ಕರ್ನಾಟಕದ ಪ್ರವಾಸಿತಾಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದನ್ನೂ ನೋಡಿ- ಕರುನಾಡ ಪ್ರವಾಸಿ ತಾಣಗಳು

ಹಂಪೆ

             ಕನ್ನಡ ಸಾಮ್ರಾಜ್ಯಕ್ಕೆ ಮರು ಪಯಣ
            ಹಂಪೆಯ ಕಂಡು ಕಣ್ಣೀರು ಹಾಕದವರಾರು?

ಕ್ರಿ.ಶ. ೧೩೩೬ರ ಏಪ್ರಿಲ್ ೧೮ (ಹಿಂದೂ ಪಂಚಾಂಗದ ರೀತ್ಯ ಶಾಲಿವಾಹನ ಶಕೆ ೧೨೫೭ಕ್ಕೆ ಸಲ್ಲುವ ಧಾತೃ ಸಂವತ್ಸರದ ವೈಶಾಖ ಶುದ್ಧ ಸಪ್ತಮಿ) ಇತಿಹಾಸ ಮರೆಯಲಾರದ ಒಂದು ಸುದಿನ. ಪವಿತ್ರ ತುಂಗಭದ್ರಾ ನದಿ ತೀರದಲ್ಲಿ ಕನ್ನಡ ಸಾಮ್ರಾಜ್ಯ ವಿಜಯನಗರ ಸ್ಥಾಪನೆಯಾದ ದಿನ.

ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಹೆಸರಾದ ಶ್ರೀವಿದ್ಯಾರಣ್ಯರ ಮಾರ್ಗದರ್ಶನದಲ್ಲಿ (ಹರಿಹರ) ಹಕ್ಕ -ಬುಕ್ಕರು ಕಟ್ಟಿದ ವಿಜಯನಗರ ಎಂಬ ಪುಟ್ಟದೊಂದು ಸಂಸ್ಥಾನ, ವಿಜಯೋತ್ಸವವನ್ನೇ ಆಚರಿಸುತ್ತಾ ಅನತಿ ಕಾಲದಲ್ಲಿಯೇ ಬೃಹತ್ ಕನ್ನಡ ಸಾಮ್ರಾಜ್ಯವಾಯಿತು. ಕೃಷ್ಣಾನದಿಯಿಂದ ಕನ್ಯಾಕುಮಾರಿಯವರೆಗೂ ಹಬ್ಬಿತ್ತು. ಈ ಕನ್ನಡ ಸಾಮ್ರಾಜ್ಯ ಕೊನೆಗೊಂಡಿದ್ದು ೧೫೬೫ರಲ್ಲಿ.೫೦೦ ವರ್ಷಗಳ ಹಿಂದೆ ವೈಭವದಿಂದ ಮೆರೆದ ಈ ಕನ್ನಡ ರಾಜಧಾನಿಯಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ರಸ್ತೆಯ ಬದಿಯಲ್ಲಿ ರಾಶಿ ಹಾಕಿ ಮಾರುತ್ತಿದ್ದ ಇತಿಹಾಸವಿದೆ. ಸಾಂಸ್ಕೃತಿಕ ನೆಲೆಯಿದೆ, ನಾಗರಿಕತೆಯ ನಂಟಿದೆ. ಹಂಪೆಗೆ ಸರಿಸಮವಾದ ಮತ್ತಾವುದೇ ಪ್ರದೇಶ ಭಾರತದಲ್ಲಿರಲಿಲ್ಲ ಎಂಬ ಖ್ಯಾತಿಯೂ ಇದಕ್ಕಿದೆ. ಈ ಮಾತುಗಳನ್ನು ಭಾರತೀಯರು ‍ಯಾರೋ ಉತ್ಪೇಕ್ಷೆಗಾಗಿ ಅಥವಾ ಸ್ವಾಭಿಮಾನದಿಂದ ಹೇಳಿದ ನುಡಿಗಳಲ್ಲ. ಇದು ವಿದೇಶೀ ಯಾತ್ರಿಕರು ಮುಕ್ತಕಂಠದಿಂದ ಮಾಡಿದ ಪ್ರಶಂಸೆ. ಇಂಥ ಸುಂದರ ರಾಜಧಾನಿಯ ಮೇಲೆ ನಡೆದಂಥ ಆಕ್ರಮಣ ಮತ್ತಾವ ನಗರಿಯ ಮೇಲೂ ನಡೆದಿಲ್ಲ ಎಂದರೆ ಉತ್ಪ್ರೇಕ್ಷೆಯ ಮಾತಾಗಲಾರದು.

ಇಷ್ಟೆಲ್ಲಾ ಆಘಾತಗಳ ಹೊರತಾಗಿಯೂ ಇಂದಿಗೂ ಹಂಪೆ ಚಿತ್ರಕಾರರಿಗೆ, ಛಾಯಾಗ್ರಾಹಕರಿಗೆ ಸ್ಫೂರ್ತಿಯ ತಾಣವಾಗಿ, ಇತಿಹಾಸ ಅಧ್ಯಯನಿಗಳಿಗೆ ಆಕರ ಗ್ರಂಥವಾಗಿದೆ. ವೈಭವ -ದುರವಸ್ಥೆಗಳಿಗೆ ಹಂಪೆಗಿಂತ ಮಿಗಿಲಾದ ಉದಾಹರಣೆ ಇತಿಹಾಸದ ಪುಟಗಳಲ್ಲಿ ಮತ್ತೊಂದು ಸಿಗಲು ಸಾಧ್ಯವಿಲ್ಲವೇನೋ? ೫೦೦ ವರ್ಷಗಳ ಹಿಂದೆ ಮುಸಲ್ಮಾನ ದೊರೆಗಳ ಹಾಗೂ ಆಂತರಿಕ ಸಂಕುಚಿತವಾದಿಗಳ ದಾಳಿಗೆ ಒಳಗಾಗಿ ಹಾಳಾದ ಹಂಪೆಯಲ್ಲಿ ವ್ಯಗ್ರನಾಗದೆ ಶಾಂತನಾಗಿ ನಿಂತ ಉಗ್ರನರಸಿಂಹ, ನಿಸ್ತೇಜವಾಗಿ ನೀರಿನಲ್ಲಿ ನಿಂತ ಲಿಂಗ, ಛಿದ್ರ ಛಿದ್ರವಾದ ಶಿಲಾಶ್ರೀಮಂತಿಕೆ ಇನ್ನೂ ದಾಳಿಗೆ ಮೂಕಸಾಕ್ಷಿಯಾಗಿ ಪರಂಪರಾಗತವಾಗಿ ಉಳಿದುಕೊಂಡು ಬಂದಿದೆ. ತುಂಗಭದ್ರಾ ನದಿಯ ದಂಡೆಯ ಮೇಲೆ ಪಂಪಾ ಪರಿಸರದಲ್ಲಿ ಮೂರ್ತಿವೆತ್ತ ಈ ಸುಂದರ ತಾಣ ಹಂಪೆ. ಪುರಾಣಕ್ಕೆ ಸಾಕ್ಷಿಯಾಗಿ, ಇತಿಹಾಸದ ಮೆಲುಕಾಗಿ ನೆಲೆನಿಂತ ಈ ನಾಡಿಗೆ ಶ್ರೀರಾಮನೂ ಬಂದಿದ್ದನೆನ್ನುತ್ತದೆ ಪುರಾಣ. ರಾಮಾಯಣದಲ್ಲಿ ಬರುವ ಕಿಷ್ಕಿಂದೆಯೇ ಇಂದಿನ ಆನೆಗೊಂದಿ, ಇಲ್ಲಿಯೇ ಶ್ರೀರಾಮದೂತ ಹನುಮ ಹುಟ್ಟಿದ್ದು ಎನ್ನುತ್ತದೆ ಸ್ಥಳ ಪುರಾಣ. ಕನ್ನಡ ರಾಜರಾಜೇಶ್ವರಿ ಭುವನೇಶ್ವರಿ ಇರುವುದೂ ಈ ಊರಿನಲ್ಲೇ. ಹಂಪೆ ದ್ವಾದಶ ಭಾಸ್ಕರ ಕ್ಷೇತ್ರಗಳಲ್ಲಿ ಒಂದು ಎಂದು ಗೋಕರ್ಣ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ನಾಲ್ಕು ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ನಾಡು ಪ್ರವರ್ಧಮಾನಕ್ಕೆ ಬಂದಿದ್ದು ರಾಯರಾಯರ ಗಂಡ ಕೃಷ್ಣದೇವರಾಯರ ಕಾಲದಲ್ಲಿ. ಇಂದು ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಂಪೆಯಲ್ಲಿ ನೋಡಲೇ ಬೇಕಾದ ಹತ್ತು ಹಲವು ಪ್ರಮುಖ ಸ್ಥಳಗಳಿವೆ. ನಿರ್ಮಲವಾಗಿ ಹರಿವ ತುಂಗಭದ್ರಾನದಿ, ಗಜಗಾತ್ರವಿರುವ ಸಾಸಿವೆ ಕಾಳು ಗಣಪ, ಕೃಷ್ಣ ದೇಗುಲ, ಶಿಲ್ಪಕಲಾ ವಿಮರ್ಶಕರಾದ ಫರ್ಗ್ಯುಸನ್, ಲಾಂಗ್‌ಹರ್ಸ್ಟ್‌ರಿಂದ ಮುಕ್ತಕಂಠದಿಂದ ಹೊಗಳಿಸಿಕೊಂಡ ವಿಜಯವಿಠ್ಠಲ ಮಂದಿರ, ಕನ್ನಡಿಗರ ಕಣ್ಣಲ್ಲಿ ನೀರೂರಿಸುವ ಭಗ್ನಗೊಂಡು ದುರಸ್ತಿಯಾದ ಉಗ್ರ ನರಸಿಂಹ, ಬಟವಿ ಲಿಂಗ , ಉದ್ಯಾನ ವೀರಭದ್ರಸ್ವಾಮಿ, ಅಕ್ಕ ತಂಗಿ ಗುಂಡು, ಅಂತಃಪುರವಾಸಿಗಳಿಗಾಗಿಯೇ ನಿರ್ಮಿಸಲಾಗಿದ್ದ ಕಮಲಮಹಲ್ ಎಂಬ ಈಜುಕೊಳ, ಹಂಪಿಯ ಆರಾಧ್ಯದೈವ ವಿರೂಪಾಕ್ಷ ದೇಗುಲದ ಎದುರು ಇಕ್ಕೆಲಗಳಲ್ಲೂ ಇರುವ ಬಜಾರು ರಸ್ತೆ, ನದಿಯ ದಂಡೆಯಲ್ಲಿರುವ ಪುರಂದರ ಮಂಟಪ, ಅರಸನ ತುಲಾಭಾರ, ಕೋದಂಡರಾಮ, ವರಾಹ ದೇವಸ್ಥಾನ, ಮಾತಂಗಪರ್ವತ, ಅಚ್ಚುತರಾಯ ದೇವಾಲಯ, ಸುಂದರ ಶಿಲ್ಪಕಲಾ ವೈಭವದ ಪಟ್ಟಾಭಿರಾಮ ದೇಗುಲ, ಗಾಣಿಗಿತ್ತಿ ದೇಗುಲ, ಕಾವಲು ಗೋಪುರ, ಹಜಾರಿರಾಮ ಮಂದಿರ, ಗಜಶಾಲೆ, ಕನ್ನಡಿಗರ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯ, ಎಲ್ಲಕ್ಕಿಂತ ಮಿಗಿಲಾಗಿ ವಿಶ್ವವಿಖ್ಯಾತವಾದ ಕಲ್ಲಿನ ತೇರು ಹಾಗೂ ಮಹಾನವಮಿ ದಿಬ್ಬ. ಇದರ ಜೊತೆಗೆ ಬೆಟ್ಟವನ್ನೇರಿದರೆ ಸಂಜೆಯ ವೇಳೆ ಕಾಣಸಿಗುವ ಸುಂದರ ಸೂರ್ಯಾಸ್ತಮಾನ.

