ಆರ್. ಪಿ. ಹೂಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್. ಪಿ. ಹೂಗಾರ
ಜನನಮಾರ್ಚ್ ೬, ೧೯೨೨
ಮರಣನವೆಂಬರ್ ೧೪, ೧೯೯೦
ಉದ್ಯೋಗಸಂಗೀತ ಪ್ರಾಧ್ಯಾಪಕರು ಮತ್ತು ವಿದ್ವಾಂಸರು
ಇದಕ್ಕೆ ಖ್ಯಾತರುಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ

ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ ಪ್ರೊ. ಆರ. ಪಿ. ಹೂಗಾರ (ಮಾರ್ಚ್ ೬, ೧೯೨೨ - ನವೆಂಬರ್ ೧೪, ೧೯೯೦) ಅವರು ಗ್ವಾಲಿಯರ್ ಘರಾಣೆಯ ಮಹಾನ್ ಗಾಯಕರು. ಅವರು ಹೂಗಾರ ಮಾಸ್ತರ ಎಂದೇ ನಾದಲೋಕದಲ್ಲಿ ಪರಿಚಿತರಾಗಿದ್ದವರು.

ಜೀವನ ಮತ್ತು ಪರಂಪರೆ[ಬದಲಾಯಿಸಿ]

ಪ್ರೊ. ರಾಚಪ್ಪ ಪರಪ್ಪ ಹೂಗಾರರು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಮಾರ್ಚ್ ೬, ೧೯೨೨ರ ವರ್ಷದಲ್ಲಿ ಜನಿಸಿದರು. ತಂದೆ ಪರಪ್ಪನವರು ಮತ್ತು ತಾಯಿ ಗಿರಿಯಮ್ಮನವರು. ಇಟಗಿಯ ಹೂಗಾರ ಮನೆತನ ಸಂಗೀತ ಹಾಗೂ ಸಂಸ್ಕೃತಿಗೆ ಹೆಸರಾದುದು. ರಾಚಪ್ಪನವರ ತಾತ ಪರಪ್ಪನವರ ತಂದೆ ರುದ್ರಪ್ಪನವರು ಉತ್ತಮ ಸಂಗೀತಗಾರರಾಗಿದ್ದರು. ಸಿತಾರ್ ವಾದನದಲ್ಲಿ ಅವರಿಗೆ ವಿಶೇಷ ಪಾಂಡಿತ್ಯವಿತ್ತು. ರಾಚಪ್ಪನವರ ತಂದೆ ಪರಪ್ಪನವರಂತೂ ಆ ಭಾಗದ ನಾಮಾಂಕಿತ ಸಂಗೀತ ಕಲಾವಿದರು. ಗಾಯನ ಕಲೆಯ ಜೊತೆಗೆ ಪಿಟೀಲು, ಸಾರಂಗಿ, ಮದ್ದಳೆ ಮತ್ತು ಸಿತಾರ ನುಡಿಸುವುದರಲ್ಲಿ ಅವರು ನಿಷ್ಣಾತರಾಗಿದ್ದರು. ಕುದುರೆಯ ಮೇಲೆ ಕುಳಿತುಕೊಂಡು ಒಂದು ಹೆಗಲಿಗೆ ಪಿಟೀಲು, ಇನ್ನೊಂದು ಹೆಗಲಿಗೆ ಸಾರಂಗಿ ವಾದ್ಯಗಳನ್ನು ಹಾಕಿಕೊಂಡು ಹಳ್ಳಿಯಿಂದ ಹಳ್ಳಿಗೆ ಸಂಗೀತ ಕಾರ್ಯಕ್ರಮಕ್ಕೆ ಹೊರಡುತ್ತಿದ್ದ ಇವರನ್ನು ಕಂಡ ಜನ ಬಂದೂಕುಧಾರಿ ಢಕಾಯಿತನೆಂದು ಹೆದರಿಕೊಳ್ಳುತ್ತಿದ್ದುದೂ ಇತ್ತು. ಅವರೊಬ್ಬ ಉತ್ತಮ ಸಂಗೀತ ಕಲಾವಿದರೆಂಬುದು ಗೊತ್ತಾದ ಮೇಲೆ ಜನ ಅಚ್ಚರಿಪಡುತ್ತಿದ್ದರು. ಕಳೆದ ಶತಮಾನದ ಹೆಸರಾಂತ ಸಾಹಿತಿ ಡಾ. ಸಿದ್ಧಯ್ಯ ಪುರಾಣಿಕರ ತಂದೆ ದ್ಯಾಂಪುರದ ಪಂಡಿತ ಕಲ್ಲಿನಾಥ ಶಾಸ್ತ್ರಿಗಳು ನಡೆಸುತ್ತಿದ್ದ ಪುರಾಣ ಕೀರ್ತನಕ್ಕೆ ಪರಪ್ಪನವರ ಸಂಗೀತ ಸಾಥಿ ಹೇಳಿ ಮಾಡಿಸಿದಂತಹ ಜೋಡಿ ಎಂದು ಪ್ರಖ್ಯಾತಿ ಪಡೆದಿತ್ತು. ಕಲ್ಲಿನಾಥ ಶಾಸ್ತ್ರಿಗಳ ಪುರಾಣ ಇದ್ದಲ್ಲೆಲ್ಲಾ ಪರಪ್ಪನವರ ಸಂಗೀತ ಅವಶ್ಯವಾಗಿ ಜೊತೆಗೂಡಿರುತ್ತಿತ್ತು. ರಾಚಪ್ಪನವರಿಗೆ ಸಂಗೀತದಲ್ಲಿ ಅವರ ತಂದೆಯವರಾದ ಪರಪ್ಪನವರೇ ಪ್ರಥಮ ಗುರು. ರಾಚಪ್ಪನವರ ಬದುಕಿಗೆ ಬೆಳಕನ್ನಿತ್ತವರು ಹಾಲಕೇರಿಯ ಶ್ರೀ. ನಿ. ಪ್ರ. ಲಿಂ. ಅನ್ನದಾನೇಶ್ವರ ಮಹಾಸ್ವಾಮಿಗಳು. ಪರಪ್ಪನವರು ಹಾಗೂ ಅನ್ನದಾನೇಶ್ವರ ಮಹಾಸ್ವಾಮಿಗಳೂ ಬಾಲ್ಯದ ಗೆಳೆಯರು ಮತ್ತು ಸಹಪಾಠಿಗಳು. ಹೀಗಾಗಿ ಇವರ ಮನೆತನದ ಮೇಲೆ ಸ್ವಾಮಿಗಳಿಗೆ ತುಂಬು ಪ್ರೀತಿ, ವಿಶ್ವಾಸ. ಒಂದು ರೀತಿಯಲ್ಲಿ ಸ್ವಾಮಿಗಳ ಆಶೀರ್ವಾದ ಪರಪ್ಪನವರ ಕುಟುಂಬಕ್ಕೊಂದು ವರದಾನ. ಇಟಗಿಯಲ್ಲಿ ಕನ್ನಡ ನಾಲ್ಕನೇ ತರಗತಿ ಮುಗಿಸಿದ ರಾಚಪ್ಪನವರು ಮಾಧ್ಯಮಿಕ ಶಿಕ್ಷಣಕ್ಕಾಗಿ ನರಗುಂದದ ಎ. ವಿ. ಸ್ಕೂಲಿಗೆ ಬಂದರು. ಶಾಲೆಯ ಅಭ್ಯಾಸದೊಂದಿಗೆ ಸಂಗೀತ ಕಲೆಯ ವಿಕಾಸಕ್ಕೆ ವಿಶೇಷ ವೇಳೆ ಕಳೆದರು. ನರಗುಂದದ ಪಂಡಿತ ನಾರಾಯಣಾಚಾರ್ಯ ದಂಡಾಪೂರ ಹೆಸರಾಂತ ಗಾಯಕರೆನಿಸಿದ್ದರು. ಅವರು ಗ್ವಾಲಿಯರ್ ಘರಾಣೆಯ ಪಂಡಿತ್ ಬಾಲಕೃಷ್ಣ ಬುವಾ ಇಚಲ ಕರಂಜೀಕರ ಅವರ ಶಿಷ್ಯರು. ನಾರಾಯಣಾಚಾರ್ಯರು ಸಂಸ್ಕೃತ ವಾಜ್ಮಯದಲ್ಲೂ ಮಹಾನ್ ಪಂಡಿತರಾಗಿದ್ದರು. ರಾಚಪ್ಪನವರು ನಾರಾಯಣಾಚಾರ್ಯ ದಂಡಾಪೂರ ಅವರಲ್ಲಿ ಸಂಗೀತ ಕಲಿಕೆಗೆ ಪ್ರಾರಂಭಿಸಿ, ಗುರುಗಳ ನೆಚ್ಚಿನ ಶಿಷ್ಯರಾಗಿ ಸಂಗೀತ ಸಾಧನೆಯಲ್ಲಿ ತೊಡಗಿದರು.

ಬಾಲ್ಯದಲ್ಲೇ ಹೊರಹೊಮ್ಮಿದ ಪ್ರತಿಭೆ[ಬದಲಾಯಿಸಿ]

ರಾಚಪ್ಪನವರು ನರಗುಂದದ ಶಾಲಾ ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ಶಾಲೆಯ ಜುಬಿಲಿ ಉತ್ಸವ ಏರ್ಪಾಡಾಗಿತ್ತು. ಆ ಉತ್ಸವದ ನಿಮಿತ್ತ ಅಲೌಕಿಕ ರಾಜನಿಷ್ಠಾ ಎಂಬ ನಾಟಕ ಅಭಿನಯಿಸಲ್ಪಟ್ಟಿತು. ಆ ನಾಟಕದಲಿ ಬಸ್ವಾರ್ಯನ ಪಾತ್ರದಲ್ಲಿ ರಾಚಪ್ಪನವರ ಪ್ರಬುದ್ಧ ಅಭಿನಯ ಮತ್ತು ಸುಮಧುರ ಕಂಠದ ಹಾಡುಗಾರಿಕೆ ಕೇಳಿದ ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಂಬಯಿ ಕರ್ನಾಟಕದ ಅಂದಿನ ಶಿಕ್ಷಣ ಸಚಿವ ಆರ್. ಸಿದ್ದಪ್ಪ ಕಂಬಳಿಯವರು ರಾಚಪ್ಪನವರನ್ನು ಕರ್ನಾಟಕದ ಕಿನ್ನರರೆಂದು ಉದ್ಘರಿಸಿ ಹರಸಿದರು. ಹೈಸ್ಕೂಲ್ ಶಿಕ್ಷಣಕ್ಕಾಗಿ ಗದುಗಿಗೆ ಆಗಮಿಸಿದ ರಾಚಪ್ಪನವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಮುಂದೆ ಅವರು ಸಂಗೀತ ವಿದ್ಯೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ಮುಂಬಯಿನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ಸಂಗೀತ ವಿಶಾರದ ಮತ್ತು ವಿಜಾಪುರದ ಕರ್ನಾಟಕ ಪ್ರದೇಶ ಸಂಗೀತ ಸೇವಾ ಸಮಿತಿಯ ಕೆಂದ್ರದ ಸಂಗೀತ ಅಲಂಕಾರ ಪದವಿ ಪಡೆದುಕೊಂಡರು.

ಸಂಗೀತ ಸೇವೆ[ಬದಲಾಯಿಸಿ]

