ವಿಷಯಕ್ಕೆ ಹೋಗು

ಎಚ್. ಟಿ. ಸಾಂಗ್ಲಿಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಚ್. ಟಿ. ಸಾಂಗ್ಲಿಯಾನ
Bornಜೂನ್ ೧, ೧೯೪೨
ಐಸಾವಾಲ್, ಮಿಜೋರಾಂ
Occupationಪ್ರಾಮಾಣಿಕತೆ ದಕ್ಷತೆಗಳಿಗೆ ಹೆಸರಾದ ನಿವೃತ್ತ ಮಹಾ ಪೋಲೀಸ್ ಅಧಿಕಾರಿಗಳು

ಎಚ್. ಟಿ. ಸಾಂಗ್ಲಿಯಾನ (ಜೂನ್ ೧, ೧೯೪೨) ಕರ್ನಾಟಕದ ಪೋಲೀಸ್ ಅಧಿಕಾರಿಗಳಾಗಿ ದಕ್ಷತೆ, ಪ್ರಾಮಾಣಿಕತೆಗಳಿಗೆ ಹೆಸರಾದವರು.

ನಮ್ಮ ನಾಡಿನ ಪ್ರಸಿದ್ಧ ಪೋಲೀಸ್ ಅಧಿಕಾರಿಗಳಾಗಿ ಹೆಸರು ಮಾಡಿದ ಸಾಂಗ್ಲಿಯಾನ ಅವರು ಜನಿಸಿದ ದಿನ ಜೂನ್ ೧, ೧೯೪೨. ಮಿಜೋರಾಂ ಪ್ರದೇಶದಿಂದ ಬಂದ ಎಚ್. ಟಿ. ಸಾಂಗ್ಲಿಯಾನ ಅವರು 1967ರ ಭಾರತೀಯ ಪೋಲಿಸ್ ಸೇವೆಯ ತಂಡದಿಂದ ಕರ್ನಾಟಕವನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ಬಂದವರು.

ಪೋಲೀಸ್ ಸೇವೆಯಲ್ಲಿ

[ಬದಲಾಯಿಸಿ]

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ ಸಾಂಗ್ಲಿಯಾನ ಮುಂದೆ ಶಿವಮೊಗ್ಗೆ, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಸೂಪರಿಂಟೆಂಡೆಂಟ್ ಆದರು. ನಮ್ಮ ಸಿನಿಮಾ ಹೀರೋಗಳು ಪ್ರಾಮಾಣಿಕ ಪೋಲೀಸ್ ಅಧಿಕಾರಿಗಳಾಗಿ ಡಿಶುಂ ಡಿಶುಂ ಪಾತ್ರಗಳಲ್ಲಿ ಜನಪ್ರಿಯರಾದ ಸಾಕಷ್ಟು ನಿದರ್ಶನಗಳಿವೆ. ನಿಜ ಜೀವನದ ಪೋಲೀಸ್ ಅಧಿಕಾರಿಗಳು ಜನಸಾಮಾನ್ಯರ ಕಣ್ಣಲ್ಲಿ ಜನಪ್ರಿಯರಾಗಿರುವ ಪೋಲೀಸ್ ಅಧಿಕಾರಿಗಳ ಪಟ್ಟಿಯಲ್ಲಿ ಸಾಂಗ್ಲಿಯಾನ ಪ್ರಮುಖರು. ಅಂದಿನ ದಿನಗಳಲ್ಲಿ ಸಾಂಗ್ಲಿಯಾನ ಅವರನ್ನು ವರ್ಣರಂಜಿತ ಚಲನಚಿತ್ರ ನಾಯಕನಂತೆ ಹಲವು ಕತೆಗಳೊಂದಿಗೆ ಬಣ್ಣಿಸುವುದು ಕಾಣಬರುತ್ತಿತ್ತು. ಸಾಂಗ್ಲಿಯಾನ ಅವರ ಹೆಸರಿನಲ್ಲಿ ಕನ್ನಡದಲ್ಲಿ ಎರಡು ಚಲನಚಿತ್ರಗಳು ತಯಾರಾಗಿದ್ದವು.

ದಕ್ಷತೆ

[ಬದಲಾಯಿಸಿ]

ಸಾಂಗ್ಲಿಯಾನ ತಾವು ಕಾರ್ಯನಿರ್ವಹಿಸಿದ ಪ್ರದೇಶಗಳಲ್ಲಿ, ಪೋಲೀಸ್ ಇಲಾಖೆಯಂತಹ ಕ್ಲಿಷ್ಟ ಇಲಾಖೆಯಲ್ಲಿ ಕೂಡಾ ಜನರ ಬಳಿ ಯಾವುದೇ ಮುಲಾಜುಗಳಿಲ್ಲದೆ ಕೂಡಾ ಹೇಗೆ ಸೌಜನ್ಯಪೂರ್ಣ, ಮಾನವೀಯ ಸಹಾನುಭೂತಿಗಳ ಆವರಣದಲ್ಲಿ ಕೆಲಸ ಮಾಡಬಹುದು ಎಂಬ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಸಾಂಗ್ಲಿಯಾನ ಕಳ್ಳಕಾಕರನ್ನು ಗುರುತಿಸಿ ಹದ್ದುಬಸ್ತಿನಲ್ಲಿಡುತ್ತಿದ್ದ ರೀತಿ; ಅವರು ಟ್ರಾಫಿಕ್ ಮುಖ್ಯಸ್ಥರಾಗಿದ್ದಾಗ ಅಡ್ಡಾದಿಡ್ಡಿ ಪಾರ್ಕಿಂಗ್, ಕೆಟ್ಟ ರೀತಿಯ ವಾಹನ ಚಾಲನೆ, ಬೀದಿಗಳಲ್ಲಿ ಮನೆಯ ಪ್ರಾಣಿಗಳನ್ನು ಮೇಯಲು ಬಿಡುತ್ತಿದ್ದ ಜನಸ್ತೋಮ, ರಸ್ತೆ ದಾಟುವಾಗ ಜನ ತೋರುವ ಕಾನೂನು ನಿರ್ಲಕ್ಷ ಇವುಗಳ ಕುರಿತು ಯಾವುದೇ ಮುಲಾಜಿಲ್ಲದೆ ನಡೆದುಕೊಂಡ ರೀತಿ ಜನಪ್ರಿಯಗೊಂಡಿತ್ತು. ಸಾಂಗ್ಲಿಯಾನ ರಾಜಕೀಯ ಒತ್ತಡಗಳಿಗೆ ಈ ವಿಚಾರದಲ್ಲಿ ಎಂದೂ ಬಗ್ಗಲಿಲ್ಲ ಎಂಬುದೂ ಪ್ರಖ್ಯಾತಿ ಪಡೆದಿತ್ತು. ಕೋದಂಡರಾಮಯ್ಯನವರು ಪೋಲೀಸ್ ಕಮಿಷನರ್ ಆಗಿದ್ದ ಸಮಯದಲ್ಲಿ ಸಾಂಗ್ಲಿಯಾನ ಅವರನ್ನೂ ವಿಶೇಷ ಪೋಲೀಸ್ ಕಮಿಷನರ್ ಹುದ್ಧೆಯನ್ನು ನೀಡಲಾಗಿತ್ತು. ತಮ್ಮ ಪತ್ನಿ ಮನೆಗೆ ತರಕಾರಿ ತರಲು ಪೊಲೀಸ್ ಇಲಾಖೆಯ ವಾಹನವನ್ನು ಬಳಸಿದರೆಂದು ಅವರ ವಿರುದ್ಧ ಕೇಸ್ ದಾಖಲಿಸಿದ್ದರು.

ಬದಲಾವಣೆ ಸಾಧ್ಯವೇ?

