ಗಂಗಮ್ಮ ಕೇಶವಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Gamaki G.jpg
'ಗಂಗಮ್ಮ ಕೇಶವಮೂರ್ತಿ'

ಗಮಕವನ್ನು ಹಾಡುತ್ತಲೇ ತಮ್ಮ ಜೀವನವನ್ನು ಕಳೆದು, ಸಾಧನೆ ಮಾಡಿ ಅನೇಕರಿಗೆ ಸ್ಫೂರ್ತಿಯಾಗಿರುವ ಗಂಗಮ್ಮ ಕೇಶವಮೂರ್ತಿ,ಯವರಿಗೆ ಗಮಕದಲ್ಲಿ ಆಸಕ್ತಿ ಬೆಳೆದಿದ್ದು, ತಂದೆಯವರಿಂದಾಗಿ. ಶಾಲೆಯ ಉಪಾಧ್ಯಾಯರಾಗಿದ್ದ ಅವರಿಗೆ, ಬೇರೆ ಬೇರೆ ಊರುಗಳಿಗೆ ವರ್ಗವಾಗುತ್ತಿತ್ತು. ಹೀಗಾಗಿ ಅವರು ಎಲ್ಲಿಗೆ ಹೋದರೂ ಅಲ್ಲಿನ ವಿಶೇಷತೆಯನ್ನು ಗಮನಿಸಿ ಕಲಿತುಕೊಳ್ಳುತ್ತಿದ್ದರು. ಅವರ ವಿಶೇಷ ಆಸಕ್ತಿ ಇದ್ದದ್ದು ಹಾಡುಗಳನ್ನು ಹಾಡುವುದರಲ್ಲಿ. ಶಾಲೆಯಲ್ಲಿನ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅವರಿಗೆ ತಿಳಿದಿದ್ದ ಸಂಗೀತ, ಮತ್ತು ಗಮಕ ಕಲೆ,ಯನ್ನು ಮಗಳಿಗೆ ಹೇಳಿಕೊಡುತ್ತಿದ್ದರು. ತಾಯಿಯವರಿಗೆ ಸೋಬಾನೆ ಪದ, ತುಳಸಿಪದ, ಮೊದಲಾದ ಅನೇಕ ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಅಭ್ಯಾಸವಿತ್ತು. ಅವರು ತಮ್ಮ ಜ್ಞಾಪಕ ಶಕ್ತಿಯಿಂದ ಪುಸ್ತಕ ನೋಡದೆ ಸುಮಾರು, ೨,೦೦೦ ಪದ್ಯಗಳನ್ನು ಹಾಡುವಷ್ಟು ಸಮರ್ಥರಾಗಿದ್ದರು. ಈ ವಾತಾವರಣದಲ್ಲಿ ಹುಟ್ಟಿ ಬೆಳೆದ ಬಾಲೆ ಗಂಗಮ್ಮನವರಿಗೆ ಸಹಜವಾಗಿಯೇ ಸಂಗೀತದಲ್ಲಿ ಆಸಕ್ತಿ ಬೆಳೆಯಿತು. 'ಎಸ್ಸೆಸ್ಸೆಲ್ಸಿ' ಮುಗಿದ ನಂತರ ಅವರನ್ನು ಬೆಂಗಳೂರಿಗೆ ಕೊಟ್ಟು ಮದುವೆ ಮಾಡಿದರು. ಆಗ ಮನೆಯಲ್ಲಿ ಕುಳಿತು ಬೇಸರ.ಏನಾದರೂ ಸಾಧನೆ ಮಾಡಬೇಕೆಂಬ ಆಸೆಯಿತ್ತು. ಮೊದಲಿಂದ ಕಲಿತ ಸಂಗೀತ,`ಗಮಕ' ಅವರಿಗೆ ದಾರಿ ದೀಪವಾಯಿತು. ಗಮಕ ಕಲೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಮನಸ್ಸಾಯಿತು. ಆದರೆ ತಕ್ಕ ಗುರುಗಳು ತಕ್ಷಣ ಸಿಗುವುದು ಕಷ್ಟವಾಗಿತ್ತು. ಯಾರು ಚೆನ್ನಾಗಿ ಹಾಡ್ತಾರೆ ಅಂತ ಹೇಳಿದರೋ ಅವರನ್ನೇ ಹುಡುಕಿಕೊಂಡು ಅವರಲ್ಲಿ ಹೋಗಿ ಕಲಿತರು.

ಚಿತ್ರ:Gamaka gangamma 2.jpg
'ಗಮಕವಿದುಷಿ,ಗಂಗಮ್ಮ ಕೇಶವಮೂರ್ತಿ'

ಗಂಗಮ್ಮನವರ ಗುರುವರ್ಯರು[ಬದಲಾಯಿಸಿ]

ಆಗಿನ ಕಾಲದ ಸುಪ್ರಸಿದ್ಧ ಗಮಕಿಗಳಾದ ಎಂ.ರಾಘವೇಂದ್ರರಾವ್, ನಂ.ಅಶ್ವತ್ಥನಾರಾಯಣ, ಪೇಟೆ ರಾಮಚಂದ್ರಾಚಾರ್, ಬಿಎಸ್‌ಎಸ್ ಕೌಶಿಕ್ ಗಂಗಮ್ಮನವರಿಗೆ ಕಲಿಸಿದ ಗುರುಗಳು. ಗಮಕ ಕಲೆಯ ಶಾಸ್ತ್ರೀಯ ಗಾಯನದ ಅಭ್ಯಾಸದ ವೇಳೆಯಲ್ಲಿ, ಹಲವು ಜನರು ನಿಮ್ಮ ಧ್ವನಿ ಚೆನ್ನಾಗಿದೆ. ನೀವು ಗಮಕವನ್ನೇ ಹಾಡಿ. ಗಮಕವನ್ನು ಹಾಡಲು ಸೂಕ್ತವಾಗಿದೆ ಎಂದು ಅನೇಕರು ಸಲಹೆ ನೀಡಿದ್ದರಿಂದ ಗಮಕವನ್ನು ಅಭ್ಯಾಸ ಮಾಡಿ ಕಲಿತು ಹಾಡುತ್ತಾ ಬಂದರು.

ಹುಟ್ಟಿದ್ದು ಸಂಗೀತ ಪರಂಪರೆಯ ಪರಿವಾರದಲ್ಲಿ[ಬದಲಾಯಿಸಿ]

ಹಾಸನದಲ್ಲಿ, ೧೨-೪-೧೯೪೦ ರಂದು ಜನನ. ಸಂಗೀತಗಾರರ ಮನೆತನ. ತಂದೆ ವೆಂಕಟರಾಮಯ್ಯನವರು ಸಂಗೀತ ವಿದ್ವಾಂಸರು, ತಾಯಿ ಸಂಪ್ರದಾಯದ ಹಾಡುಗಳನ್ನು ಹಾಡುತ್ತಿದ್ದರು. ಸಂಗೀತವನ್ನು ತಂದೆ ವೆಂಕಟರಾಮಯ್ಯನವರಲ್ಲೇ ಕಲಿತು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ತಾಯಿ, ಸೋಮನಾಯಕಮ್ಮನವರಿಂದ ಸಂಪ್ರದಾಯದ ಹಾಡುಗಳನ್ನು ಕಲಿತಿದ್ದರು. ಹಿರಿಯ ಗಮಕಿಗಳಾದ ಅಶ್ವತ್ಥನಾರಾಯಣ ಅವರ ಬಳಿ ಶಿಕ್ಷಣ ಪಡೆದು ಮುಂದೆ ಬಿ. ಎಸ್. ಎಸ್. ಕೌಶಿಕ್, ಎಂ. ರಾಘವೇಂದ್ರರಾವ್ ಮತ್ತು ಸತ್ಯವತಿ ಕೇಶವಮೂರ್ತಿ ಅವರಲ್ಲಿ ಉತ್ತಮ ಮಾರ್ಗದರ್ಶನ ಪಡೆದರು. ಹರಿಹರದ ಪೇಟೆ ರಾಮಚಂದ್ರಾಚಾರ್ ಅವರಲ್ಲಿ ಸಾಹಿತ್ಯಾಭ್ಯಾಸವಾಯಿತು. ತಮ್ಮ ಹತ್ತನೆಯ ವಯಸ್ಸಿನಿಂದಲೇ ಹಾಡುತ್ತಾ ಬಂದರಿ, ಇವರು ನೀಡಿರುವ ಕಾರ್ಯಕ್ರಮಗಳು ಎರಡು ಸಾವಿರವನ್ನು ಮೀರಿದೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ಹಾಗೂ ಹೊರ ರಾಜ್ಯಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿವಾಹವಾಗಿ ಹರಿಹರದಲ್ಲಿ ನೆಲಸಿದ ಮೇಲೆ, ಅಲ್ಲಿ ಗಮಕ ತರಗತಿಗಳನ್ನು ಪ್ರಾರಂಭಿಸಿ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡಿ ಗಮಕ ಕ್ಷೇತ್ರಕ್ಕೆ ನೀಡಿದ್ದಾರೆ. ವಾಚನ – ವ್ಯಾಖ್ಯಾನಗಳೆರಡರಲ್ಲೂ ಸಾಕಷ್ಟು ಪಾಂಡಿತ್ಯ ಗಳಿಸಿರುವ ಗಂಗಮ್ಮನವರು, ತಮ್ಮ ಶಿಷ್ಯರನ್ನೂ ಅದೆ ಗರಡಿಯಲ್ಲಿ ನಿಷ್ಣಾತರನ್ನಾಗಿ ಮಾಡಿರುವುದು ಒಂದು ವಿಶೇಷ.

ಆಕಾಶವಾಣಿಯಲ್ಲಿ ಹಾಡುಗಾರಿಕೆ[ಬದಲಾಯಿಸಿ]

ಸನ್. ೧೯೬೦ ರಿಂದ ಆಕಾಶವಾಣಿಯಲ್ಲಿ ಕಾವ್ಯ ವಾಚನ ದೇವರನಾಮ, ಭಾವಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

’ಲಕ್ಷ್ಮೀಶ ಗಮಕ ಪಾಠಶಾಲೆಯಸ್ಥಾಪನೆ'[ಬದಲಾಯಿಸಿ]

ಬೆಂಗಳೂರಿಗೆ ಬಂದು ನೆಲಸಿದ ನಂತರ ’ಲಕ್ಷ್ಮೀಶ ಗಮಕ ಪಾಠಶಾಲೆ’ಯನ್ನು ಸ್ಥಾಪಿಸಿ ನೂರಾರು ಗಮಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಿರುವುದೇ ಅಲ್ಲದೆ ಪ್ರತಿ ಸೋಮವಾರ ಸಮಗ್ರ ಕಾವ್ಯ ವಾಚನ ಮಾಲೆಯಲ್ಲಿ ಅನೇಕ ಕಾವ್ಯಗಳ ವಾಚನ – ವ್ಯಾಖ್ಯಾನಗಳನ್ನು ವಿವಿಧ ಗಮಕಿಗಳಿಂದ ನಡೆಸಿದ್ದಾರೆ. ಪರಿಷತ್ತು ನಡೆಸುವ ಪರೀಕ್ಷೆಗಳ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಗಮಕ ಕಲಾ ಪರಿಷತ್ತಿನ ಪಠ್ಯಪುಸ್ತಕ ಪರಿಸ್ಕರಣಾ ಸಮಿತಿಯ ಸಂಚಾಲಕರಾಗಿದ್ದಾರೆ. ಗಂಗಮ್ಮನವರ ಕಂಠಶ್ರೀಯನ್ನು ಬಹಳವಾಗಿ ಮೆಚ್ಚಿಕೊಂಡ ಗಮಕಿ ರಾಘವೇಂದ್ರರಾಯರು,

  • 'ಗಂಡು ಗಮಕಿ',
  • 'ಕ್ಯಾಪ್ಟನ್',
  • 'ಸವ್ಯಸಾಚಿ' ಎಂದು ಕೊಂಡಾಡಿದ್ದಾರೆ.

ಪ್ರಶಸ್ತಿ, ಪುರಸ್ಕಾರಗಳು[ಬದಲಾಯಿಸಿ]

  • ಶಿವಮೊಗ್ಗ ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನಿಂದ ’ಕಾವ್ಯಗಾಯನ ಕಲಾಧರೆ’ಪ್ರಶಸ್ತಿ,
  • ಕಾಳಿಂಗರಾವ್ ಬಳಗದಿಂದ ’ಕಾವ್ಯಗಾನ ಕೋಗಿಲೆ’ಪ್ರಶಸ್ತಿ,
  • ವೆಂಕಟೇಶ ನಾಟ್ಯ ಮಂದಿರ ಮತ್ತು ಮಹಿಳಾ ಅಭ್ಯುದಯ ಸಂಘದಿಂದ ’ಶ್ರೇಷ್ಟಗಮಕಿ’ ಸನ್ಮಾನ.
  • ಶ್ರೀಮದಾನಂದ ತೀರ್ಥ ವಿದ್ಯಾಪೀಠದ ವತಿಯಿಂದ ಹಿರಿಯ ಗಮಕಿ ಮೈ. ಶೇ. ಅನಂತಪದ್ಮನಾಭರಾಯ ಜನ್ಮ ಶತಾಬ್ಧಿ ಉತ್ಸವದಲ್ಲಿ ’ಗಮಕ ವಾಚನ ಕಲಾವತಂಸೆ’ ಬಿರುದಿನೊಂದಿಗ ಸನ್ಮಾನ.
  • ಹರಿಹರದಲ್ಲಿ ನಡೆದ, ಗಮಕ ಕಲೋತ್ಸವದಲ್ಲಿ ಕನಕಗಿರಿ ಲಲಿತಕಲಾ ಸಂಘದವತಿಯಿಂದ ಸನ್ಮಾನಿಸಲ್ಪಟ್ಟಿದ್ದಾರೆ.
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ೧೯೯೭-೯೮ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ.
  • ಕರ್ನಾಟಕ ಗಮಕ ಕಲಾಪರಿಷತ್ತಿನ ಅಧ್ಯಕ್ಷೆ ಪದವಿ.

ಗಮಕ ಶಿಕ್ಷಕಿಯಾಗಿ[ಬದಲಾಯಿಸಿ]

ಆರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯಲು ಬರುತ್ತಿದ್ದರು.ಆದರೆ,ಟೀವಿ ಮತ್ತು ಮೊಬೈಲ್ ಬಂದಂದಿನಿಂದ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಗಮಕ ಕಲೆಯಲ್ಲಿ ಆಸಕ್ತಿ ಉಳಿದಿಲ್ಲ.ಇಂದಿನ ಜನಾಂಗ ಪುಸ್ತಕ ಓದಲು ಇಷ್ಟಪಡುವುದಿಲ್ಲ. ಅಲ್ಪ ತೃಪ್ತರು. ಆದ್ದರಿಂದ, ಅವರಿಗೆ ಜ್ಞಾನ ಕಡಿಮೆಯಾಗಿದೆ. ಗಮಕದಲ್ಲಿ ಒಂದರಿಂದ ಮೂರು ಪಾತ್ರಗಳಿರುತ್ತವೆ. ಆ ಮೂರು ಪಾತ್ರಗಳೇ ನಾವಾಗಬೇಕು. ಯಾವುದನ್ನೇ ಆಗಲಿ ಮನಸ್ಸಿನಿಂದ ಪೂರ್ಣಪ್ರಮಾಣವಾಗಿ ಅನುಭವಿಸಬೇಕು. ನಾವೇ ಆ ಪಾತ್ರಗಳಲ್ಲಿ ಒಂದಾಗಿ ಹೋದರೆ ಮಾತ್ರ ಸಾಧ್ಯವಾಗುತ್ತದೆ. ಅದನ್ನು ಸಾಧಿಸಲು ಅತಿ ಹೆಚ್ಚು ಓದಬೇಕು. ಓದಿ ಅಥವಾ ಅನುಭವದಿಂದ ತಿಳಿದಿದ್ದರಿಂದ ಮಾತ್ರ ಯಾವುದೇ ಪಾತ್ರದಲ್ಲಿ ಒಂದಾಗಲು ಸಾಧ್ಯವಾಗಿದೆ.

ಗಮಕ ಸಮ್ಮೇಳನಾಧ್ಯಕ್ಷೆ[ಬದಲಾಯಿಸಿ]

ವಿದುಷಿ ಗಂಗಮ್ಮ ಕೇಶವಮೂರ್ತಿಯವರು, ೨೦೧೩ ರ ಫೆಬ್ರವರಿ, ೨೧ ರಂದು ಶುರುವಾಗಿ ೩ ದಿನ ಜರುಗುವ, ಬೆಂಗಳೂರಿನ ಗಮಕ ಕಲಾ ಸಮ್ಮೇಳನದ ಕಾರ್ಯಕ್ರಮದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಗಾಯನ ಸಮಾಜದಲ್ಲಿ ನಡೆಯುವ, 'ಕರ್ನಾಟಕ ಗಮಕ ಕಲಾಪರಿಷತ್ತು ಆಯೋಜಿಸುತ್ತಿರುವ ಈ ಸಮ್ಮೇಳನದಲ್ಲಿ ಗಂಗಮ್ಮನವರಿಗೆ 'ಗಮಕ ಕಲಾರತ್ನ' ಎಂಬ ಬಿರುದನ್ನು ಇತ್ತು ಗೌರವಿಸಲಾಗುತ್ತದೆ. ಇದು ಎಲ್ಲರಿಗೂ ಖುಷಿಕೊಡುವ ಸಂಗತಿ. ಸಂತೋಷಕ್ಕಿಂತ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಬರೀ ಭಾಷಣ ಮಾಡುವುದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಕೆಲಸ ಮಾಡಬೇಕು. ಯುವಜನತೆಯಲ್ಲಿ ಗಮಕ ಕಲೆಯ ಬಗ್ಗೆ ಆಸಕ್ತಿ ಬೆಳೆಯಲು ಶಾಲೆಯಲ್ಲಿ ಪಠ್ಯಕ್ರಮದಲ್ಲಿ ಸೇರಿಸಬೇಕು. ಇದಕ್ಕಾಗಿ ವಿಶೇಷ ಪಠ್ಯಕ್ರಮ ಅಳವಡಿಸುವುದು ಬೇಕಿಲ್ಲ. ಶಾಲೆಗಳಲ್ಲಿರುವ ಪದ್ಯಗಳನ್ನೇ ಗಮಕಗಳಂತೆ ಹೇಳಲು ಅಭ್ಯಾಸ ನಡೆಸಬೇಕು. ಆಗಲೇ ನಮ್ಮ ಗಮಕ ಕಲೆಯು ಉಳಿಯಲು ಸಾಧ್ಯ. ಗಮಕಕ್ಕೆ ಭವಿಷ್ಯವಿದೆ; ಗಮಕ ನಶಿಸಿ ಹೋಗುವಂತಹ ಕಲೆಯಲ್ಲ. ಆದರೆ, ಇದನ್ನು ಶಾಲೆಯಿಂದಲೇ ಕಡ್ಡಾಯ ಮಾಡಬೇಕು. ಆಗ ಗಮಕ ಕಲೆಯು ಉಳಿದು ಬೆಳೆಯುತ್ತದೆ. ಗಮಕ ಪ್ರಾಚೀನ ಕಾವ್ಯಗಳನ್ನೇ ಅವಲಂಬಿಸಬೇಕು, ಆಧುನಿಕ ಕವನಗಳನ್ನು ಗಮಕಕ್ಕೆ ಅಳವಡಿಸಲು ಸಾಧ್ಯವೇ ? ಎನ್ನುವ ಪ್ರಶ್ನೆಗೆ ಗಂಗಮ್ಮನವರು ಕೊಡುವ ಉತ್ತರ :" ಸಾಧ್ಯವಾದರೆ ಯಾವುದಾದರೂ ಪ್ರಯೋಗಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ. ಹಳಗನ್ನಡ, ನಡುಗನ್ನಡ ಮತ್ತು ಆಧುನಿಕ ಕನ್ನಡ ಕಾವ್ಯಗಳನ್ನು ಗಮಕಗಳಲ್ಲಿ ಹಾಡುವ ಪ್ರಯೋಗಗಳನ್ನು ಮಾಡಿಕೊಂಡು ಬಂದಿದ್ದೇನೆ". "ಆದರೆ, ಇವುಗಳಲ್ಲಿ ಕುಮಾರವ್ಯಾಸನ ನಡುಗನ್ನಡ ತುಂಬ ಇಷ್ಟವಾಗುತ್ತದೆ. ಬೇಗ ಅರ್ಥ ಮಾಡಿಕೊಂಡು ಹೇಳಬಹುದು", ಎನ್ನುತ್ತಾರವರು.

ಕಾರ್ಯಕ್ರಮದ ವಿವರಗಳು[ಬದಲಾಯಿಸಿ]

ಕರ್ನಾಟಕ ಗಮಕ ಕಲಾ ಪರಿಷತ್ತು: ಗಾಯನ ಸಮಾಜ, ಸಂಜೆ ೪ ಕ್ಕೆ ಉದ್ಘಾಟನೆ- ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ, ಸ್ಮರಣ ಸಂಚಿಕೆ ಬಿಡುಗಡೆ- ಸಚಿವ ಗೋವಿಂದ ಕಾರಜೋಳ, ಏಕರೂಪ ಗಮಕ ವಾಚನದ ಸೀಡಿ ಬಿಡುಗಡೆ- ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಅಧ್ಯಕ್ಷತೆ- ಸಾಹಿತಿ ಹಂಪ ನಾಗರಾಜಯ್ಯ, ಸಮ್ಮೇಳನಾಧ್ಯಕ್ಷರಾದ ಗಮಕ ವಿದುಷಿ ಗಂಗಮ್ಮ ಕೇಶವಮೂರ್ತಿ ಅವರಿಂದ ಭಾಷಣ. ಸಂಜೆ ೬ ಕ್ಕೆ `ಕುಮಾರವ್ಯಾಸ ಭಾರತ' ವಾಚನ- ಗಂಗಮ್ಮ ಕೇಶವಮೂರ್ತಿ, ವ್ಯಾಖ್ಯಾನ- ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಸಂಜೆ ೭ ದಾಸರ ಪದ-ಭಾವಗೀತೆ, ಸಂಜೆ ೭-೪೦ ಕ್ಕೆ ನೂಪುರ ಫೈನ್ ಆರ್ಟ್ಸ್ ಅಕಾಡೆಮಿ ಅವರಿಂದ ಕೂಚಿಪುಡಿ ಶಾಸ್ತ್ರೀಯ ಸಂಗೀತ.