ವಿಲಿಯಂ ವರ್ಡ್ಸ್‌ವರ್ತ್
ವಿಲಿಯಂ ವರ್ಡ್ಸ್‌ವರ್ತ್ | |
---|---|
ಜನನ | ಎಪ್ರಿಲ್ ೭, ೧೭೭೦ ವರ್ಡ್ಸ್‌ವರ್ತ್ ಹೌಸ್, ಕಾಕರ್ ಮೌತ್, ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ |
ಮರಣ | ಎಪ್ರಿಲ್ ೨೩, ೧೮೫೦ ಕುಂಬರ್ ಲ್ಯಾಂಡ್, ಯುನೈಟೆಡ್ ಕಿಂಗ್ಡಮ್ |
ವೃತ್ತಿ | ಕವಿ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಕೆಂಬ್ರಿಡ್ಜ್ ವಿಶ್ವವಿದ್ಯಾಲಯ |
ಸಾಹಿತ್ಯ ಚಳುವಳಿ | ರೋಮ್ಯಾಂಟಿಸಿಸಮ್ |
ಪ್ರಮುಖ ಕೆಲಸ(ಗಳು) | Lyrical Ballads, Poems in Two Volumes, The Excursion, The Prelude |
ಬ್ರಿಟಿಷ್ ಮಹಾಕವಿ ವಿಲಿಯಂ ವರ್ಡ್ಸ್‌ವರ್ತ್ (ಎಪ್ರಿಲ್ ೭,೧೭೭೦ - ಎಪ್ರಿಲ್ ೨೩, ೧೮೫೦ ಇಂಗ್ಲಿಷ್ ರೊಮಾಂಟಿಕ್ ಕಾವ್ಯ ಯುಗದ ಪ್ರವರ್ತಕರಲ್ಲಿ ಪ್ರಮುರೆನಿಸಿದವರು. ಸಾಮ್ಯುಯಲ್ ಟೇಲರ್ ಕೊಲೆರಿಡ್ಜ್ ಸಹಯೋಗದಲ್ಲಿ ೧೭೯೮ರಲ್ಲಿ ಅವರು ಪ್ರಕಟಿಸಿದ ‘ಲಿರಿಕಲ್ ಬಲ್ಲಾಡ್ಸ್’ ರೊಮಾಂಟಿಕ್ ಯುಗಕ್ಕೆ ಪ್ರಾರಂಭ ನೀಡಿದ ಕೃತಿಗಳಲ್ಲೊಂದು.
ಜೀವನ
[ಬದಲಾಯಿಸಿ]ವಿಲಿಯಂ ವರ್ಡ್ಸ್ ವರ್ತ್ ಏಪ್ರಿಲ್ ೭, ೧೭೭೦ರಂದು ಇಂಗ್ಲೆಂಡಿನ ಲೇಕ್ ಜಿಲ್ಲೆಯ ಕಾಕರ್ ಮೌತ್ ಎಂಬಲ್ಲಿ ಜನಿಸಿದರು. ಅವರ ತಂದೆ ಜಾನ್ ವರ್ಡ್ಸ್ ವರ್ತ್ ಕಾನೂನು ತಜ್ಞರಾಗಿದ್ದರು. ತಾನು ಬೆಳೆದ ಪ್ರದೆಶದಲ್ಲಿ ವಿಶಾಲವಾಗಿ ಹರಡಿಕೊಂಡಿದ್ದ ಹುಲ್ಲುಗಾವಲು ಪ್ರದೇಶ ಅವರಿಗೆ ಪ್ರಕೃತಿ ಪ್ರೇಮ ಹುಟ್ಟಲು ಪ್ರೇರಕವೆನಿಸಿತು. ಅವರಿಗಿದ್ದ ಈ ಪ್ರಕೃತಿ ಪ್ರೇಮ ಅವರ ಕಾವ್ಯಗಳಲ್ಲಿ ಪ್ರಕಾಶಿಸಿದೆ.
ಆಚಾರ್ಯ ಬಿ. ಎಂ. ಶ್ರೀ ಅವರು ಕನ್ನಡೀಕರಿಸಿರುವ ‘Rainbow’ ಎಂಬ ಕವನ ‘ಮಳೆಬಿಲ್ಲು’ ಎಂಬ ಹೆಸರಿನಲ್ಲಿ ಇಂತಿದೆ:
ಮುಗಿಲಿನಲ್ಲಿ ಮಳೆಬಿಲ್ಲ ಕಾಣುತಲೆ ನಾನು
ನೆಗೆದು ಕುಣಿದಾಡುವುದು ಹೃದಯ ತಾನು!
ಅಂತೆ ಇದ್ದುದು ಮೊದಲು ಚಿಕ್ಕಂದಿನದು;
ಅಂತೆ ಇಹುದೀ ಮರೆವ ಯೌವನದಲಿಂದು,
ಅಂತೆ ಇರಲೆನಗಿನ್ನು ಮುಪ್ಪಿನಲಿ ಮುಂದೆ –
ಅಂತಿರದೆ, ಸಾವು ಬರಲಂದೆ!
ಮನುಜನಿಗೆ ಮಗು ತಂದೆ – ನಾನದನು ಬಗೆದು,
ಹೊಂದಿಸಲು ಬಯಸುವೆನು ದಿನಗಳನು ತೆಗೆದು
ಒಂದಕೊಂದನು ಪ್ರಕೃತಿಭಕ್ತಿಯಲಿ ಬಿಗಿದು.
ವಿಲಿಯಮ್ ವರ್ಡ್ಸ್ ವರ್ತ್ ತನ್ನ ತಾಯಿಯನ್ನು ಎಂಟನೇ ವಯಸ್ಸಿನಲ್ಲೂ ತಂದೆಯನ್ನು ಹದಿಮೂರನೇ ವಯಸ್ಸಿನಲ್ಲೂ ಕಳೆದುಕೊಂಡರು. ಕುಟುಂಬದಲ್ಲಿ ಉಂಟಾದ ಸಮಸ್ಯೆಗಳಿಂದ ಅವರು ತಮ್ಮ ಜೀವನದ ಪ್ರಮುಖ ವ್ಯಕ್ತಿಯಾದ ಪ್ರಿಯ ಸಹೋದರಿ ದೋರ್ತಿಯಿಂದ ದೂರವಿರುವಂತೆ ಮಾಡಿತು.
ತಮ್ಮ ಚಿಕ್ಕಪ್ಪಂದಿರ ಬೆಂಬಲದಿಂದ ಸ್ಥಳೀಯ ಶಾಲೆಗೆ ಹೋದ ವರ್ಡ್ಸ್ ವರ್ತ್ ಮುಂದೆ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಓದಿದರು. ೧೭೮೭ರಲ್ಲಿ ‘ದಿ ಯೂರೋಪಿಯನ್ ಮ್ಯಾಗಜೈನಿಗೆ ಸಾನೆಟ್ಟುಗಳನ್ನು ಮೂಡಿಸುವುದರ ಮೂಲಕ ವರ್ಡ್ಸ್ ವರ್ತ್ ಅವರ ಬರವಣಿಗೆ ಲೋಕ ಮೊದಲುಗೊಂಡಿತು. ಅದೇ ವರ್ಷದಲ್ಲಿ ಅವರು ಕೇಂಬ್ರಿಡ್ಜ್ನಲ್ಲಿ ಸೈಂಟ್ ಜಾನ್ ಕಾಲೇಜು ಸೇರಿ ೧೭೯೧ರಲ್ಲಿ ಬಿ.ಎ ಪದವಿಯನ್ನು ಪೂರ್ಣಗೊಳಿಸಿದರು.
ವಾಡ್ರಾಕೂರ್ ಅಂಡ್ ಜೂಲಿಯಾ
[ಬದಲಾಯಿಸಿ]೧೭೯೦ರ ಬೇಸಿಗೆ ರಜೆಯಲ್ಲಿ ವರ್ಡ್ಸ್ ವರ್ತ್ ಅವರು ಕ್ರಾಂತಿಯ ಹೆಜ್ಜೆ ಹಾಕಿದ್ದ ಫ್ರಾನ್ಸ್ ಮತ್ತು ಸ್ವಿಟ್ಜರ್ಲ್ಯಾಂಡ್ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಎರಡನೇ ಬಾರಿ ಅವರು ಫ್ರಾನ್ಸಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅನ್ನೆಟ್ ವಾಲ್ಲನ್ ಎಂಬಾಕೆಯನ್ನು ಪ್ರೇಮಿಸಿದ ವರ್ಡ್ಸ್ ವರ್ತರಿಗೆ ಆನ್ ಕರೋಲಿನ್ ಎಂಬ ಪುತ್ರಿ ಜನಿಸಿದಳು. ಈ ಗೌಪ್ಯ ಪ್ರೇಮ ಸಂಬಂಧವೇ ಅವರ “ವಾಡ್ರಾಕೂರ್ ಅಂಡ್ ಜೂಲಿಯಾ” ಪದ್ಯದ ವಸ್ತುವಾಗಿತ್ತು.