[ಬದಲಾಯಿಸಿ]

ಒಮ್ಮೆ ದೂರದರ್ಶನದಲ್ಲಿ ಅವರನ್ನೊಂದು ಪ್ರಶ್ನೆ ಕೇಳಲಾಯಿತು, “ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಪೋಲೀಸ್ ಠಾಣೆಗೆ ಹೋದಾಗ ಅಲ್ಲಿ ಯಾಕೆ ಒಂದು ರೀತಿಯ ಒರಟು ತನವೇ ಕಾಣುತ್ತೆ, ಸಭ್ಯ ನಡವಳಿಕೆ ಯಾಕೆ ಕಾಣುವುದಿಲ್ಲ?” ಸಾಂಗ್ಲಿಯಾನ ನೀಡಿದ ಉತ್ತರ ಹೀಗಿದೆ: “ಪೋಲೀಸ್ ಸ್ಟೇಷನ್ನಿಗೆ ಬರುವವರೆಲ್ಲಾ, ಮೈ ಕೈಯೆಲ್ಲಾ ಏಟು ಮಾಡಿಕೊಂಡೋ, ಕಳೆದುಕೊಂಡೋ, ಅಳುತ್ತಲೋ, ಕೂಗಾಡುತ್ತಲೋ ಬರುವಂತಹ ವಾತಾವರಣವೇ ಹೆಚ್ಚು. ಅಲ್ಲಿ ಕಾಣುವ ವಾತಾವರಣವೆಂದರೆ ಹಿಂಸೆ, ನೋವು, ಸಿಡುಕು ಇತ್ಯಾದಿ. ಪೋಲೀಸ್ ಸ್ಟೇಷನ್ನಿಗೆ ಬಂದು ಯಾರೂ ಇವತ್ತು ಬರ್ತ್ ಡೇ ಇದೆ ಅಂತ ಕೇಕ್ ಹಂಚೋಲ್ಲ. ನಮ್ಮ ಮನೇಲಿ ಸಮಾರಂಭ ಇದೆ ಊಟಕ್ಕೆ ಬನ್ನಿ ಅಂತ ಕರೆಯೋಲ್ಲ. ಅಂದ್ರೆ ಅಲ್ಲಿ ಪ್ರೀತಿಯ ಕೊರತೆ ಇದೆ. ಇದನ್ನು ಕೊಡಲಿಕ್ಕೆ ಸಮಾಜ ಪ್ರಯತ್ನಿಸಬೇಕು. ಆಗ ಅಲ್ಲೂ ಬದಲಾವಣೆ ಬರೋಕೆ ಸಾಧ್ಯ ಇದೆ”.

ರಾಜಕೀಯದಲ್ಲಿ

[ಬದಲಾಯಿಸಿ]

ಸಾಂಗ್ಲಿಯಾನ ತಮ್ಮ ಪೋಲೀಸ್ ಸೇವೆಯಿಂದ ನಿವೃತ್ತಿಯಾದಾಗ ರಾಜಕೀಯಕ್ಕೆ ಬಂದರು. ಅವರು ತಾವು ಲೋಕಸಭಾ ಸದಸ್ಯರಾಗಿ ಗೆದ್ದ ಬಿ ಜೆ ಪಿ ಪಕ್ಷದ ವಿರುದ್ಧವಾಗಿ ಲೋಕಸಭೆಯ ನಿರ್ಣಯದಲ್ಲಿ ಓಟು ಮಾಡಿ ಆ ಪಕ್ಷದಿಂದ ಉಚ್ಛಾಟನೆಗೊಂಡು ಕಾಂಗ್ರೆಸ್ ಪಕ್ಷ ಸೇರಿದರು. ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅವರಿಗೆ ಸೋಲು ಉಂಟಾಯಿತು. ಇತ್ತೀಚಿನ ವರ್ಷಗಳಲ್ಲಿ ಎಚ್. ಟಿ. ಸಾಂಗ್ಲಿಯಾನ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಮೆರಿಕ ಅಧ್ಯಕ್ಷರ ಆತಿಥಿ

[ಬದಲಾಯಿಸಿ]

೨೦೦೮ರ ವರ್ಷದಲ್ಲಿ ಅಮೆರಿಕದ ಅಧ್ಯಕ್ಷರಾದ ಒಬಾಮ ಅವರು ೧೬೦ ಅಂತರರಾಷ್ಟ್ರೀಯ ಮಟ್ಟದ ವಿಶಿಷ್ಟ ವ್ಯಕ್ತಿಗಳಿಗೆ ಔತಣಕೂಟ ಏರ್ಪಡಿಸಿದ್ದರು. ಅವರಲ್ಲಿ ಸಾಂಗ್ಲಿಯಾನ ಕೂಡಾ ಒಬ್ಬ ಆಹ್ವಾನಿತರಾಗಿದ್ದರು.