ವಿಷಯಕ್ಕೆ ಹೋಗು

ಕೆ. ವೆಂಕಟಲಕ್ಷಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ. ವೆಂಕಟಲಕ್ಷಮ್ಮ
ಜನನಮೇ ೨೯, ೧೯೦೬
ಕಡೂರಿನ ತಂಗಲ ತಾಂಡ್ಯ
ಮರಣಜುಲೈ ೨, ೨೦೦೨
ವೃತ್ತಿಭರತನಾಟ್ಯ ಕಲಾವಿದರು

ಡಾ. ಕೆ. ವೆಂಕಟಲಕ್ಷ್ಮಮ್ಮನವರು (ಮೇ ೨೯, ೧೯೦೬ - ಜುಲೈ ೨, ೨೦೦೨) ಮೈಸೂರು ಶೈಲಿಯ ಭರತನಾಟ್ಯದಲ್ಲಿ ವಿಶ್ವಪ್ರಸಿದ್ಧಿ ಪಡೆದವರು.

ಮೈಸೂರು ಶೈಲಿಯ ಭರತನಾಟ್ಯ ಪ್ರವರ್ತಕರಲ್ಲೊಬ್ಬರಾದ ವೆಂಕಟಲಕ್ಷ್ಮಮ್ಮನವರು ಮೇ ೨೯, ೧೯೦೬ರಂದು ಕಡೂರಿನ 'ತಂಗಲ ತಾಂಡ್ಯ'ದಲ್ಲಿ ಜನಿಸಿದರು. ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡದ್ದರಿಂದ ಅಜ್ಜ, ರಾಮನಾಯಕ ಮತ್ತು ಅಜ್ಜಿಯ ಪೋಷಣೆಯಲ್ಲಿ ಬದುಕು ನಡೆಸಿದರು. ಪ್ರಸಿದ್ಧ ಸಂಸ್ಕೃತ ಉಪಾಧ್ಯಾಯರಾದ 'ಅನಂತ ಜೋಶಿ'ಯವರ ಸಲಹೆಯಂತೆ ಅವರು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದರು. ಎಂಟನೆಯ ತರಗತಿಯವರೆಗೆ ಓದಿದ್ದರು.

ಸಂಗೀತ ಮತ್ತು ನೃತ್ಯಾಭ್ಯಾಸ

[ಬದಲಾಯಿಸಿ]

ವೆಂಕಟಲಕ್ಷಮ್ಮನವರು ಒಂಬತ್ತನೆಯ ವಯಸ್ಸಿನಲ್ಲಿಯೇ ಮೈಸೂರಿನ ನಾಟ್ಯ ಸರಸ್ವತಿ ಎನಿಸಿದ್ದ 'ಜಟ್ಟಿ ತಾಯಮ್ಮ'ನವರ ಬಳಿ ಭರತನಾಟ್ಯ ತರಬೇತಿ ಪಡೆಯಲಾರಂಭಿಸಿದರು. 'ಬಿಡಾರಂ ಕೃಷ್ಣಪ್ಪ 'ಮತ್ತು ಅವರ ಶಿಷ್ಯರಾದ 'ಬಿ. ದೇವೇಂದ್ರಪ್ಪ'ನವರಿಂದ ಶಾಸ್ತ್ರೀಯ ಸಂಗೀತ ಕಲಿತರು.

