೆ. ಇದರ ಕೆಳಗಡೆ ರಾಜನ ಅಂತಃಪುರವನ್ನು ಹೋಲುವ ಆಕೃತಿಗಳಿವೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡ-ಬಲ ಬದಿಯಲ್ಲಿರುವ ಗೋಪುರವನ್ನು ದರ್ಶನಾರ್ಥಿಗಳಿಗೆ ಕುಳಿತುಕೊಳ್ಳುವುದಕ್ಕೆ ಉಪಯೋಗಿಸಲಾಗುತ್ತದೆ. ಬಸದಿಗೆ ಕಾರ್ಯಾಲಯ ಎಂಬುವುದಿಲ್ಲ. ಪ್ರಾರ್ಥನಾ ಮಂಟಪದಲ್ಲಿ ಕಲ್ಲಿನಿಂದ ಕೆತ್ತಲ್ಪಟ್ಟ ದ್ವಾರಪಾಲಕರ ಮೂರ್ತಿಗಳಿವೆ. ಮಾತ್ರವಲ್ಲ ಕಂಬಾರ ಗೋಡೆಗಳು, ಸುಂದರವಾದ ಕಲ್ಲಿನ ಕೆತ್ತನೆಯ ಚಿತ್ರಗಳಿಂದ ಸುಂದರವಾಗಿವೆ. ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪವಿದ್ದು, ಅಲ್ಲಿ ಜಯಗಂಟೆ ಮತ್ತು ಜಾಗಟೆಗಳನ್ನು ತೂಗುಹಾಕಲಾಗಿದೆ.
ಪೂಜಾ ವಿಧಾನ ಹಾಗೂ ಹಬ್ಬಗಳ ಆಚರಣೆ
[ಬದಲಾಯಿಸಿ]ತೀರ್ಥಂಕರ ಮಂಟಪದ ಜಿನಾಲಯದಲ್ಲಿ ಪದ್ಮಾವತಿ ಮೂರ್ತಿ ಪೂಜೆ ನಡೆಯುತ್ತದೆ. ದೇವಿಗೆ ಸೀರೆ ಉಡಿಸಿ ಬಳೆಗಳನ್ನು ಹಾಕಿ, ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಶತಮಾನಗಳ ಹಿಂದೆಯೇ ವಾರ್ಷಿಕ ಜಾತ್ರೆ, ರಥೋತ್ಸವಗಳು ನಿಂತುಹೋಗಿವೆ. ಆರು ಅಡಿ ಎತ್ತರದ ಭಂಗಿಯಲ್ಲಿರುವ ಮೂಲ ನಾಯಕನಿಗೆ ದಿನವೂ ಕ್ಷೀರಾಭಿಷೇಕ, ಜಲಾಭಿಷೇಕ ಮಾಡಲಾಗುತ್ತದೆ. ಸಂಕಷ್ಟ ನಿವಾರಣೆ ಮತ್ತು ಅಭಿವೃದ್ಧಿಗಾಗಿ ಪದ್ಮಾವತಿ ಅಮ್ಮನವರಿಗೆ ವಿಶೇಷ ಹರಕೆಗಳನ್ನು ಹೇಳಿಕೊಳ್ಳುವ ಪದ್ಧತಿಯಿದೆ. ದಿನವೂ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ ಹೀಗೆ ಮೂರು ಬಾರಿ ಪೂಜೆ ನಡೆಯುತ್ತದೆ. ಶ್ರಾವಣ ಶುಕ್ರವಾರ ಈ ಬಸದಿಯ ವಿಶೇಷವಾಗಿದ್ದು ಸಹಸ್ರಾರು ಜನರ ಭಕ್ತಾದಿಗಳು ಬಂದು ಪೂಜೆ ಹರಕೆಗಳನ್ನು ಸಲ್ಲಿಸುತ್ತಿರುತ್ತಾರೆ. ದೀಪಾವಳಿ, ನವರಾತ್ರಿ, ಯುಗಾದಿ, ಶ್ರಾವಣ ಮೊದಲಾದವುಗಳಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. [೧]
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. pp. ೨೭೦.