ಈಗಲೂ ಇಲ್ಲಿ ಉತ್ಖನನ ಕಾರ್ಯ ನಿರಂತರವಾಗಿ ಸಾಗಿದೆ. ಇತ್ತೀಚೆಗಷ್ಟೇ ಕಲ್ಲಿನ ರಥವಿರುವ ದೇಗುಲ ಪ್ರಾಕಾರದಲ್ಲಿ ರಾಯರು ಯಾಗಮಾಡುತ್ತಿದ್ದ ಹೋಮಕುಂಡ ಪತ್ತೆಯಾಗಿದೆ. ರಾಯರ ಅರಮನೆ ಇದ್ದ ತಳಹದಿ ಪತ್ತೆಯಾಗಿದೆ. ೨೦೦೬ರ ಏಪ್ರಿಲ್‌ನಲ್ಲಿ ಮುತ್ತುರತ್ನಗಳು ಕುದುರೆಯ ಅಸ್ತಿಪಂಜರ ಮುಂತಾದವು ದೊರೆತಿವೆ. ಇಷ್ಟು ಸುಂದರವಾದ ಕನ್ನಡನಾಡಿನ ರಾಜಧಾನಿಯನ್ನು ಕಣ್ಣಾರೆ ಕಾಣದಿದ್ದರೆ ಆದೀತೆ? ತಡವೇಕೆ ಹೊರಡಿ ಹಂಪೆಗೆ.

