ಅಖಿಲಭಾರತ ಪತ್ರಿಕಾಸಂಘಗಳು

ವಿಕಿಪೀಡಿಯ ಇಂದ
Jump to navigation Jump to search

ಅಖಿಲಭಾರತ ಪತ್ರಿಕಾಸಂಘಗಳು[ಬದಲಾಯಿಸಿ]

ಅಖಿಲಭಾರತ ಪತ್ರಿಕಾ ಸಂಪಾದಕರ ಪರಿಷತ್ತು: ಭಾರತ ಸರ್ಕಾರ 1940 ಅಕ್ಟೋಬರ್ 26ನೆಯ ತಾರೀಕು ಭಾರತದ ಪತ್ರಿಕೆಗಳ ಮೇಲೆ, ಬಿಗಿಯಾದ ಮತ್ತು ಭೀತಿ ಹುಟ್ಟಿಸುವ ನಿಷೇಧಾಜ್ಞೆಯನ್ನು ಜಾರಿಮಾಡಿತು. ಸರ್ಕಾರದ ಈ ನಿಷೇಧಾಜ್ಞೆಯಿಂದ ಸ್ವಾತಂತ್ರ್ಯಹೋರಾಟದ ಸುದ್ದಿಗಳನ್ನು ಪ್ರಚಾರ ಮಾಡುವುದು ಸಾಧ್ಯವಿರಲಿಲ್ಲ. ಅದು ಪತ್ರಿಕಾಸ್ವಾತಂತ್ರ್ಯಕ್ಕೆ ಕೊಡಲಿ ಪೆಟ್ಟನ್ನು ಹಾಕಿದಂತಾಗಿತ್ತು. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರದೊಂದಿಗೆ ಸಮಾಲೋಚನೆಮಾಡಿ ಒಂದು ತೀರ್ಮಾನಕ್ಕೆ ಬರಲು, ಭಾರತದ ಪತ್ರಿಕೆಗಳ ಸಂಪಾದಕರು ಒಂದೆಡೆ ಸೇರಿದರು. ಆ ಒಕ್ಕೂಟವೇ ಅಖಿಲಭಾರತ ಪತ್ರಿಕಾಸಂಪಾದಕರ ಪರಿಷತ್ತಾಗಿ ಮಾರ್ಪಾಡಾಯಿತು. ಪತ್ರಿಕೋದ್ಯಮದ ಶ್ರೇಷ್ಠವಾದ ಸಂಪ್ರದಾಯ ಮತ್ತು ಮಟ್ಟಗಳನ್ನು ಕಾಪಾಡುವುದು; ಪ್ರಕಟಣೆ, ಸುದ್ದಿ ಮತ್ತು ವಿಮರ್ಶಾತ್ಮಕ ಟೀಕೆಗಳ ಸ್ವಾತಂತ್ರ್ಯವನ್ನು ಕಾಪಾಡುವುದು; ಸರ್ಕಾರಕ್ಕೂ ಸಾರ್ವಜನಿಕರಿಗೂ ಇರುವ ಸಂಬಂಧವನ್ನು ಪತ್ರಿಕಾಲೋಕ ಯಾವ ರೀತಿ ತಿಳಿಸುತ್ತಿದೆ ಎಂಬುದನ್ನು ತಿಳಿಯುವುದು; ಸಾಧ್ಯವಾದಮಟ್ಟಿಗೂ ಸರ್ಕಾರಕ್ಕೂ ಪತ್ರಿಕೆಗಳಿಗೂ ಮಧ್ಯೆ ಮಧುರ ಬಾಂಧವ್ಯವನ್ನೇರ್ಪಡಿಸುವುದು; ವೃತ್ತಿಗೆ ಸಂಬಂಧಪಟ್ಟ ಇತರ ವಿಷಯಗಳಿಗೆ ಪರಿಹಾರವನ್ನು ಕಂಡುಹಿಡಿಯುವುದು-ಇವು ಈ ಪರಿಷತ್ತಿನ ಮುಖ್ಯ ಉದ್ದೇಶಗಳಾಗಿವೆ. ಈ ಪರಿಷತ್ತಿನ ಅಧ್ಯಕ್ಷರುಗಳಾಗಿ ಹಿಂದೂ ಪತ್ರಿಕೆಯ ಕಸ್ತೂರಿ ಶ್ರೀನಿವಾಸನ್, ಬಾಂಬೆ ಕ್ರಾನಿಕಲ್ ಪತ್ರಿಕೆಯ ಸೈಯದ್ ಅಬ್ದುಲ್ಲಾ ಬ್ರೆಲ್ವಿ, ಅಮೃತ ಬಜಾರ ಪತ್ರಿಕೆಯ ತುಷಾರ ಕಾಂತಿಘೋಷ್, ಸ್ವದೇಶಮಿತ್ರನ್ ಪತ್ರಿಕೆಯ ಸಿ. ಆರ್. ಶ್ರೀನಿವಾಸನ್ ಮತ್ತು ಎ.ಡಿ. ಮಣಿ, ದೇವದಾಸ್ ಗಾಂಧಿ, ದುರ್ಗಾದಾಸ್, ಜೆ. ನಟರಾಜನ್, ಸಚಿನ್ಸೇನ್, ಮತ್ತು ಸಿ.