ದೊಡ್ಡಬಳ್ಳಾಪುರದ ರುಮಾಲೆ ಚನ್ನಬಸವಯ್ಯ
ಕರ್ನಾಟಕದ ಚಿತ್ರಕಲಾ ಇತಿಹಾಸದಲ್ಲಿ ರುಮಾಲೆ ಚೆನ್ನಬಸವಯ್ಯ (1910-1988) ಅವರದ್ದು ಅವಿಸ್ಮರಣೀಯ ಹೆಸರು. ಕಲಾವಿದರಾಗಿ ಮಾತ್ರವಲ್ಲ- ಸ್ವಾತಂತ್ರ್ಯ ಹೋರಾಟಗಾರರಾಗಿ, ಶಾಸಕರಾಗಿ, ಸೇವಾದಳದ ಮುಖಂಡರಾಗಿ ಕಾರ್ಯ ನಿರ್ವಹಿಸಿದ ಅಗ್ಗಳಿಕೆ ಅವರದು. ರುಮಾಲೆ ಅವರ ಜನ್ಮಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಹೊರಬಂದಿರುವ ‘ಜೀವಮೇಳ’ ಕೃತಿ ಅಪರೂಪದ ಕಲಾವಿದನ ಸಾಧನೆಯನ್ನು ನೆನಪಿಸಿಕೊಳ್ಳುವ- ದಾಖಲಿಸುವ- ಕೆಲಸವನ್ನು ಮಾಡಿದೆ. ಪ್ರಯೋಗಗಳ ಅಬ್ಬರದಲ್ಲಿ ಹಿರಿಯರ ನೆನಪು-ಸಾಧನೆಗಳು ಮಸುಕಾಗುತ್ತಿರುವ ದಿನಗಳಿವು. ಇಂಥ ಸಂದರ್ಭದಲ್ಲಿ ಮಸುಕಾಗುತ್ತಿರುವ ಹಾಗೂ ಅವಜ್ಞೆಗೆ ಗುರಿಯಾಗಿರುವ ರುಮಾಲೆ ಅವರನ್ನು ಮತ್ತೆ ನೆನಪಿಸುವ ಕೆಲಸವನ್ನು ಕೆ.ಎಸ್.ಶ್ರೀನಿವಾಸಮೂರ್ತಿ ಮಾಡಿದ್ದಾರೆ. ರುಮಾಲೆ ಬಗ್ಗೆ ಲೇಖಕರಿಗಿರುವ ಸಕಾರಣ ಪ್ರೀತಿ ಹಾಗೂ ಗೌರವ ಪುಸ್ತಕದಲ್ಲಿ ಎದ್ದುಕಾಣುವಂತಿದೆ.
ಪ್ರಕೃತಿ ಚಿತ್ರಗಳನ್ನು ಬಿಡಿಸುವುದರಲ್ಲಿ ರುಮಾಲೆ ಅವರಿಗೆ ಆಸಕ್ತಿ. ಜಲವರ್ಣ ಹಾಗೂ ತೈಲವರ್ಣದಲ್ಲಿ ಅವರ ಉತ್ಕೃಷ್ಟ ಕೃತಿಗಳು ಮೂಡಿಬಂದಿವೆ. ಅವರ ಚಿತ್ರಗಳು ಆ ಕಾಲದ ಬೆಂಗಳೂರಿನ ಪರಿಸರವನ್ನು ಹಿಡಿದಿಡುವ ಪ್ರಯತ್ನದಂತೆ ಕಾಣುತ್ತವೆ. ಗುಲ್ಮೊಹರ್, ಬ್ರಹ್ಮಕಮಲ, ಜಕರಾಂಡ, ಬೋಗನ್ವಿಲ್ಲಾಗಳ ಚೆಲುವನ್ನು ಅವರು ಹಿಡಿದಿಟ್ಟಿರುವ ರೀತಿ ವಿಶಿಷ್ಟವಾದುದು. ಈ ಕಲಾಕೃತಿಗಳಲ್ಲಿ ರೋಚಕತೆಯಾಗಲಿ, ಚೆಚ್ಚಿಬೀಳಿಸುವ ಗುಣವಾಗಲೀ ಇಲ್ಲ. ಬದಲಿಗೆ ಶಾಂತ ವಾತಾವರಣವೊಂದು ಅಲ್ಲಿ ಕಾಣಿಸುತ್ತದೆ. ಪ್ರಖರ ಹಾಗೂ ನಿಖರ ರೇಖೆಗಳು ಗಮನಸೆಳೆಯುತ್ತವೆ. ವರ್ಣ ಸಂಯೋಜನೆಯ ಸೂಕ್ಷ್ಮಗಳು ಚಿತ್ರಕಲಾ ವಿದ್ಯಾರ್ಥಿಗಳಿಗೆ ಪಾಠದಂತಿದೆ.
ಮೇಲುನೋಟಕ್ಕೆ ಸರಳವಾಗಿ ಕಾಣಿಸುವ ರುಮಾಲೆ ಅವರ ಚಿತ್ರಗಳ ಆಂತರ್ಯ ಹಾಗೂ ಅವುಗಳಲ್ಲಿನ ತಾಂತ್ರಿಕ ಅಂಶಗಳ ವಿವರಣೆ ಕೃತಿಯಲ್ಲಿದೆ. ‘ವ್ಯಾನ್ ಗೋ ಪ್ರಭಾವ ರುಮಾಲೆ ಅವರ ಕೃತಿಗಳಲ್ಲಿದೆ’ ಎನ್ನುವುದು ಕೆಲವರ ಅನಿಸಿಕೆ. ಇದನ್ನು ನಿರಾಕರಿಸುವ ಲೇಖಕರು ರುಮಾಲೆ ಅವರ ಸ್ವಂತಿಕೆಯನ್ನು ವಿಸ್ತೃತವಾಗಿ ವಿವರಿಸುತ್ತಾರೆ.
ಶ್ರೀನಿವಾಸ ಮೂರ್ತಿ ಅವರ ಬರಹದ ಶೈಲಿ ಚಿತ್ರವತ್ತಾದುದು. ಒಂದು ಉದಾಹರಣೆ ನೋಡಿ: ‘ಶ್ರೀ ರುಮಾಲೆ ಚೆನ್ನಬಸವಯ್ಯನವರು ಇಲ್ಲಿ ನಮಗಾಗಿ ಸಂಗ್ರಹಿಸಿಟ್ಟಿರುವ ಅವರ ಚಿತ್ರಗಳ ಮುಂದೆ ಒಂದು ಸಲ ಸುಮ್ಮನೆ ನಿಲ್ಲೋಣ. ನಗರದ ಹೊರ ಆವರಣದ ರಿಕ್ಷಾ, ಕಾರು, ಬಸ್ಸುಗಳ ಚೀರಾಟಗಳು ದೂರವಾಗಲಿ. ಮಾತು ಮೀರಿದ ನೀರವ, ಪ್ರಶಾಂತ ಪರಿಸರವೊಂದು ಕಂಡೂ ಕಾಣದಂತೆ ಅನಾಯಾಸವಾಗಿ ನಮ್ಮನ್ನು ಆವರಿಸತೊಡಗುತ್ತದೆ. ಚಿತ್ತಚಾಂಚಲ್ಯ ಬಿಟ್ಟ ನಮ್ಮ ಕಣ್ಣ ಮುಂದೆ ಅನೇಕ ಭವ್ಯರೂಪಗಳು ಒಂದೊಂದಾಗಿ ಮೈದಾಳತೊಡಗುತ್ತವೆ’.
1936ರಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಿದ್ದಾಗ ಅವರನ್ನು ಭೇಟಿ ಮಾಡಿದ ರುಮಾಲೆ ತಮ್ಮ ಚಿತ್ರಗಳನ್ನು ತೋರಿಸಿದ್ದರು. ಆ ಚಿತ್ರಗಳನ್ನು ಗಾಂಧೀಜಿ ಮೆಚ್ಚಿಕೊಂಡಿದ್ದರಂತೆ. ಕಲೆ ಮತ್ತು ಬದುಕು ಭಿನ್ನವಲ್ಲ ಎಂದು ನಂಬಿದ್ದ ರುಮಾಲೆ ಅವರದ್ದು ಪರಿಶುದ್ಧ ಕಲೆ. ಅವರ ಕಲಾಕೃತಿಗಳು ಕನ್ನಡ ಸಂಸ್ಕೃತಿಯನ್ನು ಬೆಳೆಸಿವೆ. ಹಿರಿಯ ಕಲಾವಿದರ ಒತ್ತಾಸೆ, ಪ್ರಭಾವಗಳಿದ್ದರೂ ಅವರದ್ದು ಸ್ವಕಲಿಕೆಯ ಏಕಲವ್ಯ ರೀತಿಯ ಶಿಕ್ಷಣ. ನೋಡಿ, ಅನುಕರಿಸಿ, ಅನುಸರಿಸಿ- ಕೊನೆಗೆ ತಮ್ಮದೇ ಆದ ಕ್ರಮವನ್ನು ರೂಢಿಸಿಕೊಂಡ ಅಗ್ಗಳಿಕೆ ಅವರದ್ದು.
ರುಮಾಲೆ ಅವರನ್ನು ಅಂದಿನ ಸರ್ಕಾರ ವಿಧಾನ ಪರಿಷತ್ತಿಗೆ (1956-1960) ಅವಧಿಯಲ್ಲಿ ನಾಮಕರಣ ಮಾಡಿತ್ತು. ಪರಿಷತ್ ಸದಸ್ಯರಾಗಿ ಚಿತ್ರಕಲೆಗೆ ಪೂರಕವಾದ ಅನೇಕ ಕಾರ್ಯಕ್ರಮಗಳ ಜಾರಿಗೆ ರುಮಾಲೆ ಸರ್ಕಾರವನ್ನು ಒತ್ತಾಯಿಸಿದ್ದರು. ಅವರ ಒತ್ತಾಯಗಳಲ್ಲಿ- ಬೆಂಗಳೂರಿನಲ್ಲಿ ಖಾಯಂ ಚಿತ್ರಸಂಗ್ರಹಾಲಯ ಸ್ಥಾಪನೆ, ಚಿತ್ರಕಲೆ ಕಾಲೇಜು ಆರಂಭ, ಕಲಾವಿದರ ಕಾಲೊನಿ, ಲಲಿತಕಲೆಗಳಿಗೆ ಪ್ರತ್ಯೇಕ ಇಲಾಖೆ ರಚನೆ ಸೇರಿದ್ದವು. ‘ಮೈಸೂರು ಚಿತ್ರಕಲಾ ಪರಿಷತ್ತು’ ಜಾರಿಗೆ ಬರುವುದರಲ್ಲಿ ಅವರ ಅಪಾರ ಶ್ರಮವಿತ್ತು.
ಸ್ಮೃತಿಗಳೆಲ್ಲ ತೆರೆಮರೆಗೆ ಸರಿಯುತ್ತಿರುವ ಜಾಗತೀಕರಣ ಸಂದರ್ಭದಲ್ಲಿ ರುಮಾಲೆ ಅವರ ನೆನಪು ಕೂಡ ಮಸುಕಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಆದರೆ, ಇಂಥ ಕಲಾವಿದರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು ಎಲ್ಲ ಆರೋಗ್ಯವಂತ ಸಮಾಜ-ಸಂಸ್ಕೃತಿಗಳ ಲಕ್ಷಣವಾಗಿದೆ. ‘ನಮ್ಮೊಳಗಿನ ಆಸೆ, ಭ್ರಮೆ, ಪ್ರೀತಿ, ನೋವು, ನಲಿವುಗಳೇ ಈ ಹೊತ್ತಿನ ಬದುಕಿಗೂ ‘ಸತ್ಯ’ವಾಗಿದ್ದರೆ ರುಮಾಲೆಯವರನ್ನು ಅರ್ಥ ಮಾಡಿಕೊಳ್ಳುವುದಾಗಲೀ ಮತ್ತೆ ಬರಮಾಡಿಕೊಳ್ಳುವುದಾಗಲೀ ಕಷ್ಟವಲ್ಲ’ ಎನ್ನುವ ಲೇಖಕರ ಮಾತು ಹೇಳುವುದೂ ಇದನ್ನೇ.