ವಿಷಯಕ್ಕೆ ಹೋಗು

ಗಾಳಿ/ವಾಯು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಳಿಯ ಹಿನ್ನೆಲೆ

[ಬದಲಾಯಿಸಿ]

ಹಿಂದೂ ಪುರಾಣದಲ್ಲಿ ಗಾಳಿಯು ಅಂಜನಾದೇವಿಯ ಪತಿ. ಗಾಳಿಗೆ ವಾಯು, ಎಲರು, ಹವಾ, ಉಸಿರು, ಜೀವಧಾತು, ಸಮೀರ, ದೆವ್ವ, ಸುಳಿವು, ಮಾರುತ ಮೊದಲಾದ ಹೆಸರು ಗಳಿವೆ. ಹನುಮಂತ ಮತ್ತು ಭೀಮರನ್ನು ವಾಯುಪುತ್ರರೆಂದು ಕರೆಯಲಾಗಿದೆ. ಗಾಳಿಯಲ್ಲಿ ಹಲವಾರು ವಿಧಗಳಿವೆ. ಮಂದಮಾರುತ, ಕುಳಿರ್ಗಾಳಿ, ಬಿರುಗಾಳಿ, ಚಂಡ ಮಾರುತ, ಸುಂಟರಗಾಳಿ, ಮಲಯ ಮಾರುತ, ರಾಶಿಗಾಳಿ, ಕೋಳೂರಗಾಳಿ, ಇತ್ಯಾದಿ. ಇದಲ್ಲದೆ ಈಶಾನ್ಯ ದಿಕ್ಕಿನಿಂದ ಬೀಸುವ ಗಾಳಿಯನ್ನು 'ಸ್ಮಶಾನ ಗಾಳಿ' (ಸುಡುಗಾಡುಗಾಳಿ) ಎಂದೂ, ಆಗ್ನೇಯ ದಿಕ್ಕಿನಿಂದ ಬೀಸುವ ಗಾಳಿಗೆ 'ಕುಂಬಾರ ಗಾಳಿ' ಎಂದೂ, ವಾಯುವ್ಯ ದಿಕ್ಕಿನಿಂದ ಬೀಸುವ ಗಾಳಿಗೆ 'ಗಂಗೆಗಾಳಿ' ಎಂದೂ ಕರೆಯುತ್ತಾರೆ. ಪಂಚಭೂತಗಳಲ್ಲಿ ಗಾಳಿಗೆ ವಿಶಿಷ್ಟ ಸ್ಥಾನವಿದೆ.

ಪುರಾಣಗಳಲ್ಲಿ ಗಾಳಿ

[ಬದಲಾಯಿಸಿ]

ಪುರಾಣವೂಂದರ ಪ್ರಕಾರ ಗಾಳಿ ತನ್ನ ಮಗನಾದ ಹನುಮಂತನಿಗೆ ಹಾನಿಯಾದಾಗ ಈ ಜಗತ್ತಿನ ಮೇಲೆ ಕೋಪಗೊಂಡು ಒಂದು ಪೊಟರೆಯೊಂದರಲ್ಲಿ ಅಡಗಿ ಕೊಳ್ಳುತ್ತಾನೆ. ಆಗ ದೇವತೆಗಳೂ, ಜೀವಿಗಳು ಕಂಗಾಲಾಗಿ ಗಾಳಿಯನ್ನು ಹುಡುಕ ತೊಡಗುತ್ತಾರೆ. ಆದರೆ ಎಲ್ಲಿಯೂ ಗಾಳಿಯ ಸುಳಿವೆ ಸಿಗುವುದಿಲ್ಲ. ಗಾಳಿ ಪೊಟರೆಯಲ್ಲಿ ಅಡಗಿ ಕೊಳ್ಳುವುದನ್ನು ಒಂದು ಕತ್ತೆ ನೋಡಿಕೊಂಡು ಗಾಳಿ ಬೇರಲ್ಲೂ ಹೋಗದಂತೆ ಆ ಪೊಟರೆಯೊಳಗೆ ಮೂಗು ತೂರಿಸಿಕೊಂಡು ನಿಂತಿರುತ್ತದೆ. ಇದನ್ನು ಗಮನಿಸಿದ ದೇವತೆಗಳು, ಅಲ್ಲಿ ಗಾಳಿ ಅಡಗಿಕೊಂಡಿ ರುವುದನ್ನು ಪತ್ತೆ ಹಚ್ಚಿ, ವಾಯುವನ್ನು ಸಮಾಧಾನ ಪಡಿಸಿ ಹೊರಗೆ ಬರುವಂತೆ ಮಾಡುತ್ತಾರೆ.

