ಅಧ್ಯಾತ್ಮ ರಹಸ್ಯವಾದ

ವಿಕಿಪೀಡಿಯ ಇಂದ
Jump to navigation Jump to search

ಅಧ್ಯಾತ್ಮ ರಹಸ್ಯವಾದ ಕ್ರೈಸ್ತಧರ್ಮದಲ್ಲಿ ಮೊದಮೊದಲು ಹುಟ್ಟಿದ ಒಂದು ನವ್ಯಪಂಥ (ಗ್ನಾಸ್ಟಿಸಿಸóಮ್/Gnosticism). ಕ್ರಿ.ಶ. ಮೊದಲ ಮೂರು ಶತಮಾನಗಳಲ್ಲಿ ಪ್ರಚಲಿತವಾಗಿದ್ದ ಸಂಪ್ರದಾಯ. ಆ ಕಾಲದ ಮೇಧಾವಿಗಳನೇಕರು ಈ ಪಂಥಕ್ಕೆ ಒಲಿದಿದ್ದರು.

ಅರಂಬಿಕ ಕಾಲ[ಬದಲಾಯಿಸಿ]

ಇವರಲ್ಲಾಗಲೇ ಒಂದು ಸಮನ್ವಯದೃಷ್ಟಿ ಹುಟ್ಟಿದ್ದಿತು; ಎಲ್ಲೆಡೆಯಿಂದಲೂ ಒಳ್ಳೆಯದನ್ನು ಆರಿಸಿಕೊಳ್ಳುವ ಪ್ರವೃತ್ತಿ ಬೆಳೆದಿತ್ತು. ಕ್ರೈಸ್ತಧರ್ಮವನ್ನು ಜ್ಞಾನಮಾರ್ಗವಾಗಿ ಪರಿವರ್ತಿಸಲೆಳೆಸಿದ ಪ್ರಯತ್ನವಿದು. ಗ್ನಾಸಿಸ್ ಎಂದರೆ ಜ್ಞಾನ. ಇದು ಬರಿಯ ಶ್ರದ್ಧೆಯಾಗಿರದೆ ಪರತತ್ತ್ವವನ್ನು ಕುರಿತ ನಿಷ್ಕೃಷ್ಟ ಅರಿವೂ ಆಗಿತ್ತು. ಇದು ವಿಶೇಷ ರೀತಿಯ ಜ್ಞಾನವಾಗಿತ್ತು. ಇದನ್ನು ಸಾಕ್ಷಾತ್ಕಾರದ ಜ್ಞಾನವೆನ್ನಬಹುದು. ಎಲ್ಲರಿಗೂ ಇದೂ ಸಾಮಾನ್ಯವಾಗಿ ನಿಲುಕದುದರಿಂದ ಇದನ್ನು ರಹಸ್ಯವಾದವೆನ್ನಬಹುದು. ಸಾಮಾನ್ಯವಸ್ತುಗಳ ಜ್ಞಾನವಿಲ್ಲದೆ ಪರತತ್ತ್ವಜ್ಞಾನವಾದುದರಿಂದ ಇದನ್ನು ಅಧ್ಯಾತ್ಮರಹಸ್ಯವಾದವೆಂದು ಭಾವಿಸಲಾಯಿತು. ಕ್ರೈಸ್ತರಿಂದ ಶ್ರುತಿ ಎಂದು ಎಣಿಸಲ್ಪಟ್ಟ ಬೈಬಲ್ಲಿನಲ್ಲಿಯೇ ಈ ವಾದವನ್ನು ಸೂಚಿಸಿದೆ ಎಂದು ಗ್ನಾಸ್ಟಿಕರು ವಾದಿಸಿದರು. ಸಮನ್ವಯವಾದರೂ ಹೆಸರಾದ ಇದರಲ್ಲಿ ಗ್ರೀಕ್ ತತ್ತ್ವಜ್ಞಾನವೂ ಪೌರಸ್ತ್ಯಬ್ರಹ್ಮವೂ ಕ್ರೈಸ್ತತತ್ತ್ವಜ್ಞಾನವೂ ಮಿಳಿತವಾಗಿವೆ. ಸೈಮನ್ ಮ್ಯಾಗ್ನಸ್ ಎಂಬುವನೇ ಇದರ ಪ್ರಥಮ ಪ್ರತಿಪಾದಕನೆಂದು ಸಂಶೋಧಕರು ಒಮ್ಮತದಿಂದ ಹೇಳುತ್ತಾರೆ. ಇದರ ಪ್ರಾಬಲ್ಯ ಕ್ರಿ.ಶ. ಮೂರನೆಯ ಶತಮಾನಕ್ಕೆ ಮುಗಿದಿದ್ದರೂ ಪರೋಕ್ಷವಾಗಿ ಕ್ರೈಸ್ತಧರ್ಮದಲ್ಲಿ ಅಲ್ಲಲ್ಲಿ ಕಂಗೊಳಿಸಿತು.

ಮುಖ್ಯಾಂಶಗಳು[ಬದಲಾಯಿಸಿ]

ಅಧ್ಯಾತ್ಮರಹಸ್ಯವಾದ ಕೆಲವು ಮುಖ್ಯಾಂಶಗಳನ್ನಿಲ್ಲಿ ಗಮನಿಸಬಹುದು. ಕ್ರೈಸ್ತಧರ್ಮ ಬರಿಯ ಶ್ರದ್ಧೆ, ನೀತಿ, ಅಲ್ಲ. ಅದು ಜ್ಞಾನಮಾರ್ಗ. ವಿಶ್ವದರ್ಶನದ ಭಾವನೆ ಅದರಲ್ಲಿದೆ. ಎರಡನೆಯದಾಗಿ ಸ್ವರ್ಗೀಯ ಕ್ರಿಸ್ತನಿಗೂ ಅವನ ಅಭಿವ್ಯಕ್ತಿಗಾಗಿ ಆರಿಸಿಕೊಂಡ ಐತಿಹಾಸಿಕ ಕ್ರಿಸ್ತನಿಗೂ ವ್ಯತ್ಯಾಸಗಳಿವೆ ಇದನ್ನು ಪಾಷಂಡವಾದ (ಡೊಸೀಡಿಸಮ್) ಎನ್ನುತ್ತಾರೆ. ಮೂರನೆಯದಾಗಿ ಚೇತನರನ್ನು ನಿತ್ಯರು, ಮುಕ್ತರು ಮತ್ತು ಬದ್ಧರು ಎಂದು ಮೂರು ವಿಧವಾಗಿ ವಿಂಗಡಿಸುತ್ತದೆ. ನಿತ್ಯರನ್ನು ವಾಯುವಿಕ (ನ್ಯೂಮ್ಯಾಟಿಕ್) ಎಂದೂ ಮುಕ್ತರನ್ನು ಅಭೌತಪ್ರಭಾವಕ್ಕೆ ಒಳಗಾದವರು (ಸೈಕಿಕ್) ಎಂದು ಬದ್ಧಜೀವಿಗಳನ್ನು ಪ್ರಾಕೃತಿಕ (ಹೈಲಿಕ್) ಎಂದೂ ಕರೆಯಲಾಗಿದೆ. ನಾಲ್ಕನೆಯದಾಗಿ ಇಂದ್ರಿಯಗೋಚರವಾದ ಜಗತ್ತು ಅಲ್ಪ, ಕ್ಷುದ್ರ ಮತ್ತು ಅಸ್ಥಿರ. ಇವೆಲ್ಲ ಭಾವನೆಗಳೂ ಮುಂದಿನ ಕ್ರೈಸ್ತಧರ್ಮದ ಬೆಳೆವಣಿಗೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಗೊಳಿಸಿದುವು. ಗ್ನಾಸ್ಟಿಕರಂತೂ ಇವೆಲ್ಲಕ್ಕೂ ಬೈಬಲ್ಲಿನ ಶ್ರುತಿವಾಕ್ಯಗಳಲ್ಲಿ ಪ್ರಮಾಣವಿದೆ ಎಂದು ವಾದಿಸುತ್ತಾ ಬಂದರು. ತಾವು ಹೇಳುವ ವಿಷಯಗಳೆಲ್ಲವೂ ಶ್ರುತಿಬದ್ಧವಾಗಿವೆ, ಈ ಉಪದೇಶಗಳೆಲ್ಲ ಏಸುಕ್ರಿಸ್ತನಿಂದ ಗುರು-ಶಿಷ್ಯ ಪರಂಪರೆಯಲ್ಲಿ ಮುಂದುವರಿದ ರಹಸ್ಯಗಳು ಎಂದೂ ಅವರು ವಾದಿಸಿದರು. ಇವೆಲ್ಲ ಉಪದೇಶಗಳು ಸಾಂಪ್ರದಾಯಿಕ ಕ್ರೈಸ್ತಧರ್ಮಕ್ಕೆ ಒಪ್ಪಿಗೆಯಾಗಲಿಲ್ಲ; ಅಷ್ಟೆ ಅಲ್ಲ, ಗ್ನಾಸ್ಟಿಕರನ್ನು ಸಂಪ್ರದಾಯಸ್ಥರೆಂದೂ ವ್ರಾತ್ಯ (ಹೆರೆಟಿಕ್)ರೆಂದೂ ಕರೆದರು.

ಗ್ರಂಥಗಳು[ಬದಲಾಯಿಸಿ]

ನಮಗೆ ದೊರಕಿರುವ ಅಧ್ಯಾತ್ಮರಹಸ್ಯವಾದದ ಪ್ರಧಾನಗ್ರಂಥ ಪಿಸ್ಟಿಸ್ ಸೋಫಿಯಾ ಎಂಬುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: