ಅಡಿಮದ್ದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಡಿಮದ್ದು ಎಂದರೆ ಯುದ್ಧಕಾರ್ಯಾಚರಣೆಯಲ್ಲಿ ಬಳಸುವ ಸ್ಫೋಟಕಸಾಧನ (ಮೈನ್). ಇದನ್ನು ನೀರಿನಲ್ಲೂ ಭೂಮಿಯ ಮೇಲೂ ಉಪಯೋಗಿಸುತ್ತಾರೆ.

ಇತಿಹಾಸ[ಬದಲಾಯಿಸಿ]

೧೪೮೭ರಲ್ಲಿ ತುಪಾಕಿಮದ್ದನ್ನು ಪ್ರಥಮ ಬಾರಿ ಅಡಿಮದ್ದಾಗಿ ಉಪಯೋಗಿಸಲಾಯಿತು. ಮೊದಲನೆಯ ಮಹಾಯುದ್ಧದಲ್ಲಿ ಇದರಲ್ಲಿಯೇ ತರಬೇತಿಹೊಂದಿದ ಸೈನಿಕರ ಒಂದು ತುಕಡಿಯೇ ಇತ್ತು. ಫ್ಲಾಂರ್ಸ್ ಯುದ್ಧದಲ್ಲಿ (೧೯೧೪) ಅಡಿಮದ್ದನ್ನು ಉಪಯೋಗಿಸುವುದರಲ್ಲಿ ಜರ್ಮನರು ಮೊದಲಿಗರಾಗಿದ್ದರು. ಮೆಸೈನ್ಸ್ ಯುದ್ಧದಲ್ಲಿ (೧೯೧೭) ಬ್ರಿಟಿಷರು ೧,೦೦೦,೦೦೦ ಪೌಂ. ಸಿಡಿಮದ್ದನ್ನು ಅಡಿಮದ್ದಾಗಿ ಉಪಯೋಗಿಸಿದರು. ಭೂಮಿಯಲ್ಲಿ ಹುದುಗಿದ್ದು, ಮೇಲೆ ಒತ್ತಡಬಿದ್ದಾಗ ಅಥವಾ ವಿದ್ಯುತ್ ಸ್ಪರ್ಶವಾದಾಗ ಸಿಡಿಯುವ ಮದ್ದು ಬಳಕೆಗೆ ಬಂದಿತು.[೧] ಅನಂತರ ವಿನಾಶಕ್ಕಲ್ಲದೆ ಸ್ವರಕ್ಷಣೆಗಾಗಿಯೂ ಅಡಿಮದ್ದಿನ ಬಳಕೆ ಹೆಚ್ಚಾಯಿತು.

ಸಮುದ್ರದಲ್ಲಿ ಬಳಸುವ ಅಡಿಮದ್ದು[ಬದಲಾಯಿಸಿ]

