ವಿಷಯಕ್ಕೆ ಹೋಗು

ಅಕಾಲಿಕ ಹೆರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐಸೊಲೆಟ್‍ನಲ್ಲಿ ನವಜಾತ ಶಿಶು ಮಲಗುವಿಕೆ

ಅಕಾಲಿಕ ಹೆರಿಗೆ (ಪ್ರಾಪ್ತಪುರ್ವಕಾಲ ಜನನ)

ಅಕಾಲಿಕ ಹೆರಿಗೆ (ಪ್ರಾಪ್ತಪೂರ್ವಕಾಲ ಜನನ) ಒಂಬತ್ತು ತಿಂಗಳು ತುಂಬಲು ಹಲವು ವಾರಗಳಿಗೆ ಮುಂಚಿತವಾಗಿಯೇ ಅಂದರೆ ಗರ್ಭಧಾರಣವಾದ ಮೇಲೆ 36 ವಾರಗಳು ಕಳೆಯುವ ಮುನ್ನವೇ ಆಗುವ ಪ್ರಸವ (ಪ್ರೀಮೆಚ್ಯೂರ್ ಬರ್ತ್). ಹೆಚ್ಚು ರಕ್ತದ ಒತ್ತಡ, ಸಿಹಿಮೂತ್ರರೋಗ, ಮೂತ್ರಜನಕಾಂಗಗಳ ರೋಗ, ಬಸಿರು ನಂಜು, ಗರ್ಭಕೋಶದ ಗಡ್ಡೆಗಳು, ಗರ್ಭಕೋಶದ ವಿಕೃತ ಸ್ವರೂಪಗಳು ಮುಂತಾದ ಆಸ್ವಾಸ್ಥ್ಯಗಳಲ್ಲಿ ಯಾವುದೇ ಒಂದು ತೊಂದರೆ ತಾಯಿಗಿದ್ದರೂ ಪ್ರಾಪ್ತಪೂರ್ವಕಾಲ ಜನನವಾಗಬಹುದು.

ಕಾರಣಗಳು[ಬದಲಾಯಿಸಿ]

 • ಒಂದಕ್ಕಿಂತ ಹೆಚ್ಚು ಮಕ್ಕಳಿರುವಿಕೆ, ಉಲ್ಬದ ನೀರು ಹೆಚ್ಚಾಗುವಿಕೆ, ತಾಯಮಾಸು ವಿಚಿತ್ರಜಾಗಗಳಲ್ಲಿ ನೆಲಸುವಿಕೆ ಇವು ಮಾತ್ರವಲ್ಲದೆ ಭ್ರೂಣದ ವಿಕೃತಸ್ವರೂಪಗಳು, ಸಂಜನಿತ ಕಾಯಿಲೆಗಳು ಕೂಡ ಇಂಥ ಜನನಕ್ಕೆ ಮೂಲವಾಗಬಹುದು.
 • ತಾಯಿಯ ಅನಾರೋಗ್ಯ, ಬಡತನ, ಪೋಷಕಗಳ ಕೊರತೆಯೂ ಈ ತೊಂದರೆಗೆ ಕಾರಣವಾಗಬಲ್ಲವು.

ಮಗುವಿಗೆ ಆಗಬಹುದಾದ ತೊಂದರೆ[ಬದಲಾಯಿಸಿ]