ಸಂಗೀತದಲ್ಲಿ ಉತ್ತಮ ಸಾಧನೆ ಮಾಡಿ ಪ್ರಬುದ್ಧತೆ ಪಡೆದುಕೊಂಡ ಪ್ರೊ. ಆರ್. ಪಿ. ಹೂಗಾರ ಅವರು ವಿಜಾಪೂರಕ್ಕೆ ಬಂದು ಅಲ್ಲಿ ಕೆಲವೊಂದು ಮನೆಗಳಲ್ಲಿ ಸಂಗೀತ ಪಾಠ ಹೇಳಲು ಪ್ರಾರಂಭಿಸಿ ಮುಂದೆ ಅಲ್ಲಿನ ಶಾಲೆಯೊಂದರಲ್ಲಿ ಸಂಗೀತ ಶಿಕ್ಷಕರಾಗಿ ತಮ್ಮ ವೃತ್ತಿಗೆ ನಾಂದಿ ಹಾಡಿದರು. ಅಲ್ಲಿ ಕೆಲವು ದಿನ ಸಂಗೀತ ಶಿಕ್ಷಕರಾಗಿ ಕೆಲಸಮಾಡಿ ಮುಂದೆ 1953ರಲ್ಲಿ ಧಾರವಾಡಕ್ಕೆ ಬಂದರು. ಅಂದು ಅ. ಕೆ. ಗರ್ಲ್ಸ್ ಸ್ಕೂಲ್ ಆಗಿದ್ದ ಇಂದಿನ ಕರ್ನಾಟಕ ಯುನಿವರ್ಸಿಟಿ ಪಬ್ಲಿಕ್ ಸ್ಕೂಲಿನಲ್ಲಿ ಪೂರ್ಣಾವಧಿ ಸಂಗೀತ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ೧೯೬೪ರಿಂದ ೧೯೭೫ರವರೆಗೆ ಅಲ್ಲಿ ಸಂಗೀತ ಶಿಕ್ಷಕರಾಗಿ ಮುಂದೆ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಮಹಾವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾಗಿ 1982ರವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಆರ್. ಪಿ. ಹೂಗಾರರ ಕಾರ್ಯದಕ್ಷತೆ ಮತ್ತು ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಳನ್ನು ಪರಿಗಣಿಸಿದ ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಸ್ನಾತಕೋತ್ತರ ವಿಭಾಗದ ಗೌರವ ಪ್ರಾಧ್ಯಾಪಕ ಹುದ್ಧೆ ನೀಡಿತು. ಹೂಗಾರರು ೧೯೮೨ರಿಂದ ೧೯೮೫ರ ವರೆಗೆ ಮೂರುವರ್ಷ ಅಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೫೦ರಲ್ಲಿ ಧಾರವಾಡದಲ್ಲಿ ಆಕಾಶವಾಣಿ ಕೆಂದ್ರ ಸ್ಥಾಪನೆಗೊಂಡಂದಿನಿಂದಲೂ ಪ್ರೊ. ಆರ್. ಪಿ. ಹೂಗಾರರ ಹಾಡುಗಾರಿಕೆ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು. ಖ್ಯಾತ ಗಾಯಕ ಪಂಡಿತ ಗುರುರಾಜ ದೇಶಪಾಂಡೆಯವರೊಂದಿಗೆ ಇವರು ಆಕಾಶವಾಣಿಯ ಧ್ವನಿಪರೀಕ್ಷಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದರು. ಕೆಲವು ರೂಪಕಗಳಿಗೆ ಸಂಗೀತ ಸಂಯೋಜಿಸಿದರು. ಆಕಾಶವಾಣಿಯಲ್ಲಿ ಸಂಗೀತ ಪಾಠವನ್ನೂ ನಡೆಸಿಕೊಟ್ಟರು. ಪ್ರೊ. ಆರ್. ಪಿ. ಹೂಗಾರರು ಅನೇಕ ಜನ ಶಿಷ್ಯರನ್ನು ತಯಾರು ಮಾಡಿದ್ದಾರೆ. ಅಂತಹವರಲ್ಲಿ ಗೀತ ಜಾವಡೇಕರ, ಜಯಶ್ರೀ ರಂಗನಾಥ, ಪ್ರೊ. ಭಾರತಿ ಮೇಸ್ತಾ, ಪ್ರೊ. ಸಿದ್ಧರಾಮಯ್ಯ ಮಠಪತಿ ಹಾಗೂ ಪುತ್ರ ಡಾ. ವೀರಣ್ಣ ಹೂಗಾರ ಪ್ರಮುಖರಾಗಿದ್ದಾರೆ.

