ಅಂತರಿಕ್ಷ ಕಾಯಿದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರಿಕ್ಷ ಕಾಯಿದೆ ಒಂದು ದೇಶಕ್ಕೆ ತನ್ನ ಭೂಭಾಗದ ಮೇಲೆ ಸರ್ವೋಚ್ಚ ಸ್ವಾಮ್ಯವಿದೆ. ಅದನ್ನು ಅತಿಕ್ರಮಿಸುವುದು ಅಕ್ರಮಧಾಳಿ ಎನಿಸುವುದು. ತನ್ನ ಭೂಪ್ರದೇಶವನ್ನು ಪರಕೀಯ ಧಾಳಿಯಿಂದ ರಕ್ಷಿಸಿಕೊಳ್ಳುವ ಹಕ್ಕು ಪ್ರತಿಯೊಂದು ರಾಷ್ಟ್ರಕ್ಕೂ ಇದೆ. ಸಮುದ್ರದಿಂದ ಸುತ್ತುವರಿಯಲ್ಪಟ್ಟಿದ್ದರೆ, ಈ ರಾಷ್ಟ್ರಕ್ಕೆ ಸಮುದ್ರದಲ್ಲಿ 1500 ಮೀ.ಗಳಷ್ಟು ದೂರದವರೆಗೆ ಅಧಿಕಾರವಿದೆ. ಆದ್ದರಿಂದ ಪರಕೀಯ ನೌಕಾಬಲ ಭೂಮಿಯಿಂದ 1500 ಮೀ.ಗಳ ಒಳಗೆ ಪ್ರವೇಶಿಸದಂತೆ ಪ್ರತಿಬಂಧಿಸುವ ಹಕ್ಕು ಪ್ರತಿಯೊಂದು ರಾಷ್ಟ್ರಕ್ಕೂ ಇದೆ. ವೈಮಾನಿಕ ವಿಜ್ಞಾನ ಬೆಳೆದು, ವಿಮಾನಗಳು ಹಾರಾಡಲು ಮೊದಲಾದ ಮೇಲೆ, ಒಂದು ರಾಷ್ಟ್ರ ತನ್ನ ಭೂಪ್ರದೇಶದ ಸಮಗ್ರತೆಯನ್ನು, ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವಾಯುಪ್ರದೇಶದಲ್ಲಿಯೂ ಹಕ್ಕನ್ನು ಪಡೆಯುವುದು ಅನಿವಾರ್ಯವಾಯಿತು. ಇಲ್ಲದಿದ್ದರೆ, ಪರರಾಷ್ಟ್ರ ವಿಮಾನದಾಳಿಯಿಂದ ಒಂದು ರಾಷ್ಟ್ರದ ಆಸ್ತಿಪಾಸ್ತಿಗಳು ಧ್ವಂಸವಾಗಿ, ಪ್ರಾಣಹಾನಿಯಾಗಬಹುದು. ಆದಕಾರಣ 1906ರಲ್ಲಿ ಅಂತಾರಾಷ್ಟ್ರೀಯ ಶಾಸನ ಸಂಸ್ಥೆ (ಇನ್ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಲಾ) ಒಂದು ಸಿದ್ಧಾಂತವನ್ನು ಅಂಗೀಕರಿಸಿತು. ಪ್ರತಿಯೊಂದು ರಾಷ್ಟ್ರಕ್ಕೂ ತನ್ನ ಭೂಭಾಗದ ಮೇಲೆ 1500 ಮೀ.ಗಳ ಎತ್ತರದವರೆಗೆ ವಾಯುಮಂಡಲದಲ್ಲಿ ಸರ್ವಾಧಿಕಾರ ಇರತಕ್ಕದ್ದು. ಆ ಎತ್ತರದ ಕೆಳಗೆ ಪರಕೀಯ ವಿಮಾನಗಳು ಒಂದು ದೇಶದ ಮೇಲೆ ಅದರ ಒಪ್ಪಿಗೆಯಿಲ್ಲದೆ ಹಾರಾಡುವುದು, ಆ ದೇಶದ ವಾಯುಮಂಡಲದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತೆ ಎಂದು ಆ ಸಂಸ್ಥೆ ಅಭಿಪ್ರಾಯಪಟ್ಟಿತು. ಆದರೆ ಜಗತ್ತಿನ ಅನೇಕ ರಾಷ್ಟ್ರಗಳು ಈ ಸಂಸ್ಥೆಯ ಸಿದ್ಧಾಂತವನ್ನು ಒಪ್ಪಿಕೊಂಡಿರಲಿಲ್ಲ 1919ರಲ್ಲಿ ಶಾಂತಿಸಮ್ಮೇಳನ, ಒಂದು ರಾಷ್ಟ್ರದ ಭೂಪ್ರದೇಶದ ಮೇಲಿರುವ ವಾಯುಮಂಡಲ ಆ ರಾಷ್ಟ್ರಕ್ಕೆ ಸಂಪುರ್ಣವಾಗಿ ಸರ್ವ ಹಕ್ಕುಗಳೊಡನೆ ಸೇರಿದೆ ಎಂಬುದಾಗಿ ತೀರ್ಮಾನಿಸಿ, ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಉಚ್ಚ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿ ಅಂಗೀಕರಿಸಿದುವು. ವೈಮಾನಿಕ ವಿಜ್ಞಾನ ನಾಗಾಲೋಟದಲ್ಲಿ ಬೆಳೆಯುತ್ತಿರುವ ಈ ಶತಮಾನದಲ್ಲಿ ಅಂತರಿಕ್ಷ ಕಾಯಿದೆ ಬೇಗಬೇಗನೆ ಬದಲಾಗುತ್ತಿದೆ. 1920ರಲ್ಲಿ ಒಂದು ರಾಷ್ಟ್ರದ ಭೂಪ್ರದೇಶದ ಮೇಲೆ ನೇರವಾಗಿರುವ ಅಂತರಿಕ್ಷ ಪ್ರದೇಶದಲ್ಲಿ ಮಾತ್ರ ಆ ದೇಶಕ್ಕೆ ಹಕ್ಕಿದೆ ಎಂದು ಭಾವಿಸಲಾಗಿತ್ತು. ಆದರೆ, ಒಂದು ವಿಮಾನ ನೇರವಾಗಿ ಒಂದು ದೇಶದ ಅಂತರಿಕ್ಷಕ್ಕೆ ಬಾರದೆಯೇ ದೇಶದ ಭದ್ರತೆಗೆ ಅಪಾಯ ತರಬಹುದಾಗಿದೆ. ಈಗ ಈ ಅಂತರಿಕ್ಷದ ಹಕ್ಕು ಸಮುದ್ರದ ಮೇಲಿನ ಅಂತರಿಕ್ಷದಲ್ಲೂ ಕೆಲವು ದೂರದವರೆಗೆ ವಿಸ್ತರಿಸಿದೆ. ಒಂದು ದೇಶದ ಅಂತರಿಕ್ಷ ಪ್ರದೇಶದಲ್ಲಿ ಯಾವ ಬಗೆಯ ವಿಮಾನಗಳು ಹಾರಾಡಬಹುದೆಂಬುದನ್ನು ನಿಗದಿ ಮಾಡಿದ್ದಾರೆ. ಅದರಲ್ಲಿ ಖಾಸಗಿ ವಿಮಾನಗಳೆಂದೂ ಸಾರ್ವಜನಿಕ ವಿಮಾನಗಳೆಂದೂ ವಿಂಗಡಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳು ಸಾರಿಗೆ ವಿಮಾನಗಳು ಹಾರಾಡುವುದನ್ನು ನಿಯಂತ್ರಿಸಲಾಗಿದೆ. ಈ ಶಾಖೆಯ ಕಾಯಿದೆ ಹೆಸರಿಗೆ ಕಾಯಿದೆಯೇ ಹೊರತು, ನ್ಯಾಯಶಾಸ್ತ್ರದಲ್ಲಿ ಕಾಯಿದೆ ಎಂಬ ಮಾತಿಗೆ ಇರುವ ಸಂಪುರ್ಣ ಅರ್ಥದಲ್ಲಿ ಕಾಯಿದೆಯಲ್ಲ. ಈ ಕಾಯಿದೆಗೆ ವಿವಿಧ ರಾಷ್ಟ್ರಗಳ ನಡುವೆ ಆಗಿರುವ ಒಪ್ಪಂದವೇ ಆಧಾರವಾಗಿದೆ.