ಕೆ. ಭಟ್ಟಾಚಾರ್ಯ ಮುಂತಾದವರು ಹೆಚ್ಚಿನ ಕೆಲಸಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಕಾಲದಲ್ಲಿ ಬಹುತೇಕ ಪತ್ರಿಕೆಗಳಲ್ಲಿ ಪತ್ರಕರ್ತರ ಹಾಗೂ ಪತ್ರಕರ್ತರೇತರ ನೌಕರರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಸಾಕಷ್ಟು ಸಂಬಳ ಸಾರಿಗೆಗಳಿರಲಿಲ್ಲ. ಇತರ ವರ್ಗಗಳ ಕಾರ್ಮಿಕರಿಗಿದ್ದ ಕನಿಷ್ಠ ಸೌಕರ್ಯಗಳಿಂದಲೂ ಪತ್ರಕರ್ತರು ವಂಚಿತರಾಗಿದ್ದರು. ರಜಾ ಸೌಲಭ್ಯವಿರಲಿಲ್ಲ. ಉದ್ಯೋಗ ರಕ್ಷಣೆಯೇ ಇರಲಿಲ್ಲ. ಯಾರನ್ನು ಬೇಕಾದರೂ ಯಾವ ಸಮಯದಲ್ಲಾದರೂ ಸೇವೆಯಿಂದ ವಜಾ ಮಾಡಬಹುದಾಗಿತ್ತು. ಇಂತಹ ಶೋಷಣೆಯ ಪರಿಸ್ಥಿತಿಯೇ ಮುಂದೆ ಪತ್ರಕರ್ತರ ಹಾಗೂ ಪತ್ರಕರ್ತೇತರ ಸಂಘಟನೆಗಳು ಜನ್ಮ ತಾಳಲು ಕಾರಣವಾಯಿತು. 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಸಂಪಾದಿಸಿದ ದೇಶದಲ್ಲಿ 1950ರ ಅಕ್ಟೋಬರ್ 15 ರಂದು ದೆಹಲಿಯಲ್ಲಿ ದೇಶದ ಎಲ್ಲ ಭಾಗಗಳಿಂದ ಬಂದಿದ್ದ ಪತ್ರಕರ್ತರು ಸಭೆ ಸೇರಿ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟವನ್ನು ಸ್ಥಾಪಿಸಲು ಐತಿಹಾಸಿಕ ತೀರ್ಮಾನ ಕೈಗೊಂಡರು. ಅಂದಿನಿಂದ ಇಲ್ಲಿಯವರೆಗೆ ಈ ಪತ್ರಕರ್ತರ ಒಕ್ಕೂಟ (ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್್ಟಗೆ) ಪತ್ರಕರ್ತರ ಸೇವಾ ಸ್ಥಿತಿಗತಿ ಉತ್ತಮಪಡಿಸಲು ಹೋರಾಟ ನಡೆಸಿ ಗಣನೀಯ ಸಾಧನೆಗೆ ಕಾರಣವಾಗಿದೆ. ಕಾಲ ಉರುಳಿದಂತೆ ಇತರ ಕೆಲವು ಸಂಘಗಳು ರೂಪುಗೊಂಡವು. ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್, ದೆಹಲಿ ಅಖಿಲ ಭಾರತ ವೃತ್ತಪತ್ರಿಕಾ ನೌಕರರ ಸಂಘ ದೆಹಲಿ ಇವೆರಡು, ಕಾರ್ಯನಿರತ ಪತ್ರಕರ್ತರ ಸಂಘಟನೆಗಳು. ಭಾರತೀಯ ವೃತ್ತ ಪತ್ರಿಕಾ ಸಂಸ್ಥೆ (ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ, (ಐಎನ್ಎಸ್)) ವೃತ್ತಪತ್ರಿಕೆಗಳ ಹಾಗೂ ಪ್ರಕಾಶಕರ ಸಂಸ್ಥೆ, ಅವರ ಮುಖವಾಣಿ. 