ವಿದಾಯ[ಬದಲಾಯಿಸಿ]

ಅಪಾರ ಸಾಧಕರಾಗಿದ್ದರೂ ಎಲೆಮರೆಯ ಕಾಯಿಯಂತಿದ್ದು ಸರಳ ಸಜ್ಜನಿಕೆಗೆ ಹೆಸರಾಗಿದ್ದ ಪ್ರೊ. ಆರ್. ಪಿ. ಹೂಗಾರರು ನವೆಂಬರ್ ೧೪, ೧೯೯೦ರ ವರ್ಷದಲ್ಲಿ ಈ ಲೋಕವನ್ನಗಲಿದರು. ಅವರ ನೆನಪಿಗಾಗಿ ಪ್ರತೀವರ್ಷ ಅವರ ಅಭಿಮಾನಿ ಬಳಗದಿಂದ ನವೆಂಬರ್ ಮಾಸದಲ್ಲಿ ಸಂಗೀತ ಕಾರ್ಯಕ್ರಮ ಮತ್ತು ಸಂಗೀತ ಸಾಧಕರನ್ನು ಗೌರವಿಸುವ ಶ್ಲಾಘನೀಯ ಕಾರ್ಯ ನೆರವೇರುತ್ತಾ ಬಂದಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಆರ್‌.ಪಿ.ಹೂಗಾರ ಸಂಗೀತದ ಮೇರು ಪ್ರತಿಭೆ : ಉದಯವಾಣಿಯಲ್ಲಿ ಲೇಖನ[ಶಾಶ್ವತವಾಗಿ ಮಡಿದ ಕೊಂಡಿ]
  2. ಅನುರಾಧಾ ಆಲಾಪನ : ಪ್ರಜಾವಾಣಿ[ಶಾಶ್ವತವಾಗಿ ಮಡಿದ ಕೊಂಡಿ]
  3. ಹಿಂದುಸ್ತಾನಿ ಸಂಗೀತ ಹಾಗೂ ಸಮಾಜ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.
  4. ಧಾರವಾಡ ಮೂಲದ 'ಪುಷ್ಪ ದೀಪಿಕಾ'ದಲ್ಲಿ ಮೇ ೨೦೧೨ ಸಂಚಿಕೆಯಲ್ಲಿನ ಲೇಖನ
  5. ಗೀತಾ ಜಾವೇದ್ಕರ್

ಹೊಟ್ಟೆ ತುಂಬಿಸದ ಈಚಲು ಬುಟ್ಟಿ

ಯಲಬುರ್ಗಾ: ಹಲವು ವರ್ಷಗಳಿಂದ ತಯಾರಿಸಿ ಮಾರುತ್ತಿದ್ದ ಈಚಲು ಬುಟ್ಟಿಗಳು ಈಗ ಪಟ್ಟಣ ಸೇರಿದಂತೆ ತಾಲೂಕಿನ ಮಿಟ್ಟಿ ಮಲ್ಕಾಪುರ ಸಮುದಾಯದ ಹೊಟ್ಟೆ ತುಂಬಿಸುತ್ತಿಲ್ಲ. ಬಣ್ಣ ಬಣ್ಣದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಗ್ರಾಹಕ ಮನಸೋತಿದ್ದರಿಂದ ಇದೀಗ ಈಚಲು ಬುಟ್ಟಿಗೆ ಬೇಡಿಕೆ ಕುಗ್ಗಿದೆ. ಆದರೆ, ಇದನ್ನು ತಮ್ಮ ಮೂಲ ವೃತ್ತಿಯನ್ನಾಗಿಸಿಕೊಂಡ ಹೆಣೆಯುವರ ಬದುಕು ಮಾತ್ರ ಅತಂತ್ರವಾಗಿದೆ.

