ಅಗ್ಲೋನಿಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಗ್ಲೋನಿಮ

ಏರೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ ಜಾತಿ. ಸುಂದರ ಎಲೆಗಳಾಗಿ ಪ್ರಸಿದ್ಧವಾಗಿದೆ. ಇದನ್ನು ಉದ್ಯಾನಗಳಲ್ಲೂ ಮನೆಗಳಲ್ಲೂ ಬೆಳೆಸುವುದಿದೆ. ಇದರ ಎಲೆಗಳು ಹಚ್ಚಹಸಿರಾಗಿದ್ದು ಅವುಗಳ ಮೇಲೆ ವಿವಿಧ ಆಕಾರದ ಮತ್ತು ವಿವಿಧ ವಿನ್ಯಾಸದ ಅಲಂಕೃತ ಮಚ್ಚೆಗಳು ಇರುವುದರಿಂದ ಬಹಳ ಭವ್ಯವಾಗಿ ಕಾಣುತ್ತದೆ. ಜೊತೆಗೆ ಎಲೆಯ ತೊಟ್ಟುಗಳು ಉದ್ದವಾಗಿ, ವಿವಿಧ ಬಣ್ಣ ಮತ್ತು ರೆಕ್ಕೆಗಳಿಂದ ಕೂಡಿರುವುದರಿಂದ ಅವುಗಳ ಅಂದ ಇನ್ನೂ ಹೆಚ್ಚಿರುತ್ತದೆ.


ಅಗ್ಲೋನಿಮ ಜಾತಿಯಲ್ಲಿ ಸದಾ ಹಸಿರಾಗಿರುವ 40 ಪ್ರಭೇದಗಳಿವೆ. ಇವೆಲ್ಲವೂ ಬಹುವಾರ್ಷಿಕಸಸ್ಯಗಳು. ಇವುಗಳ ಪೈಕಿ ಕೆಲವು ಪ್ರಭೇದಗಳು ಮಾತ್ರ ಜನಪ್ರಿಯವಾಗಿವೆ. ಮುಖ್ಯವಾದುವು ಇಂತಿವೆ:


ಅಗ್ಲೋನಿಮ ಕಾಸ್ಟೆಟಮ್: ಇದು ಕುಳ್ಳಾಗಿ ನೆಲದ ಮೇಲೆ ಹರಡಿಕೊಳ್ಳುವ ಸಸ್ಯ. ಇದರ ಕಾಂಡದ ಮೇಲೆ ಎಲೆಗಳು ನಿಬಿಡವಾಗಿ ಇರುತ್ತವೆ. ಎಲೆ ಕರನೆಯಾಕಾರವಾಗಿಯೋ ಆಯತಾಕಾರ ಅಥವಾ ಹೃದಯಾಕಾರವಾಗಿಯೋ ಇರುತ್ತವೆ. ಅಂಚು ನಯವಾಗಿರುತ್ತದೆ. ತುದಿ ಮೊನಚಾಗಿರುತ್ತದೆ. ಎಲೆಯ ಮೇಲಿನ ನಾಳಗಳು ತುದಿಯಲ್ಲಿ ಕಮಾನಿನಂತೆ ಬಾಗಿರುತ್ತವೆ. ಹೂಗೊಂಚಲು ಕವಚ ಬಿಳುಪುಮಿಶ್ರಿತ ಹಸಿರುಬಣ್ಣವಾಗಿರುತ್ತದೆ. ಈ ಹೂಗೊಂಚಲು ಬಹು ಸುಂದರವಾಗಿ ಕಾಣುತ್ತದೆ. ಉಗಮಸ್ಥಾನ ಮಲಯ ದೇಶ.


ಅಗ್ಲೋನಿಮ ಕಮ್ಯುಟಿಟಮ್: ಈ ಪ್ರಭೇದ ಸುಮಾರು ಅರ್ಧಮೀಟರ್ ಎತ್ತರದ ತುಂಡು ಗಿಡವಾಗಿ ಬೆಳೆಯುತ್ತದೆ. ಎಲೆಯ ತೊಟ್ಟು ಎಲೆಯಷ್ಟೆ ಉದ್ದ ಅಥವಾ ಸ್ವಲ್ಪ ಚಿಕ್ಕದು; ಆಯತಾಕಾರವಾಗಿರುವ ಎಲೆಗೆ ಲಂಬಾಗ್ರ ತುದಿಯಿರುತ್ತದೆ. ಬಣ್ಣ ಹಸಿರಾಗಿದ್ದು ಮೇಲು ಭಾಗದಲ್ಲಿ ಬೂದಿಬಣ್ಣದ ಮಚ್ಚೆಗಳಿರುತ್ತವೆ. ಕವಚ ಹಸಿರು ಮಿಶ್ರಿತ ಬಿಳುಪುಬಣ್ಣ. ಹಣ್ಣು ಕೆಂಪು ಅಥವಾ ಕಂದು ಬಣ್ಣದ ಬೆರಿ ಮಾದರಿಯದು. ಇದು ಮಲಯ ದೇಶದ ಮೂಲವಾಸಿ.


