ವಿಷಯಕ್ಕೆ ಹೋಗು

ಅಂತಾರಾಷ್ಟ್ರೀಯ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತಾರಾಷ್ಟ್ರೀಯ ಭಾಷೆ

[ಬದಲಾಯಿಸಿ]

ಬೇರೆ ಬೇರೆ ರಾಷ್ಟ್ರಗಳಲ್ಲಿ ವಾಸಿಸುತ್ತಾ ಬೇರೆ ಬೇರೆ ಭಾಷೆಗಳನ್ನು ಬಳಸುತ್ತಿರುವ ಜನರೊಳಗೆ ಯೋಗ್ಯವಾದ ಸಂಪರ್ಕ ಬೆಳೆಯಬೇಕಾದರೆ, ಅವರೆಲ್ಲರಿಗೂ ಅರ್ಥವಾಗುವಂಥ ಒಂದು ವಿಶ್ವಭಾಷೆ ಅವಶ್ಯವೆಂಬ ವಿಷಯವನ್ನು ಯಾರೂ ಅಲ್ಲಗಳೆಯಲಾರರು. ಹಲವು ರಾಷ್ಟ್ರಗಳಿಂದ ಬಂದ ವಿಜ್ಞಾನಿಗಳು ಒಂದೆಡೆ ಸೇರಿ ಯಾವುದಾದರೊಂದು ಸಮಸ್ಯೆಯನ್ನು ಚರ್ಚಿಸತೊಡಗಿದಾಗ, ರಾಜಕೀಯ ಸಮಸ್ಯೆಯೊಂದನ್ನು ಚರ್ಚಿಸಲು ವಿಶ್ವ ರಾಜಕಾರಣಿಗಳೂ ಒಂದೆಡೆ ನೆರೆದಾಗ, ವಿವಿಧ ದೇಶಗಳ ವ್ಯಾಪಾರಿಗಳು ಸಮ್ಮೇಳನ ನಡೆಸಿದಾಗ ಒಬ್ಬರ ಭಾಷೆ ಮತೊಬ್ಬರಿಗೆ ಅರ್ಥವಾಗದೆ ಪೇಚಾಡುತ್ತಾರೆ. ದುಭಾಷಿಗಳ, ಅನುವಾದಕರ ಸಹಾಯ ಬೇಡುತ್ತಾರೆ. ಇವರೆಲ್ಲ ತಮಗೆದುರಾಗುವ ಈ ಭಾಷಾ ಸಮಸ್ಯೆಯನ್ನು ನೀಗಲು ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ.[] ಸ್ವಲ್ಪ ಆಳವಾಗಿ ವಿಚಾರಿಸಿ ನೋಡಿದರೆ ಈ ಸಮಸ್ಯೆ ಅಷ್ಟೊಂದು ಸರಳವಾದುದೇ ನಲ್ಲವೆಂಬುದು ವ್ಯಕ್ತವಾದೀತು.

  • ಅಂತಾರಾಷ್ಟ್ರೀಯ ಭಾಷೆ ನಾಲ್ಕು ಬಗೆಯಲ್ಲಿರಬಹುದು:
  1. . ಸಾಂಪ್ರದಾಯಿಕ ಶಬ್ದಾವಳಿ ಮತ್ತು ವ್ಯಾಕರಣಗಳಿಂದ ದೂರವಾಗಿದ್ದು, ತನ್ನದೇ ಆದ ಕೃತಕ ನುಡಿಗಟ್ಟಿನಿಂದ ಕೂಡಿ ಜನತೆಯ ಅಗತ್ಯತೆಗಳ ತಾತ್ವಿಕ ವಿಶ್ಲೇಷಣೆಯನ್ನು ಮೂಲಾಧಾರವಾಗುಳ್ಳ ಒಂದು ಭಾಷೆ. ೧೭ನೆಯ ಶತಮಾನದಲ್ಲಿ ಫ್ರಾನ್ಸಿಸ್ ಬೇಕನ್, ಡೆಕಾರ್ಟ್ ಮತ್ತು ಇತರರು ಇಂಥದೊಂದು ಭಾಷೆಯನ್ನು ರೂಪಿಸಲು ಯತ್ನಿಸಿದರು. ಉನ್ನತ ಬೌದ್ಧಿಕಮಟ್ಟವನ್ನು ಬಯಸುತ್ತಿದ್ದ ಆ ಭಾಷೆ ವ್ಯವಹಾರಕ್ಕೆ ಒಗ್ಗಲಿಲ್ಲವಾಗಿ ಅದು ನಿಲ್ಲಲಿಲ್ಲ.
  2. . ಲ್ಯಾಟಿನ್ನಿನಂಥ ಮೃತಭಾಷೆಗಳೊಂದನ್ನು ಪರಿಷ್ಕರಿಸಿ ಪುನರುಜ್ಜೀವನಗೊಳಿಸುವುದು. ೧೯೧೩ರಲ್ಲೇ ಪ್ರಾರಂಭವಾದ ಯೋಜನೆ ಕೆಲ ಕಾಲದ ಮೇಲೆ ತಣ್ಣಗಾಯಿತು. ಜೀವಂತ ಭಾಷೆಯಾಗಿರುವ ಸತ್ವ ಮೃತಭಾಷೆಗೆ ಬರಲಾರದೆ, ಒಂದು ವೇಳೆ ಅಂಥ ಭಾಷೆಯನ್ನು ಇಟ್ಟುಕೊಂಡಾಗಲೂ ಆ ಭಾಷೆಗೆ ಎಲ್ಲಾ ಸಾಹಿತ್ಯ ಸಂಪತ್ತನ್ನು ಅನುವಾದ ಮಾಡುವುದು ಕಷ್ಟ.
  3. . ಇರುವ ನುಡಿಗಟ್ಟಿನ ಆಧಾರದ ಮೇಲೆ ಹೊಸದಾಗಿ ಕಟ್ಟಿರುವ ಒಂದು ನೂತನ ಭಾಷೆ. ಇಂಥವಲ್ಲಿ ಎಲ್.ಎಲ್ ಜಮೇನೆ ಹಾಫ್ನಿಂದ ಪ್ರಚುರವಾದ (೧೮೮೭) ಎಸ್ಪರಾಂಟೊ ಬಹು ಮುಖ್ಯವಾದುದು. ಇದಾದ ಮೇಲೆ ಇಡೊ, ಒಲಪುಕ್, ನೋವಿಯಲ್, ಇಂಟರ್ ಲಿಂಗ್ವಾ ಮುಂತಾದುವು ಬಂದುವು. ಇವುಗಳ ಶಬ್ದಸಂಪತ್ತು ಲ್ಯಾಟಿನ್ ಮತ್ತು ರೋಮನ್ ಭಾಷೆಗಳಿಂದ ಬಂದಿದ್ದು ವ್ಯಾಕರಣ ಇಂಡೊ ಯುರೋಪಿಯನ್ ಭಾಷೆಗಳಿಗೆ ಸಂಬಂಧಿಸಿದೆ. ಪ್ರಪಂಚದ ಜನಸಂಖ್ಯೆಯಲ್ಲಿ ಬಹುಭಾಗದವರಿಗೆ (ಏಷ್ಯಾ, ಆಫ್ರಿಕ) ಈ ಶಬ್ದಸಂಪತ್ತಿನ ಹಾಗೂ ವ್ಯಾಕರಣದ ಪರಿಚಯವಿಲ್ಲ. ಅಂಥವರಿಗೆ ಈ ಹೊಸ ಭಾಷೆಗಳು ಕಷ್ಟವಾಗಿಯೂ ಅಸಹ್ಯವಾಗಿಯೂ ತೋರಬಹುದು.
  4. . ಪರಿಷ್ಕರಿಸಿದ ಯಾವುದಾದರೂ ಆಧುನಿಕ ಜೀವಂತಭಾಷೆಯನ್ನು ವಿಶ್ವಭಾಷೆಯಾಗಿ ಬಳಸಬಹುದು. ಉದಾ: ಬೇಸಿಕ್ ಇಂಗ್ಲಿಷ್. ಇತ್ತೀಚೆಗೆ ಈ ಕಡೆ ಒಲವು ಹೆಚ್ಚಾಗುತ್ತಿರುವ ಸೂಚನೆಗಳು ಕಂಡುಬರುತ್ತಿವೆ. ಬೇಸಿಕ್ ಇಂಗ್ಲಿಷ್ನೊಂದಿಗೆ ರಷ್ಯನ್ ಭಾಷೆ, ಚೀನಿ ಭಾಷೆಗಳು ಪ್ರತಿಸ್ಪರ್ಧಿ ಗಳಾಗಿವೆ. ಇವುಗಳಲ್ಲಿ ಯಾವ ಒಂದರಿಂದಲಾದರೂ ವಿಶ್ವಭಾಷಾ ಸಮಸ್ಯೆ ಪರಿಹಾರವಾಗುವುದಾದರೂ ಭಾಷೆಗೆ ಅಂಟಿರುವ ರಾಜಕೀಯ ಹಾಗೂ ತಾತ್ತ್ವಿಕ ಸಂಪರ್ಕಗಳಿಂದಾಗಿ ಬೇರೆ ರೀತಿಯ ತೊಂದರೆಗಳು ತಲೆಯೆತ್ತುವ ಸಂಭವಗಳಿವೆ.
  • ಆಯಾ ಜನರ ಮಾತೃಭಾಷೆ, ದೇಶಭಾಷೆಗಳಲ್ಲದೆ, ಇಡೀ ಪ್ರಪಂಚಕ್ಕೆ ಸಮ್ಮತವಾಗುವಂಥ, ಅರ್ಥವಾಗುವಂಥ ಒಂದು ಭಾಷೆಯಿರುವುದು ಅಸಾಧ್ಯವೇನಲ್ಲ. ಇಷ್ಟೆಲ್ಲ ಪ್ರಗತಿಯನ್ನು ಸಾಧಿಸಿದ ಮನುಷ್ಯನಿಗೆ ಇದೊಂದು ಮಾತ್ರ ನುಂಗಲಾರದ ತುತ್ತಾಗಿ ತೋರುವುದಿಲ್ಲ. ಆದರೆ ಯಾವ ಭಾಷೆ ಈ ಸ್ಥಾನಕ್ಕೆ ಯೋಗ್ಯ ಎಂಬ ವಿಷಯವೇ ನಿರ್ಧಾರವಾಗದೆ ಉಳಿದಿದೆ. ವ್ಯಕ್ತಿಸ್ವಾತಂತ್ರ್ಯಕ್ಕೆ ಇಷ್ಟೊಂದು ಮಹತ್ವ ಬಂದಿರುವ ಈ ಜಗತ್ತಿನಲ್ಲಿ ಯಾರೊಬ್ಬರ ಮಾತೂ ವೇದವಾಕ್ಯವಾಗುವುದು ಉಳಿದವರಿಗೆ ಸಹಿಸದು. ಇಂಗ್ಲಿಷ್ ವಿಶ್ವಭಾಷೆಯಾಗಲಿ ಎಂಬ ಘೋಷಣೆ ನ್ಯಾಯಸಮ್ಮತವಿರ ಬಹುದು, ಯುಕ್ತಿಯುಕ್ತವಾಗಿರಬಹುದು. ಆದರೆ ಇತರರಿಗೆ ಇದು ಒಗ್ಗದಿರಬಹುದು.
  • ದಿನನಿತ್ಯದ ಬಳಕೆಯಲ್ಲಿರುವಂಥ ಪ್ರಾಕೃತಿಕ ಭಾಷೆಗಳು ರಾಷ್ಟ್ರೀಯ ಇಲ್ಲವೇ ಅಂತಾರಾಷ್ಟ್ರೀಯ ಭಾಷೆಗಳಾಗಿ ಪರಿವರ್ತನೆಗೊಳ್ಳಬೇಕಾದಾಗ ಇನ್ನೊಂದು ದೊಡ್ಡ ಸಮಸ್ಯೆ ನಮ್ಮನ್ನೆದುರಿಸಬೇಕಾಗುತ್ತದೆ. ಪ್ರಾಕೃತಿಕ ಭಾಷೆಗಳಲ್ಲಿ ಪ್ರಯುಕ್ತವಾಗುವ ಪ್ರತಿಯೊಂದು ಶಬ್ದಕ್ಕೂ ಬೇರೆ ಬೇರೆ ಸೂಕ್ಷ್ಮವಾದ ಅರ್ಥಭೇದಗಳಿರುತ್ತವೆ. ಅವುಗಳ ವ್ಯಾಕರಣ ತರ್ಕಬದ್ಧವಾಗಿರುವುದಿಲ್ಲ. ಯಾವುದೊಂದು ನಿಯಮಕ್ಕೂ ಒಂದಲ್ಲ ಒಂದು ಅಪವಾದವಿರುತ್ತದೆ. ಇವನ್ನೆಲ್ಲ ಸರಿಯಾಗಿ ಕಲಿತು ಆ ಭಾಷೆಯನ್ನು ಉಪಯೋಗಿಸಬೇಕೆಂದರೆ ಹಲವು ವರ್ಷಗಳ ಅಭ್ಯಾಸ ಬೇಕು. ಇಂಥ ಭಾಷೆಗಳನ್ನು ಬಳಸುವಾಗ, ಜನರು ತಪ್ಪು ಮಾಡಲು ಹೆದರುತ್ತಾರೆ. ಪ್ರತಿಯೊಂದು ಕ್ಷಣದಲ್ಲೂ ಕೂಡ ಎಲ್ಲಿ ತಾವು ಇತರರ ಅಪಹಾಸ್ಯಕ್ಕೆ ಗುರಿಯಾಗುವೆವೋ ಎಂಬ ಭಯ ಅವರಿಗಿರುತ್ತದೆ.
  • ಆ ಭಾಷೆಯನ್ನಾಡುವ ಮೂಲಜನರೂ ಕೂಡ, ತಮ್ಮ ಭಾಷೆಯ ವೈಶಿಷ್ಟ್ಯಗಳನ್ನು ಆದರದಿಂದ ಕಾಯುತ್ತಿರುತ್ತಾರೆ. ತಪ್ಪು ಮಾಡುವ ವಿದೇಶೀಯರನ್ನು ಅವರೆಂದೂ ತಮಗೆ ಸಮಾನರೆಂದು ತಿಳಿಯಲಾರರು. ಇಂಥ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದಲೇ ಕಲ್ಪಿತ ಭಾಷೆಗಳ ಸೃಷ್ಟಿ ಪ್ರಾರಂಭವಾಯಿತು. ಭಾಷೆ ಅತ್ಯಂತ ಸರಳವಾದ ವ್ಯಾಕರಣ ವನ್ನೊಳಗೊಂಡಿರಬೇಕು; ಅದರ ಶಬ್ದಸಂಪತ್ತು ಎಷ್ಟು ಸಾಧ್ಯವೋ ಅಷ್ಟು ವಿಶಾಲವಾಗಿರಬೇಕು; ಮತ್ತು ಅಂತಾರಾಷ್ಟ್ರೀಯವಾಗಿರಬೇಕು; ತರ್ಕಬದ್ಧವಾಗಿರಬೇಕು; ಹಾಗೂ ಅದನ್ನು ಕಲಿಯುವ ಕೆಲಸ ಅತ್ಯಂತ ಸುಲಭವಾಗಿರ ಬೇಕು-ಇಂಥ ಉದಾರ ಧ್ಯೇಯಗಳನ್ನು ಮುಂದಿಟ್ಟುಕೊಂಡು ಕೃತಕ ಭಾಷೆಗಳ ಸೃಷ್ಟಿ ನಡೆಯಿತು. ಹಾಗೆ ಸೃಷ್ಟಿಯಾದ ಭಾಷೆಗಳಲ್ಲಿ ಎಷ್ಟು ಭಾಷೆಗಳು ಈ ಧ್ಯೇಯವನ್ನು ಸಾಧಿಸಿವೆ, ಎಷ್ಟರಮಟ್ಟಿಗೆ ಸಾಧಿಸಿವೆ ಎಂದು ಹೇಳುವುದು ಕಷ್ಟ.
  • ಆದರೆ ಕಲ್ಪಿತ ಭಾಷೆಗಳು ಪ್ರಾಕೃತಿಕ ಭಾಷೆಗಳಿಗಿಂತ ಎಷ್ಟೋ ವಿಷಯಗಳಲ್ಲಿ ಪ್ರಕೃತ ಉದ್ದೇಶಕ್ಕೆ ಯೋಗ್ಯವಾಗಿ ತೋರಿಬರುತ್ತಿವೆ. ಮಾನವ ನಿರ್ಮಿತಗಳಾದ್ದರಿಂದ, ಅವು ತರ್ಕಬದ್ಧವಾಗಿರಲು ಸಾಧ್ಯವಿದೆ; ಅಪವಾದಗಳಿಲ್ಲದ ಸರಳವಾದ ನಿಯಮಗಳನ್ನೊಳಗೊಂಡಿರಲು ಸಾಧ್ಯವಿದೆ. ಮತ್ತು, ಅವು ಉಪಯೋಗಿಸುವ ಪ್ರತಿಯೊಂದು ಪ್ರತ್ಯಯವೂ ಅಸಂಖ್ಯರೂಪಗಳನ್ನು ಉತ್ಪಾದಿಸಿ, ಭಾಷೆಯ ಶಬ್ದಸಂಪತ್ತು ಅತ್ಯಂತ ವಿಶಾಲವಾಗುವಂತೆ ಮಾಡಲು ಸಾಧ್ಯವಿದೆ. ಅಂಥ ಭಾಷೆಯನ್ನು ಪ್ರಯೋಗಿಸುವಲ್ಲಿ ಹಲಕೆಲವು ತಪ್ಪುಗಳನ್ನು ಮಾಡಿದರೂ ನಿಂದಿಸುವವರಾಗಲಿ, ಹಾಸ್ಯ ಮಾಡುವವರಾಗಲಿ ಯಾರೂ ಇಲ್ಲ. ಆದರೆ, ಭಾಷೆ ಕೃತಕವೇ ಆದರೂ ಕೆಲವು ವರ್ಷ ಬಳಕೆಯಲ್ಲುಳಿದರೆ ಅದಕ್ಕೂ ಸಾಂಪ್ರದಾಯಿಕ ಕಟ್ಟುಪಾಡುಗಳು ಅಂಟಿಕೊಳ್ಳಲಾರವೆಂದು ಹೇಳುವುದು ಮಾತ್ರ ಕಷ್ಟ.
  • ಈ ದಿಕ್ಕಿನಲ್ಲಿ ಇನ್ನೂ ಬಹಳಷ್ಟು ಸಂಶೋಧನೆಗಳು ನಡೆಯಬೇಕಾಗಿವೆ. ಇದುವರೆಗೆ ನಿರ್ಮಿತವಾದ ಕೃತಕ ಭಾಷೆಗಳ ರಚನೆಯನ್ನು ಅಭ್ಯಾಸ ಮಾಡಿ ಅವನ್ನು ಇತರ ಪ್ರಾಕೃತಿಕ ಭಾಷೆಗಳೊಂದಿಗೆ ಹೋಲಿಸಿ ನೋಡಿ, ನಮ್ಮೆದುರಿರುವ ಸಮಸ್ಯೆಯ ನಿಜರೂಪವೇನೆಂಬುದನ್ನು ಅರಿಯಬೇಕು. ಅನಂತರ, ಅದಕ್ಕೆ ಯೋಗ್ಯವಾದ ಪರಿಹಾರವನ್ನು ಹುಡುಕಬೇಕು. ಇದಕ್ಕೆಲ್ಲ ಹೆಚ್ಚಿನ ಕಾಲಾವಕಾಶ, ಸೂಕ್ತ ಪರಿಶೀಲನೆ ಅಗತ್ಯ.

ಉಲ್ಲೇಖ

[ಬದಲಾಯಿಸಿ]