ನಮ್ಮ ಅಜ್ಜ-ಮುತ್ತಜ್ಜನ ಕಾಲದಿಂದ ಈಚಲು ಬುಟ್ಟಿ ಹೆಣೆಯುವ ಕೆಲಸ ಮಾಡಿಕೊಂಡು ಬಂದಿದ್ರು ಅವಾಗ ಈ ಕೆಲಸಕ್ಕೂ ಭಾರೀ ಡಿಮ್ಯಾಂಡ್ ಇತ್ತು ಎಪ್ಪಾ, ಅದರಲ್ಲಿ ನಮ್ಮ ತಂದೆ-ತಾಯಿ ನಾಲ್ಕು ದುಡ್ಡು ಮಾಡಿಕೊಂಡು ನಮಗ ಸಾಲಿ ಕಲ್ಸಿ ನಮ್ಮ ಲಗ್ನ-ಮುಹೂರ್ತ ಮಾಡಿದ್ದರೂ ಮೊದಲನಿಂದಲೂ ಮೂಲ ಕಸಬು ನಮ್ಮದು, ಹೀಗಾಗಿ ನಾವೂ ಅದನ್ನು ಮಾಡತ್ತಾ ಬಂದಿವ್ರೀ, ಆದರೆ ಈಗ ಬಹಳ ಕಷ್ಟ ಆಗೈತ್ರೀ. ಒಮ್ಮೊಮ್ಮೆ ತಿನ್ನಕ ಹಣ ಸಿಗುವುದು ಕಷ್ಟ ಆಗೈತ್ರಿ, ಇನ್ನೂ ಗಳಿಸೋದು ಎಲ್ಲಿ ದೂರದ ಮಾತು ಎನ್ನುತ್ತಾರೆ ಮಿಟ್ಟಿ ಮಲ್ಕಾಪುರ್ ಕೊರವರ ಕುಟುಂಬಗಳ ನೋವಿನ ದನಿಯದು.

ಪರ್ಯಾಯ ವೃತ್ತಿ ಹೊಂದಿಕೆ ಆಗುತ್ತಿಲ್ಲ:ಮಾರುಕಟ್ಟೆಯಲ್ಲಿ ಬಣ್ಣ-ಬಣ್ಣದ ಪ್ಲಾಸ್ಟಿಕ್ ಬುಟ್ಟಿಗಳದ್ದೇ ಪಾರುಪತ್ಯ. ಹೀಗಾಗಿ ಈಚಲು ಬುಟ್ಟಿಗಳನ್ನು ಕೇಳುವವರೇ ಇಲ್ಲ. ಅನೇಕ ತಲೆಮಾರುಗಳಿಂದ ಇಚಲು ಬುಟ್ಟಿ ಹೆಣೆಯುತ್ತ ಬಂದ ಈ ಸಮುದಾಯಕ್ಕೆ ಪರ್ಯಾಯ ವೃತ್ತಿ ಹೊಂದಿಕೆ ಆಗುತ್ತಿಲ್ಲ. ಸಣ್ಣ ಬುಟ್ಟಿಗೆ ರು. 26, ದೊಡ್ಡದಕ್ಕೆ ರು. 45 ದರ ಇದೆ. ಕಸಬರಿಕೆಯನ್ನೂ ಇವರು ತಯಾರಿಸುತ್ತಿದ್ದು, ಅದರಿಂದ ಪುಡಿಗಾಸು ಸಿಗುತ್ತದೆ ಎನ್ನುತ್ತಾನೆ ನಮ್ಮ ಕರ್ನಾಟಕದ ಕೊರವರ ಆಂಧ್ರದಿಂದ ಕಚ್ಚಾ ಸಂಪನ್ಮೂಲ: ಮನೆಮಂದಿಯಲ್ಲ ಈಚಲು ಬುಟ್ಟಿ ಹೆಣೆಯುತ್ತಿದ್ದರೂ ಗ್ರಾಹಕರು ಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಕೊರಗುತ್ತಾರೆ ನಮ್ಮ ಕುಲಬಂದಾವರು. ಕಚ್ಚಾ ಸಂಪನ್ಮೂಲಕ್ಕೆ ಇವರು ನೆರೆಯ ಆಂಧ್ರಪ್ರದೇಶವನ್ನೇ ನೆಚ್ಚಿಕೊಂಡಿದ್ದಾರೆ. ಕಾಡಿಗೆ ಹೋಗಿ ಪಕ್ಕ ಯಥೇಚ್ಛವಾಗಿ ಇಚಲ ಗಿಡಗಳು ಬೆಳೆಯುತ್ತೇವೆ. 15 ರಿಂದ 25 ಕ್ಕೂ ಹೆಚ್ಚು ಜನರು 2 ತಿಂಗಳ ವರೆಗೆ ಅಲ್ಲಿಯೇ ಉಳಿದು ಗರಿಗಳನ್ನು ಕಟಾವು ಮಾಡಿ ಸಂಗ್ರಹಿಸುತ್ತಾರೆ. ಲಾರಿಯಲ್ಲಿ ಅವುಗಳನ್ನು ಇಲ್ಲಿಗೆ ತರಲು ರು. 20 ಸಾವಿರಕ್ಕೂ ಅಧಿಕ ಖರ್ಚಾಗುತ್ತದೆ. ಕಚ್ಚಾ ಸಾಮಗ್ರಿ ಒಂದು ವರ್ಷದ ವರೆಗೆ ಸಾಕಾಗುತ್ತದೆ ಎನ್ನುತ್ತಾರೆ ದೊಡ್ಡ ಹಂಚ್ಯಾಳಪ್ಪ ಭಜಂತ್ರಿ. ಈಚಲು ಗರಿಗಳನ್ನು ಬಿಸಿಲಿನಲ್ಲಿ ಒಣಗಿಸಿ ಬುಟ್ಟಿ ತಯಾರಿಸಲಾಗುತ್ತಿದೆ. ಮಳೆ ಬಂದು ಗರಿಗಳು ತೋಯ್ದರೆ ಕಪ್ಪಾಗುತ್ತದೆ. ಇದರಿಂದ ತಯಾರಿಸಿದ ಬುಟ್ಟಿಗಳನ್ನು ಯಾರು ಕೊಳ್ಳುವುದಿಲ್ಲ. ಮಳೆಯಲ್ಲಿ ನಾವು ತೋಯ್ದರೂ ಚಿಂತೆಯಿಲ್ಲ, ಈಚಲು ಗರಿಗಳು ಮಾತ್ರ ತೊಯ್ಯಬಾರದು ಎನ್ನುತ್ತಾರೆ ಶರಣವ್ವ ಭಜಂತ್ರಿ.

ಆರ್ಥಿಕ ಸಹಾಯ ಬೇಕಿದೆ: ರೈತರಿಗೆ ಅನುಕೂಲವಾಗುವ ಬುಟ್ಟಿ ತಯಾರಿಸುವುದು ಗ್ರಾಮೀಣ ಕಲೆಯಾಗಿದ್ದು, ಇದಕ್ಕೆ ಸರ್ಕಾರದ ಪ್ರೋತ್ಸಾಹ ಇಲ್ಲದೆ ಕೊರಗುತ್ತಿದೆ. ಪ್ಲಾಸ್ಟಿಕ್ ಬುಟ್ಟಿಗಳಿಂದ ಪರಿಸರ ಹಾಳಾಗಲು ಕಾರಣವಾಗಿದೆ. ಪರಿಸರ ಸ್ನೇಹಿ ಎನಿಸಿದ ಈಚಲು ಬುಟ್ಟಿಗಳಿಗೆ ಆದ್ಯತೆ ನೀಡಬೇಕಿದೆ. ಪರಿಸರ ಸ್ನೇಹಿಯಾಗಿರುವ ಈಚಲು ಬುಟ್ಟಿಗಳನ್ನು ಸರ್ಕಾರ ಖರೀದಿಸಿ ಈ ಕುಟುಂಬಗಳಿಗೆ ನೀಡುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕಿದೆ. ಇದರಿಂದ ಸ್ವಾವಲಂಬಿ ಜೀವನ ನಡೆಸುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರಲು ಸರ್ಕಾರ ಆರ್ಥಿಕ ಸಹಾಯ ಒದಗಿಸಬೇಕಿದೆ. ಅಷ್ಟೇ ಅಲ್ಲ ಈ ಗ್ರಾಮೀಣ ವೃತ್ತಿ ಉಳಿಸಿಕೊಳ್ಳಬೇಕಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಮುದಾಯದ ವೃತ್ತಿಗೆ ಹೆಚ್ಚಿನ ನೆರವನ್ನು ದೊರೆಕಿಸಿಕೊಡಬೇಕೆನ್ನುವುದು ಭಜಂತ್ರಿ ಸಮುದಾಯದವರ ಬೇಡಿಕೆಯಾಗಿದೆ.