ಸಮುದ್ರದ ಅಡಿಮದ್ದು

ಸಮುದ್ರದಲ್ಲಿ ಬಳಸುವ ಅಡಿಮದ್ದುಗಳಲ್ಲಿ (Naval mine) ಎರಡು ವಿಧ. ೧. ನಿಯಂತ್ರಿತ ಅಡಿಮದ್ದು; ಇದನ್ನು ಸಮುದ್ರದ ದಂಡೆಯಿಂದಲೇ ನಿಯಂತ್ರಿಸಿ ಸಿಡಿಯುವಂತೆ ಮಾಡುತ್ತಾರೆ. ಶತ್ರುನೌಕೆ ಅಡಿಮದ್ದಿನ ಸಮೀಪಕ್ಕೆ ಬಂದಾಗ, ದಂಡೆಯಿಂದ ಅಡಿಮದ್ದಿನಲ್ಲಿರುವ ವಿದ್ಯುನ್ಮಂಡಲವನ್ನು ಪೂರ್ತಿಗೊಳಿಸಿ ಅದನ್ನು ಸಿಡಿಯುವಂತೆ ಮಾಡುತ್ತಾರೆ. ಇದನ್ನು ಪ್ರಮುಖವಾಗಿ ಬಂದರುಗಳ ರಕ್ಷಣೆಗಾಗಿ ಬಳಸುತ್ತಾರೆ. ೨. ಅನಿಯಂತ್ರಿತ ಅಥವಾ ಸ್ವಯಂನಿಯಂತ್ರಿತ ಅಡಿಮದ್ದು; ಶತ್ರುನೌಕೆಗಳು ಅಡಿಮದ್ದಿನ ಮೇಲೆ ಬಂದಾಗ ಇದು ತಾನಾಗೇ ಸಿಡಿಯುವಂತೆ ತಂತಿಸುರುಳಿಯಿಂದ (ಸ್ಟ್ರಿಂಗ್) ಯಾಂತ್ರಿಕ ವ್ಯವಸ್ಥೆ ಅಥವಾ ವಿದ್ಯುನ್ಮಂಡಲ ವ್ಯವಸ್ಥೆಯನ್ನು ಮಾಡಿರುತ್ತಾರೆ. ಸಮುದ್ರದಲ್ಲಿ ಉಪಯೋಗಿಸುವ ಅಡಿಮದ್ದುಗಳನ್ನು ಶತ್ರುನೌಕೆಗಳ ಮೇಲೆ ದಾಳಿಮಾಡಲೂ ಶತ್ರುಪಕ್ಷದ ಜಲಾಂತರ್ಗಾಮಿಗಳಿಂದ (ಸಬ್‌ಮೆರಿನ್) ರಕ್ಷಣೆ ಪಡೆಯಲೂ ಸಮುದ್ರದ ವಿವಿಧ ಆಳಗಳಲ್ಲಿ ತೇಲುವಂತೆ ಹೊಂದಿಸುತ್ತಾರೆ. ಮೊದಲ ಮಹಾಯುದ್ಧದಲ್ಲಿ ಜರ್ಮನರು ಅಯಸ್ಕಾಂತೀಯ ಅಡಿಮದ್ದನನ್ನು (ಮ್ಯಾಗ್ನೆಟಿಕ್ ಮೈನ್) ಉಪಯೋಗಿಸಿದರು. ಕಬ್ಬಿಣದಿಂದ ಕೂಡಿದ ಹಡಗು ಇದನ್ನು ತನ್ನೆಡೆಗೆ ಆಕರ್ಷಿಸಿದಾಗ, ಅಡಿಮದ್ದು ಅದಕ್ಕೆ ತಾಗಿ ಸಿಡಿಯುತ್ತಿತ್ತು.

ಭೂಮಿ ಮೇಲೆ ಬಳಸುವ ಅಡಿಮದ್ದು[ಬದಲಾಯಿಸಿ]

ಟ್ಯಾಂಕು ಪ್ರತಿರೋಧಕ ಅಡಿಮದ್ದು
ವ್ಯಕ್ತಿ ಪ್ರತಿರೋಧಕ ಅಡಿಮದ್ದು

ಭೂಮಿಯ ಮೇಲೆ ಬಳಸುವ ಅಡಿಮದ್ದುಗಳಲ್ಲೂ (Land mine) ನಿಯಂತ್ರಿತ ಅನಿಯಂತ್ರಿತ ಎಂಬ ಭೇದವಿದ್ದರೂ ಅವುಗಳನ್ನು ಪ್ರಮುಖವಾಗಿ ಹೀಗೆ ವಿಂಗಡಿಸಿದ್ದಾರೆ.[೨] ೧ ಟ್ಯಾಂಕು ಪ್ರತಿರೋಧಕ (ಆ್ಯಂಟಿಟ್ಯಾಂಕ್): ಇವನ್ನು ಪ್ರಮುಖವಾಗಿ ಟ್ಯಾಂಕುಗಳನ್ನು ನಾಶಪಡಿಸಲು ಭೂಮಿಯೊಳಗೆ ಹುದುಗಿಸಿಡುತ್ತಾರೆ. ದೂರದಿಂದಲೇ ವಿದ್ಯುನ್ಮಂಡಲ ಪೂರ್ತಿ ಮಾಡುವುದರಿಂದ ಇವುಗಳನ್ನು ಸಿಡಿಯುವಂತೆ ಮಾಡಬಹುದು ಅಥವಾ ಟ್ಯಾಂಕು ಹಾದು ಹೋದಾಗ ಅದರ ಮೇಲೆ ಉಂಟಾದ ಒತ್ತಡದಿಂದಾಗಿ ತಾನಾಗೇ ಸಿಡಿಯುವಂತೆ ಮಾಡಬಹುದು. ೨ ವ್ಯಕ್ತಿ ಪ್ರತಿರೋಧಕ (ಆ್ಯಂಟಿ ಪರ‍್ಸನಲ್); ಇವನ್ನು ಭೂಮಿಯ ಮಟ್ಟದಲ್ಲೇ ನೆಟ್ಟು, ಹೊರಗೆ ಕಾಣದಂತೆ ಮಾಡಿರುತ್ತಾರೆ. ಹೊರ ಮುಚ್ಚಳದ ಮೇಲೆ ಭಾರಬಿದ್ದಾಗ, ತಂತಿಸುರಳಿಯಿಂದೇರ್ಪಟ್ಟ ಕ್ರಿಯೆಯಿಂದಾಗಿ ಅಡಿಮದ್ದು ಮನುಷ್ಯನ ಟೊಂಕದಮಟ್ಟಕ್ಕೆ ಹಾರಿ ಅನಂತರ ಚೂರುಚೂರಾಗಿ ಸಿಡಿಯುತ್ತದೆ. ಇದರಲ್ಲಿ ಕಬ್ಬಿಣದ ಚೂರುಗಳನ್ನು ಇಟ್ಟಿರುವುದರಿಂದ ಇದರ ಸಿಡಿತದಿಂದಾಗುವ ಹಾನಿ ಹೆಚ್ಚು.