ಜನಪದರಲ್ಲಿ ಗಾಳಿಯ ಪ್ರಭಾವ

[ಬದಲಾಯಿಸಿ]
  • ಜನಪದರ ದೃಷ್ಟಿಯಲ್ಲಿ ಗಾಳಿ ಜನರಿಗೆ ಕೇಡನ್ನು ಉಂಟು ಮಾಡುವ ಒಂದು ಕ್ಷುದ್ರಶಕ್ತಿ. ಜನಪದರಲ್ಲಿ ಗಾಳಿಗೆ ಪೀಡೆ,ಪಿಶಾಚಿ, ದಯ್ಯ, ದೆವ್ವ, ಜಕ್ಕಣಿ, ಸೋಂಕು ಇತ್ಯಾದಿ ಹೆಸರುಗಳಿವೆ. ಅತೃಪ್ತಿಯಿಂದ ಮರಣ ಹೊಂದಿದವರು, ಆಕಸ್ಮಿಕವಾಗಿ ದುರಂತಕ್ಕೆ ಈಡಾದವರು, ಬದುಕಿಗೆ ಬೇಸತ್ತು ಜೀವ ಕಳೆದುಕೊಂಡವರು, ಯಾರದೋ ಹಿಂಸೆಯಿಂದ ಸತ್ತವರು, ಕ್ಷುಲ್ಲಕ ಕಾರಣಗಳಿಗಾಗಿ ಪ್ರಾಣ ತೆತ್ತವರು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡವರು, ಯಾರಿಂದಲಾದರೂ ಕೊಲೆಯಾದವರು, ಶವ ಸಂಸ್ಕಾರಗಳು ಸರಿಯಾಗಿ ನಡೆಯದೆ ಮಣ್ಣು ಪಾಲಾದವರು ಗಾಳಿಯ ರೂಪದಲ್ಲಿ ಕಾಡುತ್ತಾರೆ ಎಂಬ ನಂಬಿಕೆ ಜನಪದರದು.
  • ಗಾಳಿ ಮೈಮೇಲೆ ಬಂದವರು ಮೈನಡುಗಿಸುವುದು, ಚೀರುವುದು, ಹಲ್ಲು ಕಡಿಯುವುದು, ತಾರಕ ಸ್ವರದಲ್ಲಿ ಮಾತನಾಡುವುದು, ಹುಚ್ಚರಂತೆ ತಿರುಗುವುದು, ನಾಲ್ಕಾರು ಜನ ಹಿಡಿದುಕೊಂಡರೂ ನಿಯಂತ್ರಣಕ್ಕೆ ಬರದಿರುವುದು, ಅಪರಿಚಿತ ಭಾಷೆಯಲ್ಲಿ ಮಾತನಾಡುವುದು ಇತ್ಯಾದಿ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ. ಮೈಮೇಲೆ ಬರುವ ಗಾಳಿಯಲ್ಲಿ ಎರಡು ವಿಧಗಳಿವೆ.
  • ೧.ಅರಿವಿನ ಗಾಳಿ ,೨.ಅರಿವಿಲ್ಲದ ಗಾಳಿ. ಅರಿವಿನ ಗಾಳಿಯೆಂದರೆ ಮಾತನಾಡುವ ಗಾಳಿ, ಅರಿವಿಲ್ಲದ ಗಾಳಿಯೆಂದರೆ ಮಾತನ್ನೇ ಆಡದಿರುವ ಗಾಳಿ. ಅರಿವಿಲ್ಲದ ಗಾಳಿಯಿಂದ ಅಪಾಯ ಹೆಚ್ಚು ಎಂಬ ಮಾತಿದೆ.ಕರ್ನಾಟಕದಲ್ಲಿ ಗಾಳಿ ಬಿಡಿಸುವ ಕೇಂದ್ರಗಳು ಹಲವಾರಿವೆ. ಉದಾ:-ಧರ್ಮಸ್ಥಳ, ಕೊಳ್ಳೆಗಾಲ, ಮಹದೇಶ್ವರ ಬೆಟ್ಟ, ಬಿಜಾಪುರದ ಜೋಡಗುಂಬಜ್, ಕೇರಳ ಪ್ರಮುಖವಾದುವು. ಗಾಳಿಯನ್ನು ಬಿಡಿಸುವ ಮಾಂತ್ರಿಕರು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲೂ ಇದ್ದಾರೆ. ಕೆಲವೂಮ್ಮೆ ಪೂಜಾರಿಯು ಮೈಮೇಲೆ ಬಂದ ದೆವ್ವವನ್ನು ಹೋಗಿಸಲು ಪ್ರಯತ್ನಿಸುತ್ತಾನೆ.

ಪಾಶ್ಚಾತ್ಯರಲ್ಲಿ ಗಾಳಿಯ ಪರಿಕಲ್ಪನೆ

[ಬದಲಾಯಿಸಿ]
  • ಅಮೆರಿಕನ್ ಇಂಡಿಯನ್ನರ ಅನೇಕ ಪುರಾಣಗಳಲ್ಲಿ ಗಾಳಿಯು ಒಂದು ಪಾತ್ರವಾಗಿ ಬರುತ್ತದೆ. ಒಮ್ಮೆ ಗಾಳಿಯು ಅಹಂನಿಂದ ಮನಬಂದಂತೆ ಬೀಸತೊಡಗಿ ಜೀವರಾಶಿಗಳಿಗೆ ಹಾನಿಯುಂಟು ಮಾಡುತ್ತಿರುತ್ತದೆ. ಆಗ ಕೊಯತೆ ಎಂಬ ದೇವತೆ ಗಾಳಿಯನ್ನು ಹಿಡಿದು ಕೊಲ್ಲುವುದಾಗಿ ಬೆದರಿಸುತ್ತದೆ. ಕೊಯತೆಯ ಮಾತಿಗೆ ಬೆದರಿದ ಗಾಳಿಯು ಇನ್ನು ಮುಂದೆ ತಾನು ಈ ರೀತಿ ಬೀಸುವುದಿಲ್ಲವೆಂದೂ ತನ್ನನ್ನು ಕೊಲ್ಲಕೂಡದೆಂದು ಆ ದೇವತೆಯನ್ನು ಅಂಗಲಾಚಿ ಬೇಡುತ್ತದೆ.
  • ಪೂರ್ವ ಕಾಡಿನ ನಾಯಕರು ತಮ್ಮ ನಾಡಿ ಜನತೆಗೆ ಮಾಡುವ ಒಳ್ಳೆ ಕೆಲಸಗಳಲ್ಲಿ ಗಾಳಿಯನ್ನು ನಿಯಂತ್ರಿಸುವುದು ಒಂದಾಗಿರುತ್ತದೆ.
  • ಪ್ಲಾಬೋಗಳಲ್ಲಿ ಅನೇಕ ಗಾಳಿ ಚೇತನಗಳಿವೆ. ಅವು ನಾಲ್ಕು ದಿಕ್ಕುಗಳಲ್ಲೂ ಪ್ರವಹಿಸುತ್ತವೆ.
  • ತಾವೂಸ್ ಪ್ಲಾಬೋಗಳಲ್ಲಿ ಗಾಳಿಮುದುಕಿಯು ಜಗತ್ತಿನ ನಡುಮಧ್ಯದಲ್ಲಿ ವಾಸಿಸುತ್ತಿರುತ್ತಾಳೆ. ಅವಳು ಕೆಟ್ಟವಳೂ, ಮಾಟಗಾತಿಯೂ ಆಗಿರುತ್ತಾಳೆ.
  • ಜುನಿಯಲ್ಲಿ ಗಾಳಿ ಚೇತನಗಳು ಉತ್ತರ ಮಾರುತಗಳಾಗಿದ್ದೂ, ಸುಂಟರಗಾಳಿಯೂ ಅದರಲ್ಲಿ ಸೇರಿರುತ್ತದೆ.
  • ಲಗೂನಾದಲ್ಲಿ ಗರಿ ಮನುಷ್ಯ ಮತ್ತು ಸುಂಟರಗಾಳಿ ಇದೆ.
  • ತೇವಾಗಳಲ್ಲಿ ಗಾಳಿಮುದುಕಿ ಮತ್ತು ಗಾಳಿಮುದುಕ ಇರುತ್ತಾರೆ.
  • ಅಪಾಚೆಗಳಲ್ಲಿ ನಾಲ್ಕು ದಿಕ್ಕುಗಳಿಗೆ ಕಪ್ಪು, ನೀಲಿ, ಹಳದಿ ಮತ್ತು ಬಿಳಿಗಾಳಿಗಳಿವೆ.
  • ಕ್ಯಾಲಿಫೋರ್ನಿಯಾ ಮತ್ತು ಒರೆಗಾನ್ ಗಳಲ್ಲಿ ಗಾಳಿಗಳನ್ನು ಕೂಡಿಹಾಕಿದ್ದ ಮತ್ತು ಅಲ್ಲಿಂದ ಬಿಡುಗಡೆ ಮಾಡುವ ಒಂದು ಗುಹೆಯ ಪ್ರಸ್ತಾಪವಿದೆ.
  • ಪಶ್ಚಿಮ ಅಮೆರಿಕನ್ ಇಂಡಿಯನ್ನರು ಗಾಳಿಯನ್ನು ಚೀಲದಲ್ಲಿ ಇಟ್ಟುಕೊಳ್ಳುವ ಪರಿಪಾಠವಿದೆ.

ಗಾಳಿಯ ಬಗೆಗಿರುವ ನಂಬಿಕೆಗಳು

[ಬದಲಾಯಿಸಿ]

ಪ್ರತ್ಯಕ್ಷ ಚಮತ್ಕಾರ ಚಂದ್ರಿಕೆಯ ಸ್ವಪ್ನಫಲ ಶಾಸ್ತ್ರದಲ್ಲಿ ಗಾಳಿಯ ಬಗ್ಗೆ ಕೆಲವು ನಂಬಿಕೆಗಳ ಪ್ರಸ್ತಾಪಗಳಿವೆ.

  1. ನಿರ್ಮಲಗಾಳಿಯನ್ನು ಕುಡಿದಂತೆ ಕನಸು ಕಂಡರೆ ಇಷ್ಟಕಾರ್ಯ ಸಿದ್ದಿಯಾಗುತ್ತದೆ.
  2. ಪ್ರಯಾಣ ಮಾಡುವ ಸಂದರ್ಭದ ಕನಸಿನಲ್ಲಿ ಗಾಳಿ ಕಾಣಿಸಿ ಕೊಂಡರೆ ಕೈಗೊಂಡ ಕಾರ್ಯ ನೆರವೇರುತ್ತದೆ.
  3. ರೈತನಿಗೆ ಕನಸಿನಲ್ಲಿ ಗಾಳಿಯು ಕಾಣಿಸಿಕೊಂಡರೆ ಸಮೃದ್ದಿ ಬೆಳೆ ಬೆಳೆಯುತ್ತಾನೆ.
  4. ಗಾಳೀಪಟ ಹಾರಿಸುತ್ತಿರುವಂತೆ ಕನಸಾದರೆ ಅದೃಷ್ಟವೂ ಸಕಲೈಶ್ಚರ್ಯವು ಸಿದ್ದಿಸುತ್ತದೆ.
  5. ಗಾಳಿಯಂತ್ರಗಳಾಗಲೀ, ಗಾಳಿ ಚಕ್ರಗಳಾಗಲೀ ಕನಸಿನಲ್ಲಿ ಕಂಡರೆ ಅನೇಕ ಕಷ್ಟಗಳು ಉಂಟಾಗುತ್ತವೆ.
  6. ಬದುಕಿಗೆ ಬೇಸತ್ತು ಜೀವ ಕಳೆದು ಕೊಂಡವರು, ಅತೃಪ್ತಿಯಿಂದ ಮರಣ ಹೊಂದಿದವರು, ಶವ ಸಂಸ್ಕಾರಗಳು ಸರಿಯಾಗಿ ನಡೆಯದೆ ಮಣ್ಣುಪಾಲಾದವರು ಗಾಳಿಯ ರೂಪದಲ್ಲಿ ಬಂದು ಕಾಡುತ್ತಾರೆ.
  7. ಹೆಂಗಸರಿಗೆ-ಹೆಣ್ಣುಗಾಳಿ, ಗಂಡಸರಿಗೆ ಗಂಡುಗಾಳಿ ಹಿಡಿದರೆ ತುಂಬಾ ಅಪಾಯ.
  8. ಗಾಳಿಯ ವಾಸಸ್ಥಳಗಳು ಆಲದ ಮರ,ಹುಣಸೇಮರ ಮತ್ತು ಸ್ಮಶಾನದ ಸುತ್ತ-ಮುತ್ತಲ ಪ್ರದೇಶಗಳು.
  9. ಗಾಳಿಗೆ ನಿರ್ಧಿಷ್ಟ ರೂಪವಿಲ್ಲದುದರಿಂದ ಪ್ರಾಣಿ-ಪಕ್ಷಿಗಳ ರೂಪದಲ್ಲಿ (ಬೆಕ್ಕು, ನಾಯಿ,ಗೂಬೆ ಕಾಗೆ) ಕಾಣಿಸಿಕೊಳ್ಳುತ್ತದೆ.
  10. ದುರ್ಮರಣಕ್ಕೀಡಾದ ಮುತ್ತೈದೆಯರು ಗಾಳಿಗಳಾಗುತ್ತಾರೆ. ಅವರನ್ನು ಜಕ್ಕಣಿಯರೆಂದು ಕರೆಯುತ್ತಾರೆ.

ಜನಪದ ಗೀತೆಗಳಲ್ಲಿ ಗಾಳಿ

[ಬದಲಾಯಿಸಿ]
  1. ರಾಶಿ ಗಾಳಿಯು ಬೀಸಿ ಸೂಸಿ ಹರಿಯಿತು ಕಣವು

ಕೂಸ ಕೋಳೂರ ಕಡೆಗಾಳಿ/ಬೀಸಿಂದು
ಮೀಸಲೀ ರಾಶಿ ಜಂಗಮಕೆ

  1. ಹರಿಚಂದ ಗಾಳಿಗಳು ಭರದೆ ಬೈಲಿಗೆ ಬೀಸಿ

ಸುರಿಮಳೆಯು ನಮ್ಮ ಬೆಳವಲಕೆ/ಕೋಳೂರ
ಬರಿಗಾಳಿ ಬೀಸಿ ಹಗೆ ತುಂಬಿ

  1. ಗಾಳಿದೇವರಗೂಡ ಘೂಳಿದೇವರು ಬಂದಾ

ಆಕಳ ಹಿಂದ ಕರು ಬಂದ/ನನ ಮನಿಯ
ಮಾರಾಯರ ಹಿಂದ ಮಗ ಬಂದ

  1. ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ

ಕೂಸು ಕಂದಯ್ಯ ಒಳಹೊರಗ/ಆಡಿದರ
ಬೀಸಣಿಕೆ ಗಾಳಿ ಸುಳಿದಾವು

ಸಹಾಯಕ ಕೃತಿ

[ಬದಲಾಯಿಸಿ]

ಕನ್ನಡ ಜಾನಪದ ವಿಶ್ವಕೋಶ-ಸಂಪುಟ-೧

ಉಲ್ಲೇಖಗಳು

[ಬದಲಾಯಿಸಿ]

[] [] [] []

  1. http://kn.wikipedia.org/wiki/%E0%B2%A8%E0%B3%88%E0%B2%B8%E0%B2%B0%E0%B3%8D%E0%B2%97%E0%B2%BF%E0%B2%95_%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2
  2. http://kanaja.in/archives/35684[ಶಾಶ್ವತವಾಗಿ ಮಡಿದ ಕೊಂಡಿ]
  3. "ಆರ್ಕೈವ್ ನಕಲು". Archived from the original on 2016-03-06. Retrieved 2015-05-31.
  4. http://vijaykarnataka.indiatimes.com/district/bengalurucity/-/articleshow/20431285.cms