1988ರ ಜನವರಿ 25ರಂದು ಅಸ್ತಿತ್ವಕ್ಕೆ ಬಂದಿತು. ಇದಕ್ಕೆ ಮುನ್ನ ಇಂಡಿಯ ಬರ್ಮ ಅಂಡ್ ಸಿಲೋನ್ ನ್ಯೂಸ್ ಪೇಪರ್್ಸ ಲಂಡನ್ ಕಮಿಟಿ 1927ರ ಅಕ್ಟೋಬರ್ 1ರಂದು ಸ್ಥಾಪನೆಯಾಗಿತ್ತು. ಅನಂತರ ಈ ಸಂಸ್ಥೆ ಇಂಡಿಯನ್ ಅಂಡ್ ಈಸ್ಟರ್ನ್ ನ್ಯೂಸ್ ಪೇಪರ್ ಸೊಸೈಟಿ (ಐ.ಇ.ಎನ್.ಎಸ್) ಆಗಿ ಪರಿವರ್ತಿತವಾಯಿತು. ಸಿಲೋನ್ ಬರ್ಮಾದೇಶಗಳು ಪ್ರತ್ಯೇಕವಾದ ಮೇಲೆ, ಸಂಸ್ಥೆಯ ಹೆಸರು ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ (ಐಎನ್ಎಸ್)ಎಂದು ಪರಿವರ್ತನೆಗೊಂಡಿತು. ಇದರ ಕೇಂದ್ರ ಕಛೇರಿ ದೆಹಲಿಯಲ್ಲಿದೆ. ಈ ಸಂಸ್ಥೆ ವೃತ್ತಪತ್ರಿಕೆಗಳು ಮಾಲೀಕರ ಮುಖವಾಣಿಯಾಗಿ ಸಾರ್ವಜನಿಕವಾಗಿ ಸರಕಾರದೊಡನೆ ವ್ಯವಹರಿಸುತ್ತಿದೆ. ವೃತ್ತಪತ್ರಿಕೆಗಳಿಗೆ ಅಗತ್ಯವಾದ ಮುದ್ರಣಕಾಗದ, ಯಂತ್ರಗಳು, ಬಿಡಿಭಾಗಗಳ ಆಮದಿಗೆ ನೆರವು ನೀಡುತ್ತಿದೆ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯ(ಯುಎನ್ಎ) ವಾರ್ತಾಸಂಸ್ಥೆಗಳು ಪತ್ರಿಕೆಗಳ ಪ್ರಸಾರಸಂಖ್ಯೆಯನ್ನು ದೃಢೀಕರಿಸಿ ಪ್ರಮಾಣ ಪತ್ರ ನೀಡುತ್ತವೆ. ಆಡಿಟ್ ಬ್ಯೂರೋ ಆರ್ಫ್ ಸಕುರ್್ಯಲೇಷನ್ ಎಂಬ ಸ್ವಾಯತ್ತ ಸಂಸ್ಥೆಗಳ ರಚನೆಗೆ ಕಾರಣವಾಗಿದೆ. ಪತ್ರಿಕೆಗಳಿಗೆ ಜಾಹೀರಾತು ಒದಗಿಸುವ ಜಾಹೀರಾತು ಸಂಸ್ಥೆಗಳಿಗೆ ಮಾನ್ಯತೆ ನೀಡುವ ಮೂಲಕ ಪತ್ರಿಕಾ ಸಂಸ್ಥೆಗಳು ಹಾಗೂ ಜಾಹೀರಾತು ಸಂಸ್ಥೆಗಳ ನಡುವೆ ವ್ಯವಹಾರ ಏಕರೂಪವಾಗಿ ಸುವ್ಯವಸ್ಥಿತವಾಗಿ ನಡೆಯಲು ಸಹಾಯಕವಾಗಿದೆ. 18 ಭಾಷೆಗಳ ಸು. 990 ದಿನಪತ್ರಿಕೆಗಳು, ವಾರಪತ್ರಿಕೆಗಳು, ಪಾಕ್ಷಿಕಗಳು, ಮಾಸಪತ್ರಿಕೆಗಳ ಮಾಲೀಕರು ಈ ಸಂಸ್ಥೆಯ ಸದಸ್ಯರಾಗಿದ್ದಾರೆ. ಆಡಿಟ್ ಬ್ಯೂರೋ ಆಫ್ ಸಕುರ್್ಯಲೇಷನ್ : ಪತ್ರಿಕೆಗಳ ನಿಖರವಾದ ಪ್ರಸಾರವನ್ನು ದೃಢೀಕರಿಸುವ ಸಂಸ್ಥೆ. ಪ್ರಸಾರ ಪ್ರಮಾಣ ಪತ್ರ ನೀಡಿಕೆ ಮಾರಾಟವಾಗಿ ಸಂಸ್ಥೆಗೆ ಹಣಸಂದಾಯವಾದ ಪ್ರತಿಗಳ ಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಈ ಸಂಸ್ಥೆ ಸ್ಥಾಪನೆಗೆ ಐ.ಎನ್.ಎಸ್. (ವೃತ್ತಪತ್ರಿಕಾ ಮಾಲೀಕರ ಸಂಘಟನೆ) ಕಾರಣ.

ಇಂಡಿಯನ್ ಲ್ಯಾಂಗ್ವೇಜಸ್ ನ್ಯೂಸ್ಪೇಪರ್ಸ್ ಅಸೋಸಿಯೇಷನ್ಸ್[ಬದಲಾಯಿಸಿ]

ಪನೆ 1941. ಭಾರತದಲ್ಲಿನ ವೃತ್ತಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ಮಾಲಿಕರ ಸಂಘವಾಗಿದ್ದು ತನ್ನ ಸದಸ್ಯರ ನಡುವಣ ವ್ಯಾಪಾರಾಸಕ್ತಿಗಳನ್ನು ಉತ್ತೇಜನಗೊಳಿಸಿ ಅಭಿವೃದ್ಧಿಪಡಿಸುವುದು, ಅವರಲ್ಲಿ ಮೈತ್ರಿ ಹಾಗೂ ಸಹಕಾರವನ್ನು ಕಲ್ಪಿಸುವುದು-ಇತ್ಯಾದಿ ಉದ್ದೇಶಗಳನ್ನು ಹೊಂದಿದೆ. 1968ರಲ್ಲಿದ್ದ ಸದಸ್ಯರ ಸಂಖ್ಯೆ 215. ಕೇಂದ್ರ ಕಚೇರಿ ಮುಂಬಯಿ.

ಆಲ್ ಇಂಡಿಯ ನ್ಯೂಸ್ಪೇಪರ್ ಎಡಿಟರ್್ಸ: ಕಾನ್ಫರೆನ್ಸ್[ಬದಲಾಯಿಸಿ]

ಸ್ಥಾಪನೆ 1940. ಭಾರತದಲ್ಲಿನ ಪತ್ರಿಕೆ ಹಾಗೂ ನಿಯತಕಾಲಿಕೆಗಳ ಸಂಪಾದಕರನ್ನೊಳಗೊಂಡಿರುವ ಸ್ವಯಂಪ್ರೇರಿತ ಸಂಸ್ಥೆ. ಪತ್ರಿಕೋದ್ಯಮದ ಉನ್ನತ ಆದರ್ಶಗಳನ್ನು ಮತ್ತು ಸತ್ಸಂಪ್ರದಾಯಗಳನ್ನು ಎತ್ತಿಹಿಡಿಯುವುದು. ತಮ್ಮ ಕಾರ್ಯನಿರ್ವಹಣೆಯನ್ನು ನೆರವೇರಿಸಲು ಪತ್ರಿಕಾಲಯಗಳಿಗೆ ಬೇಕಾದ ಸೌಲಭ್ಯವನ್ನೊದಗಿಸುವುದು, ಪತ್ರಿಕೋದ್ಯೋಗಿಗಳ ಮತ್ತು ಸರ್ಕಾರದ ನಡುವೆ ಹಾಗೂ ಪತ್ರಿಕೋದ್ಯೋಗಿಗಳ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಕಲ್ಪಿಸುವುದು, ಇಂಥದೇ ಉದ್ದೇಶಗಳನ್ನಿಟ್ಟುಕೊಂಡಿರುವ ಇತರ ಸಂಘ-ಸಂಸ್ಥೆಗಳೊಡನೆ ಸಂಪರ್ಕವನ್ನು ಕಲ್ಪಿಸಿಕೊಳ್ಳುವುದು-ಇವೇ ಇದರ ಮುಖ್ಯ ಉದ್ದೇಶಗಳು. ಕೇಂದ್ರ ಕಚೇರಿ ನವದೆಹಲಿ.

ಪ್ರೆಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ[ಬದಲಾಯಿಸಿ]

ಭಾರತದ ಪತ್ರಿಕೋದ್ಯಮಿಗಳು ತಮ್ಮಲ್ಲಿನ ಉನ್ನತ ಹೊಣೆಗಾರಿಕೆಯನ್ನು ಅರಿಯುವಂತಾಗಲು ಅವರಿಗೆ ತರಬೇತಿ ನೀಡಲು ಒಂದು ವೃತ್ತಿಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ನೆರವಾಗುವಂತೆ ಮಾಡಲು ವೃತ್ತಪತ್ರಿಕೆ ಇತ್ಯಾದಿಗಳ ಬೆಳವಣಿಗೆ ಮತ್ತು ಸ್ಥಿರತೆಗೆ ನೆರವು ನೀಡಲು ಭಾರತದ ಪತ್ರಿಕೋದ್ಯಮಿಗಳು 1963ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಧರ್ಮದರ್ಶಿಗಳ ಮಂಡಲಿ, ಆಡಳಿತ ಮಂಡಲಿ ಮತ್ತು ಸೆಕ್ರೆಟೇರಿಯಟ್-ಈ ಮೂರು ಘಟ್ಟಗಳಲ್ಲಿ ಈ ಸಂಸ್ಥೆ ತನ್ನ ಕೆಲಸವನ್ನು ನಡೆಸುತ್ತಿದೆ. ಸಂಸ್ಥಾರೂಪದಲ್ಲಿನ ವ್ಯಕ್ತಿಗಳಿಗೆ ಮಾತ್ರ ಇದರ ಸದಸ್ಯತ್ವದ ಸೌಲಭ್ಯವಿದೆ.