ಅಡಿಮದ್ದಿಡುವಿಕೆ, ಗುಡಿಸಿಹಾಕುವಿಕೆ (ಮೈನ್ ಲೇಯಿಂಗ್, ಮೈನ್ ಸ್ವೀಪಿಂಗ್)[ಬದಲಾಯಿಸಿ]

ಸಮರ ವಿಜ್ಞಾನದಲ್ಲಿ ಆತ್ಮರಕ್ಷಣೆಗಾಗಿ ಅಥವಾ ಯುದ್ಧ ಕ್ಷೇತ್ರದಲ್ಲಿ ಶತ್ರುಗಳ ಮುನ್ನಡೆಗೆ ಅಡ್ಡಿಯನ್ನೊಡ್ಡಲು ಹುದುಗಿಸಿಟ್ಟ ಅಡಿಮದ್ದನ್ನು ಕಂಡುಹಿಡಿದು ಅದನ್ನು ಹೊರತೆಗೆಯುವುದೂ ಗುಡಿಸಿಹಾಕುವುದೂ ಒಂದು ಮುಖ್ಯ ಘಟನೆ. ಹೊಸ ಹೊಸ ರೀತಿಯ ಅಡಿಮದ್ದುಗಳಿಗೆ ಪ್ರತಿರೋಧಕಗಳನ್ನು ಕಂಡು ಹಿಡಿಯುವುದು ಸಮರಯಂತ್ರ ಶಿಲ್ಪಿಗಳ (ಮಿಲಿಟರಿ ಇಂಜಿನಿಯರ್ಸ್) ಪ್ರಮುಖ ಕೆಲಸ.

