ವಿಷಯಕ್ಕೆ ಹೋಗು

ವಿಶ್ವ ಜನಸಂಖ್ಯಾ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
World Population Day
ದಿನಾಂಕJuly 11
ಆವರ್ತನannual
Distribution of global population increase in 2016.[]

ಜುಲೈ ೧೧ರ ದಿನಾಂಕವನ್ನೂ 'ವಿಶ್ವ ಜನಸಂಖ್ಯಾ ದಿನ'ವೆಂದು ಕರೆಯಲಾಗುತ್ತಿದೆ. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ ವಿಶ್ವಸಂಸ್ಥೆ ೧೯೮೭ರ ವರ್ಷದಲ್ಲಿ ಈ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಆ ದಿನದಂದು ವಿಶ್ವ ಜನಸಂಖ್ಯೆ 5 ಬಿಲಿಯನ್ ತಲುಪಿತಂತೆ. ಹೀಗೆ ಈ ದಿನವನ್ನು ಆಚರಿಸುವುದರ ಮೂಲಕ ವಿಶ್ವದಲ್ಲಿ ಜನಸಂಖ್ಯೆಯ ಕುರಿತಾದ ವಿವಿಧ ಸಮಸ್ಯೆಗಳ ಕುರಿತಾಗಿ ವಿಶ್ವ ಸಮುದಾಯದ ಗಮನ ಸೆಳೆಯುವುದು ಈ ಆಚರಣೆಯ ಪ್ರಮುಖ ಉದ್ದೇಶ.

ಜನಸಂಖ್ಯಾ ಸಮಸ್ಯೆ

[ಬದಲಾಯಿಸಿ]

ವಿಶ್ವದ ಬಹುತೇಕ ಕಡೆಗಳಲ್ಲಿ ಕಳೆದ ಶತಮಾನದಲ್ಲಿ ಕಂಡ ಜನಸಂಖ್ಯೆಯ ಹೆಚ್ಚಳದಲ್ಲಿನ ತೀವ್ರಗತಿ ಇಂದು ಜಗತ್ತಿನಲ್ಲಿ ಲಭ್ಯವಿರುವ ಸೀಮಿತ ಸಂಪನ್ಮೂಲಗಳ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿವೆ. ಐಷಾರಾಮಿ ಜೀವನದತ್ತ ಚಿಂತಿತ ಇಂದಿನ ವೈಜ್ಞಾನಿಕ ಯುಗದಲ್ಲಂತೂ ಇದರ ಪರಿಣಾಮ ಹೇಳತೀರದ್ದಾಗಿದೆ. ಚರಿತ್ರೆಯಲ್ಲಿ ಹಿಂದೆ ಜನನ ಸಂಖ್ಯೆಯ ತೀವ್ರತೆಯ ಜೊತೆ ಜೊತೆಗೆ ಮರಣ ಸಂಖ್ಯೆಯ ತೀವ್ರತೆಯೂ ಹೆಚ್ಚಿತ್ತು. ಮುಂದುವರಿದ ವಿಜ್ಞಾನ ಯುಗದಲ್ಲಿ ಮನುಷ್ಯನ ಆಯುಷ್ಯದ ಹೆಚ್ಚಳ ಇರುವ ಜನಾಂಗದ ಬದುಕನ್ನು ಹೆಚ್ಚಿಸುವುದರ ಜೊತೆಗೆ ಜನನ ಸಂಖ್ಯೆಯನ್ನೂ ಹೆಚ್ಚಿಸುತ್ತಾ ನಡೆದಿದೆ.

ವಿವಿಧ ಸವಾಲುಗಳು

[ಬದಲಾಯಿಸಿ]

ಮನುಷ್ಯನ ವೈಜ್ಞಾನಿಕ ತಿಳುವಳಿಕೆ ಹೆಚ್ಚಿದಂತೆಲ್ಲಾ ಈ ಕುರಿತು ಹಲವಾರು ವಿಚಿತ್ರ ಪರಿಸ್ಥಿತಿಗಳೂ ತಲೆದೋರತೊಡಗಿವೆ. ಒಂದೆಡೆ ವಿದ್ಯಾವಂತ ಜನಾಂಗಗಳಲ್ಲಿ ನಮಗೆ ಜವಾಬ್ಧಾರಿಗಳು ತಾಪತ್ರಯಗಳು ಬೇಡ, ಅದಕ್ಕೇ ನಮಗೆ ಮಕ್ಕಳೂ ಬೇಡ ಎಂಬ ಮನೋಭಾವಗಳು, ಕೆಲವು ಸಮಾಜಗಳಲ್ಲಿ ಜನಸಂಖ್ಯಾ ಬೆಳವಣಿಗೆಯನ್ನೇ ಇಲ್ಲವಾಗಿಸುವುತ್ತ ನಡೆದಿವೆ. ಮತ್ತೊಂದೆಡೆ ಕೆಲವು ಸಮಾಜಗಳು ಭ್ರೂಣ ಹಂತದಲ್ಲಿನ ಲಿಂಗ ನಿರ್ಧಾರಿತ ಕ್ರಮದಿಂದ ಜನನ ನಿಯಂತ್ರಣದ ತೀವ್ರವಾದಿ ಕ್ರಮಕ್ಕೆ ಎಡೆ ನೀಡಿ ಮಾನವ ಜನಾಂಗದ ಮಾನವೀಯ ಸಂಸ್ಕಾರ ಮತ್ತು ಮಾನವ ಸಮುದಾಯದ ಏಳ್ಗೆಯಲ್ಲಿರಬೇಕಾದ ಸಮತೋಲನಕ್ಕೇ ಪೆಟ್ಟು ನೀಡುವ ಕ್ರಮಕ್ಕೆ ಕೈ ಹಾಕಿವೆ. ಇವೆಲ್ಲವುಗಳ ಜೊತೆ ಜೊತೆಯಲ್ಲಿ ಹೆಚ್ಚಿನ ಜನಗಳಲ್ಲಿ ಇನ್ನೂ ತುಂಬಿ ತುಳುಕುತ್ತಿರುವ ಬಡತನದಿಂದ ಕೂಡಿದ ಅಜ್ಞಾನ, ಮೌಢ್ಯಯುತ ಧಾರ್ಮಿಕ ಶ್ರದ್ಧೆ, ಅಪಕ್ವ ಚಾಪಲ್ಯತೆ ಮುಂತಾದ ಕಾರಣಗಳು ಜನಸಂಖ್ಯೆಯ ಏರಿಕೆ ನಿರಂತರವಾಗಿ ಏರುಮುಖದತ್ತಲೇ ಇರುವಂತೆ ಮಾಡಿದೆ.

ವಿಶ್ವದ ಒಟ್ಟಾರೆ ಜನಸಂಖ್ಯೆ

[ಬದಲಾಯಿಸಿ]

೧೯೮೬ರ ವರ್ಷದಲ್ಲಿ ೫೦೦ ಕೋಟಿ, ೧೯೯೮ರಲ್ಲಿ ೬೦೦ ಕೋಟಿ, ೨೦೧೧ರಲ್ಲಿ ೭೦೦ ಕೋಟಿ ಇದ್ದು ಇದೀಗ ೭೨೦ಕೋಟಿಗಳನ್ನು ದಾಟಿದೆ. ಇದೇ ಮುಂದುವರಿದ ಗತಿಯಲ್ಲಿ ಇದು ೨೦೨೪ರ ವೇಳೆಗೆ ೮೦೦ ಕೋಟಿ, ೨೦೩೯ರ ವೇಳೆಗೆ ೯೦೦ ಕೋಟಿ ತಲುಪಿ ೨೦೬೧ರ ವರ್ಷದಲ್ಲಿ ೧೦೦೦ ಕೋಟಿಯನ್ನು ತಲುಪುತ್ತದೆ ಎಂಬುದು ಸಂಖ್ಯಾಶಾಸ್ತ್ರಜ್ಞರ ಊಹೆಯಾಗಿದೆ.

