ನವರತ್ನ ರಾಮರಾವ್
ನವರತ್ನ ರಾಮರಾವ್ | |
---|---|
Born | ಮೇ ೨೯, ೧೮೭೭ ಬೆಂಗಳೂರು ಜಿಲ್ಲೆಯ ದೇವನಹಳ್ಳಿ |
Died | ನವೆಂಬರ್ ೨೭, ೧೯೬೦ |
Occupation(s) | ಬ್ರಿಟಿಷ್ ಆಡಳಿತ ಕಾಲದಲ್ಲಿ ಮೈಸೂರು ಸಂಸ್ಥಾನದ ಅಧಿಕಾರಿಗಳು, ಸಾರ್ವಜನಿಕ ಸೇವಾಸಕ್ತರು ಮತ್ತು ಬರಹಗಾರರು |
ನವರತ್ನ ರಾಮರಾವ್ (ಮೇ ೨೯, ೧೮೭೭ - ನವೆಂಬರ್ ೨೭, ೧೯೬೦) ನಮ್ಮ ನಾಡಿನ ಶ್ರೇಷ್ಠ ಬರಹಗಾರರಲ್ಲಿ ಒಬ್ಬರು. ಬ್ರಿಟಿಷ್ ಆಡಳಿತ ಕಾಲದಲ್ಲಿನ ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ನವರತ್ನ ರಾಮರಾಯರು ಪ್ರಾಮಾಣಿಕತೆ ಮತ್ತು ದಕ್ಷತೆಗಳಿಗೆ ಹೆಸರಾಗಿದ್ದವರು.
ಜೀವನ
[ಬದಲಾಯಿಸಿ]ಉತ್ತರ ಕರ್ನಾಟಕದ ದೇಶಸ್ಥ ಕುಟುಂಬಕ್ಕೆ ಸೇರಿದ ರಾಮರಾಯರು, ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಮೇ ೨೯, ೧೮೭೭ರ ವರ್ಷದಲ್ಲಿ ಜನಿಸಿದರು. ರಾಮರಾಯರ ತಂದೆ ನವರತ್ನ ಬಾಲಕೃಷ್ಣರಾಯರು ಅಭಿಯಂತರ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದವರಾಗಿದ್ದರು. ರಾಮರಾಯರು ಬಾಲ್ಯದಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರಾದರು. ಇವರ ವಂಶದ ಒಂದು ತಲೆಮಾರಿನಲ್ಲಿ ಒಂಬತ್ತು ಜನ ವಿದ್ವಾಂಸರಿದ್ದುದರಿಂದ ಇವರ ವಂಶಕ್ಕೆ ‘ನವರತ್ನ’ ಎಂಬ ಹೆಸರು ಬಂದಿತಂತೆ.
ನವರತ್ನ ರಾಮರಾಯರ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನೆರವೇರಿತು. ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಅಧ್ಯಾಪಕರಾಗಿದ್ದ ಟೇಟ್ ಸಾಹೇಬರು ಮತ್ತು ಸಹಪಾಠಿಯಾಗಿದ್ದ ರಾಜಾಜಿಯವರು ಇವರ ಆಪ್ತ ಸ್ನೇಹಿತರು. ಇಂಗ್ಲಿಷ್‌ನಲ್ಲಿ ಅಸಾಧಾರಣ ಪಾಂಡಿತ್ಯ ಹೊಂದಿದ್ದ ರಾಮರಾಯರಿಗೆ ಕನ್ನಡ, ಸಂಸ್ಕೃತ ಮತ್ತು ಫ್ರೆಂಚ್ ಭಾಷೆಗಳಲ್ಲೂ ಪರಿಣತಿಯಿತ್ತು. ಈಜು, ಕ್ರಿಕೆಟ್, ಗರಡಿ ಸಾಧನೆ ಇವರ ಹವ್ಯಾಸಗಳಾಗಿದ್ದವು.