ಸಮುದ್ರದ ಕೆಳಗೆ ಅಳವಡಿಸುವ ಅಡಿಮದ್ದುಗಳು ತಮ್ಮ ಮೇಲೆ ನೀರಿನ ಒತ್ತಡ ಹೆಚ್ಚಿದಾಗ ಸಿಡಿಯುತ್ತವೆ. ಶತ್ರು ಪಕ್ಷದ ಜಲಾಂತರ್ಗಾಮಿಗಳಿಂದ ರಕ್ಷಣೆ ಪಡೆಯಲು ಅಡಿಮದ್ದುಗಳನ್ನು ಪ್ಲವನಶಕ್ತಿ (ಬಾಯೆನ್ಸಿ) ಸೂತ್ರಗಳ ಸಹಾಯದಿಂದ ಸಮುದ್ರದ ವಿವಿಧ ಆಳಗಳಲ್ಲಿ ತೇಲುವಂತೆ ಮಾಡುತ್ತಾರೆ. ಇವುಗಳನ್ನು ಸಮುದ್ರದೊಳಗೆ ೧,೦೦೦ ಫ್ಯಾದಮ್ ಆಳದವರೆಗೂ ಅಳವಡಿಸಬಹುದು. ಆಯಸ್ಕಾಂತೀಯ ಅಡಿಮದ್ದುಗಳಿಂದ ರಕ್ಷಣೆಪಡೆಯಲು, ಎರಡು ದೂರದ ಚಿಕ್ಕ ನೌಕೆಗಳ ಮಧ್ಯೆ ಎರಡು ತಂತಿಗಳನ್ನು ಕಟ್ಟಿ ಅದರಲ್ಲಿ ವಿದ್ಯತ್ತನ್ನು ಹರಿಸಿ ಕೃತಕ ಅಯಸ್ಕಾಂತಕ್ಷೇತ್ರವನ್ನುಂಟುಮಾಡುತ್ತಾರೆ. ಈ ಅಯಸ್ಕಾಂತಕ್ಷೇತ್ರದಿಂದ ಅಡಿಮದ್ದು ಮೇಲೆ ಬಂದು ಇದ್ದಲ್ಲಿಯೇ ಸಿಡಿಯುತ್ತದೆ. ಸುತ್ತಮುತ್ತ ನೈಸರ್ಗಿಕ ತಡೆಗಳಿಲ್ಲದ ಸ್ಥಳಗಳಲ್ಲಿ ಶತ್ರುಗಳಿಂದ ರಕ್ಷಣೆ ಪಡೆಯಲು ಇವುಗಳ ಬಳಕೆ ಹೆಚ್ಚಾಗಿ ಆಗುತ್ತದೆ. ಉತ್ತರ ಆಫ್ರಿಕದ ಟೋಬ್ರುಕ್ ಯುದ್ಧದಲ್ಲಿ (೧೯೪೦-೪೧) ಸುತ್ತಲೂ ಮರುಭೂಮಿ ಇದ್ದುದರಿಂದ ಈ ಅಡಿಮದ್ದುಗಳನ್ನು ಬಹಳವಾಗಿ ಬಳಸಲು ಅವಕಾಶವಾಯಿತು.

ಅಡಿಮದ್ದುಗಳನ್ನು ಸಾಮಾನ್ಯವಾಗಿ ಲೋಹದ ಪಾತ್ರಗಳಲ್ಲಿ ಅಳವಡಿಸಿರುತ್ತಾರೆ. ಲೋಹದ ಚೂರುಗಳು ಅಲೆಗಳನ್ನು ಪ್ರತಿಫಲಿಸುತ್ತವೆ. ಈ ಸೂತ್ರವನ್ನುಪಯೋಗಿಸಿ ನೆಲದಲ್ಲಿ ಹುದುಗಿಸಿಟ್ಟ ಅಡಿಮದ್ದುಗಳನ್ನು ಕಂಡುಹಿಡಿಯುತ್ತಾರೆ. ಹಾಗೆ ಕಂಡು ಹಿಡಿಯದಿರಲೆಂದು ಈಗ ಅಡಿಮದ್ದುಗಳನ್ನು ಅಲೋಹಗಳಾದ ಮರ, ಪ್ಲಾಸ್ಟಿಕ್ಕು, ಕಾಗದ ಮುಂತಾದುವುಗಳಲ್ಲಿ ಹೊಂದಿಸುತ್ತಾರೆ. ಒಳಗೆ ಲೋಹದ ಬದಲು ಗಾಜು ಮತ್ತು ಪಿಂಗಾಣಿ ಚೂರುಗಳನ್ನು ಅಲೋಹ ಭಾಗಗಳಾಗಿ ಉಪಯೋಗಿಸುತ್ತಾರೆ.

ಅಡಿಮದ್ದುಗಳಲ್ಲಿ ಟೆಲ್ಲರ, ಅಯಸ್ಕಾಂತೀಯ, ವಿಶೇಷ ರೀತಿಯ ಅಕೌಸ್ಟಿಕ್, ಆಯಿಸ್ಟರ್ ಹಾಗೂ ಜರ್ಮನಿಯ ೫ ಅಡಿಮದ್ದುಗಳು ಪ್ರಮುಖವಾದುವು.

ಉಲ್ಲೇಖಗಳು[ಬದಲಾಯಿಸಿ]

  1. "Land mine". Merriam-Webster. 2019. Archived from the original on July 30, 2019. Retrieved March 19, 2019.
  2. "Glossary of mine action terms, definitions and abbreviations. Second edition, Amendment 9" (PDF). International Mine Action Standards. New York, NY: United Nations Mine Action Service (UNMAS). November 2018. p. 20. Archived from the original on May 30, 2019. Retrieved May 30, 2019.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: