ಇಗ್ನೊಬಲ್ ಪ್ರಶಸ್ತಿ
ನೊಬೆಲ್ ಪ್ರಶಸ್ತಿಗಳನ್ನು ಅತ್ಯುತ್ತಮ ಎನ್ನುವಂತ ಸಂಶೋಧನೆಗಳಿಗೆ ನೀಡಿದರೆ, ಇಗ್ನೊಬಲ್ ಪ್ರಶಸ್ತಿ (Ig Nobel Prize)ಗಳನ್ನು, ಅಸ್ವಾಭಾವಿಕ ಅಥವಾ ಅತೀ ಕಮ್ಮಿ ಪ್ರಾಮುಖ್ಯದ ಸಂಶೋಧನೆಗಳನ್ನು ಕೈಗೊಂಡವರಿಗೆ ನೀಡಲಾಗುತ್ತದೆ. ಪ್ರಶಸ್ತಿ ಸಮಿತಿಯು ಈ ಪ್ರಶಸ್ತಿಯ ಉದ್ದೇಶವನ್ನು, ಮೊದಲು ನಗು ಮೂಡಿಸಿ ನಂತರ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಎಂದಿದೆ. ಈ ಪ್ರಶಸ್ತಿಯು ಕೆಲವೊಮ್ಮೆ ವ್ಯಂಗವಾಗಿಯೂ ನೀಡಲ್ಪಡುತ್ತದೆ. ನೋಬೆಲ್ ಎನ್ನುವ ಪದವನ್ನೇ ಬಳಸಿ ಇಗ್ನೊಬಲ್ ಎಂದರೆ ಪ್ರಾಮುಖ್ಯವಲ್ಲದ ಎನ್ನುವ ಅರ್ಥ ಕೊಡುವ ಪದದ ಮೇಲೆ ಇಗ್ನೊಬಲ್ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರಶಸ್ತಿ ವಿಜೇತರಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಸ್ಯಾಂಡರ್ಸ್ ಥಿಯೇಟರ್ ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರುಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಲ್ಲದೆ ಅಲ್ಲಿ ಪ್ರಶಸ್ತಿ ವಿಜೇತರ ಭಾಷಣವೂ ಇರುತ್ತದೆ. ಅನ್ನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್ ಎನ್ನುವ ವೈಜ್ಞಾನಿಕ ವಿನೋದ ಪತ್ರಿಕೆಯು ಈ ಬಹುಮಾನಗಳನ್ನು ಅಯೋಜಿಸುತ್ತದೆ.
ಇತಿಹಾಸ
[ಬದಲಾಯಿಸಿ]೧೯೯೧ರಲ್ಲಿ ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್ ಪತ್ರಿಕೆಯ ಸಂಪಾದಕರು ಮತ್ತು ಸಹ-ಸ್ಥಾಪಕರಾದ ಮಾರ್ಕ್ ಅಬ್ರಹಾಮ್ ಅವರಿಂದ ಸ್ಥಾಪಿಸಲ್ಪಟ್ಟಿತು. ಆ ಬಾರಿಯ ಪ್ರಶಸ್ತಿಗಳನ್ನು ಮತ್ತೆ ಮಾಡಲೇಬಾರದಂತಹ ಸಂಶೋಧನೆಗಳನ್ನು ಮಾಡಿದ ಹತ್ತು ಜನರಿಗೆ ನೀಡಲಾಯಿತು. ನೋಬಲ್ ಪ್ರಶಸ್ತಿಯ ಐದು ವಿಭಾಗಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಸಾಹಿತ್ಯ ಮತ್ತು ಶಾಂತಿಯ ವಿಭಾಗಗಳೂ ಮತ್ತು ಜೀವಶಾಸ್ತ್ರ, ಸಾರ್ವಜನಿಕ ಆರೋಗ್ಯ, ಇಂಜಿನಿಯರಿಂಗ್ ಸೇರಿದಂತೆ ಹತ್ತು ವಿಭಾಗಗಳನ್ನು ಇಗ್ನೊಬಲ್ ಪ್ರಶಸ್ತಿ ಹೊಂದಿದೆ. ಈ ಪ್ರಶಸ್ತಿಗಳು ವಿನೋದದಿಂದ ಕೂಡಿದ ವೈಜ್ಞಾನಿಕ ಸಂಶೋಧನೆಗಳಿಗೆ ನೀಡುವುದಾದರೂ, ಕೆಲವೊಮ್ಮೆ ವ್ಯಂಗಕ್ಕಾಗಿ ಅಥವಾ ವಿಡಂಬನೆಗಾಗಿಯೂ ನೀಡಲ್ಪಡುತ್ತವೆ.
ಸಮಾರಂಭ
[ಬದಲಾಯಿಸಿ]ಪ್ರಶಸ್ತಿ ಪ್ರದಾನ ಸಮಾರಂಭವು ಮೊದಲಿಗೆ ಎಮ್. ಐ. ಟಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದರೂ, ಈಗ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸ್ಯಾಂಡರ್ಸ್ ಥಿಯೇಟರ್ ನಲ್ಲಿ ನಡೆಯುತ್ತದೆ. ನೈಜ ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರುಗಳಿಂದಲೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಲವಾರು ಬಗೆಯ ವಿನೋದಗಳು ಈ ಸಮಾರಂಭದಲ್ಲಿರುತ್ತವೆ. ಉದಾಹರಣೆಗೆ, ಮಿಸ್. ಸ್ವೀಟೀ ಪೂ ಎಂಬ ಚಿಕ್ಕ ಹುಡುಗಿ, ಭಾಷಣಕಾರರ ಭಾಷಣ ಉದ್ದವಾದರೆ " ದಯವಿಟ್ಟು ನಿಲ್ಲಿಸಿ ನನಗೆ ಬೋರಾಗಿದೆ" ಎಂದು ಅಳುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ "ಈ ಪ್ರಶಸ್ತಿ ನಿಮಗಿನ್ನೂ ಸಿಗದಿದ್ದರೆ ......... ಅದಕ್ಕಿಂತಲೂ ಹೆಚ್ಚಾಗಿ ಈ ಪ್ರಶಸ್ತಿ ನಿಮಗೆ ಸಿಕ್ಕಿದ್ದರೆ ..... ಮುಂದಿನ ವರ್ಷ ಅದೃಷ್ಟ ನಿಮ್ಮ ಜತೆಗಿರಲಿ" ಎನ್ನುವ ಮಾತುಗಳನ್ನು ಹೇಳಲಾಗುತ್ತದೆ .
ಪ್ರಸಾರ
[ಬದಲಾಯಿಸಿ]ಈ ಪ್ರಶಸ್ತಿ ಪ್ರದಾನ ಸಮಾರಂಭದ ಮುದ್ರಿಕೆಯನ್ನು ಅಮೆರಿಕಾದ ನ್ಯಾಷನಲ್ ಪಬ್ಲಿಕ್ ರೇಡಿಯೋ ಪ್ರಸಾರ ಮಾಡುತ್ತದೆ. ಅಲ್ಲದೆ ಅಂತರ್ಜಾಲದಲ್ಲಿ ನೇರ ಪ್ರಸಾರವೂ ಇರುತ್ತದೆ.
೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿಜೇತರು.
[ಬದಲಾಯಿಸಿ]- ಮನೋವೈದ್ಯಕೀಯ ಶಾಸ್ತ್ರ : ಎಡಬಾಗಕ್ಕೆ ವಾಲುವುದರಿಂದ ಐಫಿಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ ಎನ್ನುವ ಸಂಶೋಧನೆಗೆ ಅನಿತಾ ಎರ್ಲಾಂಡ್, ಮತ್ತು ರಾಲ್ಫ್ ಸ್ವಾನ್ (ನೆದರ್ಲ್ಯಾಂಡ್) ಮತ್ತು ಟುಲಿಯೋ ಗೌಡಲೂಪೆ (ಪೆರು)
- ಶಾಂತಿ ಪ್ರಶಸ್ತಿ" ಎಸ್.ಕೆ.ಎನ್. ಕಂಪನಿ.(ರಶಿಯಾ) ಹಳೆಯ ರಷಿಯದ ಸಿಡಿಮದ್ದುಗಳನ್ನು ಹೊಸ ವಜ್ರಗಳನ್ನಾಗಿ ಮಾರ್ಪಡಿಸಿದ್ದಕ್ಕೆ.
- ಶಬ್ದಶಾಸ್ತ್ರ ಪ್ರಶಸ್ತಿ : ವ್ಯಕ್ತಿಯ ಮಾತುಗಳನ್ನು, ಕೆಲವೇ ಸೂಕ್ಷ್ಮ ಸೆಕೆಂಡುಗಳ ತಡೆಯ ನಂತರ ಪ್ರತಿಧ್ವನಿಸುವಂತೆ ಮಾಡಿ, ವ್ಯಕ್ತಿ ಮಾತಾಡದಂತೆ ತಡೆಯೊಡ್ಡುವ ಸಂಶೋಧನೆ ಮಾಡಿದ್ದಕ್ಕೆ. ಕಜುತುಕಾ ಕುರಿಹಾರ ಮತ್ತು ಕೋಜಿ ಸುಕಾಡ (ಜಪಾನ್) ಅವರಿಗೆ.
- ನರಶಾಸ್ತ್ರ ಪ್ರಶಸ್ತಿ. ಸತ್ತ ಸಾಲ್ಮನ್ ಮೀನೂ ಸೇರಿದಂತೆ ಎಲ್ಲಾದರೂ, ಮಿದುಳಿನ ಚಟುವಟಿಕೆ ಗಮನಿಸುವದುಕ್ಕಾಗಿ, ಸಂಕೀರ್ಣ ಉಪಕರಣಗಳನ್ನು ಮತ್ತು ಸರಳ ಲೆಕ್ಕಗಳನ್ನು ರೂಪಿಸಿದ್ದಕ್ಕೆ, ಕ್ರೇಗ್ ಬೆನೆಟ್ ಅಬಿಗೇಲ್ ಬೇರ್ಡ್, ಮೈಕೇಲ್ ಮಿಲ್ಲರ್ ಮತ್ತು ಜಾರ್ಜ್ ವೋಲ್ಫೋರ್ಡ್ (ಅಮೆರಿಕಾ ಸಂಯುಕ್ತ ಸಂಸ್ಥಾನ).
- ರಸಾಯನ ಶಾಸ್ತ್ರ : ಸ್ವೀಡನ್ನಿನ ಆಂಡರ್ಸ್ಲಾವ್ ನಗರದ ಕೆಲವು ಮನೆಗಳ ಜನರ ಕೂದಲು ಹಸಿರಾಗುವ ಕಾರಣ ಕಂಡುಹಿಡಿದ್ದಕ್ಕೆ, ಜೊಹಾನ್ ಪೀಟರ್ಸನ್ (ಸ್ವೀಡನ್) ಅವರಿಗೆ.
- ಸಾಹಿತ್ಯ ಪ್ರಶಸ್ತಿ : ವರದಿಗಳ ಬಗ್ಗೆ ವರದಿಯ ವರದಿಗಳನ್ನು ತಯಾರು ಮಾಡುವ ಬಗ್ಗೆ ಸಲಹೆ ನೀಡುವ ವರದಿಗಳ ಬಗೆಗಿನ ವರದಿಗಳ ವರದಿಯನ್ನು ನೀಡಿದ್ದಕ್ಕೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಕೌಂಟಬಿಲಿಟಿ ಕಚೇರಿಗೆ.
- ಭೌತಶಾಸ್ತ್ರ ಪ್ರಶಸ್ತಿ : ವ್ಯಕ್ತಿಯೊಬ್ಬ/ಳು ಕಟ್ಟಿಕೊಳ್ಳುವ ಕುದುರೆಬಾಲದ ಜಡೆಯ ಆಕಾರ ಮತ್ತು ಚಲನೆಯನ್ನು ನಿರ್ಧರಿಸುವ ಬಲಗಳ ತುಲನೆಯನ್ನು ಲೆಕ್ಕಿಸಿದ್ದಕ್ಕಾಗಿ, ಜೋಸೆಫ್ ಕೆಲ್ಲರ್ (ಅಮೆರಿಕಾ) ರೇಮಂಡ್ ಗೋಲ್ಡ್ಸ್ಟೀನ್ (ಅಮೆರಿಕಾ ಮತ್ತು ಇಂಗ್ಲೆಂಡ್), ಪ್ಯಾಟ್ರಿಕ್ ವಾರೆನ್ ಮತ್ತು ರಾಬಿನ್ ಬಾಲ್ (ಇಂಗ್ಲೆಂಡ್) ಇವರಿಗೆ.
- ದ್ರವಚಲನ ಶಾಸ್ತ್ರ ಪ್ರಶಸ್ತಿ: ವ್ಯಕ್ತಿಯೊಬ್ಬ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ನಡೆದಾಗ ಏನಾಗುತ್ತದೆ ಎಂದು ತಿಳಿಯಲು ದ್ರವದ ಎರಚುವಿಕೆಯ ಚಲನೆಯನ್ನು ಅಭ್ಯಾಸ ಮಾಡಿದ ಸಂಶೋಧನೆಗೆ, ರೌಸ್ಲನ್ ಕ್ರೆಚೆಟ್ನಿಕೋವ್(ಅಮೆರಿಕಾ, ರಷಿಯಾ ಮತ್ತು ಕೆನಡಾ) ಮತ್ತು ಹಾನ್ಸ್ ಮೇಯರ್ (ಅಮೆರಿಕಾ) ಅವರಿಗೆ
- ದೇಹ ರಚನಾಶಾಸ್ತ್ರ ಪ್ರಶಸ್ತಿ: ಚಿಂಪಾಂಜಿಗಳು ಬೇರೆ ಚಿಂಪಾಂಜಿಗಳ ಹಿಂಭಾಗದ ಚಿತ್ರ ನೋಡುವುದರಿಂದಲೇ ಅವನ್ನು ಗುರುತು ಹಿಡಿಯಬಲ್ಲುವು ಎನ್ನುವ ಸಂಶೋಧನೆಗೆ ಫ಼್ರಾನ್ಸ್ ಡಿ ವಾಲ್ (ನೆದರ್ಲ್ಯಾಂಡ್ ಮತ್ತು ಅಮೆರಿಕಾ) ಜೆನ್ನಿಫರ್ ಪೊಕೊರ್ನಿ (ಅಮೆರಿಕಾ) ಇವರಿಗೆ.
- ಔಷಧಿ ಶಾಸ್ತ್ರ ಪ್ರಶಸ್ತಿ: ಕೊಲೋನೊಸ್ಕೋಪಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗಳ ಹೊಟ್ಟೆ ಒಡೆದುಹೋಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾದ ಸಲಹೆಗಳನ್ನು ವೈದ್ಯರಿಗೆ ನೀಡಿದ್ದಕ್ಕೆ, ಇಮಾನ್ಯುಯೆಲ್ ಬೆನ್-ಸೌಸನ್ ಮತ್ತು ಮೈಕೇಲ್ ಅಂಟಾನಿಯೆಟ್ಟಿ (ಫ಼್ರಾನ್ಸ್) ಅವರಿಗೆ.
- ವಿಶೇಷ ಪ್ರಶಸ್ತಿ : ೧೯೯೧ರ ತಪ್ಪೊಂದನ್ನು ತಿದ್ದಿಕೊಳ್ಳುವ ಸಲುವಾಗಿ, ಈಗ ಜೋಸೆಫ್ ಕೆಲ್ಲರ್ ಅವರಿಗೆ ಮತ್ತೆ ಪ್ರಶಸ್ತಿ ನೀಡಲಾಗುತ್ತಿದೆ. ಟೀ ಹರಿಯದಂತಿರುವ ಟೀ ಪಾಟ್ ಕೊಳವೆಯನ್ನು ಮಾಡಿದ್ದಕ್ಕಾಗಿ.. ಈ ಮೂಲಕ ಅವರು ೧೯೯೯ ಮತ್ತು ೨೦೧೨ ಎರಡು ಬಾರಿ ಇಗ್ನೊಬಲ್ ಪ್ರಶಸ್ತಿ ಗಳಿಸುತ್ತಿದ್ದಾರೆ.
೨೦೧೦ ರ ಇಗ್ನೊಬಲ್ ಪ್ರಶಸ್ತಿಗಳ ವಿಜೇತರು
[ಬದಲಾಯಿಸಿ]- ಇಂಜಿನಿಯರಿಂಗ್ ಪ್ರಶಸ್ತಿ : ಕರೀನಾ ಅಸೆವೆಡೋ ಮತ್ತು ಅಗ್ನೆಸ್ ರೋಕಾ ಲಂಡನ್ ಜೂಯಲಾಜಿಕಲ್ ಸೊಸೈಟಿ. ಮತ್ತು ಡಿಅನೆ ಗೆಂಡ್ರೋನ್ : ನೀಲಿ ತಿಮಿಂಗಲಗಳ ಮೂಗಿನ ಸಿಂಬಳ ಸಂಗ್ರಹಿಸಲು ರಿಮೋಟ್ ಕಂಟ್ರೋಲ್ ಇರುವ ಹೆಲಿಕಾಪ್ಟರ್ ಬಳಸುವ ತಂತ್ರಜ್ಞಾನ ರೂಪಿಸಿದ್ದಕ್ಕೆ.
- ವೈದ್ಯಕೀಯ ಪ್ರಶಸ್ತಿ : ಸೈಮೊನ್ ರೈಟ್ ವೆಲ್ಡ್ , ಅಮ್ಸ್ ಟರ್ ಡ್ಯಾಮ್ ವಿಶ್ವವಿದ್ಯಾನಿಲಯ. ಮತ್ತು ಇಲಿಯಾ ವ್ಯಾನ್ ಬೀಸ್ಟ್ ಟಿಲ್ಬರ್ಗ್ ವಿಶ್ವವಿದ್ಯಾನಿಲಯ : ರೋಲರ್ ಕೋಸ್ಟರ್ ಮೇಲಿನ ಪಯಣದಿಂದ ಅಸ್ತಮಾವನ್ನು ಗುಣಪಡಿಸಬಹುದೆಂಬ ಸಂಶೋಧನೆಗೆ
- ಸಾರಿಗೆ ಯೋಜನೆ ಪ್ರಶಸ್ತಿ : ತೊಷಿಯಾಕು ನಾಕಾಗಾಕಿ, ಅತ್ಸುಶಿ ಟೆರೋ, ಸೀಜಿ ಟಕಾಗಿ, ಟೆತ್ಸು ಸೈಗುಸಾ ,ಕೆಂಟಾರೋ ಇಟೋ, ಕೆಂಜಿ ಯೂಮಿಕಿ , ರಯೋ ಕೊಬಾಯಾಶಿ , ಡಾನ್ ಬೆಬ್ಬರ್, ಮಾರ್ಕ್ ಫ್ರಿಕರ್, ಮರದ ಮೇಲೆ ಬೆಳೆಯುವ ಬೂಸ್ಟಿನ ಮಾದರಿ ಅನುಸರಿಸಿ ಅತ್ಯಂತ ಲಾಭದಾಯಕವಾದ ರೈಲು ಮಾರ್ಗದ ಯೋಜನೆ ಹಾಕಬಹುದೆಂದು ತೋರಿಸಿಕೊಟ್ಟಿದ್ದಕ್ಕೆ
- ಭೌತಶಾಸ್ತ್ರ ಪ್ರಶಸ್ತಿ: ಲಿಯಾನ್ ಪಾರ್ಕಿನ್, ಶೀಲಾ ವಿಲಿಯಮ್ಸ್ ಮತ್ತು ಪ್ಯಾಟ್ರಿಷಿಯಾ ಪ್ರೀಸ್ಟ್ , ಒಟಾಗೋ ವಿಶ್ವವಿದ್ಯಾನಿಲಯ ನ್ಯೂಜಿಲ್ಯಾಂಡ್. : ಹಿಮದಾರಿಗಳಲ್ಲಿ ನಡೆದಾಡುವ ಜನ ಚಳಿಗಾಲದಲ್ಲಿ ತಮ್ಮ ಶೂ ಮೇಲುಗಡೆ ಮತ್ತೊಂದು ಸಾಕ್ಸ್ ಧರಿಸಿದರೆ ಜಾರಿ ಬೀಳುವುದು ಕಮ್ಮಿಯಾಗುತ್ತದೆಂದು ತೋರಿಸಿಕೊಟ್ಟಿದ್ದಕ್ಕಾಗಿ .
- ಶಾಂತಿ ಪ್ರಶಸ್ತಿ: ರಿಚರ್ಡ್ ಸ್ಟೀಫನ್, ಜಾನ್ ಅಟ್ಕಿನ್ಸ್ ಮತ್ತು ಆಂಡ್ರ್ಯೂ ಕಿಂಗ್ ಸ್ಟನ್, ಕೀಲೆ ವಿಶ್ವವಿದ್ಯಾನಿಲಯ , ಹರಕೆ ಹೊರುವುದು ನೋವನ್ನು ಕಡಿಮೆ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆ ನಿಜ ಎಂದು ಪ್ರಮಾಣೀಕರಿಸಿದ್ದಕ್ಕಾಗಿ.
- ಸಾರ್ವಜನಿಕ ಆರೋಗ್ಯ ಪ್ರಶಸ್ತಿ: ಮಾನ್ಯುಯೆಲ್ ಬಾರ್ಬಿಟೋ, ಚಾರ್ಲ್ಸ್ ಮಾಥ್ಯೂ, ಲಾರಿ ಟೈಲರ್ , ಮೇರಿಲ್ಯಾಂಡ್ ಅಮೆರಿಕಾ ಸಂಯುಕ್ತ ಸಂಸ್ಥಾನ . ಪ್ರಯೋಗದ ಮೂಲಕ ಬ್ಯಾಕ್ಟೀರಿಯಾಗಳು ಗಡ್ಡ ಬಿಟ್ಟ ವಿಜ್ಯಾನಿಗಳ ಗಡ್ಡದಲ್ಲಿರುತ್ತವೆ ಎಂದು ತೋರಿಸಿಕೊಟ್ಟಿದ್ದಕ್ಕಾಗಿ
- ಅರ್ಥಶಾಸ್ತ್ರ ಪ್ರಶಸ್ತಿ: ಗೋಲ್ಡ್ ಮ್ಯಾನ್ ಸಾಶ್, ಎ ಐ ಜಿ, ಲೆಹ್ಮಾನ್ ಬ್ರದರ್ಸ್, ಬೀರ್ ಸ್ಟೀರ್ನ್ಸ್, ಮೆರಿಲ್ ಲಿಂಚ್, ಮತ್ತು ಮಾಗ್ನೇಟರ್ ನ ಉನ್ನತ ಅಧಿಕಾರಿಗಳು ಮತ್ತು ನಿರ್ದೇಶಕರುಗಳಿಗೆ, ಲಾಭ ಹೆಚ್ಚು ಮಾಡಿ, ರಿಸ್ಕ್ ಕಡಿಮೆ ಮಾಡುವ ರೀತಿಯಲ್ಲಿ ಹಣ ಹೂಡಿಕೆಯ ಹೊಸಬಗೆಗಳನ್ನು ಸಂಶೋಧಿಸಿದ್ದಕ್ಕೆ
- ರಸಾಯನ ಶಾಸ್ತ್ರ ಪ್ರಶಸ್ತಿ : ಎರಿಕ್ ಅಡಮ್ಸ್ , ಸ್ಕಾಟ್ ಸೊಕೊಲೊಫ್ ಸ್ಕಿ , ಸ್ಟೀಫನ್ ಮಸುಟಾನಿ ಮತ್ತು ಬ್ರಿಟಿಷ್ ಪೆಟ್ರೋಲಿಯಮ್ : ನೀರು ಮತ್ತು ಪೆಟ್ರೋಲ್ ಬೆರೆಯುವುದಿಲ್ಲವೆನ್ನುವ ಹಳೆಯ ನಂಬಿಕೆ ಸುಳ್ಳೆಂದು ತೋರಿಸಿದ್ದಕ್ಕೆ .
- ಮ್ಯಾನೇಜ್ ಮೆಂಟ್ ಪ್ರಶಸ್ತಿ: ಅಲೆಸಾಂಡ್ರೋ ಪ್ಲುಚಿನೋ, ಆಂಡ್ರಿಯಾ ರಾಪಿಸಾರ್ಡಾ ಮತ್ತು ಸೆಸಾರೇ ಗಾರೋಫಾಲೋ , ಇಟಲಿ , ಸಂಸ್ಥೆಯೊಂದರಲ್ಲಿ ಪ್ರಮೋಷನ್ ನೀಡಲು ಯಾವುದೇ ನೀತಿ ಅನುಸರಿಸದೆ , ಸುಮ್ಮನೆ ಪದೋನ್ನತಿ ನೀಡುವುದರಿಂದ ಸಂಸ್ಥೆಗಳ ಚಾಕಚಕ್ಯತೆ ಹೆಚ್ಚುತ್ತದೆ ಎಂದು ಗಣಿತೀಯವಾಗಿ ನಿರೂಪಿಸಿದ್ದಕ್ಕಾಗಿ
- ಜೀವಶಾಸ್ತ್ರ ವಿಭಾಗ: ಲಿಬಿಯವೋ ಝಾಂಗ್, ಮಿನ್ ಟಾನ್, ಝು, ಜಿಯಾನ್ ಪಿಂಗ್ ಯೆ, ತಿಯು ಹೋಂಗ್, ಶಾನ್ಯಿ ಝೂ, ಶುಯಿ ಝಾಂಗ್, ಚೀನಾ ಮತ್ತು ಗರೆತ್ ಜೋನ್ಸ್, ಬಾವಲಿಗಳ ಒಂದು ಬಗೆಯಲ್ಲಿ ಮುಖಮೈಥುನದಿಂದ ಮಿಥುನದ ಸಮಯ ಹೆಚ್ಚಾಗುತ್ತದೆಂಬ ಸಂಶೋಧನೆಗೆ
ಮೇಕೆ ಮಾನವ'ನಿಗೆ ಐಜಿ ನೊಬೆಲ್ ಪ್ರಶಸ್ತಿ-೨೦೧೬
[ಬದಲಾಯಿಸಿ]ಒಟ್ಟಾವೋ, ಸೆ.25- ಜಗತ್ತಿನಲ್ಲಿ ಮನುಷ್ಯ ಅತೀ ಬುದ್ಧಿವಂತ ಪ್ರಾಣಿ. ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟವಾದ ತಂತ್ರಜ್ಞಾನ ಬೆಳೆಸಿಕೊಂಡು ಐತಿಹಾಸಿಕ ಸಾಧನೆಗೈದು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪ್ರಾಣಿಗಳ ರೀತಿಯಲ್ಲಿ ಗುಣ-ನಡವಳಿಕೆಗಳನ್ನು ರೂಪಿಸಿಕೊಂಡು ಐಜಿ ನೊಬೆಲ್ ಪುರಸ್ಕಾರಕ್ಕೆ ಭಾಜನವಾಗಿದ್ದಾನೆ. ಸ್ವಿಟ್ಜರ್ಲ್ಯಾಂಡ್ನ ಥಾಮಸ್ ಎಂಬ ವ್ಯಕ್ತಿಯು ಮೇಕೆಗಳ ರೀತಿಯಲ್ಲಿ ಬದುಕುತ್ತಿದ್ದಾನೆ. ಈತ ಹೆಚ್ಚಿನ ಸಮಯವನ್ನು ಮೇಕೆಗಳ ಜತೆ ಕಳೆಯುತ್ತಿದ್ದಾನೆ, ಮೇಕೆಗಳಂತೆ ನಡೆದಾಡುತ್ತಾನೆ. ಅದರ ಜತೆಯೇ ಹುಲ್ಲು ತಿನ್ನುತ್ತಾನೆ. ಅವುಗಳಂತೆ ನಡೆದಾಡಲು ಕೃತಕ ಕಾಲುಗಳನ್ನು ಅಳವಡಿಸಿಕೊಂಡು ಅವುಗಳ ಜತೆ ಬೆಟ್ಟ-ಗುಡ್ಡಗಳಲ್ಲಿ ನಡೆದಾಡುತ್ತಾನೆ. [೧]