ಭಾರತದ ಕುರಿತಾದ ಅನುಭಾವ
[ಬದಲಾಯಿಸಿ]ನವರತ್ನ ರಾಮರಾಯರಿಗೆ ವಿದ್ಯಾರ್ಥಿಯಾಗಿದ್ದಾಗ ಭಾರತವೆಂಬುದು ಒಂದು ಬಗೆ ಬಗೆಯ ಸರಕಿನ ಮೂಟೆ ಎಂಬ ಭಾವನೆಯಿತ್ತು. ಅಷ್ಟೇ ಅಲ್ಲ, ಉತ್ತರ ಭಾರತವೆಂದರೆ ಪರದೇಶ ಎಂಬ ಭಾವನೆ ಅವರಲ್ಲಿ ಮಡುಗಟ್ಟಿತ್ತಂತೆ. ಮುಂದಿನ ದಿನಗಳಲ್ಲಿ 'ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಲಾಹೋರಿನಿಂದ ಕಲ್ಕತ್ತದವರೆಗೆ ಸುತ್ತಿಬಂದ ನನಗೆ, ಈ ದೇಶದ ಜನಜೀವನ, ಆಚರಣೆ, ನಡೆ ನುಡಿ ಎಲ್ಲವನ್ನೂ ಹತ್ತಿರದಿಂದ ನೋಡಿದಾಗ ಹೊಸ ಅನುಭವವೇ ಆಯಿತು. ಇಲ್ಲಿನ ಜನಜೀವನ, ಆಚಾರ ವಿಚಾರಗಳು, ಸಂಸ್ಕೃತಿ, ಜೀವನ ಕ್ರಮವನ್ನು ನಿಯಂತ್ರಿಸುವ ನಂಬಿಕೆಗಳು ಮತ್ತು ಆಚರಣೆಗಳನ್ನು ಗಮನಿಸಿದಾಗ ಇಡೀ ದೇಶವೇ ನನ್ನ ಮನೆ ಎನಿಸಿತು. ಇಲ್ಲಿ ವಾಸಿಸುವ ಜನಗಳೆಲ್ಲ ನನ್ನ ಬಂಧುಗಳೇ ಎಂಬುದನ್ನು ಕಂಡೆ” ಎಂದು ರಾಮರಾಯರು ಬಣ್ಣಿಸುತ್ತಾರೆ.
ಮೈಸೂರು ಸಂಸ್ಥಾನದ ಅಧಿಕಾರಿಗಳಾಗಿ
[ಬದಲಾಯಿಸಿ]ಬಿ.ಎ., ಬಿ. ಎಲ್ ಪದವೀಧರರಾಗಿ, ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ೧೯೦೦ರ ವರ್ಷದಲ್ಲಿ ಅಮಲ್ದಾರರಾಗಿ ನೇಮಕಹೊಂದಿದ್ದ ನವರತ್ನ ರಾಮರಾಯರು ಮೈಸೂರು ಮಹಾರಾಜರ ಕಾಲದಲ್ಲಿ ಅನೇಕ ಹಿರಿಯ ಹುದ್ದೆಗಳಲ್ಲಿ ಕೆಲಸಮಾಡಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮುಖ್ಯಸ್ಥರಾಗಿ ನಿವೃತ್ತರಾದರು. ಅವರು ಮಾತಿನಲ್ಲಿ ಅಪ್ರತಿಮ ಚತುರರೆನಿಸಿದ್ದರು. ಪ್ರಜಾಪ್ರತಿನಿಧಿ ಸಭೆಯಲ್ಲಿ, ಲೆಜೆಸ್ಲೆಟಿವ್ ಕೌನ್ಸಿಲ್‌ನಲ್ಲಿ ಸ್ವಾರಸ್ಯವಾಗಿ ಭಾಷಣ ಮಾಡಿದ ಕೀರ್ತಿ ಅವರದು. ೧೯೩೨ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ರಾಮರಾಯರು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್‌ರ ಅವರ ತಜ್ಞ ಸಲಹೆಗಾರರಾಗಿ ಪಾಲ್ಗೊಂಡಿದ್ದರು.