ಹೆಚ್ಚಿನ ಜನಸಂಖ್ಯೆಯ ಹತ್ತು ದೇಶಗಳು

[ಬದಲಾಯಿಸಿ]

ವಿಶ್ವದ ಹೆಚ್ಚು ಜನಸಂಖ್ಯೆಯುಳ್ಳ ದೇಶಗಳು ಇಂತಿವೆ: ಚೀನಾ ೧೩೫ ಕೋಟಿ, ಭಾರತ ೧೨೦ ಕೋಟಿ, ಅಮೆರಿಕ ೩೨ ಕೋಟಿ, ಇಂಡೋನೇಷ್ಯಾ ೨೫ ಕೋಟಿ, ಬ್ರೆಜಿಲ್ ೨೦ ಕೋಟಿ, ಪಾಕಿಸ್ಥಾನ ೧೯ ಕೋಟಿ, ನೈಜೀರಿಯಾ ೧೮ ಕೋಟಿ, ಬಾಂಗ್ಲಾದೇಶ ೧೬ ಕೋಟಿ, ರಷ್ಯಾ ೧೪ ಕೋಟಿ, ಜಪಾನ್ ೧೩ ಕೋಟಿ.

ನಿಲ್ಲಲಿಕ್ಕೆ ಜಾಗವಿದ್ದರೆ ಸಾಕೆ?

[ಬದಲಾಯಿಸಿ]

ಜನಸಂಖ್ಯೆ ಎಷ್ಟಾದರೇನು ನಮ್ಮ ಭುವಿ ಪುಷ್ಪಕ ವಿಮಾನದಂತಿದೆ ಎಂದು ನಾವು ಸುಮ್ಮನಿರುವಂತಿಲ್ಲ. ಕಾರಣ ನಾವು ಪ್ರತಿಯೊಬ್ಬರಿಗೆ ಇರಲಿಕ್ಕೆ ಎಷ್ಟು ಜಾಗ ಬೇಕು ಎಂಬ ನಿಟ್ಟಿನಲ್ಲಿ ಮಾತ್ರ ಭೂಮಿಯ ಜಾಗವನ್ನು ಪರಿಗಣಿಸುವಂತಿಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಆಹಾರ ಪೂರೈಸಲಿಕ್ಕಾಗಿ ಹಲವಾರು ಎಕರೆಗಳ ಫಲವತ್ತಾದ ಭೂಮಿ ಬೇಕಾಗುತ್ತದೆ, ಶುದ್ಧ ಜಲ ಬೇಕಾಗುತ್ತದೆ, ಜೊತೆಗೆ ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಹಲವಾರು ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳುವ ಅಗತ್ಯತೆಗಳಿರುತ್ತವೆ.

ಜನಸಂಖ್ಯೆ ಬೆಳೆಯುತ್ತಿಲ್ಲವೆ?

[ಬದಲಾಯಿಸಿ]

ಬಹಳಷ್ಟು ಜನಗಳ ಅಭಿಪ್ರಾಯದಲ್ಲಿ ವಿಶ್ವ ಜನಸಂಖ್ಯೆ ಬೆಳೆಯುತ್ತಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಆದರೆ ವಿಶ್ವ ಜನಸಂಖ್ಯಾ ನಿಯಂತ್ರಣದ ಕುರಿತಾದ ಚಿಂತನಾ ಮಂಡಳಿಯ ಪ್ರಕಾರ ನಮ್ಮ ವಿಶ್ವದ ಜನಸಂಖ್ಯೆ ನಿರಂತರ ಏರುತ್ತಲೇ ಇದೆ. ಅದು ನೀಡುವ ಮಾಹಿತಿ ಇಂತಿದೆ: ಪ್ರತಿ ನಿಮಿಷಕ್ಕೆ ೧೬೦, ಒಂದು ಗಂಟೆಗೆ ೯,೬೦೦, ಒಂದು ದಿನಕ್ಕೆ ೨,೩೦,೦೦೦, ವಾರವೊಂದಕ್ಕೆ ೧೬ ಲಕ್ಷ, ವರ್ಷವೊಂದಕ್ಕೆ ೮.೪ ಕೋಟಿ ಜನಸಂಖ್ಯೆ ಇಂದೂ ಹೆಚ್ಚುತ್ತಲೇ ಇದೆ.

ಸಾಮಾಜಿಕ ಜವಾಬ್ಧಾರಿ

[ಬದಲಾಯಿಸಿ]

ಈ ಜನಸಂಖ್ಯೆಯ ಏರಿಕೆ ಬಹುತೇಕವಾಗಿ ಬಡತನ, ಅಜ್ಞಾನ, ಮೌಢ್ಯಯುತ ಧಾರ್ಮಿಕ ಶ್ರದ್ಧೆ, ಅಪಕ್ವ ಚಾಪಲ್ಯತೆ ಮುಂತಾದವುಗಳು ರಾರಾಜಿಸುತ್ತಿರುವ ದೇಶಗಳಲ್ಲೇ ಹೆಚ್ಚಾಗಿರುವುದು ಕಂಡುಬರುತ್ತಿವೆ. ಇದೇ ಸಮಯದಲ್ಲಿ ಮುಂದುವರಿದ ದೇಶಗಳಲ್ಲಿ ನಡೆಯುತ್ತಿರುವ ಅಪಕ್ವ ಅಮಾನವೀಯ ಜನಸಂಖ್ಯಾ ನಿಯಂತ್ರಣ ಕ್ರಮಗಳು ಸರಿ ಎನ್ನುವಂತಿಲ್ಲ. ನಮ್ಮ ಮಕ್ಕಳನ್ನು ಜವಾಬ್ದಾರಿಯುತವಾಗಿ ಆಹಾರ, ಆರೋಗ್ಯ ಜ್ಞಾನಕೊಟ್ಟು ಸಾಕುತ್ತೇವೆ, ಸಮಾಜಕ್ಕೆ ಹೆಚ್ಚು ಮಕ್ಕಳನ್ನು ಕೊಟ್ಟು ಭಾರ ಹೆಚ್ಚಿಸುವುದಿಲ್ಲ, ಲಿಂಗ ಭೇದವಿಲ್ಲದೆ ಮಾನವೀಯ ನೆಲೆಗಟ್ಟಿನಲ್ಲಿ ಜನಸಂಖ್ಯೆಯ ನಿಯಂತ್ರಣಗಳನ್ನು ಅಳವಡಿಸುತ್ತೇವೆ, ಯಾವುದೇ ಧರ್ಮ, ಜಾತಿ ಭೇದಗಳಿಲ್ಲದೆ ಹೆಚ್ಚು ಮಕ್ಕಳಾಗದಂಥಹ ವ್ಯವಸ್ಥಾತ್ಮಕ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಜನಸಂಖ್ಯೆ ಹೆಚ್ಚಳವಾಗದಂತೆ ನಿಗಾವಹಿಸುತ್ತೇವೆ ಎಂಬ ಜವಾಬ್ಧಾರಿ ಈ ಪ್ರಪ್ರಂಚದಲ್ಲಿನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಆಗಬೇಕಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Population by Country". Retrieved April 22, 2017.


ಕೊಂಡಿಗಳು

[ಬದಲಾಯಿಸಿ]

ವಿಶ್ವ ಜನಸಂಖ್ಯಾ ದಿನ Archived 2014-07-20 ವೇಬ್ಯಾಕ್ ಮೆಷಿನ್ ನಲ್ಲಿ.