ಪ್ರೆಸ್ ಗಿಲ್ಡ ಆಫ್ ಇಂಡಿಯ[ಬದಲಾಯಿಸಿ]

ಪತ್ರಿಕೋದ್ಯೋಗಿಗಳಿಗೆ ಮಾತ್ರವಲ್ಲದೆ ಪತ್ರಿಕಾ ವ್ಯವಹಾರದಲ್ಲಿ ತೊಡಗಿರುವ ಇತರರಿಗೂ ಒಂದು ಪ್ರಾಜ್ಞ ಹಾಗೂ ಸಾಮಾಜಿಕ ಮಟ್ಟದಲ್ಲಿ ಬಂಧುತ್ವವನ್ನು ಬೆಳೆಸಿಕೊಳ್ಳಲು ಸಹಾಯವಾಗುವಂತೆ ವ್ಯಾಪಕದೃಷ್ಟಿಯುಳ್ಳ ಈ ಸಂಘಟಿತ ಪತ್ರಿಕೋದ್ಯೋಗಿಗಳ ಸಂಸ್ಥೆ 1955ರಲ್ಲಿ ಸ್ಥಾಪನೆಯಾಯಿತು. ಆಡಳಿತ ಕಚೇರಿ ಮುಂಬಯಿ.

ಸ್ಪೆಷಲೈಸ್ಡ್ ಪಬ್ಲಿಕೇಷನ್ ಅಸೋಸಿಯೇಷನ್ಸ್[ಬದಲಾಯಿಸಿ]

ಭರತದಲ್ಲಿನ ವ್ಯಾಪಾರ, ವಾಣಿಜ್ಯ, ತಾಂತ್ರಿಕ ಪತ್ರಿಕಾಸಂಘಗಳು ಹಾಗೂ ಇತರ ವೈಶಿಷ್ಟ್ಯವುಳ್ಳ ಪ್ರಮುಖ ಪ್ರಕಟಣೆಗಳ ಪ್ರತಿನಿಧಿ ಸಂಸ್ಥೆ. 1959ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ. ವಾಣಿಜ್ಯ ಪದ್ಧತಿಯಂತೆ ನಡೆವ ಭಾರತದ ವೈಶಿಷ್ಟ್ಯಪುರ್ಣ ಪ್ರಕಟಣೆಗಳಿಗೆ ಸಮಾನ ಸ್ಥಾನಮಾನಗಳು ದೊರೆಯುವಂತೆ ಮಾಡುವುದು, ವೈಜ್ಞಾನಿಕ ಹಾಗೂ ಪ್ರಗತಿಪಥದಲ್ಲಿ ಮುಂದುವರೆಯುವಂತೆ ವೈಶಿಷ್ಟ್ಯಪುರ್ಣ ಪ್ರಕಾಶನಗಳಿಗೆ ನೆರವು ನೀಡುವುದು - ಇವೇ ಈ ಸಂಸ್ಥೆಯ ಮುಖ್ಯ ಉದ್ದೇಶಗಳು. ಆಡಳಿತ ಕಚೇರಿ ಮುಂಬಯಿ.

ಟ್ರೇಡ್ ಅಂಡ್ ಟೆಕ್ನಿಕಲ್ ಪಬ್ಲಿಕೇಷನ್ಸ್ ಅಸೋಸಿಯೇಷನ್[ಬದಲಾಯಿಸಿ]

ವ್ಯಾಪಾರ ಮತ್ತು ತಾಂತ್ರಿಕಪತ್ರಿಕೆಗಳಲ್ಲಿ ಆಸಕ್ತಿ ಹೊಂದಿದವರಿಂದ 1959ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಸರ್ಕಾರದ ಧೋರಣೆಗಳ ಫಲವಾಗಿ ಪತ್ರಿಕೆಗಳು ಕಾಲಕಾಲಕ್ಕೆ ಅನುಭವಿಸುವಂಥ ತೊಂದರೆಗಳನ್ನು ನಿವಾರಿಸಲು ಸಹಾಯಮಾಡುತ್ತವೆ. ಆಡಳಿತ ಕಚೇರಿ ಮುಂಬಯಿ.

ಆಲ್ ಇಂಡಿಯ ಇಂಡಸ್ಟ್ರಿಯಲ್ ಎಡಿಟರ್ಸ್ ಕೌನ್ಸಿಲ್[ಬದಲಾಯಿಸಿ]

ಪತ್ರಿಕೋದ್ಯಮದ ಉನ್ನತಸಂಪ್ರದಾಯಗಳನ್ನೂ ನೀತಿಯನ್ನೂ ಎತ್ತಿಹಿಡಿಯುವ ಈ ಸಂಸ್ಥೆಯ ಆಡಳಿತ ಕಚೇರಿ ನವದೆಹಲಿಯಲ್ಲಿದೆ.

ಆಲ್ ಇಂಡಿಯ ಸ್ಮಾಲ್ ಅಂಡ್ ಮೀಡಿಯಂ ನ್ಯೂಸ್ಪೇಪರ್ಸ್ ಎಡಿಟರ್ಸ್ ಅಸೋಸಿಯೇಷನ್[ಬದಲಾಯಿಸಿ]

ಅಖಿಲಭಾರತ ಸಣ್ಣ ಮತ್ತು ಮಧ್ಯಮ ದರ್ಜೆಯ ವೃತ್ತಪತ್ರಿಕೆಗಳ ಸಂಪಾದಕರ ಸಂಘವಾಗಿರುವ ಇದರ ಉದ್ದೇಶ ಪತ್ರಿಕೋದ್ಯಮದ ಉನ್ನತ ಆದರ್ಶಗಳನ್ನು ರಕ್ಷಿಸುವುದು, ಭಾರತದಲ್ಲಿ ಪ್ರಕಟವಾಗುವ ವೃತ್ತಪತ್ರಿಕೆ ಹಾಗೂ ಪ್ರಕಟನೆಗಳ ವ್ಯಾಪಾರ ಹಿತಾಸಕ್ತಿಯನ್ನು ಕಾಪಾಡುವುದು-ಇವೇ ಆಗಿವೆ. ಆಡಳಿತ ಕಚೇರಿ ನವದೆಹಲಿ. ಭಾರತ ಭಾಷಾಪತ್ರಿಕೆಗಳ ಸಂಘಟನೆ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿ ಕೇಷನ್ ಈ ಎರಡೂ ಸಂಸ್ಥೆಗಳ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ.

ಪ್ರೆಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ[ಬದಲಾಯಿಸಿ]

ಸ್ವತಂತ್ರ ವಿಶ್ವಸ್ಥ ಸಂಸ್ಥೆ 1963ರಲ್ಲಿ ಆರಂಭವಾಯಿತು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ಮೌಲ್ಯಗಳನ್ನು ನೆಲೆಗೊಳಿಸುವುದು ಈ ಸಂಸ್ಥೆಯ ಗುರಿ. ಆರಂಭದಲ್ಲಿ ಬ್ರಿಟನ್ನಿನ ಥಾಂಸನ್ ಫೌಂಡೇಷನ್ನಿನಲ್ಲಿ ಪತ್ರಿಕೋದ್ಯಮದಲ್ಲಿ ಶಿಕ್ಷಣ ಪಡೆಯಲು, ಪತ್ರಕರ್ತರನ್ನು ಮತ್ತು ಛಾಯಾಗ್ರಾಹಕರನ್ನು ಆಯ್ಕೆ ಮಾಡುತ್ತಿತ್ತು. ಈಗ ಈ ಸಂಸ್ಥೆಯೇ ಪತ್ರಿಕಾಲಯಗಳಲ್ಲಿ ಹಾಗೂ ನಗರಗಳಲ್ಲಿ ಪತ್ರಿಕೋದ್ಯಮದ ವಿವಿಧ ವಿಭಾಗಗಳಿಗೆ ಸಂಬಂಧಪಟ್ಟಂತೆ ಕಾರ್ಯಾಗಾರ ನಡೆಸುತ್ತದೆ. ಭಾರತ, ಪಾಕಿಸ್ಥಾನ, ಸಿಲೋನ್ ಮೊದಲಾದ ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸೇರಿದ 4,000 ಮಂದಿ ಪತ್ರಕರ್ತರಿಗೆ ತರಬೇತಿ ನೀಡಿದೆ. ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟಂತೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ. ‘ವಿದುರ’ ಈ ತ್ರೈಮಾಸಿಕ ಪ್ರಕಟಣೆ.