ಹೋಗುವುದು ಹೇಗೆ : ಬೆಂಗಳೂರಿನಿಂದ ಹಂಪೆಗೆ ೩೫೩ ಕಿ.ಮೀ., ಬಳ್ಳಾರಿಯಿಂದ ೭೪ ಕಿ.ಮೀ. ೧೮ ಕಿ.ಮಿ. ದೂರದಲ್ಲಿರುವ ಹೊಸಪೇಟೆವರೆಗೆ ರೈಲು ಸೌಕರ್‍ಯವಿದೆ. ಸಾಕಷ್ಟು ಬಸ್‌ಗಳೂ ಇದೆ. ರಾಷ್ಟ್ರೀಯ ಹೆದ್ದಾರಿ ೧೩ಕ್ಕೆ ಸಂಪರ್ಕವಿದೆ. ಉಳಿದುಕೊಳ್ಳಲು ಹೊಸಪೇಟೆ ಹಾಗೂ ತುಂಗಭದ್ರಾ ಡ್ಯಾಂನಲ್ಲಿ ಗೆಸ್ಟ್‌ಹೌಸ್, ಹೋಟೆಲ್‌ಗಳಿವೆ. ಹೊಸಪೇಟೆಯಿಂದ ಹಂಪೆ ಹಾಗೂ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆ ವಾಹನ ಸೌಕರ್ಯವಿದೆ. ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ -ವ್ಯಾನ್‌ಗಳೂ ಲಭ್ಯ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವಿಶೇಷ ಪ್ರವಾಸ ಸೇವೆಯೂ ಇದೆ. ಇತಿಹಾಸವನ್ನು ತೆರೆದಿಡಲು ವಿರೂಪಾಕ್ಷ ದೇವಾಲಯದ ಎದುರು ಗೈಡ್‌ಗಳು ನಿಮಗಾಗಿ ಕಾದಿದ್ದಾರೆ. ಅಪರಿಚಿತರೊಂದಿಗೆ ಇಲ್ಲಿ ಮಾತಿಗಿಳಿಯುವುದು ಅಪಾಯಕಾರಿ.

