ಬಳ್ಳಾರಿ ರಾಘವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಳ್ಳಾರಿ ರಾಘವ
ಜನನಆಗಸ್ಟ್ ೨, ೧೮೮೦
ಮರಣಏಪ್ರಿಲ್ ೧೭, ೧೯೪೬
ಉದ್ಯೋಗನಾಟಕಕಾರರು, ವಕೀಲರು

ಬಳ್ಳಾರಿ ರಾಘವ (ಆಗಸ್ಟ್ ೨, ೧೮೮೦ - ಏಪ್ರಿಲ್ ೧೭, ೧೯೪೬) ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ

ಜೀವನ[ಬದಲಾಯಿಸಿ]

ಸುಪ್ರಸಿದ್ಧ ರಂಗ ಕಲಾವಿದ, ನಾಟಕಕಾರ ರಾಘವ ಅವರು ಆಗಸ್ಟ್ 2, 1880ರ ವರ್ಷದಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ತಂದೆ ನರಸಿಂಹಾಚಾರ್ಯರು ಮತ್ತು ತಾಯಿ ಶೇಷಮ್ಮನವರು. ಬಳ್ಳಾರಿಯಲ್ಲಿ ಎಫ್‌.ಎ ವಿದ್ಯಾಭ್ಯಾಸವನ್ನು ಪೂರೈಸಿದ ರಾಘವರು ಮುಂದೆ ಮದರಾಸಿನಲ್ಲಿ ಬಿ.ಎ, ಬಿ.ಎಲ್‌ ಪದವಿ ಗಳಿಸಿದರು. ಧರ್ಮಾವರಂ ರಾಮಕೃಷ್ಣಾಚಾರ್ಯರ ಬಳಿ ವಕೀಲಿ ವೃತ್ತಿ ತರಬೇತಿ ಪಡೆದು 1906ರಲ್ಲಿ ಸ್ವತಂತ್ರ ವಕೀಲರಾಗಿ ಪ್ರಸಿದ್ಧಿ ಗಳಿಸಿದರು. ಮದರಾಸಿನಲ್ಲಿದ್ದಾಗಲೇ ಪಾರಸಿ ಥಿಯೆಟ್ರಿಕಲ್ ಕಂಪನಿಯ ನಾಟಕಗಳನ್ನು ನೋಡುವ ಹವ್ಯಾಸ ಅವರಲ್ಲಿ ಮೂಡಿತ್ತು. ನಟ ದಾದಾಬಾಯಿ ಮಿಸ್ತ್ರಿಯವರ ಅಭಿನಯ ಅವರ ಮೇಲೆ ಅಪಾರ ಪ್ರಭಾವ ಬೀರಿತ್ತು. ರಾಘವರು ಸ್ವಯಂ ಮೊದಲು ಅಭಿನಯಿಸಿದ ನಾಟಕ ‘ಡಾಕ್ಟರ್ ಅಂಡ್‌ ಅಪಾಥಿಕರಿ’.

ರಂಗಭೂಮಿಯಲ್ಲಿ[ಬದಲಾಯಿಸಿ]

ಮುಂದೆ ರಾಘವರು ಬಳ್ಳಾರಿಯಲ್ಲಿ ಶಾಮರಾವ್‌ ವಟ್ಟಂ ಸೋದರರ ನೆರವಿನಿಂದ ಶೇಕ್ಸ್ ಪಿಯರ್ ಕ್ಲಬ್‌ ಪ್ರಾರಂಭಿಸಿ ಹಲವಾರು ಇಂಗ್ಲಿಷ್‌ ನಾಟಕಗಳಲ್ಲಿ ಅಭಿನಯಿಸತೊಡಗಿದರು. ಅವರು ಧರ್ಮಾವರಂ ರಾಮಕೃಷ್ಣಾಚಾರ್ಯ, ಕೋಲಾಚಲಂ ಶ್ರೀನಿವಾಸರಾಯರು ಬರೆದು ನಿರ್ದೇಶಿಸುತ್ತಿದ್ದ ಸರಸ ವಿನೋದಿನಿ, ಸುಮನೋರಮ ಸಭಾ ಸಂಸ್ಥೆಗಳಲ್ಲಿ ಪಾತ್ರಧಾರಿಯಾಗಿದ್ದರು. ವಿಜಯನಗರದ ಪತನ ನಾಟಕದಲ್ಲಿ ರಾಘವರು ನಿರ್ವಹಿಸಿದ ಪಠಾನ್‌ ರುಸ್ತುಮ್ ಪಾತ್ರ ಅವರಿಗೆ ಅಪಾರ ಜನ ಮೆಚ್ಚುಗೆ ತಂದುಕೊಟ್ಟಿತು. ಹರಿಶ್ಚಂದ್ರ, ದಶರಥ, ರಾವಣ ಮುಂತಾದ ಪೌರಾಣಿಕ ಪಾತ್ರಗಳಿಗೆ ಅವರು ಜೀವ ತುಂಬಿದ ಅಭಿನಯ ನೀಡುತ್ತಿದ್ದರು. ಕನ್ನಡದ ಕೈಲಾಸಂ, ಮಾಸ್ತಿ, ಅ.ನ.ಕೃ. ಮೊದಲಾದವರ ನಾಟಕಗಳನ್ನೂ ಪ್ರಯೋಗಿಸಿ ಹೆಸರು ಮಾಡಿದರು. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳೆಲ್ಲದರ ನಾಟಕಗಳಲ್ಲಿ ಅವರು ಪ್ರಸಿದ್ಧಿ ಪಡೆದಿದ್ದರು.

ಶ್ರೇಷ್ಠರಿಂದ ಮೆಚ್ಚುಗೆ[ಬದಲಾಯಿಸಿ]

೧೯೨೮ರಲ್ಲಿ ರಾಘವರು ಇಂಗ್ಲೆಂಡಿಗೆ ಹೋಗಿ ರಂಗಭೂಮಿ ಚಟುವಟಿಕೆಗಳ ಅಧ್ಯಯನ ನಡೆಸಿದರು. ಲಾರೆನ್ಸ್ ಆಲಿವಿಯರ್ ಮತ್ತು ಚಾರ್ಲ್ಸ್ ಲಾಟನ್ ಮುಂತಾದ ಶ್ರೇಷ್ಠರೊಂದಿಗೆ ಅವರು ಕೆಲಸ ಮಾಡಿದರು. ಅವರು ಬರ್ನಾಡ್‌ ಷಾ ಅವರ ಮುಂದೆಯೇ ಶೇಕ್ಸ್ ಪಿಯರ್ ನಾಟಕಗಳನ್ನು ಅಭಿನಯಿಸಿ ಪ್ರಶಂಸೆ ಪಡೆದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸ್ತ್ರೀಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದ ಕಾಲದಲ್ಲಿ ಸ್ತ್ರೀಯರೇ ಅಭಿನಯಿಸುವಂತೆ ಮಾಡಿದ ಕೀರ್ತಿ ರಾಘವರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಯವರ ಮುಂದೆ ದೀನ ಬಂಧು ಕಬೀರ್ ನಾಟಕವನ್ನು ಪ್ರದರ್ಶಿಸಿ ಅವರು ಮೆಚ್ಚುಗೆ ಪಡೆದಿದ್ದರು.

ಚಲನಚಿತ್ರಗಳಲ್ಲಿ[ಬದಲಾಯಿಸಿ]

ದ್ರೌಪದಿ ಮಾನ ಸಂರಕ್ಷಣ, ರೈತ ಬಿಡ್ಡು, ಚಂಡಿಕಾ ಮುಂತಾದ ಚಲನಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.

ಸಂಘಟನೆಗಳಲ್ಲಿ[ಬದಲಾಯಿಸಿ]

ರಾಘವರು ಬೆಂಗಳೂರಿನ ಅಮಚೂರ್ ಡ್ರಮ್ಯಾಟಿಕ್‌ ಅಸೋಸಿಯೇಷನ್‌ ಸಂಸ್ಥೆಯ ನೇತಾರರಾಗಿ ಮುಂಬಯಿ, ಕೋಲ್ಕತ್ತಾ, ಸಿಮ್ಲಾಗಳಲ್ಲಿ ಬಹಳಷ್ಟು ನಾಟಕಗಳನ್ನು ಪ್ರದರ್ಶಿಸಿದ್ದರುಅವರು ಆಂಧ್ರನಾಟಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸಹಾ ಸೇವೆ ಸಲ್ಲಿಸಿದ್ದರು.

ಗೌರವಗಳು[ಬದಲಾಯಿಸಿ]

ಭಾರತ ಸರ್ಕಾರದಿಂದ ಅವರಿಗೆ ರಾವ್‌ ಬಹದ್ದೂರ್ ಪ್ರಶಸ್ತಿ ಸಂದಿತ್ತು. ನಾಟಕ ಹಾಗೂ ಕಲೆಗಳು ಸಾಮಾ¬ಜಿಕ ಉದ್ದೇಶಗಳಿಗೆ ಸ್ಪಂದಿಸಬೇಕೆಂಬ ಅಭಿಮತ ಹೊಂದಿದ್ದ ಅಪ್ರತಿಮ ಕಲಾವಿದರಾಗಿದ್ದ ಬಳ್ಳಾರಿ ರಾಘವ ಅವರ ನೆನಪಿನ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು ೧೯೮೧ರ ಅಕ್ಟೋಬರ್ ೩೧ರಂದು ಅಂಚೆ ಚೀಟಿಯನ್ನು ಹೊರತಂದಿತ್ತು.

ವಿದಾಯ[ಬದಲಾಯಿಸಿ]

ಈ ಮಹಾನ್ ಕಲಾತಪಸ್ವಿ ಬಳ್ಳಾರಿ ರಾಘವರು ಏಪ್ರಿಲ್ 16, 1946ರಂದು ಈ ಲೋಕವನ್ನಗಲಿದರು.

ಮಾಹಿತಿ ಕೃಪೆ[ಬದಲಾಯಿಸಿ]

ಕಣಜ