ಅಗ್ಲೋನಿಮ ಪಿಕ್ಟಮ್: ಈ ಪ್ರಭೇದ ಸುಮಾರು 1ಮೀ. ಎತ್ತರಕ್ಕೆ ನೇರವಾಗಿ ಬೆಳೆಯುತ್ತದೆ. ಇದರ ಎಲೆ ಆಯತಾಕಾರ ಅಥವಾ ಕದಿರನಾಕಾರವಾಗಿದ್ದು ತುದಿಮೊಂಡಾಗಿರುತ್ತದೆ. ಪಕ್ಕದ ನಾಳಗಳು ಎರಡುಕಡೆ ಅಂಚುಗಳಲ್ಲಿ ಕಮಾನಿನಂತೆ ಬಾಗಿರುತ್ತವೆ. ಎಲೆಯ ಮೇಲುಭಾಗದಲ್ಲಿ ಬಿಳಿಯ ಮಚ್ಚೆಗಳು ಇರುತ್ತವೆ. ಹೂಗೊಂಚಲ ಕವಚ ಲಂಬಾಗ್ರ ತುದಿಯನ್ನು ಹೊಂದಿದೆ. ಈ ಪ್ರಭೇದದಲ್ಲಿ ಎಲೆಯ ಮೇಲೆ ಬಿಳುಪು, ಹಳದಿ ಮತ್ತು ಹಸಿರುಮಿಶ್ರಿತ ಮಚ್ಚೆಗಳಿರುವ ತಳಿಗಳೂ ಇವೆ. ಇದನ್ನು ಮೂರು ಬಣ್ಣದ ತಳಿ ಎಂದೂ ಕರೆಯುತ್ತಾರೆ.


ಅಗ್ಲೋನಿಮ ಮಾಡೆಸ್ಟಮ್: ಈ ಪ್ರಭೇದ ಉಳಿದವುಗಳಿಗಿಂತ ಹೆಚ್ಚು ಎತ್ತರವಾಗಿದೆ. ತಳಭಾಗದ ನಡುಗಿಣ್ಣು ಸುಮಾರು 2.5ಸೆಂ.ಮೀ ದಪ್ಪವಾಗಿರುತ್ತದೆ. ಎಲೆ ಕರನೆಯಾಕಾರವಾಗಿದ್ದು ಲಂಬಾಗ್ರತುದಿಯನ್ನು ಹೊಂದಿರುತ್ತದೆ. ಹೂಗೊಂಚಲು ಕಂಕುಳಲ್ಲಿರುತ್ತದೆ. ಕವಚ 8ಸಸೆಂ.ಮೀ. ಉದ್ದದ್ದು ಮತ್ತು ಹಸುರು ಬಣ್ಣದ್ದು. ಇದು ಫಿಲಿಪೈನ್ಸ್ ದೇಶದ ಮೂಲವಾಸಿ.


ಅಗ್ಲೋನಿಮ ಸಸ್ಯವನ್ನು ಕಾಂಡದ ತುಂಡುಗಳಿಂದಲು ಮೋಸುಗಳಿಂದಲೂ ವೃದ್ಧಿಮಾಡಬಹುದು. ಅದಕ್ಕೆ ಮಳೆಗಾಲ ಯೋಗ್ಯವಾದ ಕಾಲ. ಬೇಸಾಯಕ್ಕೆ ಗೋಡು, ಎಲೆಗೊಬ್ಬರ, ಮರಳು, ಇದ್ದಲು ಮತ್ತು ಹಳೆಯ ಗಾರೆ ಮುಂತಾದುವುಗಳ ಮಿಶ್ರಣದ ಮಣ್ಣು ಉತ್ತಮ. ಸರಾಗವಾಗಿ ಗಾಳಿ, ಬೆಳಕು ಬರುವ ಪಾಶ್ರ್ವ ನೆರಳಿನಲ್ಲಿ ಉತ್ಕøಷ್ಟವಾಗಿ ಬೆಳೆಯುತ್ತದೆ. ಪ್ರತಿನಿತ್ಯ ನೀರು ಸಿಂಪಡಿಸಿದಲ್ಲಿ ಲವಲವಿಕೆಯಿಂದ ಹೊಳಪಾಗಿ ಬೆಳೆಯುತ್ತದೆ. ಬಿಸಿಲಿನಲ್ಲಿ ಇಟ್ಟರೆ ಝಳವನ್ನು ತಡೆಯಲಾರದೆ ಸೊರಗಿ, ಮೇಲಿರುವ ಬಣ್ಣದ ಮಚ್ಚೆಗಳು ನಶಿಸಿಹೋಗುತ್ತವೆ. ಸದಾ ತೇವಾಂಶ ಬೇಕಿದ್ದರೂ ಅತಿಯಾದ ಜೌಗನ್ನು ಇದು ಸಹಿಸುವುದಿಲ್ಲ.