 • ಸಾಧಾರಣವಾಗಿ ಹೀಗೆ ಹುಟ್ಟುವ ಮಕ್ಕಳು 2 ಕೆಜಿಗಿಂತ ಕಡಿಮೆ ತೂಕವಿರುತ್ತವೆ.
 • ಮಗುವಿನ ದೇಹೋಷ್ಣತೆಯನ್ನು ನಿಯಂತ್ರಿಸುವ ಕೇಂದ್ರ ಸರಿಯಾಗಿ ಬೆಳೆವಣಿಗೆಯಾಗಿರುವುದಿಲ್ಲವಾದ್ದರಿಂದ ಹೊರಗಿನ ಹವೆಗೆ ಮಗು ಹೊಂದಿಕೊಳ್ಳಲಾರದು.
 • ದೈಹಿಕವಾಗಿ ಮಗು ಅಶಕ್ತವಾಗಿರುವುದರಿಂದ ಅದಕ್ಕೆ ಅಳಲೂ ತ್ರಾಣವಿರುವುದಿಲ್ಲ.
 • ಕೈಕಾಲು ಅಲ್ಲಾಡಿಸಲೂ ರೆಪ್ಪೆ ಮಿಟುಕಿಸಲೂ ಶಕ್ತಿಯಿಲ್ಲದಿರುವಂತೆ ಕಾಣಬರುತ್ತದೆ.
 • ಮೈಮೇಲೆ ಕೊಬ್ಬಿನ ಅಂಶ ಕಡಿಮೆ ಇರುವುದರಿಂದಾಗಿ ಅದರ ಮೈಚರ್ಮ ವೃದ್ಧನ ಚರ್ಮದಂತೆ ಸುಕ್ಕುಸುಕ್ಕಾಗಿರುತ್ತದೆ.
 • ಶಾಖವನ್ನು ಕಾಯ್ದಿಟ್ಟುಕೊಳ್ಳಲು ಸಾಧ್ಯವಿಲ್ಲದೆ ಉಸಿರಾಟ ಕಷ್ಟವಾಗುವುದರಿಂದ ಮಗು ಆಗಾಗ್ಗೆ ನೀಲಿಗಟ್ಟುವುದೂ ಉಂಟು.[೧]
ಕಾವುಪೆಟ್ಟಿಗೆಯಲ್ಲಿರುವ ಮಕ್ಕಳನ್ನು ಆರೈಕೆ ಮಾಡುವ ದಾದಿ

ಅಕಾಲಿಕ ಶಿಶುವಿನ ಆರೋಗ್ಯ[ಬದಲಾಯಿಸಿ]

ಇಂಥ ಅಶಕ್ತ ಶಿಶುಗಳನ್ನು ಸರಿಯಾಗಿ ಆರೈಕೆ ಮಾಡಿದರೆ ಅವು ಕೂಡ ಆರೋಗ್ಯವಂತ ಮಕ್ಕಳಂತೆ ಬೆಳೆಯಬಲ್ಲವು. ಶಿಶು ಆರೈಕೆ ಶಾಸ್ತ್ರ 25 ವರ್ಷಗಳಿಂದ ಇತ್ತೀಚೆಗೆ ಬೆಳೆದು ಬಂದಂಥದು. ಸಾಧಾರಣವಾಗಿ ಅಶಕ್ತ ಶಿಶುಗಳ ಶ್ವಾಸಕೋಶ ಪೂರ್ಣ ಹಿಗ್ಗದಿರುವುದರಿಂದ, ಅವು ಶ್ವಾಸಕೋಶದ ಉರಿಯೂತದಿಂದ, ಭೇದಿಯಿಂದ ಅಥವಾ ಮಿದುಳು ಮತ್ತು ಶ್ವಾಸಕೋಶಗಳಲ್ಲಿ ರಕ್ತಸ್ರಾವವಾಗುವುದರಿಂದ ಸಾಯುತ್ತವೆ. ಯೋಗ್ಯ ಆರೈಕೆಯಿಂದ 100ರಲ್ಲಿ 85 ಮಕ್ಕಳು ಬದುಕಿಕೊಳ್ಳಬಲ್ಲವು. ಹೆರಿಗೆಯ ವೇಳೆ ಯೋಗ್ಯ ಉಸ್ತುವಾರಿ ಮತ್ತು ಸಾಧ್ಯವಾದಷ್ಟು ಕಡಿಮೆ ಅರಿವಳಿಕೆಯ ಔಷಧಿ ನೀಡುವಿಕೆ ಮುಂಜಾಗರೂಕತೆಗಳಲ್ಲಿ ಮುಖ್ಯವಾದವು.

ಆರೈಕೆ ಮತ್ತು ಜಾಗ್ರತೆ[ಬದಲಾಯಿಸಿ]

ಪ್ರಾಪ್ತಪೂರ್ವಜನಿತ ಮಕ್ಕಳ ಆರೈಕೆಗೆ ವಿಶಿಷ್ಟ ಶಿಶುಕೇಂದ್ರಗಳು ಅಗತ್ಯ. ಇಲ್ಲಿ ಮಗುವನ್ನು ಅತ್ಯಂತ ಜೋಪಾನವಾಗಿ ನೋಡಿಕೊಳ್ಳುವುದರ ಜೊತೆಗೆ ಕಾಯಿಲೆ ಸೋಂಕಿನಿಂದ ಮಗುವನ್ನು ರಕ್ಷಿಸಬೇಕು. ದೇಹದ ಉಷ್ಣತೆ ಹಾಗೂ ತೇವಾಂಶಗಳನ್ನು ಹದವಾಗಿಡಬೇಕು. ಇದಕ್ಕಾಗಿ ದೊಡ್ಡ ಆಸ್ಟತ್ರೆಗಳಲ್ಲಿ ಕಾವು ಪೆಟ್ಟೆಗೆಯನ್ನಿಟ್ಟಿರುತ್ತಾರೆ. ಇದರ ಉಷ್ಣತೆ 270-320ಅ ಮತ್ತು ತೇವಾಂಶ 60-70% ಇರುವುದರಿಂದ ಮಗು ಸರಾಗವಾಗಿ ಉಸಿರಾಡುವುದು ಸಾಧ್ಯವಾಗುತ್ತದೆ. ದೇಹದ ಉಷ್ಣತೆಯ ಸ್ವಯಂನಿಯಂತ್ರಣ ಊರ್ಜಿತವಾಗುವ ತನಕ ಮಗುವನ್ನು ಈ ಕಾವುಪೆಟ್ಟಿಗೆ(Neonatal intensive care unit)ಯಲ್ಲಿ ಇಡಬಹುದು.[೨] ಹೀಗೆ ಮಗುವನ್ನು ಇಡುವ ಮುನ್ನ ಅದರ ಉಸಿರಾಟದ ಮಾರ್ಗ ಸ್ವಚ್ಛವಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಮೂಗುಬಾಯಿ, ಗಂಟಲು ಸ್ವಚ್ಛ ಮಾಡಿ ಮಗುವನ್ನು ಒಂದು ಪಕ್ಕಕ್ಕೆ ತಿರುಗಿಸಿ ಮಲಗಿಸಿದರೆ, ಬಾಯಲ್ಲಿ ಬಂದ ಜೊಲ್ಲು ಇತ್ಯಾದಿ ಹೊರಗೆ ಹೋಗಲು ಸಹಕಾರಿ. ಕಾವುಪೆಟ್ಟಿಗೆಯಲ್ಲಿರುವ ಮಗುವನ್ನು ಪ್ರತಿ ಎರಡು ಗಂಟೆಗಳಿಗೊಂದಾವರ್ತಿ ತಿರುಗಿಸಬೇಕು. ಇಲ್ಲದಿದ್ದರೆ ಮಲಗಿದ್ದಾಗ ಒತ್ತಿದ ಜಾಗದಲ್ಲಿ ಹುಣ್ಣುಗಳಾಗುತ್ತವೆ. ಮಗುವಿನ ದೇಹೋಷ್ಣತೆಯನ್ನೂ ಉಸಿರಾಟದ ವೇಗವನ್ನೂ ನಾಲ್ಕು ಗಂಟೆಗಳಿಗೊಂದು ಬಾರಿ ನೋಡಬೇಕು. ಮಗು ನೀಲಿಯಾಗಿ ಕಂಡರೆ ಅದರ ಮೈಬಣ್ಣ ಕೆಂಪಾಗುವ ತನಕ ಆಕ್ಸಿಜನ್ ಕೊಡಬೇಕಾಗುತ್ತದೆ. ಹೀಗೆ ಕಾವುಪೆಟ್ಟಿಗೆಯಲ್ಲಿರಿಸಿದ ಮಗು ಬಾಟಲಿಯಿಂದ ಸರಿಯಾಗಿ ಹಾಲು ಕುಡಿಯಲು ಶಕ್ತವಾಗಬೇಕು. ತಾಯಿಯ ಹಾಲಿದ್ದರೆ ಅದನ್ನೇ ಮಗುವಿಗೆ ನೀಡುತ್ತಾರೆ. ಮಗುವನ್ನು ನೋಡಿಕೊಳ್ಳುವ ದಾದಿ ಬಾಯಿ-ಮೂಗಿಗೆ ಅಡ್ಡ ಬಟ್ಟೆ ಕಟ್ಟಿರಬೇಕು ಮತ್ತು ಮೇಲಂಗಿ ಧರಿಸಿರಬೇಕು. ತಾಯಿ ತನ್ನ ಮಗುವನ್ನು ನೋಡಲು ಬಂದರೂ ಈ ಮುಂಜಾಗರೂಕತೆ ಅಗತ್ಯ. ಮುಖ್ಯವಾಗಿ ಹೊರಗಿನಿಂದ ಬರುವ ಸೋಂಕನ್ನು ತಡೆಯಲು ಈ ಕ್ರಮ. ಹೊರಗಿನವರು ಯಾರನ್ನೂ ಮಗುವಿನ ಕೊಠಡಿಗೆ ಬಿಡಬಾರದು. ಪ್ರತಿಯೊಂದು ಮಗುವಿಗೂ ಪ್ರತ್ಯೇಕ ಬಾಟಲು ಮತ್ತು ಉಷ್ಣತಾಮಾಪಕ ಇರಬೇಕು. ಬಟ್ಟೆ ಆದಷ್ಟು ಹಗುರವಾಗಿದ್ದರೆ ಒಳ್ಳೆಯದು. ಹೊಕ್ಕಳನ್ನು ಚಿಕ್ಕದಾಗಿ ಕತ್ತರಿಸುವುದರಿಂದ ಸೋಂಕಿನ ಸಾಧ್ಯತೆ ಕಡಿಮೆಯಾಗುತ್ತದೆ. ಹೊಕ್ಕಳು, ಕಣ್ಣು, ಶ್ವಾಸಕೋಶಗಳು ಅಥವಾ ಕರುಳುಗಳ ಸೋಂಕಾಗದ ಹಾಗೆ ಸದಾ ಜಾಗೃತವಾಗಿರಬೇಕು.

ಆರೋಗ್ಯವಂತ ಮಗು[ಬದಲಾಯಿಸಿ]

2 ಕೆಜಿ ತೂಕ ಇದ್ದ ಮಗು ಸರಿಯಾದ ಆರೈಕೆಯಿಂದ ಆರು ವಾರಗಳಲ್ಲಿ 4 ಕೆಜಿ ತೂಕ ಪಡೆಯುತ್ತದೆ. ಎಂಟು ತಿಂಗಳಿಗೆ ಹುಟ್ಟಿದ 3 ಕೆಜಿ ತೂಕವಿರುವ ಮಕ್ಕಳು ಯೋಗ್ಯ ಆರೈಕೆಯಿಂದ ಬೇರೆಲ್ಲ ಮಕ್ಕಳಂತೆಯೇ ಬೆಳೆಯುತ್ತವೆ. ಆದರೆ ಏಳು ತಿಂಗಳಿಗಿಂತ ಮುಂಚೆ ಹುಟ್ಟಿದ ಮಕ್ಕಳು ಸ್ನಾಯುನರಗಳ ಅಪೂರ್ಣ ಬೆಳೆವಣಿಗೆಯಿಂದ ನರಳುತ್ತವೆ.[೩]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ[ಬದಲಾಯಿಸಿ]

 1. https://www.researchgate.net/publication/318710770_Advanced_Portable_Preterm_Baby_Incubator
 2. http://www.srmuniv.ac.in/sites/default/files/downloads/unit_1_incubator_radiant_warmer_phototherapy_unit.pdf[ಶಾಶ್ವತವಾಗಿ ಮಡಿದ ಕೊಂಡಿ]
 3. https://www.inspiration-healthcare.com/downloads/brochure-378.pdf[ಶಾಶ್ವತವಾಗಿ ಮಡಿದ ಕೊಂಡಿ]