ಅಗ್ನಿಶಾಮಕ ಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಗ್ನಿಶಾಮಕ ಯಂತ್ರವು ಹಲವುವೇಳೆ ತುರ್ತು ಪರಿಸ್ಥಿತಿಗಳಲ್ಲಿ, ಸಣ್ಣ ಬೆಂಕಿಗಳನ್ನು ಆರಿಸಲು ಅಥವಾ ನಿಯಂತ್ರಿಸಲು ಬಳಸಲಾಗುವ ಒಂದು ಸಕ್ರಿಯ ಅಗ್ನಿ ರಕ್ಷಣಾ ಸಾಧನ. ಇದು ನಿಯಂತ್ರಣ ತಪ್ಪಿದ ಬೆಂಕಿಯ ಮೇಲೆ ಬಳಸಲು ಉದ್ದೇಶಿತವಾಗಿಲ್ಲ, ಉದಾಹರಣೆಗೆ ಛಾವಣಿಯನ್ನು ಮುಟ್ಟಿದ ಬೆಂಕಿ, ಬಳಕೆದಾರನಿಗೆ ಅಪಾಯವೊಡ್ಡುವ ಬೆಂಕಿ (ಅಂದರೆ, ಯಾವುದೇ ಪಾರು ಮಾರ್ಗವಿಲ್ಲದಿದ್ದಾಗ, ಹೊಗೆ, ಸ್ಫೋಟದ ಅಪಾಯವಿದ್ದಾಗ), ಅಥವಾ ಅಗ್ನಿಶಾಮಕ ಇಲಾಖೆಯ ಪರಿಣಿತಿ ಅಗತ್ಯವಿರುವ ಬೆಂಕಿ. ಸಾಮಾನ್ಯವಾಗಿ, ಅಗ್ನಿಶಾಮಕ ಯಂತ್ರವು ಬೆಂಕಿಯನ್ನು ಆರಿಸಲು ವಿಸರ್ಜಿಸಬಹುದಾದ ಕಾರಕವನ್ನು ಹೊಂದಿರುವ ಕೈಯಲ್ಲಿ ಹಿಡಿಯಬಹುದಂಥ ಉರುಳೆಯಾಕಾರದ ಒತ್ತಡ ಧಾರಕವನ್ನು ಹೊಂದಿರುತ್ತದೆ. ಉರುಳೆಯಾಕಾರದಲ್ಲಿರದ ಒತ್ತಡ ಧಾರಕಗಳಾಗಿ ತಯಾರಿಸಿದ ಅಗ್ನಿಶಾಮಕ ಯಂತ್ರಗಳೂ ಇವೆ, ಆದರೆ ಕಡಿಮೆ ಸಾಮಾನ್ಯವಾಗಿವೆ.

ಅಮೇರಿಕಾದಲ್ಲಿ, ಮನೆಗಳನ್ನು ಹೊರತುಪಡಿಸಿ ಎಲ್ಲ ಕಟ್ಟಡಗಳಲ್ಲಿನ ಅಗ್ನಿಶಾಮಕ ಯಂತ್ರಗಳನ್ನು ಸಾಮಾನ್ಯವಾಗಿ ಕನಿಷ್ಠಪಕ್ಷ ವಾರ್ಷಿಕವಾಗಿ ಒಂದು ಅಗ್ನಿ ರಕ್ಷಣಾ ಕಂಪನಿಯು ರಿಪೇರಿ ಮಾಡಬೇಕಾಗುತ್ತದೆ ಮತ್ತು ಪರಿಶೀಲಿಸಬೇಕಾಗುತ್ತದೆ. ಕೆಲವು ಆಡಳಿತವ್ಯಾಪ್ತಿಗಳಲ್ಲಿ ಅಗ್ನಿಶಾಮಕ ಯಂತ್ರಗಳಿಗೆ ಹೆಚ್ಚು ನಿತ್ಯಗಟ್ಟಳೆಯ ಸೇವೆ ಅಗತ್ಯವಿರುತ್ತದೆ. ರಿಪೇರಿ ಮಾಡುವವನು ಯಂತ್ರದ ಮೇಲೆ ಮಾಡಲಾದ ರಿಪೇರಿಯ ಬಗೆಯನ್ನು ಸೂಚಿಸಲು ಮಾಹಿತಿಪಟ್ಟಿಯನ್ನು ಅಂಟಿಸುತ್ತಾನೆ (ವಾರ್ಷಿಕ ಪರಿಶೀಲನೆ, ಪುನರ್ಭರ್ತಿ, ಹೊಸ ಅಗ್ನಿಶಾಮಕ ಯಂತ್ರ).

ಯಾವುದೇ ದಾಖಲೆಯಿರುವ ಮೊದಲ ಅಗ್ನಿಶಾಮಕ ಯಂತ್ರಕ್ಕೆ ಆ ಕಾಲದ ಹೆಸರಾಂತ ರಸಾಯನಶಾಸ್ತ್ರಜ್ಞ ಆ್ಯಂಬ್ರೋಸ್ ಗಾಡ್‍ಫ಼್ರೀ ಇಂಗ್ಲಂಡ್‍ನಲ್ಲಿ ೧೭೨೩ರಲ್ಲಿ ಹಕ್ಕುಪತ್ರ ಪಡೆದನು. ಇದು ಅಗ್ನಿಶಾಮಕ ದ್ರವದ ಮಂಕಣಿಯನ್ನು ಹೊಂದಿತ್ತು. ಇದರಲ್ಲಿ ಕೋವಿಮದ್ದಿನ ಒಂದು ಪ್ಯೂಟರ್‍ನ ಕೋಶವಿತ್ತು. ಆಧುನಿಕ ಅಗ್ನಿಶಾಮಕ ಯಂತ್ರವನ್ನು ಬ್ರಿಟಿಶ್ ಕ್ಯಾಪ್ಟನ್ ಜಾರ್ಜ್ ವಿಲಿಯಂ ಮ್ಯಾನ್ಬಿ ೧೮೧೮ರಲ್ಲಿ ಆವಿಷ್ಕರಿಸಿದನು; ಇದು ಸಂಕುಚಿತ ವಾಯುವಿನಲ್ಲಿ ೩ ಗ್ಯಾಲನ್ ಪೊಟ್ಯಾಸಿಯಮ್‍ ಕಾರ್ಬೊನೇಟ್‍ ದ್ರಾವಣವಿರುವ ತಾಮ್ರದ ಧಾರಕವನ್ನು ಹೊಂದಿತ್ತು. ಸೋಡಾ-ಆಮ್ಲ ಶಾಮಕ ಯಂತ್ರಕ್ಕೆ ಫ಼್ರಾನ್ಸ್ವಾ ಕಾರ್ಲಿಯೇರ್ ೧೮೬೬ರಲ್ಲಿ ಫ಼್ರಾನ್ಸ್‌ನಲ್ಲಿ ಹಕ್ಕುಪತ್ರ ಪಡೆದನು. ಇದು ನೀರು ಮತ್ತು ಸೋಡಿಯಂ ಬೈಕಾರ್ಬೊನೇಟ್ ದ್ರಾವಣವನ್ನು ಟಾರ್ಟಾರಿಕ್ ಆಮ್ಲದೊಂದಿಗೆ ಮಿಶ್ರಣ ಮಾಡಿ, ನೋದಕ ಇಂಗಾಲದ ಡೈಆಕ್ಸೈಡ್ ಅನಿಲವನ್ನು ಉತ್ಪಾದಿಸುತ್ತಿತ್ತು. ೧೮೮೧ರಲ್ಲಿ ಆ್ಯಲ್ಮನ್ ಗ್ರ್ಯಾಂಗರ್ ಅಮೇರಿಕಾದಲ್ಲಿ ಸೋಡಾ-ಆಮ್ಲದ ಶಾಮಕ ಯಂತ್ರಕ್ಕೆ ಹಕ್ಕುಪತ್ರ ಪಡೆದನು. ಇವನ ಯಂತ್ರವು ಬೆಂಕಿಯ ಮೇಲೆ ಒತ್ತಡಕ್ಕೊಳಗಾದ ನೀರನ್ನು ವಿಸರ್ಜಿಸಲು ಸೋಡಿಯಂ ಬೈಕಾರ್ಬೊನೇಟ್ ದ್ರಾವಣ ಮತ್ತು ಸಲ್‍ಫ಼್ಯೂರಿಕ್ ಆಮ್ಲದ ನಡುವಿನ ರಾಸಾಯನಿಕ ಕ್ರಿಯೆಯನ್ನು ಬಳಸುತ್ತಿತ್ತು.[೧]

ಉಲ್ಲೇಖಗಳು[ಬದಲಾಯಿಸಿ]