ವಿಷಯಕ್ಕೆ ಹೋಗು

ಅಂತಾರಾಷ್ಟ್ರೀಯ ಆರ್ಥಿಕ ಸಂಘಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತಾರಾಷ್ಟ್ರೀಯ ಆರ್ಥಿಕ ಸಂಘಗಳು[ಬದಲಾಯಿಸಿ]

ಪ್ರಪಂಚದಲ್ಲಿ ಪದೇ ಪದೇ ಸಂಭವಿಸುವ ಬಿಕ್ಕಟ್ಟುಗಳಿಗೂ ಯುದ್ಧಗಳಿಗೂ ರಾಷ್ಟ್ರಗಳ ನಡುವೆ ಸಹಕಾರ ಇಲ್ಲದಿರುವುದೇ ಕಾರಣ. ಈ ಪರಿಸ್ಥಿತಿಯನ್ನು ನಿವಾರಿಸುವ ಉದ್ದೇಶದಿಂದ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಈಚೆಗೆ ಅನೇಕ ಅಂತಾರಾಷ್ಟ್ರೀಯ ಸಂಘಗಳೂ ಸಂಸ್ಥೆಗಳೂ ಹುಟ್ಟಿವೆ. ಹಿಂದೆ ಸ್ಥಾಪಿತವಾಗಿದ್ದ ಲೀಗ್ ಆಫ್ ನೇಷನ್ಸ ಎಂಬ ರಾಷ್ಟ್ರಗಳ ಒಕ್ಕೂಟವೂ ದ್ವಿತೀಯ ಯುದ್ಧಾನಂತರದ ಕಾಲದಲ್ಲಿ ಸ್ಥಾಪಿತವಾದ ವಿಶ್ವಸಂಸ್ಥೆಯೂ ರಾಜಕೀಯ ಉದ್ದೇಶಗಳನ್ನು ಹೊಂದಿದ ಅಂತಾರಾಷ್ಟ್ರೀಯ ಸಂಸ್ಥೆಗಳು. ಇದೇ ರೀತಿ ಆರ್ಥಿಕ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನೇರ್ಪಡಿಸುವ ಉದ್ದೇಶದಿಂದ ಅನೇಕ ಸಂಘಗಳೂ ಸಂಸ್ಥೆಗಳೂ ಸ್ಥಾಪಿತವಾಗಿವೆ. ಅಂತಾರಾಷ್ಟ್ರೀಯ ಪುನಾರಚನೆ ಹಾಗೂ ಅಭಿವೃದ್ಧಿ ಬ್ಯಾಂಕು, ಅಂತಾರಾಷ್ಟ್ರೀಯ ದ್ರವ್ಯನಿಧಿ, ಅಂತಾರಾಷ್ಟ್ರೀಯ ಆರ್ಥಿಕ ಮಂಡಲಿ. ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ, ಅಂತಾರಾಷ್ಟ್ರೀಯ ವಾಣಿಜ್ಯ ಸಂಘ,ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅನೇಕ ಬಗೆಯ ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಒಡಂಬಡಿಕೆಗಳು _ ಇವನ್ನೆಲ್ಲ ಇಲ್ಲಿ ಹೆಸರಿಸಬಹುದಾಗಿದೆ. ಆರ್ಥಿಕೋದ್ದೇಶಗಳಿಗಾಗಿ ಏರ್ಪಟ್ಟ ಅಂತಾರಾಷ್ಟ್ರೀಯ ಸಂಘಗಳ ಇತಿಹಾಸ ಸುಮಾರು ಒಂದುನೂರು ವರ್ಷಗಳಿಂದ ಬೆಳೆದುಬಂದಿದೆ. ಅಂತಾರಾಷ್ಟ್ರೀಯ ಪ್ರದರ್ಶನಗಳಿಂದ ಆರಂಭವಾದ ಆರ್ಥಿಕ ಸಹಕಾರದ ಕಲ್ಪನೆ ಕ್ರಮವಾಗಿ ಬೆಳೆದಿದೆ: ಆರ್ಥಿಕ ಚಟುವಟಿಕೆಗಳ ನಾನಾ ಕ್ಷೇತ್ರಗಳಲ್ಲಿ ಆರಂಭವಾದ ಪ್ರತ್ಯೇಕ ಸಂಘಗಳ ರೂಪದಲ್ಲಿ ಸ್ಪಷ್ಟವಾಗಿದೆ. ರೋಮಿನಲ್ಲಿ ಸ್ಥಾಪಿತವಾದ (1905) ಅಂತಾರಾಷ್ಟ್ರೀಯ ಸಂಸ್ಥೆಯೂ ಹಲವಾರು ಕೈಗಾರಿಕೆಗಳು ಪ್ರತ್ಯೇಕವಾಗಿ ಏರ್ಪಡಿಸಿಕೊಂಡಿರುವ ಸಂಘಗಳೂ ಜವಳಿ ಉತ್ಪಾದಕರ ಅಂತಾರಾಷ್ಟ್ರೀಯ ಸಂಘವೇ ಮುಂತಾದ ಸಂಸ್ಥೆಗಳೂ ಆಮದು - ರಫ್ತು ಸುಂಕಗಳ ಪಟ್ಟಿಗಳ ಪ್ರಕಟಣೆಗಾಗಿ ಸ್ಥಾಪಿತವಾದ ಅಂತಾರಾಷ್ಟ್ರೀಯ ಬ್ಯೂರೋ ಮುಂತಾದ ಸಂಸ್ಥೆಗಳೂ ತಮತಮಗೆ ವಿಶಿಷ್ಟವಾದ ಕ್ಷೇತ್ರಗಳಲ್ಲಿನ ಹಿತಗಳನ್ನು ರಕ್ಷಿಸಿ ಬೆಳೆಸುವುದೇ ಅಲ್ಲದೆ, ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ ಬೆಳೆವಣಿಗೆಗಳಿಗೆ ಸಹಾಯಕವಾಗಿ ವಿಶ್ವಶಾಂತಿಗೂ ಪೋಷಕವಾಗಿದೆ.