ಬಾದಾಮಿ

     ಬಾದಾಮಿ ಚಾಳುಕ್ಯರ ನಾಡಿನ ಶಿಲಾ ವೈಭವ

ಗಂಗ, ಕದಂಬ, ಹೊಯ್ಸಳ, ಚಾಲುಕ್ಯ, ವಿಜಯನಗರದರಸರು, ಮೈಸೂರು ಒಡೆಯರು, ರಾಷ್ಟ್ರಕೂಟರಾಳಿದ ಕರುನಾಡು ಕಲೆಗಳ ಬೀಡು. ಬಹುತೇಕ ಎಲ್ಲ ಅರಸು ಮನೆತನದವರೂ ತಮ್ಮ ತಮ್ಮ ರಾಜ್ಯದಲ್ಲಿ ಭವ್ಯ ದೇವಾಲಯಗಳನ್ನು ನಿರ್ಮಿಸಿ ತಾವು ಕಲೋಪಾಸಕರು ಎಂಬುದನ್ನು ಸಾಬೀತು ಮಾಡಿದ್ದಾರೆ. ಇದರ ಫಲವಾಗಿಯೇ ಇಂದಿಗೂ ಶಿಲ್ಪಕಲಾ ಕ್ಷೇತ್ರದಲ್ಲಿ ಕರ್ನಾಟಕ ವಿಶ್ವಭೂಪಟದಲ್ಲಿ ಶಾಶ್ವತ ಸ್ಥಾನ ಪಡೆದಿದೆ.

ಕರುನಾಡ ಶಿಲ್ಪಕಲಾವೈಭವಕ್ಕೆ ಚಾಲುಕ್ಯರ ಕೊಡುಗೆ ಅಪಾರ. ಹೊಯ್ಸಳರ ಬೇಲೂರು -ಹಳೇಬೀಡಿನಂತೆಯೇ ವಾಸ್ತು ವೈಭವ, ಕಲಾಶ್ರೀಮಂತಿಕೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿ, ಸನಿಹದಲ್ಲೇ ಇರುವ ಬನಶಂಕರಿ, ಐಹೊಳೆ, ಪಟ್ಟದಕಲ್ಲುಗಳ ದೇವಾಲಯದಲ್ಲಿಯೂ ಕಾಣಬಹುದು.

ಬಾದಾಮಿ: ಬಾದಾಮಿ ಇತಿಹಾಸ ಪ್ರಸಿದ್ಧವಾದ ಪ್ರಾಚೀನ ಸ್ಥಳ. ಇದಕ್ಕೆ ವಾತಾಪಿ ಎಂಬ ಹೆಸರಿತ್ತು. 6ನೇ ಶತಮಾನದಿಂದ 8ನೇ ಶತಮಾನದ ಅವಧಿಯಲ್ಲಿ ಕರುನಾಡನ್ನಾಳಿದ ಹೆಮ್ಮೆಯ ಕಲ್ಯಾಣದ ಚಾಲುಕ್ಯರು ಈ ಊರನ್ನು ಅಭಿವೃದ್ಧಿಪಡಿಸಿ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಈ ಅರಸರು ಇಲ್ಲಿ ಹೆಬ್ಬಂಡೆಗಳನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಈ ಗುಹಾಂತರ ದೇವಾಲಯಗಳಲ್ಲಿ ಇರುವ ಚಿತ್ರಕಲೆಗಳು ಬಾದಾಮಿ ಚಾಲುಕ್ಯರ ಕಲಾರಾಧನೆ ಹಾಗೂ ಸೌಂದರ್ಯ ಪ್ರeಗೆ ಹಿಡಿದ ಕೈಗನ್ನಡಿಯಾಗಿ ಇಂದು ಪ್ರವಾಸಿ ತಾಣಗಳ ಪೈಕಿ ಪ್ರಮುಖವಾಗಿದೆ. ಎರಡು ಬೃಹತ್ ಪರ್ವತಗಳ ಕಡಿದಾದ ಕಣಿವೆ ಪ್ರದೇಶದಲ್ಲಿರುವ ಗುಹಾಂತರ್ಗತ ದೇಗುಲಗಳು ಕೆಂಪು ಶಿಲೆಗಳಿಂದ ನಿರ್ಮಿತವಾಗಿದ್ದು ನಯನ ಮನೋಹರವಾಗಿವೆ. ಆದರೆ ಈ ಕಲಾ ವೈಭವವನ್ನು ಕಣ್ತುಂಬಿಕೊಳ್ಳಲು ಮೆಟ್ಟಿಲುಗಳೇರಿ ಮೇಲೆ ಹೋಗುಬೇಕು ಅಷ್ಟೇ.

ಇತಿಹಾಸ: ಚಾಲುಕ್ಯರು ತಮ್ಮ ಸಾಮ್ರಾಜ್ಯವನ್ನು ಕಟ್ಟಿ, ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳುವ ಮೊದಲೇ ಇದು ಒಂದು ಪ್ರಸಿದ್ಧ ವಾಣಿಜ್ಯ ಕೇಂದ್ರವಾಗಿತ್ತು ಎಂಬುದು ಗ್ರೀಕ್ ಭೂಗೋಳಕಾರ ಟಾಲೆಮಿ ಉಲ್ಲೇಖದಿಂದ ತಿಳಿದುಬರುತ್ತದೆ. ಇದಕ್ಕೆ ಪೂರಕವಾಗಿ ಸರೋವರದ ಉತ್ತರ ಭಾಗದಲ್ಲಿ ಕಿ.ಪೂ. ೩ನೇ ಶತಮಾನಕ್ಕೆ ಸೇರಿದ ಮಣ್ಣಿನ ಪಾತ್ರೆಗಳು, ಕಟ್ಟಡ ಅವಶೇಷಗಳು ದೊರೆತಿವೆ.

ಬಾಗಲಕೋಟೆಯಿಂದ 35 ಕಿ.ಮೀ. ದೂರದಲ್ಲಿರುವ ಬಾದಾಮಿಯ ಮಾಲಗಿತ್ತಿ ದೇವಾಲಯ, ಶಿವಾಲಯ ಹಾಗೂ ಮೇಣಬಸದಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಎರಡು ಬಳಪದ ಕಲ್ಲಿನ ಬೆಟ್ಟಗಳ ನಡುವಿನ ಕಂದಕಗಳ ನಡುವೆ ಇರುವ ಬಾದಾಮಿಯಲ್ಲಿ ಶೈವ ಗುಹಾಲಯ, ವೈಷ್ಣವ ಗುಹಾಲಯ, ವಿಷ್ಣುಗುಹೆ ಹಾಗೂ ಜೈನಗುಹೆಗಳು ತುಂಬಾ ಪ್ರಸಿದ್ಧವಾಗಿವೆ. ವಿವಿಧ ನೃತ್ಯಭಂಗಿಯಲ್ಲಿರುವ ಶಿಲ್ಪಕಲಾ ಕೆತ್ತನೆಗಳು ಮನಸೆಳೆಯುತ್ತವೆ. ಮೇಣಬಸದಿಯಲ್ಲಿ ನಾಲ್ಕು ಲಯಣಗಳಿದ್ದು, ಒಂದನೆ ಲಯಣದಲ್ಲಿರುವ ಅರ್ಧನಾರೀಶ್ವರ, ಚಾವಣಿಯ ಗಂಧರ್ವ ದಂಪತಿ, ಎರಡನೇ ಲಯಣದ ಚಾವಣಿಯ ಅಲಂಕರಣ, ಮೂರನೇ ಲಯಣದ ಶೇಷಶಾಯಿ ವಿಷ್ಣು ಪ್ರಮುಖವಾದ ಶಿಲ್ಪಗಳು. ಶೇಷಶಾಯಿ ವಿಷ್ಣುವನ್ನು ಪಾರ್ಶ್ವನಾಥನ ವಿಗ್ರಹ ಎಂದೂ ಸಂಶೋಧಕರು ಹೇಳುತ್ತಾರೆ. ಕಲ್ಲನ್ನು ಕೊರೆದು ನಿರ್ಮಿಸಿದ ಬೃಹತ್ ಶಿವಲಿಂಗ... ಹೀಗೆ ಹಲವು ಮನೋಹರ ಕೆತ್ತನೆಗಳು ಈ ಗುಹಾಲಯಗಳಲ್ಲಿವೆ. ವೈಷ್ಣವ ಲಯಣದ ಮಧ್ಯೆ ನೈಸರ್ಗಿಕ ಗುಹೆಯೂ ಇದೆ. ಇಲ್ಲಿ ಬೋಸತ್ವ, ಪದ್ಮಪಾಣಿಯ ಉಬ್ಬುಶಿಲ್ಪಗಳಿವೆ. ಮೂರನೇ ಲಯಣದಲ್ಲಿ ವಿಷ್ಣು, ಭೂವರಹ, ನರಸಿಂಹ, ಹರಿಹರ, ಬ್ರಹ್ಮ, ವಿಷ್ಣು, ಶಿವ, ಸಮುದ್ರ ಮಥನ, ಕೃಷ್ಣಲೀಲೆ ಮೊದಲಾದ ಚಿತ್ರ ಪಟ್ಟಿಕೆಗಳು ಪುರಾಣದ ಕಥೆಗಳನ್ನೇ ಹೇಳುತ್ತಾ ನಿಂತಿವೆ. ಸಾಲು ಭಂಜಿಕೆಗಳಿಂದ ರಮಣೀಯವಾಗಿರುವ ದೇವಾಲಯಗಳ 3ನೇ ಗುಹೆಯಲ್ಲಿರುವ ವಹಾವಿಷ್ಣುವಿನ ವಿಗ್ರಹ ಅತ್ಯಂತ ಮನೋಹರವಾದ ಬೃಹತ್ ಶಿಲ್ಪವಾದರೆ, ಮೊದಲ ಗುಹೆಯಲ್ಲಿರುವ 18 ಬಾಹುಗಳ ನಟರಾಜ ಶಿಲ್ಪ ನಯನ ಮನೋಹರವಾಗಿದೆ.

ಭೂತನಾಥನ ಕೆರೆ, ನದಿತಟದಲ್ಲಿರುವ ಶಿವ, ವಿಷ್ಣು ದೇವಾಲಯ, ಭೂತನಾಥನ ದೇವಾಲಯಗಳು ರುದ್ರ ರಮಣೀಯವಾಗಿವೆ. ಬದಾಮಿಯ ಉತ್ತರ ಬೆಟ್ಟದಲ್ಲಿ ಬಾವನ್ ಬಂಡೆ ಕೋಟೆ ಹಾಗೂ ದಕ್ಷಿಣದಲ್ಲಿ ರಣಮಂಡಲ ಕೋಟೆ ಇದೆ. ರಾಷ್ಟ್ರಕೂಟರು, ವಿಜಯನಗರದರಸರು ಮತ್ತು ಟಿಪ್ಪೂಸುಲ್ತಾನರ ಕಾಲದಲ್ಲಿ ಈ ಕೋಟೆ ವಿಸ್ತರಿಸಿದ ಎನ್ನುತ್ತದೆ ಇತಿಹಾಸ.ಕಲೋಪಾಸಕರಿಗೆ ರಮಣೀಯ ತಾಣವಾಗಿ, ಶಾಸನಾಧ್ಯಯನಿಗಳಿಗೆ ಆಕರವಾಗಿ, ಆಸ್ತಿಕರಿಗೆ ಪುಣ್ಯಕ್ಷೇತ್ರವಾಗಿರುವ ಬಾದಾಮಿ ಕರುನಾಡ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಬೆಂಗಳೂರಿನಿಂದ ಬಾದಾಮಿಗೆ 420 ಕಿಲೋ ಮೀಟರ್.

ಐಹೊಳೆ

          ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ  ಐಹೊಳೆ

ಭಾರತೀಯ ದೇವಾಲಯಗಳ ಪೈಕಿ ವಾಸ್ತು ಶಿಲ್ಪದ ತವರು ಎಂದೇ ಖ್ಯಾತವಾದ್ದು ಐಹೊಳೆ. ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಈ ಗ್ರಾಮ ಇಂದು ವಿಶ್ವವಿಖ್ಯಾತವಾಗಲು ಇಲ್ಲಿನ ಕೋಟೆಯ ಒಳಗೆ ಹಾಗೂ ಹೊರಗೆ ಹರಡಿಕೊಂಡಿರುವ ಶಿಲ್ಪಕಲಾಶ್ರೀಮಂತಿಕೆಯ 125ಕ್ಕೂ ಹೆಚ್ಚು ಚಿಕ್ಕ ದೊಡ್ಡ ದೇವಾಲಯಗಳೇ ಕಾರಣ. ಹೀಗಾಗೆ ಈ ಊರನ್ನು ಹಿಂದೂ ದೇವಾಲಯಗಳ ವಾಸ್ತು ಶಿಲ್ಪದ ತೊಟ್ಟಿಲೆಂದೇ ಕರೆಯುತ್ತಾರೆ.

ಇತಿಹಾಸ: ಮಲಪ್ರಭಾ ನದಿಯ ಬಲದಂಡೆಯ ಮೇಲೆ ಪ್ರಶಾಂತವಾಗಿ ಮಲಗಿರುವಂತೆ ತೋರುವ ನಿಸರ್ಗ ರಮಣೀಯ ತಾಣಕ್ಕೆ ಹಿಂದೆ ಅಯ್ಯೋಹೊಳೆ ಎಂದು ಹೆಸರಿತ್ತಂತೆ. ಅಯ್ಯ ಅಥವಾ ಅಯ್ಯನೋರು ಎಂದರೆ ಗುರುಗಳು, ಪಂಡಿತರು ಎಂದು ಅರ್ಥ. ಈ ಊರು ವಿದ್ಯಾಕೇಂದ್ರವಾಗಿ ಅಯ್ಯಗಳಿಂದ ತುಂಬಿದ್ದ ಕಾರಣ ಇದಕ್ಕೆ ಆ ಹೆಸರು ಬಂದಿತ್ತೆಂಬ ವಾದವಿದೆ. ಮತ್ತೊಂದು ಕಥೆಯ ರೀತ್ಯ ಕ್ಷತ್ರಿಯರ ರುಂಡ ಚೆಂಡಾಡಿದ ಪರಶುರಾಮ ಮಲಪ್ರಭೆಯ ಹೊಳೆಯಲ್ಲಿ ತನ್ನ ಪರಶುವನ್ನು ತೊಳೆದಾಗ ಇಡೀ ನದಿ ನೀರು ಕೆಂಪಾಯಿತು. ಮುಂಜಾನೆ ಈ ನೀರು ಕಂಡ ಮಹಿಳೆಯರು ಅಯ್ಯಯ್ಯೋ ಹೊಳೆ ಎಂದು ಉದ್ಗರಿಸಿದರು. ಹೀಗಾಗೆ ಈ ಊರು ಐಹೊಳೆಯಾಯ್ತು.

ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಇಲ್ಲಿ ಕ್ರಿ.ಪೂ. 6-7ನೇನೇ ಶತಮಾನದಲ್ಲಿ ಅಂದರೆ ಕಬ್ಬಿಣದ ಯುಗದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. 6ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು.

ವಾಸ್ತುಶಿಲ್ಪ: ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿಸ್ತ ಶಕ 5ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ.

ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.

ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ 22 ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ.

ಬೆಂಗಳೂರಿನಿಂದ 460, ಬಿಜಾಪುರದಿಂದ 110 ಹಾಗೂ ಬಾದಾಮಿಯಿಂದ 40 ಕಿ.ಮೀಟರ್ ದೂರದಲ್ಲಿರುವ ಈ ಸುಂದರ ತಾಣ ಕರುನಾಡ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿದೆ.