ಅನಂತನಾಥ ಸ್ವಾಮಿಯ ಅಪ್ಪಾಯಿ ಬಸದಿ, ಮುಡಾರು
ಸ್ಥಳ
[ಬದಲಾಯಿಸಿ]ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮೂಡಾರು ಎಂಬಲ್ಲಿ ಪ್ರಸಿದ್ಧವಾದ ಈ ಬಸದಿಯು ಕಾಣಸಿಗುತ್ತದೆ. ಇದು ಕಾರ್ಕಳ ಸೀಮೆಯ ಒಳಪಟ್ಟ ಬಸದಿಯಾಗಿದೆ. ಇದು ಬಜಗೋಳಿ-ಶೃಂಗೇರಿ ಹೆದ್ದಾರಿಯ ಬಳಿಯಲ್ಲಿ ಬಜಗೋಳಿ ಬಸ್ ನಿಲ್ದಾಣದಿಂದ ಕೇವಲ ೩೦೦ ಮೀಟರ್ ದೂರದಲ್ಲಿದೆ.
ಪ್ರಾಂಗಣ
[ಬದಲಾಯಿಸಿ]ಈ ಬಸಿದಿಯೂ ತಾಮ್ರದ ಹೊದಿಕೆ ಹೊಂದಿದೆ. ಜಿನಪೀಠದಲ್ಲಿ ಎತ್ತರವಾದ ಭಗವಾನ್ ಅನಂತಸ್ವಾಮಿಯ ಬಿಂಬ ಬಹಳ ಸುಂದರವಾಗಿ ಕಾಣುತ್ತದೆ. ಶ್ರೀ ಪದ್ಮಾವತಿ ದೇವಿಯ ಮೂರ್ತಿ, ಕ್ಷೇತ್ರಪಾಲ, ನಾಗಸನ್ನಿಧಿ ಮುಂತಾದವುಗಳು ವಾಸ್ತು ದಿಕ್ಕಿಗನುಸಾರವಾಗಿ ನಿರ್ಮಾಣವಾಗಿವೆ. ಬಸದಿಯ ಬಳಿಯಲ್ಲಿ ಒಂದು ಪಾರಿಜಾತ ಹೂವಿನ ಗಿಡ ಮತ್ತು ಹತ್ತಿರದಲ್ಲಿ ಹಲವಾರು ಬಗೆಯ ಹೂವುಗಳ ಹೂದೋಟವಿದೆ. ಬಸದಿಯನ್ನು ಪ್ರವೇಶಿಸುವಾಗ ಎಡ-ಬಲದ ಬದಿಗಳಲ್ಲಿರುವ ಚಂದ್ರ ಶಾಲೆಯನ್ನು ಯಾತ್ರಿಕರು ತಂಗಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಪ್ರಾರ್ಥನಾ ಮಂಟಪದಲ್ಲಿ ಜಯಗಂಟೆ, ಜಾಗಟೆಗಳನ್ನು ತೂಗುಹಾಕಲಾಗಿದೆ. ಪದ್ಮಾವತಿ ದೇವಿಯ ಮೂರ್ತಿಯು ಒಂದು ಉತ್ತರ ದಿಕ್ಕಿನಲ್ಲಿ ಇದ್ದು ಇನ್ನೊಂದು ಪೂರ್ವದಲ್ಲಿದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದೆ. ಬಸದಿಯ ಭಗವಾನ್ ಅನಂತನಾಥ ಸ್ವಾಮಿಯ ಮೂರ್ತಿಯು ಪಂಚಲೋಹದ ಆಗಿದ್ದು ಸುಮಾರು ಒಂದುವರೆ ಅಡಿ ಎತ್ತರವಾಗಿ ಖಡ್ಗಾಸನ ಭಂಗಿಯಲ್ಲಿದೆ. ಬಸದಿಯ ಅಂಗಳದ ಬಲಭಾಗದಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಮೂರ್ತಿಗಳು, ತ್ರಿಶೂಲ, ನಾಗರಕಲ್ಲುಗಳು ಒಂದು ಪೀಠದ ಮೇಲೆ ಸ್ಥಾಪಿಸಲಾಗಿದೆ. ದಶದಿಕ್ಪಾಲಕರ ಬಲಿಕಲ್ಲುಗಳು ಇವೆ. ಬಸದಿಯ ಆವರಣ ಗೋಡೆ ಮುರಕಲ್ಲುಗಳಿಂದ ನಿರ್ಮಿತವಾಗಿದೆ. ಬಸದಿಗೆ ಕಚೇರಿ ಮತ್ತು ಒಂದು ವೇದಿಕೆ ಇದೆ. ಇಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದು. ಇದರ ಎದುರಿಗೆ ಅಚ್ಚುಕಟ್ಟಾದ ಸಭಾಂಗಣವೂ ಇದೆ. ಬಸದಿಯಲ್ಲಿ ನೀರು, ಛತ್ರಗಳಂತಹ ಎಲ್ಲಾ ರೀತಿಯ ಸೌಲಭ್ಯಗಳು ಇವೆ. [೧]
ಪೂಜೆಗಳು
[ಬದಲಾಯಿಸಿ]ತೀರ್ಥಂಕರರ ಮಂಟಪದಲ್ಲಿ ಗಂಧಕುಟ್ಟಿ ಅದರಲ್ಲಿ ಗಣಧರಪಾದ, ಶ್ರುತ, ಬ್ರಹ್ಮ ದೇವರ ಮೂರ್ತಿಗಳ ಅವುಗಳಿಗೆ ನಿತ್ಯಪೂಜೆ ನಡೆಯುತ್ತದೆ. ಈ ದೇವಿಯ ಬಿಂಬಕ್ಕೆ ಸೀರೆ, ಬಳೆ, ಹೂವಿನಿಂದ ಅಲಂಕರಿಸಿ ಪೂಜಿಸುತ್ತಾರೆ. ಪ್ರತಿದಿನವೂ ಸ್ವಾಮಿಗೆ ಕ್ಷೀರಾಭಿಷೇಕ ಜಲಾಭಿಷೇಕ ಪಂಚಾಮೃತ ಅಭಿಷೇಕಗಳು ನಡೆಯುತ್ತವೆ. ಇಲ್ಲಿ ವಿಶೇಷವಾಗಿ ವಾರ್ಷಿಕೋತ್ಸವ, ನಾಗರ ಪಂಚಮಿ, ದಶಲಕ್ಷಣ ಪರ್ವ, ಅನಂತ ನೋಂಪು, ನವರಾತ್ರಿ, ನೂಲಶ್ರಾವಣ, ದೀಪಾವಳಿಗಳಂತಹ ವಿಶೇಷ ದಿನಗಳಂದು ಸ್ವಾಮಿಗೆ ವಿಶೇಷ ಪೂಜೆಗಳು ಸಲ್ಲುತ್ತವೆ. ಬ್ರಹ್ಮದೇವರಿಗೆ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಹರಿಕೆಯನ್ನು ಹೇಳಿದರೆ ಜನರ ಇಷ್ಟಾರ್ಥಗಳು ನೆರವೇರುತ್ತದೆ ಎಂಬುದಕ್ಕೆ ಅನೇಕ ದೃಷ್ಟಾಂತಗಳಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (1 ed.). ಮಂಜೂಶ್ರೀ ಪ್ರಿಂಟರ್ಸ್. p. 56-57.