ನವರತ್ನ ರಾಮರಾಯರು ತಮ್ಮ ಸೇವಾವಧಿಯಲ್ಲಿ ತಮ್ಮದೇ ನೇತೃತ್ವದಲ್ಲಿ ದೇಶದ ಅಭಿತವ್ಯಕ್ಕೂ ಮತ್ತು ಜನಗಳ ಉದ್ಯೋಗಾಭಿವೃದ್ಧಿಗೂ ಹೇತುವಾದ ರೇಷ್ಮೆ ಇಲಾಖೆಯನ್ನು ಸಂಸ್ಥಾಪಿಸಿ, ರೇಷ್ಮೆ ಉದ್ಯಮದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ ದೊರಕಿಸಿ, ರೇಷ್ಮೆ ಕೈಗಾರಿಕೆಯ ಪಿತಾಮಹರೆಂದು ಖ್ಯಾತಿ ಗಳಿಸಿದರು. ಅವರು ನಿವೃತ್ತಿಯ ನಂತರ ಕೇಂದ್ರ ಸರ್ಕಾರ ಸ್ಥಾಪಿಸಿದ ಕೇಂದ್ರೀಯ ರೇಷ್ಮೆ ಮಂಡಳಿಯ ಉಪಾಧ್ಯಕ್ಷರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು.
ಕೆಲವು ನೆನಪುಗಳು
[ಬದಲಾಯಿಸಿ]ಸಾಹಿತ್ಯ ಸಂಗೀತ ಮತ್ತಿತರ ಲಲಿತಕಲೆಗಳಲ್ಲಿ ಅಪಾರ ಆಸಕ್ತಿಯಿದ್ದ ರಾಮರಾಯರು ಮಾಸ್ತಿಯವರ ಸ್ನೇಹದ ಒತ್ತಡದಿಂದ, ತಮ್ಮ ಅಮಲ್ದಾರ ವೃತ್ತಿ ಜೀವನದ ನೆನಪುಗಳನ್ನು ‘ಜೀವನ’ ಪತ್ರಿಕೆಯಲ್ಲಿ ಬರೆದರು. ‘ಕೆಲವು ನೆನಪುಗಳು’ ಎಂಬ ಹೆಸರಿನಿಂದ ಮಾಸ್ತಿಯವರ "ಜೀವನ ಕಾರ್ಯಾಲಯ"ದಿಂದ ಪುಸ್ತಕರೂಪದಲ್ಲಿ ಪ್ರಕಟಗೊಂಡ ಈ ಕೃತಿ ಕನ್ನಡದ ಒಂದು ಕ್ಲಾಸಿಕ್ ಎಂದು ಪರಿಗಣಿತವಾಗಿದೆ. ಇದು 1985ರಲ್ಲಿ ಕನ್ನಡ ವಿಶ್ವ ಸಮ್ಮೇಳನದಲ್ಲಿ ಪ್ರಕಟಗೊಂಡ ವಿಶಿಷ್ಟ ಪುಸ್ತಕಗಳಲ್ಲಿ ಸಹಾ ಒಂದು. ರಾಮರಾಯರು ಮಾಸ್ತಿಯವರ ‘ಚೆನ್ನಬಸವನಾಯಕ ಕಾದಂಬರಿ’ ಮತ್ತು ಹಲವು ಸಣ್ಣಕಥೆಗಳನ್ನು ಸಹಾ ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ರಾಜಾಜಿಯವರು ರಾಮಾಯಣ, ಮಹಾಭಾರತಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಸಂದರ್ಭದಲ್ಲೂ ರಾಮರಾಯರು ಸಕ್ರಿಯವಾದ ಪಾತ್ರ ನಿರ್ವಹಿಸಿದ್ದರು.
ನವರತ್ನ ರಾಮರಾಯರು ಆಗಾಗ್ಗೆ ಆಕಾಶವಾಣಿಯಲ್ಲಿ ಪ್ರಸಂಗ ಭಾಷಣಗಳ ಮೂಲಕ ತಮ್ಮ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದ ವಿಷಯಗಳಲ್ಲಿ ಕೆಲವಾದ ‘ಸಂಸ್ಕೃತಿ ಮತ್ತು ದೇಶಭಕ್ತಿ’, ‘ಕಾವ್ಯಸೃಷ್ಟಿಗೆ ಸ್ಫೂರ್ತಿ ಮೂಲ’, ‘ಸುಧಾರಣೆ-ಸಂಪ್ರದಾಯ ಮಾರ್ಗ’ ಮತ್ತು 'ಅಧಿಕಾರಿ ಅಂದು ಸ್ಥಳದ ಧಣಿ – ಇಂದು ಪುಢಾರಿಗಳ ಋಣಿ’ ಇವುಗಳು ‘ಪ್ರಜಾವಾಣಿ’ಯಲ್ಲಿಯೂ ಪ್ರಕಟಗೊಂಡಿದ್ದು ಡಿ.ವಿ.ಜಿ ಮತ್ತು ಮಾಸ್ತಿಯವರು ನಡೆಸುತ್ತಿದ್ದ ವಿಚಾರ ಗೋಷ್ಠಿಗಳಲ್ಲಿ ಉತ್ಸಾಹದಿಂದ ಚರ್ಚೆಗೊಳ್ಳುತ್ತಿದ್ದ ಪ್ರಮುಖ ವಿಷಯಗಳಾಗುತ್ತಿದ್ದವು.
ರಾಜಸೇವಾಸಕ್ತ ಬಿರುದು
[ಬದಲಾಯಿಸಿ]ನವರತ್ನ ರಾಮರಾಯರ ದಕ್ಷ ಸೇವೆ ಮತ್ತು ಕನ್ನಡಕ್ಕಾಗಿ ನೀಡಿದ ಕೊಡುಗೆಯನ್ನು ಗುರುತಿಸಿದ ಮೈಸೂರು ಮಹಾರಾಜರು ಇವರಿಗೆ ‘ರಾಜಸೇವಾಸಕ್ತ’ ಬಿರುದು ನೀಡಿ ಗೌರವಿಸಿದ್ದರು.
ಪುತ್ರ ನವರತ್ನರಾಮ್
[ಬದಲಾಯಿಸಿ]ಕನ್ನಡದ ಸುಪ್ರಸಿದ್ದ ಬರಹಗಾರರಾದ ನವರತ್ನರಾಮ್ ಅವರು ನವರತ್ನ ರಾಮರಾಯರ ಪುತ್ರ. ನವರತ್ನರಾಮ್ ಅವರ ಪತ್ನಿ ಉಷಾ ನವರತ್ನರಾಮ್ ಅವರೂ ಪ್ರಸಿದ್ಧ ಬರಹಗಾರ್ತಿ.
ಇಳಿ ವಯಸ್ಸಿನಲ್ಲೂ ಕ್ರಿಯಾಶೀಲ
[ಬದಲಾಯಿಸಿ]ನವರತ್ನ ರಾಮರಾಯರು ನಿವೃತ್ತಾಪರ ಜೀವನ, ಚಟುವಟಿಕೆ ಇಲ್ಲದ ನೀರಸವಾದ ಬಾಳೆಂದು ಭಾವಿಸಿದವರಲ್ಲ ಎನ್ನುತಾರೆ ಅವರ ಮತ್ತೊಬ್ಬ ಪುತ್ರ ನವರತ್ನ ಲಕ್ಷ್ಮಣರು. ನವರತ್ನ ರಾಮರಾಯರು ಇಳಿ ವಯಸ್ಸಿನಲ್ಲೂ ‘The Mysore Electro-Chemical Works’ನ ಚೇರ್ಮನ್ನರಾಗಿ, ‘The Mysore Stoneware Pipes and Potteries Ltd’ ಸಂಸ್ಥೆಯ ನಿರ್ದೇಶಕರಾಗಿ, ಆಚಾರ್ಯ ಪಾಠಶಾಲೆ, ಬಸವನಗುಡಿ ಸರ್ವೀಸ್ ಕ್ಲಬ್, ದಿ ನ್ಯಾಷನಲ್ ಕ್ರಿಕೆಟರ್ಸ್ ಕ್ಲಬ್ ಮುಂತಾದವುಗಳ ಅಧ್ಯಕ್ಷರಾಗಿ ಆ ಸಂಸ್ಥೆಗಳ ಪ್ರಗತಿಗೆ ನಿರಂತರವಾಗಿ ಶ್ರಮಿಸಿದರು.
ಸಂಗೀತಾಸಕ್ತಿ
[ಬದಲಾಯಿಸಿ]ನವರತ್ನ ರಾಮರಾಯರಿಗೆ ಸಾಹಿತ್ಯ ಪ್ರೇಮದ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಅಪರಿಮಿತ ಅಭಿರುಚಿ ಮತ್ತು ಜ್ಞಾನವಿದ್ದು ಸ್ವತಃ ಪಿಟೀಲು ವಾದನವನ್ನೂ ತಕ್ಕಮಟ್ಟಿಗೆ ಅಭ್ಯಸಿಸಿದ್ದರು. ಇದರಿಂದಾಗಿ ಅವರಿಗೆ ದಕ್ಷಿಣ ಭಾರತದ ಖ್ಯಾತ ಸಂಗೀತ ವಿದ್ವಾಂಸರುಗಳಾಗಿದ್ದ ಶ್ರೀಮತಿ ಎಂ. ಎಸ್. ಸುಬ್ಬುಲಕ್ಷ್ಮೀ, ಪಿಟೀಲು ಚೌಡಯ್ಯ, ವೀಣೆ ಶೇಷಣ್ಣ, ವಾಸುದೇವಾಚಾರ್ಯರು ಮೊದಲಾದ ಮಹೋದಯರ ನಿಕಟಸ್ನೇಹ ಸಂಪರ್ಕವಿತ್ತು. ಕೊನೆಯ ದಿನಗಳಲ್ಲಿ ನವರತ್ನ ರಾಮರಾಯರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಮಹಾನ್ ಗಾಯಕಿ ಶ್ರೀಮತಿ ಎಂ. ಎಸ್. ಸುಬ್ಬುಲಕ್ಷ್ಮಿಯವರು ತಮ್ಮ ಮನೆಯಲ್ಲೇ ರಾಮರಾಯರಿಗಾಗಿ ವಿಶೇಷ ಕಚೇರಿಯನ್ನು ಭಾವನಾತ್ಮಕವಾಗಿ ನಡೆಸಿಕೊಟ್ಟಿದ್ದರು.
ವಿದಾಯ
[ಬದಲಾಯಿಸಿ]ನವರತ್ನ ರಾಮರಾಯರು ನವೆಂಬರ್ ೨೭, ೧೯೬೦ರ ವರ್ಷದಲ್ಲಿ ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನ.
ಮಾಹಿತಿ ಕೃಪೆ
[ಬದಲಾಯಿಸಿ]'ಕೆಲವು ನೆನಪುಗಳು' ಕೃತಿಯಲ್ಲಿ ನವರತ್ನ ರಾಮರಾವ್ ಅವರ ಪುತ್ರ ನವರತ್ನ ಲಕ್ಷ್ಮಣ್ ಅವರ ಬರಹ, 'ಕಣಜ' ದಲ್ಲಿನ ಮಾಹಿತಿ ಮತ್ತು ಕನ್ನಡ ಪ್ರಭದಲ್ಲಿ ‘ನವರತ್ನ ರಾಮರಾಯರ ದೃಷ್ಟಿ' ಎಂಬ ಪ್ರೊ. ಎಂ. ಎನ್. ಸುಂದರರಾಜ್ ಅವರ ಲೇಖನ