ಚೇತನ್ ಭಗತ್
ಚೇತನ್ ಭಗತ್ | |
---|---|
ಜನನ | ಏಪ್ರಿಲ್ ೨೨, ೧೯೭೪ ನವದೆಹಲಿ |
ವೃತ್ತಿ | ಬರಹಗಾರ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಐ ಐ ಟಿ ದೆಹಲಿ, ಐ ಐ ಎಮ್ ಅಹಮದಾಬಾದ್ |
ಪ್ರಕಾರ/ಶೈಲಿ | ಕಾಲ್ಪನಿಕ, ಆಡಳಿತ, ಹಾಸ್ಯ |
ಪ್ರಮುಖ ಕೆಲಸ(ಗಳು) | Five Point Someone 2 States |
ಬಾಳ ಸಂಗಾತಿ | ಅನೂಷಾ ಭಗತ್ |
ಮಕ್ಕಳು | ೨ |
www |
ಚೇತನ್ ಭಗತ್ (ಏಪ್ರಿಲ್ ೨೨, ೧೯೭೪) ವಿಶ್ವದಾದ್ಯಂತ ಇಂಗ್ಲಿಷ್ ಓದುಗರ ಅಭಿಮಾನ ಗಳಿಸಿರುವ ಪ್ರಖ್ಯಾತ ಯುವ ಪೀಳಿಗೆಯ ಕಥೆಗಾರರು. ಅವರು ಏಪ್ರಿಲ್ ೨೨, ೧೯೭೪ರ ವರ್ಷದಂದು ನವದೆಹಲಿಯಲ್ಲಿ ಜನಿಸಿದರು.
ವಿಶಿಷ್ಟ ಸಾಧಕ
[ಬದಲಾಯಿಸಿ]ಬಹಳಷ್ಟು ಉತ್ತಮ ಬರಹಗಾರರು ತಮ್ಮ ಹೃದಯವನ್ನು ತೆರೆದಿಡುವುದರಲ್ಲಿ ಮತ್ತು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಗೊಳಿಸುವುದರಲ್ಲಿ ಕಲಾತ್ಮಕತೆಯನ್ನು ಹೊರಹೊಮ್ಮಿಸುತ್ತಾರೆ. ಚೇತನ್ ಭಗತ್ ಇವೆರಡನ್ನೂ ಯಶಸ್ವಿಯಾಗಿ ಮಾಡುತ್ತಿದ್ದಾರೆ ಜೊತೆಗೆ ಇವೆರಡಕ್ಕೂ ಮೀರಿದ ಇನ್ನೇನನ್ನೋ ಕೂಡಾ ಮಾಡುತ್ತಿದ್ದಾರೆ. ಚಲನಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರವಾದ ‘ತ್ರೀ ಈಡಿಯಟ್ಸ್’ ಚಿತ್ರದ ಮೂಲ ಚಿಂತನೆಯ ಆಳ ಚೇತನ್ ಭಗತ್ ಅವರದ್ದು.
ಭಾರತದ ಪ್ರತಿಷ್ಠಿತ ಅಧ್ಯಯನ ಕೇಂದ್ರಗಳಾದ ಐಐಟಿ, ಐಐಮ್ ಗಳಲ್ಲಿ ವಿದ್ಯಾಭ್ಯಾಸದ ಸಾಧನೆ ಮಾಡಿರುವ ಚೇತನ್ ಭಗತ್ ಅವರ ಬುದ್ಧಿವಂತಿಕೆಗೆ ಪ್ರಮಾಣ ಪತ್ರ ಬೇರೇನೂ ಬೇಕಿಲ್ಲ. ಆದರೆ. ಭಾರತದಲ್ಲಿ ಪ್ರತೀ ವರ್ಷ ಅಂತಹ ಸಾವಿರಾರು ಪ್ರತಿಭೆಗಳು ಹೊರಬರುತ್ತವೆ ಎಂಬುದು ಕೂಡಾ ಅಷ್ಟೇ ಸತ್ಯ!. ಶಿವ್ ಖೇರ ಅವರ ‘ಯು ಕ್ಯಾನ್ ವಿನ್’ ಎಂಬ ಪುಸ್ತಕದ ಮೇಲಿರುವ ಒಂದು ವಾಖ್ಯೆ ನೆನಪಾಗುತ್ತದೆ. ‘ಗೆದ್ದವರು ಬೇರೆಯವರು ಮಾಡದಿರುವ ವಿಶೇಷವಾದದ್ದೇನನ್ನೂ ಮಾಡುವುದಿಲ್ಲ, ಅವರು ಬೇರೆಯವರು ಮಾಡುವುದನ್ನೇ ವಿಶಿಷ್ಟವಾಗಿ ಮಾಡುತ್ತಾರೆ ಅಷ್ಟೇ’. ಚೇತನ್ ಭಗತ್ ಬಹುಶಃ ಅಂತಹ ಪಟ್ಟಿಗೆ ಸೇರಿದವರು.
ಕೃತಿಗಳು
[ಬದಲಾಯಿಸಿ]ಚೇತನ್ ಭಗತ್ ಅವರ ಇದುವರೆಗಿನ ಕಥೆಗಳಾದ Five Point Someone (2004), One Night @ the Call Center (2005), The 3 Mistakes of my life (2008) & 2 States (2009), Revolution 2020, What Young India Wants ಅಪಾರ ಯಶಸ್ವೀ ಕೃತಿಗಳು. ನ್ಯೂಯಾರ್ಕ್ ಟೈಮ್ಸ್ ಹೇಳುತ್ತದೆ ‘ಚೇತನ್ ಭಗತ್ ಭಾರತದ ಚರಿತ್ರೆಯಲ್ಲೇ ಅತ್ಯಂತ ಪ್ರಸಿದ್ಧ ಇಂಗ್ಲಿಷ್ ಬರಹಗಾರ”.
ಪ್ರಭಾವಿ ವ್ಯಕ್ತಿತ್ವ
[ಬದಲಾಯಿಸಿ]ಟೈಮ್ಸ್ ಪತ್ರಿಕೆ ಹೇಳುತ್ತದೆ “ಚೇತನ್ ಭಗತ್ ವಿಶ್ವದ ನೂರು ಪ್ರಭಾವೀ ವ್ಯಕ್ತಿಗಳಲ್ಲೊಬ್ಬರು” - ಹೀಗೆ ಸಾಗುತ್ತಿದೆ ಅವರ ಕೀರ್ತಿ.
ಬದಲಾವಣೆಯ ಪ್ರವರ್ತಕ
[ಬದಲಾಯಿಸಿ]ಹಲವಾರು ಪತ್ರಿಕೆಗಳಿಗೆ ಅಂಕಣಕಾರರಾಗಿ, ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ ಮಹತ್ವದ ಭಾಷಣಕಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಚೇತನ್ ಭಗತ್ ದೇಶದ ಯುವ ಜನಾಂಗದಲ್ಲಿ ಬದಲಾವಣೆಯನ್ನು ತರಬೇಕೆಂಬ ಮಹದಾಶಯವನ್ನು ಹೊಂದಿದ್ದು ಆ ನಿಟ್ಟಿನಲ್ಲಿ ತಮ್ಮ ಕಾರ್ಯಕ್ಷೇತ್ರದಲ್ಲಿ ಅಪಾರವಾದ ಗಮನ ಹರಿಸಿದ್ದಾರೆ. ಇದಕ್ಕಾಗಿ ತಮಗೆ ಅತ್ಯಧಿಕ ಗಳಿಕೆ ನೀಡುತ್ತಿದ್ದ ಅಂತರರಾಷ್ಟ್ರೀಯ ಬ್ಯಾಂಕಿಂಗ್ ವ್ಯವಹಾರದ ಕಾಯಕಕ್ಕೆ ಕೂಡಾ ಅವರು ಗುಡ್ ಬೈ ಹೇಳಿದ್ದಾರೆ.
ಧೈರ್ಯಕ್ಕೆ ಪ್ರಚೋದನೆ
[ಬದಲಾಯಿಸಿ]ಪ್ರಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಅವರ ಮಾತು ಇಂತಿದೆ. “ನಾನು ಓದುಗರಲ್ಲಿ ಚೇತನ್ ಅವರ ಅಪಾರವಾದ ಪ್ರಭಾವವನ್ನು ಕಾಣುತ್ತಿದ್ದೇನೆ. ಆತ ‘ನೀವು ನಿಮ್ಮ ಕನಸುಗಳ ಹಿಂದೆ ಹೋಗಿ, ಮತ್ತೊಬ್ಬರ ನಿರೀಕ್ಷೆಗಳಿಗೆ ಶರಣಾಗಬೇಡಿ’ ಎಂದು ಹೇಳುತ್ತಿರುತ್ತಾರೆ. ಅದು ಕುಟುಂಬದ ಪ್ರಭಾವಗಳನ್ನು ತೀವ್ರವಾಗಿ ಹೊಂದಿರುವ ಭಾರತದಂತಹ ದೇಶದಲ್ಲಿ ಸುಲಭ ಸಾಧ್ಯವಲ್ಲ. ನಾನು ಸಂಗೀತಶಾಲೆ ನಡೆಸುತ್ತಿದ್ದೇನೆ. ಬಹಳಷ್ಟು ಜನ ತಮ್ಮ ಕೆಲಸಗಳನ್ನು ಬಿಟ್ಟು ಸಂಗೀತವನ್ನು ಅಭ್ಯಾಸ ಮಾಡಲಿಕ್ಕೆ ಬರಲು ಪ್ರಾರಂಭಿಸಿದ್ದಾರೆ. ಭಾರತದ ಯುವ ಜನಾಂಗ ಧೈರ್ಯಮಾಡಿ ತಮ್ಮ ಕನಸುಗಳಿಗೊಂದು ಅವಕಾಶ ಒದಗಿಸಲು ಪ್ರೇರಿತರಾಗಿರುವುದು ಮಹೋನ್ನತ ಸಂಗತಿ. ಚೇತನ್ ಅವರ ಬರವಣಿಗೆ ಅಂತಹ ಧೈರ್ಯಗಳನ್ನು ಪ್ರಚೋದಿಸುವಂತದ್ದು.”