ಲಿರಿಕಲ್ ಬಲ್ಲಾಡ್ಸ್
[ಬದಲಾಯಿಸಿ]೧೭೯೫ರಲ್ಲಿ ವರ್ಡ್ಸ್ ವರ್ತರು ಕೊಲೆರಿಡ್ಜ್ ಅವರನ್ನು ಭೇಟಿ ಮಾಡಿದರು. ಆ ವೇಳೆಗೆ ಅವರಿಗೆ ಅವರ ವಂಶಪಾರಂಪರ್ಯ ಆಸ್ಥಿ ದೊರಕಿ ರೇಸ್ ಡೌನ್ ಡೋರ್ಸೆಟ್ ಎಂಬಲ್ಲಿ ತಮ್ಮ ಸಹೋದರಿ ಡೋರ್ತಿ ಜೊತೆಯಲ್ಲಿ ನೆಲೆಸುವಂತಾಗಿತ್ತು. ಕೊಲೆರಿಡ್ಜ್ ನೀಡಿದ ಪ್ರೋತ್ಸಾಹ ಮತ್ತು ಪರಿಸರದೊಂದಿಗಿನ ಆಪ್ತವಾದ ಬದುಕಿನ ದೆಸೆಯಿಂದಾಗಿ ವರ್ಡ್ಸ್ ವರ್ತರು ೧೭೯೭ರಲ್ಲಿ ತಮ್ಮ ಮಾಸ್ಟರ್ ವರ್ಕ್ ಎನಿಸಿರುವ “ಲಿರಿಕಲ್ ಬಲ್ಲಾಡ್ಸ್” ಕೃತಿಯನ್ನು ಹೊರತಂದರು. ೧೭೯೮ರಲ್ಲಿ ಸುದೀರ್ಘವೂ, ಆತ್ಮಚರಿತ್ರೆ ಸ್ವರೂಪದ್ದೂ ಆದ ಕಾವ್ಯವನ್ನು ರಚಿಸಲು ಪ್ರಾರಂಭಿಸಿ ೧೮೦೫ರ ವರ್ಷದಲ್ಲಿ ಮುಕ್ತಾಯಗೊಳಿಸಿದರು. ಈ ಕೃತಿಯನ್ನು ‘ದಿ ಪ್ರೆಲ್ಯೂಡ್’ಎಂಬ ಹೆಸರಿನಿಂದ ವರ್ಡ್ಸ್ ವರ್ತರ ನಿಧನಾನಂತರದಲ್ಲಿ ೧೮೫೦ರ ವರ್ಷದಲ್ಲಿ ಪ್ರಕಟಿಸಲಾಯಿತು.
ಹಲವಾರು ಕವನಗಳು
[ಬದಲಾಯಿಸಿ]೧೭೯೮-೯೯ರ ಅವಧಿಯನ್ನು ವರ್ಡ್ಸ್ ವರ್ತರು ತಮ್ಮ ಸಹೋದರಿ ದೋರ್ತಿ ಮತ್ತು ಕೊಲೆರಿಡ್ಜ್ ಜೊತೆ ಜರ್ಮನಿಯಲ್ಲಿ ಕಳೆದರು. ಈ ಅವಧಿಯಲ್ಲಿ ಅವರು ಹಲವಾರು ಕವನಗಳನ್ನು ರಚಿಸಿದರು. ಇವುಗಳಲ್ಲಿ ಲವಲವಿಕೆಯ ‘ಲೂಸಿ’ ಕೂಡಾ ಒಂದು. ಅಲ್ಲಿಂದ ಹಿಂದಿರುಗಿದ ನಂತರದಲ್ಲಿ ಗ್ರಾಸ್ಮೆರ್ ಎಂಬಲ್ಲಿ ಡೋವ್ ಕಾಟೇಜ್ನಲ್ಲಿ ನೆಲೆಸಿದ ಅವರು ೧೮೦೨ರ ವರ್ಷದಲ್ಲಿ ಮೇರಿ ಹುಚಿನ್ಸನ್ ಅವರನ್ನು ವಿವಾಹವಾದರು ವರ್ಡ್ಸ್ ವರ್ತರ ಸಹೋದರಿ ದೋರ್ತಿ ಇವರ ಜೊತೆಗೇ ಇದ್ದರು. ವರ್ಡ್ಸ್ ವರ್ತರ ಎರಡನೇ ಕವನ ಸಂಗ್ರಹವು ಎರಡು ಸಂಪುಟಗಲ್ಲಿ ೧೮೦೭ರ ವರ್ಷದಲ್ಲಿ ಮೂಡಿಬಂತು. ವರ್ಡ್ಸ್ ವರ್ತರ ಬಹುತೇಕ ಪ್ರಸಿದ್ಧ ಕವನಗಳು ೧೭೯೭ – ೧೮೦೮ರ ಅವಧಿಯಲ್ಲಿ ಮೂಡಿಬಂದಿದ್ದಾಗಿವೆ ಮುಂದೆ ಅವರು ಹಲವಾರು ಕೃತಿಗಳನ್ನು ರಚಿಸಿದರಾದರೂ ಆವೆಲ್ಲಾ ಉತ್ತಮ ವಿಮರ್ಶೆಗಳನ್ನು ಪಡೆಯಲಿಲ್ಲ. ೧೮೧೩ರಲ್ಲಿ ಅವರ ಗ್ರಾಸ್ಮೆರಿ ವಾಸ್ತವ್ಯ ಮುಕ್ತಾಯ ಗೊಂಡಿತು. ವೆಸ್ಟ್ ಮೋರ್ ಲ್ಯಾಂಡ್ ಪ್ರದೇಶಕ್ಕೆ ಸ್ಟಾಂಪ್ ವಿತರಕರಾಗಿ ನಿಯುಕ್ತರಾದ ಅವರು ರೈಡಲ್ ಮೌಂಟ್, ಅಂಬ್ಲೆಸೈಡ್ ಎಂಬಲ್ಲಿ ತಮ್ಮ ಜೀವಿತದ ಅಂತ್ಯದ ವರೆಗೂ ನೆಲೆಸಿದ್ದರು. ಮುಂದಿನ ದಿನಗಳಲ್ಲಿ ತಮ್ಮ ತೀವ್ರಗಾಮಿ ನಿಲುವುಗಳನ್ನು ಬಿಟ್ಟುಕೊಟ್ಟ ವರ್ಡ್ಸ್ ವರ್ತರು ದೇಶಭಕ್ತರಾಗಿ ಸಾರ್ವಜನಿಕ ಜೀವನದಲ್ಲಿ ಸಾಂಪ್ರದಾಯಿಕ ಮನೋಭಾವನೆಯ ವ್ಯಕ್ತಿತ್ವವನ್ನು ತಳೆದಂತಿದ್ದರು.
ಪೊಯೆಟ್ ಲಾರಿಯೆಟ್ ಗೌರವ
[ಬದಲಾಯಿಸಿ]೧೮೪೩ರ ವರ್ಷದಲ್ಲಿ ರಾಬರ್ಟ್ ಸೌತೀ ಅವರ ಕಾಲಾನಂತರದಲ್ಲಿ ವರ್ಡ್ಸ್ ವರ್ತರನ್ನು ಅವರ ಜೀವಿತಾವಧಿಯವರೆಗಿನ ಇಂಗ್ಲೆಂಡಿನ ಪೋಯೆಟ್ ಲಾರಿಯೆಟ್ ಎಂದು ಹೆಸರಿಸಿ ಗೌರವಿಸಲಾಯಿತು.
ವಿದಾಯ
[ಬದಲಾಯಿಸಿ]ವರ್ಡ್ಸ್ ವರ್ತರು ಏಪ್ರಿಲ್ ೨೩, ೧೮೫೦ರಲ್ಲಿ ನಿಧನರಾದರು.
ಪ್ರಮುಖ ಕೃತಿಗಳು
[ಬದಲಾಯಿಸಿ]- Lyrical Ballads, with a Few Other Poems (1798)
- "Simon Lee"
- "We are Seven"
- "Lines Written in Early Spring"
- "Expostulation and Reply"
- "The Tables Turned"
- "The Thorn"
- "Lines Composed A Few Miles above Tintern Abbey"
- Lyrical Ballads, with Other Poems (1800)
- Preface to the Lyrical Ballads
- "Lucy Gray"
- "The Two April Mornings"
- "Nutting"
- "The Ruined Cottage"
- "Michael"
- "The Kitten At Play"
- Poems, in Two Volumes (1807)
- Guide to the Lakes (1810)
- " To the Cuckoo "
- The Excursion (1814)
- Laodamia (1815, 1845)
- The Prelude (1850)