ಅಗ್ಗದ ಹಣದ ಧೋರಣೆ

ವಿಕಿಪೀಡಿಯ ಇಂದ
Jump to navigation Jump to search

ಅಗ್ಗದ ಹಣದ ಧೋರಣೆ[ಬದಲಾಯಿಸಿ]

ಕಡಿಮೆ ಬಡ್ಡಿದರದಲ್ಲಿ ಯಥೇಚ್ಛವಾಗಿ ಹಣ ಒದಗಿಸುವುದೇ ಈ ಧೋರಣೆಯ ಉದ್ದೇಶ. ಇಚ್ಛಿತ ಗುರಿಯನ್ನು ಯೋಗ್ಯ ಹಣದ ಧೋರಣೆಯಿಂದ ಸುಲಭವಾಗಿ ಸಾಧಿಸಬಹುದೆಂದು ತೋರಿಸುವುದಕ್ಕೆ ಇದೊಂದು ದೃಷ್ಟಾಂತ. ಹಣಕ್ಕೆ ಈ ಮಹತ್ವದ ಪಾತ್ರ ಬಂದುದು 1930ರ ಮಹಾಮುಗ್ಗಟ್ಟಿನ ಅನಂತರ; ಅದರಲ್ಲಿಯೂ ವಿಶೇಷವಾಗಿ ಕೀನ್ಸರ ದಿ ಜನರಲ್ ಥಿಯರಿ ಆಫ್ ಎಂಪ್ಲಾಯ್ಮೆಂಟ್, ಇಂಟರೆಸ್ಟ್ ಅಂಡ್ ಮನಿ ಎಂಬ ಪುಸ್ತಕದ ಪ್ರಕಟಣೆಯ ಅನಂತರ. ಅದಕ್ಕೂ ಮೊದಲು ಹಣವೊಂದು ಕೇವಲ ವಿನಿಮಯ ಸಾಧನ, ಆರ್ಥಿಕ ಉನ್ನತಿ ನಿಜವಾದ ಉಳಿತಾಯದಿಂದಲೇ ವಿನಾ ಬರೀ ಹಣದಿಂದಲ್ಲವೆಂಬ ಭಾವನೆಯಿತ್ತು. ಕೀನ್ಸರು ಯುದ್ಧವೆಚ್ಚವನ್ನು ಹೇಗೆ ನಿರ್ವಹಿಸುವುದು ಎಂಬ ವಿಷಯದಲ್ಲಿ ಅಗ್ಗ ಹಣದ ಧೋರಣೆಯನ್ನು ಪ್ರತಿಪಾದಿಸಿದರು. ಅದರಂತೆ ಭಾರತದಲ್ಲಿ ಸಹ ದ್ವಿತೀಯ ಮಹಾಯುದ್ಧದ ವೇಳೆಯಲ್ಲಿ ಇಂಥ ಧೋರಣೆಯನ್ನೇ ತಳೆಯಲು ಸರ್ಕಾರವನ್ನು ಒತ್ತ್ತಾಯಿಸಲಾಗುತ್ತಿತ್ತು. ಈ ಧೋರಣೆಯನ್ನು ಬರೀ ಯುದ್ಧವೆಚ್ಚವನ್ನು ನಿರ್ವಹಿಸಲಷ್ಟೇ ಏಕೆ, ಆರ್ಥಿಕ ಉನ್ನತಿಯನ್ನು ಸಾಧಿಸಲು ಇಲ್ಲವೆ ಆರ್ಥಿಕಸ್ಥಿತಿಯಲ್ಲುಂಟಾಗುವ ಮುಗ್ಗಟ್ಟನ್ನು ನಿವಾರಿಸಲು ಉಪಯೋಗಿಸಬಹುದು. ರಾಷ್ಟ್ರದ ಕೇಂದ್ರ ಬ್ಯಾಂಕ್ ತಾನು ಬಡ್ಡಿದರವನ್ನು ಇಳಿಸಬಹುದು. ಇದರಿಂದ ಉಳಿದ ಬ್ಯಾಂಕುಗಳಿಗೆ ಸೋವಿ ದರದಲ್ಲಿ ಹಣ ಲಭ್ಯವಾಗುವುದರಿಂದ ಅವೂ ಸಹ ಹೆಚ್ಚು ಹಣವನ್ನು ತಮ್ಮ ಹತ್ತಿರ ವ್ಯರ್ಥವಾಗಿ ಇಟ್ಟುಕೊಳ್ಳಲಾರದೆ ಲಾಭಗಳಿಸುವುದಕ್ಕಾಗಿ ತಾವೂ ಬಡ್ಡಿದರವನ್ನು ಇಳಿಸುವುವು. ತತ್ಪÀರಿಣಾಮವಾಗಿ ಉತ್ಪಾದಕರಿಗೆ ಸುಲಭರೀತಿಯಲ್ಲಿ ಹಣ ದೊರಕಿ, ಅಧಿಕ ಉತ್ಪಾದನೆಗೆ ಅನುಕೂಲವಾಗುವುದು. ಇದರಿಂದ ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿ ಜನರ ಉತ್ಪನ್ನ ಹೆಚ್ಚಾಗುವುದು. ವಸ್ತುಗಳ ಬೇಡಿಕೆ ಹೆಚ್ಚಾಗಿ ಮತ್ತಷ್ಟು ಉತ್ಪಾದನೆಗೆ ದಾರಿಯಾಗುವುದು. ಹೀಗೆ ಆರ್ಥಿಕ ಪ್ರಗತಿಯುಂಟಾಗುವುದು. ಬ್ಯಾಂಕುಗಳಿಗೆ ಹಣದ ಕೊರತೆ ಇದ್ದಾಗ ಮಾತ್ರ ಈ ಬಡ್ಡಿದರದ ಧೋರಣೆ ಪ್ರಭಾವಕಾರಿಯಾಗುವುದು. ಒಂದು ಪಕ್ಷ ಬ್ಯಾಂಕುಗಳಲ್ಲಿ ಹಣದ ವಿಪುಲ ಸಂಗ್ರಹವಿದ್ದರೆ ಈ ಧೋರಣೆ ತನ್ನ ಗುರಿಯನ್ನು ಸಾಧಿಸದೇ ಹೋಗಬಹುದು. ಆದ್ದರಿಂದ ಅದನ್ನು ಪುಷ್ಟೀಕರಿಸಲು ಮಧ್ಯವರ್ತಿ ಬ್ಯಾಂಕು ನೇರವಾಗಿ ಪೇಟೆಯಲ್ಲಿ ಸಾಲಪತ್ರಗಳ ವ್ಯವಹಾರವನ್ನು ಪ್ರಾರಂಭಿಸಬಹುದು. ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಕೊಂಡ ಸರಕಾರಕ್ಕೆ ಸಾಲ ನೀಡಬಹುದು. ಸಾಲಪತ್ರಗಳನ್ನು ಕೊಂಡು ಹೆಚ್ಚಿಗೆ ಹಣವನ್ನು ಆರ್ಥಿಕ ವ್ಯವಸ್ಥೆಯಲ್ಲಿ ತೊಡಗಿಸಬಹುದು. ಜನತೆ ಮತ್ತು ಇತರ ಬ್ಯಾಂಕುಗಳು ಈ ಸಾಲಪತ್ರಗಳನ್ನು ಮಾರಿ ಹಣ ಪಡೆಯುವುವು. ಇದೇ ಹಣದ ಉತ್ಪಾದನೆಗೆ ಉಪಯೋಗವಾಗುವುದು. ಒಮ್ಮೆ ಬ್ಯಾಂಕುಗಳಲ್ಲಿ ವಿಪುಲ ಹಣ ಸಂಗ್ರಹವಾಯಿತೆಂದರೆ ಅದನ್ನು ತೊಡಗಿಸಿ ಲಾಭಗಳಿಸುವ ಉದ್ದೇಶದಿಂದ ಅವು ಬಡ್ಡಿದರವನ್ನು ಇಳಿಸಲೇಬೇಕಾಗುವುದು. ಹೀಗಾಗಿ ಇವೆರಡು ಸಾಧನಗಳಿಂದ ಇಚ್ಛಿತ ಪರಿಣಾಮ ಸಾಧ್ಯವಾಗುವುದು. ಯುದ್ಧವೆಚ್ಚವನ್ನು ನಿರ್ವಹಿಸುವಾಗಲೂ ಯುದ್ಧಸಲಕರಣೆಗಳನ್ನೂ ಶಸ್ತ್ರಾಸ್ತ್ರಗಳನ್ನೂ ಇತರ ಸಾಮಗ್ರಿಯನ್ನೂ ಸಂಗ್ರಹಿಸಲು ಇದೇ ರೀತಿ ಅಗ್ಗದ ಹಣದ ಧೋರಣೆಯಿಂದ ಅನುಕೂಲವಾಗುವುದು. ಅಗ್ಗವಾಗಿ ದೊರಕುವ ಹಣವನ್ನು ಯುದ್ಧಕ್ಕೆ ಅವಶ್ಯವಾಗುವ ವಸ್ತುಗಳನ್ನು ಉತ್ಪಾದಿಸುವುದಕ್ಕೆ ಉಪಯೋಗವಾಗುವಂತೆ ಬಳಸುವುದು ಮಾತ್ರ ಅಗತ್ಯ. ಅದರಂತೆ ಆರ್ಥಿಕ ಮುಗ್ಗಟ್ಟು ಒದಗಿದ್ದರೆ ಲಾಭಾಂಶ ಕಡಿಮೆಯಾಗಿ, ಉತ್ಪಾದನೆ ಕುಂಠಿತವಾಗುವುದು. ಇಂಥ ಸಮಯದಲ್ಲಿ ಸಹ ಅಗ್ಗದ ಹಣದ ಧೋರಣೆಯನ್ನು ಬಳಸಿ ಆರ್ಥಿಕ ಸ್ಥಿತಿಯನ್ನು ಪುನರುಜ್ಜೀವನಗೊಳಿಸ ಬಹುದು. ಸುಲಭ ದರದಲ್ಲಿ ಹಣ ದೊರಕುವುದರಿಂದ ಉತ್ಪಾದನಾವೆಚ್ಚ ಕಡಿಮೆಯಾಗಿ, ಲಾಭಾಂಶ ಹೆಚ್ಚುವುದು; ಉತ್ಪಾದನೆಗೆ ಉತ್ತೇಜನ ದೊರಕಿದಂತಾಗುವುದು. ಉತ್ಪಾದನೆ ಹೆಚ್ಚಿದಂತೆ, ಉದ್ಯೋಗಾವಕಾಶ, ಜನರ ಆದಾಯ, ವಿವಿಧ ವಸ್ತುಗಳಿಗೆ ಬೇಡಿಕೆಗಳು ಹೆಚ್ಚಿ, ಮತ್ತಷ್ಟು ಊರ್ಜಿತಸ್ಥಿತಿಯುಂಟಾಗುವುದು. ಬ್ರಿಟನ್ ಎರಡನೆಯ ಮಹಾಯುದ್ಧದ ಕಾಲದಲ್ಲಿ ಯುದ್ಧವೆಚ್ಚವನ್ನು ಪುರೈಸುವುದಕ್ಕಾಗಿ ಕೈಗೊಂಡ ಈ ಧೋರಣೆಯನ್ನು 1951ರವರೆಗೆ ಮುಂದುವರಿಸಲಾಯಿತು. ಭಾರತದಲ್ಲಿ ಸಹ ಪರೋಕ್ಷವಾಗಿ ಇದೇ ನೀತಿಯನ್ನು ಅನುಸರಿಸಲಾಯಿತು. ಅಗ್ಗದ ಹಣದ ಧೋರಣೆಯ ವಿಶೇಷ ಗುಣಗಳೆಂದರೆ 1. ಉತ್ಪಾದನಾವೆಚ್ಚ ಕಡಿಮೆಯಾಗಿ ಅಧಿಕೋತ್ಪಾದನೆಗೆ ಉತ್ತೇಜನ ಸಿಗುವುದು. 2. ಸುಲಭ ಬಡ್ಡಿದರದಲ್ಲಿ ಹಣ ದೊರಕುವುದರಿಂದ, ಬಂಡವಾಳದ ಬೆಳವಣಿಗೆ ಅನುಕೂಲವಾಗುವುದು. 3. ಅಧಿಕ ಬಂಡವಾಳದ ಸಹಾಯದಿಂದ ಬೆಳವಣಿಗೆಗೆ ಅನುಕೂಲವಾಗುವುದು. 3. ಅಧಿಕ ಬಂಡವಾಳದ ಸಹಾಯದಿಂದ ಸಕಲಸಾಧನಮೂಲಗಳ ಸಂಪುರ್ಣ ಉಪಯೋಗ ಹೊಂದುವುದು. 4. ಹೆಚ್ಚಿನದೆಂದರೆ ಯೋಗ್ಯರೀತಿಯಲ್ಲಿ ಕೈಕೊಂಡ ಧೋರಣೆ ಜನತೆಯ ಮೇಲೆ ಹೆಚ್ಚಿನ ಭಾರ ಹೇರುವುದಿಲ್ಲ. ಆದಾಯದ ಒಂದು ಭಾಗವನ್ನು ಉಪಯೋಗಿಸದೇ ಇರುವುದು ಅಂದರೆ ಖರ್ಚನ್ನು ಕಡಿಮೆ ಮಾಡುವುದು ಯಾವುದೇ ಆರ್ಥಿಕ ಪ್ರಗತಿಗೆ ಮೂಲ ಬಂಡವಾಳವೆಂದು ಹಿಂದಿನ ಅರ್ಥಶಾಸ್ತ್ರಜ್ಞರ ವಾದ. ಇದಕ್ಕಾಗಿ ತಮ್ಮ ಕೆಲವು ಇಷ್ಟ ವಸ್ತುಗಳ ಉಪಭೋಗವನ್ನು ತ್ಯಾಗಮಾಡಲೇಬೇಕಾಗುತ್ತಿತ್ತು. ಆದರೂ ಅಗ್ಗದ ಹಣದ ಧೋರಣೆ ಕೃತಿಯಲ್ಲಿ ಜಾರಿಮಾಡುವುದು ಅಷ್ಟು ಸುಲಭವಲ್ಲ. ಮಧ್ಯವರ್ತಿ ಬ್ಯಾಂಕು ಉತ್ಪಾದಿಸಿದ ಸಮಸ್ತ ಹಣವೂ ಉತ್ಪಾದನೆಗಾಗಿ ವಿನಿಯೋಗಿಸಲ್ಪಡದೆ ಸಟ್ಟಾವ್ಯಾಪಾರದಲ್ಲಿ ತೊಡಗಬಹುದು. ಅದು ದೇಶಕ್ಕೆ ಹಾನಿಕರ. ಉತ್ಪಾದನಾಕಾರ್ಯದಲ್ಲಿ ಕಚ್ಚಾಮಾಲು ಯೋಗ್ಯವೇಳೆಯಲ್ಲಿ ದೊರಕದೇ ಇರುವುದರಿಂದಾಗಲಿ, ನುರಿತ ಕಾರ್ಮಿಕರು ದೊರಕದೇ ಇರುವುದರಿಂದಾಗಲಿ, ಹಾಗೂ ಇನ್ನಿತರ ಕಾರಣಗಳಿಂದ ನಿರ್ದಿಷ್ಟ ಅವಧಿಯಲ್ಲಿ ಯೋಜಿತ ಉತ್ಪಾದನೆ ಆಗದೇ ಇರಬಹುದು. ಹಾಗಾದಲ್ಲಿ ವಿನಾಕಾರಣ ಅತಿಪ್ರಸರಣಕ್ಕೆ ಎಡೆಮಾಡಿಕೊಟ್ಟಂತಾಗುವುದು. ವಿಶೇಷತಃ ಅಗ್ಗದ ಹಣದ ಧೋರಣೆಯನ್ನು ಕೈಕೊಂಡಾಗ ಗ್ರಾಹಕ ವಸ್ತುಗಳ, ಅದರಲ್ಲಿಯೂ ಜೀವನಾವಶ್ಯಕವಸ್ತುಗಳ, ವಿಪುಲ ಸಂಗ್ರಹವಿರುವುದು ಅಗತ್ಯ. ಇಲ್ಲದಿದ್ದರೆ ವಿವಿಧ ಕಾರ್ಯಕ್ರಮಗಳು ಉದ್ಯೋಗಾವಕಾಶವನ್ನು ಹೆಚ್ಚಿಸುವುವು. ಅವುಗಳಲ್ಲಿ ತೊಡಗಿದ ಜನರ ಆದಾಯ ಹೆಚ್ಚಿ, ಗ್ರಾಹಕ ವಸ್ತುಗಳ ಬೇಡಿಕೆ ಹೆಚ್ಚಾಗುವುದು. ಅವು ಸಿಗದಿದ್ದಲ್ಲಿ ಧಾರಣೆಗಳು ಏರುವುವು. ಈ ಜಾಡ್ಯ ಉಳಿದ ವಸ್ತುಗಳ ಬೆಲೆಗಳಿಗೂ ತಾಗುವುದು. ಒಮ್ಮೆ ಬೆಲೆಗಳು ಏರಹತ್ತಿದುವೆಂದರೆ ಹೆಚ್ಚು ಹೆಚ್ಚು ಹಣವನ್ನು ಪುರೈಸ ಬೇಕಾಗುವುದು. ಈ ಹಣದ ಉಬ್ಬರ ಆರ್ಥಿಕಪರಿಸ್ಥಿತಿಯನ್ನೇ ಹದಗೆಡಿಸುವುದು. ವಸ್ತುಗಳ ಪುರೈಕೆ ಆಗದಿದ್ದಲ್ಲಿ ಬಲವಾದ ನಿಯಂತ್ರಣ, ಸೇವಾಪದ್ಧತಿ ಇತ್ಯಾದಿ ವಿಧಾನಗಳನ್ನು ಅನುಸರಿಸಬೇಕಾಗುವುದು. ಇವೆಲ್ಲವನ್ನೂ ಯೋಗ್ಯರೀತಿಯಲ್ಲಿ ಜಾರಿಗೊಳಿಸಲು ಸರ್ಕಾರದ ಸಿಬ್ಬಂದಿ ದಕ್ಷತೆಯಿಂದಿರಬೇಕಾಗುವುದು. ಈ ರೀತಿಯಾಗಿ ಒಮ್ಮೆ ಹಣದ ಮೇಲಿನ ಹಿಡಿತ ತಪ್ಪಿತೆಂದರೆ ಇಲ್ಲದ ಅನರ್ಥಗಳಿಗೆ ಗುರಿಯಾಗಬೇಕಾಗುವುದು.