ಮೈಸೂರು ಶೈಲಿಯ ಭರತನಾಟ್ಯದ ಹಿರಿಮೆ

[ಬದಲಾಯಿಸಿ]

೧೮೧೧ ರಿಂದ ೧೮೬೯ ರವರೆಗೆ ಆಳಿದ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಭರತನಾಟ್ಯದಲ್ಲಿ ‘ಮೈಸೂರಿನದೇ ವಿಶೇಷ ಶೈಲಿ’ ಎಂದು ಪ್ರಸಿದ್ಧಿ ಪಡೆದಿತ್ತು. ನಟುವಾಂಗ ವಾದ್ಯ ಪ್ರದಕ್ಷಿಣೆ, ಸಭಾಪೂಜೆ, ಪ್ರಭು ಪ್ರಶಂಸೆ, ನಂತರ ಕಲಾವಿದೆಯಿಂದ ಪುಷ್ಪಾಂಜಲಿ, ಹಯಗ್ರೀವ ಸ್ತುತಿ, ಸ್ವರಜತಿ, ವರ್ಣ, ಶಬ್ದ, ತಿಲ್ಲಾನಗಳ ಬಳಿಕ ಶ್ಲೋಕ, ಪಂಚಕ, ಪದ, ಜಾವಳಿ ಪ್ರದರ್ಶನ ಮುಂತಾದವುಗಳು ಮೈಸೂರಿನ ಶೈಲಿಯ ವೈಶಿಷ್ಟ್ಯವೆನಿಸಿದ್ದವು. ರಸಾಭಿನಯವೇ ಮೈಸೂರು ಶೈಲಿಯ ಹೆಗ್ಗಳಿಕೆ. ಕನ್ನಡ ಜಾವಳಿಗಳಿಗೆ ವೆಂಕಟಲಕ್ಷ್ಮಮ್ಮನವರು ಅಭಿನಯಿಸುತ್ತಿದ್ದ ರೀತಿ ಚಿರಸ್ಮರಣೀಯವೆನಿಸಿತ್ತು.

ಆಸ್ಥಾನ ವಿದುಷಿಯಾಗಿ

[ಬದಲಾಯಿಸಿ]

ನಾಲ್ವಡಿ ಕೃಷ್ಣರಾಜ ಒಡೆಯರಕಾಲದಲ್ಲಿ ಆಸ್ಥಾನ ವಿದುಷಿಯಾಗಿ ೧೯೩೯ರಲ್ಲಿ ನೇಮಕಗೊಂಡ ವೆಂಕಟಲಕ್ಷಮ್ಮನವರು ೩೦ ವರ್ಷ ಆಸ್ಥಾನ ಕಲಾವಿದರಾಗಿ ಕೀರ್ತಿ ಸಂಪಾದಿಸಿದರು. ಅರಮನೆಯ ಚಾಮುಂಡೇಶ್ವರಿ ಉತ್ಸವ, ನವರಾತ್ರಿಯ ಹತ್ತುದಿವಸ ಮತ್ತು ಮಹಾರಾಜರ ವರ್ಧಂತಿ ಉತ್ಸವಗಳಲ್ಲಿ ಅವರ ನೃತ್ಯ ಕಾರ್ಯಕ್ರಮ ಅವಶ್ಯಕವಾಗಿ ಇರುತ್ತಿತ್ತು.

ನೃತ್ಯ ಗುರುವಾಗಿ

[ಬದಲಾಯಿಸಿ]

ವೆಂಕಟಲಕ್ಷಮ್ಮನವರು ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಕಾಲೇಜಿನ ನೃತ್ಯ ವಿಭಾಗಕ್ಕೆ ರೀಡರ್‌ ಆಗಿ ನೇಮಕಗೊಂಡಿದ್ದರು. ತಾವೇ ಸ್ಥಾಪಿಸಿದ ಭರತ ಕಲಾ ನಿಕೇತನ ಸಂಸ್ಥೆಯಲ್ಲೂ ಅವರು ಶಿಷ್ಯರಿಗೆ ಶಿಕ್ಷಣ ನೀಡುತ್ತಿದ್ದರು. ಅಮೇರಿಕದ ವಿಶ್ವವಿದ್ಯಾಲಯದಿಂದ ಸಹಾ ವಿದ್ಯಾರ್ಥಿಗಳ ತಂಡಗಳು ಅವರಿಂದ ತರಬೇತಿ ಪಡೆಯಲು ಬರುತ್ತಿದ್ದುದುಂಟು. ೭೦-೮೦ರ ಇಳಿವಯಸ್ಸಿನಲ್ಲಿಯೂ ಅವರು ಹಿನ್ನೆಲೆಗಾಯನಕ್ಕೆ ತಕ್ಕಂತೆ ರಸಾಭಿನಯಗಳ ಮಾರ್ಗದರ್ಶನ ನೀಡುತ್ತಿದ್ದರು. ಭಾರತದ ಬಹಳಷ್ಟು ಪ್ರಸಿದ್ಧ ನೃತ್ಯ ಕಲಾವಿದರು ವೆಂಕಟಲಕ್ಷಮ್ಮನವರ ಬಳಿ ಹೆಚ್ಚಿನ ನೃತ್ಯ ಕಲಿಕೆಗೆ ಮತ್ತು ನೃತ್ಯ ಕಲೆಯ ಸೂಕ್ಷ್ಮತೆಗಳ ಅಧ್ಯಯನಕ್ಕೆ ಬರುತ್ತಿದ್ದುದುಂಟು.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ವೆಂಕಟಲಕ್ಷಮ್ಮನವರಿಗೆ ಹಲವಾರು ಗೌರವ ಪ್ರಶಸ್ತಿಗಳು ಸಂದವು.

  • ಅವುಗಳಲ್ಲಿ 'ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್',
  • ರಾಷ್ಟ್ರದ ಪ್ರತಿಷ್ಠಿತ ಪದ್ಮಭೂಷಣ,
  • ೧೯೬೧-೬೨ ರ ಸಾಲಿನ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,
  • ಕೆಂದ್ರ ಸಂಗೀತ ನಾಟಕ ಅಕ್ಯಾಡೆಮಿಯ ಪ್ರಶಸ್ತಿ ಗಳಿಸಿದ್ದಾರೆ.
  • ರಾಜ್ಯೋತ್ಸವ ಪ್ರಶಸ್ತಿ,
  • ಪ್ರತಿಷ್ಠಿತ ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಮ್ಮೇಳನ ಅಧ್ಯಕ್ಷತೆ,
  • ಸಂಗೀತ ಕಲಾ ರತ್ನ ಬಿರುದು,
  • ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ಸಂಗೀತ ನೃತ್ಯ ಅಕಾಡೆಮಿಗಳು ನಿರ್ಮಿಸಿದ ಸಾಕ್ಷ್ಯಚಿತ್ರಗಳು ಪ್ರಮುಖವಾದವು.
  • ಭರತನಾಟ್ಯ ನೃತ್ಯ ಕಲಾವಿದರಲ್ಲಿ ಯಾವಾಗಲೂ ಪ್ರಥಮ ಸ್ಥಾನದಲ್ಲಿದ್ದರು
  • ಮೈಸೂರು ವಿಶ್ವವಿದ್ಯಾಲಯದ ಸಂಗೀತ-ನೃತ್ಯ ವಿಭಾಗದ ಸ್ಥಾಪನೆಗೆ ಕಾರಣರಾದ ಡಾ. ವೆಂಕಟಲಕ್ಷ್ಮಮ್ಮನವರು, ವಿಭಾಗದ ಪ್ರಾಧ್ಯಾಪಕಿಯಾಗಿ ದುಡಿದು, ಅಪಾರ ಶಿಷ್ಯರನ್ನು ತಯಾರುಗೊಳಿಸಿದ್ದಾರೆ.

ವಿದಾಯ

[ಬದಲಾಯಿಸಿ]

ಈ ಮಹಾನ್ ಕಲಾವಿದೆ ವೆಂಕಟಲಕ್ಷಮ್ಮನವರು, ಜುಲೈ ೨, ೨೦೦೨ರ ವರ್ಷದಲ್ಲಿ ಈ ಲೋಕವನ್ನಗಲಿದರು.