ಜಿ.ಎ.ನರಸಿಂಹಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿ.ಎ.ನರಸಿಂಹಮೂರ್ತಿ

ಕಳೆದ ಆರು ದಶಕಗಳಿಂದ ಹಳೆಯ ತಲೆಮಾರಿನ ಬಹುತೇಕ ಕನ್ನಡ ಪತ್ರಕರ್ತರಿಗೆ, ಪತ್ರಿಕಾ ಸಂಘಟನೆಗಳ ಸಕ್ರಿಯ ಕಾರ್ಯಕರ್ತರಿಗೆ ಆತ್ಮೀಯತೆಯನ್ನು ತೋರಿದ್ದವರು ಇದೇ ಜಿ.ಎ.ನ. - ಜಿ.ಎ.ನರಸಿಂಹ ಮೂರ್ತಿ. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತು. ಕನ್ನಡ ಪತ್ರಿಕೆಗಳೂ ಸೇರಿದಂತೆ ದೇಶದ ಪತ್ರಿಕೋದ್ಯಮ ಹೊಸ ಪರ್ವಕ್ಕೆ ಅಡಿಯಿಟ್ಟಿತ್ತು. ಅಂದಿನ ದಿನಗಳಲ್ಲಿ ಬಿ.ಎಸ್‍ಸಿ. ಪದವಿ ಜತೆಗೆ ಅಪಾರ ಪುಸ್ತಕ ಪ್ರೇಮ ಅವರನ್ನು ಎಲ್ಲೆಲ್ಲಿಗೋ ಸೆಳೆಯಬಹುದಿತ್ತು. ಆದರೆ ಅಚಾನಕ್ಕಾಗಿ ಕೈಗೆ ಬಂದ ವೃತ್ತಪತ್ರಿಕಾ ಏಜೆನ್ಸಿಯು ಪತ್ರಿಕೆಯೊಂದರ ಮಾಲಿಕತ್ವ ಜತೆಗೆ ಸಂಪಾದಕತ್ವವನ್ನೂ ಹೆಗಲಿಗೇರಿಸುತ್ತದೆಂಬ ಕಲ್ಪನೆ ಅವರಿಗೂ ಇರಲಿಲ್ಲ. ಶಾಲಾದಿನಗಳಿಂದಲೇ ‘ಕತೆಗಾರ’ ಮಾಸಪತ್ರಿಕೆಯ ಓದುಗರಾಗಿದ್ದ ಜಿ.ಎ.ನ. ಕೆಲ ಕಾಲದ ನಂತರ ಅದರ ಮಾರಾಟಗಾರರಾಗಿ, ಪತ್ರಿಕೆಯ ಸೋಲ್ ಏಜೆಂಟರಾಗಿ ಬೆಳೆದರು. ‘ಕತೆಗಾರ’ದ ಜತೆಗೆ ಕನ್ನಡದ ಇನ್ನೂ ನಾಲ್ಕಾರು ಪತ್ರಿಕೆಗಳ ಸೋಲ್ ಏಜೆನ್ಸಿ ಪಡೆದು, ತಮ್ಮ ಆರ್.ಎನ್.ನ್ಯೂಸ್ ಏಜೆನ್ಸಿ ಮೂಲಕ ನಾಡಿನಾದ್ಯಂತ ಏಜೆನ್ಸಿಗಳ ವ್ಯವಸ್ಥೆ ಮಾಡಿದರು. ಸುಮಾರು ಹನ್ನೆರಡು ವರ್ಷಗಳ ಕಾಲ ಪತ್ರಿಕೆ ನಡೆಸಿದ್ದ ಅದರ ಸ್ಥಾಪಕರು ಆರ್ಥಿಕ ಹೊಡೆತ ತಡೆದುಕೊಳ್ಳಲಾಗದಿದ್ದಾಗ ಜಿ.ಎ.ನ. ‘ಕತೆಗಾರ’ದ ಮ್ಯಾನೇಜಿಂಗ್ ಏಜೆಂಟ್ ಆಗಿ ನೇಮಕವಾದರು (1943). ಮರು ವರ್ಷ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡು ಸುಮಾರು ಇಪ್ಪತ್ಮೂರು ವರ್ಷಗಳ ಕಾಲ ಸಣ್ಣ ಕತೆಗಳಿಗೇ ಮೀಸಲಾದ ‘ಕತೆಗಾರ’ ಮಾಸಪತ್ರಿಕೆಯನ್ನು ಅತ್ಯುತ್ತಮ ದರ್ಜೆಯ ಪತ್ರಿಕೆಯನ್ನಾಗಿ ರೂಪಿಸಿದರು. ರಾ.ಶಿ.ಯವರ ‘ಕೊರವಂಜಿ’ ಕಾಡಿಗೆ ತೆರಳಿದ ವರ್ಷದ (1967) ಎರಡು ತಿಂಗಳ ನಂತರ ಈ ‘ಕತೆಗಾರ’ವೂ ಕಣ್ಮರೆಯಾಯಿತು.

ಹೆಚ್.ಆರ್.ನಾಗೇಶರಾವ್ ಸಂಗ್ರಹದಿಂದ

ಪತ್ರಿಕೆಗೆ ಜಿ.ಎ.ನ. ನೇತೃತ್ವವಿದ್ದ ಆ ದಿನಗಳಲ್ಲಿ ನೂರಾರು ಕನ್ನಡ ಕತೆಗಾರರಿಗೆ ಬರೆಯುವ ಅವಕಾಶಗಳು ದೊರೆತವು.

ಸಾಮಾಜಿಕ ಸಂಘಟನೆಯಾಗಿದ್ದ ಮೈಸೂರು ಪತ್ರಿಕೋದ್ಯಮಿಗಳ ಸಂಘಕ್ಕೆ ಕಾರ್ಯನಿರತ ಪತ್ರಕರ್ತರ ಸಂಘವೆಂಬ ‘ಕಾರ್ಮಿಕ ಸಂಘಟನೆ’ಯ ಮೊಹರು ಬಿದ್ದದ್ದು 1954ರಲ್ಲಿ. ಆಗ ಸಂಘಟನೆಯ ಅಧ್ಯಕ್ಷರಾಗಿದ್ದವರು ಜಿ.ಎ.ನ. ಆ ಸಮಯದಲ್ಲಿ ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲರಾವ್ ಬಹುಶಃ ಕಾರ್ಯದರ್ಶಿಗಳಾಗಿದ್ದರು. ಕಾರ್ಮಿಕ ಸಂಘಟನೆಯ ಅಂಗರಚನಾ ತಿದ್ದುಪಡಿಯ ಹೊಣೆಗಾರಿಕೆಯನ್ನು ನನ್ನ ತಂದೆಯವರು ವಹಿಸಲು ಜಿ.ಎ.ನ.ರ ಒತ್ತಾಸೆ ಕಾರಣವಾಗಿತ್ತು. ಮುಂದೆ ಕೇಂದ್ರ ಸರ್ಕಾರ ಪತ್ರಕರ್ತರಿಗೆಂದು ನ್ಯಾಯಮೂರ್ತಿ ದಿವಾಕಿಯಾರ ಅಧ್ಯಕ್ಷತೆಯಲ್ಲಿ ಮೊದಲ ವೇತನ ಆಯೋಗ ರಚನೆಯಾದಾಗ (1956) ಮೈಸೂರು ರಾಜ್ಯದ ಪ್ರತಿನಿಧಿಗಳನ್ನು (ಎನ್.ಎಸ್.ಸೀತಾರಾಮಶಾಸ್ತ್ರಿ, ಎಸ್.ವಿ.ಜಯಶೀಲರಾವ್ ಮತ್ತು ಹೆಚ್.ಆರ್.ನಾಗೇಶರಾವ್) ಒಗ್ಗೂಡಿಸಿ, ಚರ್ಚೆಗೆ ಸೂಕ್ತ ಗ್ರಾಸವನ್ನು ಕೊಟ್ಟವರು ಇದೇ ಜಿ.ಎ.ನ. ಪತ್ರಕರ್ತ ಸಂಘಟನೆಗಳೊಂದಿಗೆ ಈ ಬಗೆಯ ಬಂಧುತ್ವವನ್ನು ಮೊನ್ನೆ ಮೊನ್ನೆಯವರಿಗೂ ಅವರು ಉಳಿಸಿಕೊಂಡಿದ್ದವರು.

ಮೈಸೂರು ರಾಜ್ಯದಲ್ಲಿ ಅಷ್ಟೇಕೆ ಇಡೀ ದೇಶದಲ್ಲಿ ವ್ಯವಸ್ಥಿತ ಪ್ರವಾಸ ಸಂಸ್ಥೆಯೊಂದನ್ನು ಖಾಸಗಿಯಾಗಿ ಮೊದಲು ಸ್ಥಾಪಿಸಿದವರು ಜಿ.ಎ.ನ. ಎರಡು ಮೂರು ದಶಕಗಳ ಕಾಲ ‘ಆನಂದ ವಿಹಾರ್ ಟ್ರಾವಲ್ಸ್’ ಸಂಸ್ಥೆಯನ್ನು ಅತ್ಯುನ್ನತ ಮಟ್ಟದಲ್ಲಿ ನಡೆಸಿ, ಇಂಥ ಹತ್ತಾರು ಸಂಸ್ಥೆಗಳು ರಾಜ್ಯದಲ್ಲಿ ಸ್ಥಾಪನೆಯಾಗಲು ಕಾರಣವಾದರು. ಇದೇ ಸಂಘಟನೆಯ ಮೂಲಕ ಕನ್ನಡ ಪತ್ರಕರ್ತರಿಗೆ ಅಂದಿನ ಮೈಸೂರು ರಾಜ್ಯಾದ್ಯಂತ ವಿಶೇಷ ಪ್ರವಾಸಗಳನ್ನು ಏರ್ಪಡಿಸಿದ್ದರು. ರೈತರಿಗೇ ಮೀಸಲಾದ ರಾಷ್ಟ್ರ ಪ್ರವಾಸಗಳನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿಯೂ ಅವರದೇ. ಶ್ರೀ ಶ್ರೀಧರರ ಭಕ್ತರಾಗಿದ್ದ ಅವರು ಆ ಕಾಲದಲ್ಲಿ ಕನ್ನಡ ಓದುಗರಿಗೆ ತಮ್ಮ ಗುರುಗಳ ಬಗ್ಗೆ ಪರಿಚಯಾತ್ಮಕ ಲೇಖನಗಳನ್ನು ಬರೆದಿದ್ದರು. ಆಧ್ಯಾತ್ಮ ವಿಷಯಗಳ ಬಗ್ಗೆ ‘ಸದ್ಬೋಧ ಚಂದ್ರಿಕೆ’, ‘ಶಂಕರ ಭಾಸ್ಕರ’ ನಿಯತಕಾಲಿಗಳಲ್ಲಿ ಗಂಭೀರ ಲೇಖನಗಳನ್ನು ಮಂಡನೆ ಮಾಡಿದ್ದರು. ಅಷ್ಟೇ ಉತ್ಸುಕತೆಯಿಂದ ‘ವಿನೋದ’ ಮಾಸಪತ್ರಿಕೆಗೆ ಹಾಸ್ಯ ಲೇಖನಗಳನ್ನೂ ಬರೆದಿದ್ದರು. ಶಿಶು ಸಾಹಿತ್ಯದ ಬಗ್ಗೆ ಅಪಾರ ಪ್ರೇಮವಿದ್ದ ಅವರು ‘ಸಚಿತ್ರ ರಾಮಾಯಣ’, ‘ಬಾಲ ಮಹಾಭಾರತ’, ‘ಮಕ್ಕಳ ಕತೆಗಳು’ ಪುಸ್ತಕಗಳನ್ನು ರಚಿಸಿ ಸ್ವತಃ ಪ್ರಕಟಿಸಿದ್ದರು. ಅವರ ಇನ್ನಿತರ ಪ್ರಕಟಿತ ಕೃತಿಗಳೆಂದರೆ ‘ಶ್ರೀ ಶ್ರೀಧರ ಚರಿತ್ರೆ’, ‘ದತ್ತಾತ್ರೇಯ’ ಮತ್ತು ‘ಅಸೇತು ಹಿಮಾಚಲ ಯಾತ್ರೆ (ಪ್ರವಾಸ ಕಥನ)’.

ಕೊನೆಗಾಲದವರೆಗೂ ಕನ್ನಡ ಪತ್ರಿಕೋದ್ಯಮದ ಏಳಿಗೆಯ ಬಗ್ಗೆ ಕುತೂಹಲವಿಟ್ಟುಕೊಂಡಿದ್ದ ಜಿ.ಎ.ನ. ತಮ್ಮ ಆತ್ಮೀಯರೊಂದಿಗೆ ಸಂತಸಗಳನ್ನು ಹಂಚಿಕೊಳ್ಳುತ್ತಿದ್ದರು. ‘ಮುಂಜಾನೆ’ ಕನ್ನಡ ಪತ್ರಿಕೆ ಆರಂಭವಾದ ದಿನ ಗೆಳೆಯರಿಗೆ ಫೋನ್ ಹಚ್ಚಿ ‘ಪತ್ರಿಕೆಯ ಶೀರ್ಷಿಕೆಯೇ ಅದೆಷ್ಟು ಚೆನ್ನಾಗಿದೆ - ಮರಾಠಿಯ ‘ಸಕಾಳ್’ನಂತೆ’ ಎಂದಿದ್ದರು. ‘ವಿಜಯ ಕರ್ನಾಟಕ’ ತನ್ನ ದಾಖಲೆಗಳನ್ನು ತಾನೇ ಮುರಿದು ಮುಂದುವಿರಿಯುತ್ತಿದ್ದಾಗ ‘ನಮ್ಮ ಕನ್ನಡ ಪತ್ರಿಕೆಗಳೂ ‘ಮಲಯಾಳ ಮನೋರಮ’ದಷ್ಟು ಪ್ರಸಾರವನ್ನು ನೋಡಬಹುದು’ ಎಂದು ಸಂತಸ ಹಂಚಿಕೊಂಡಿದ್ದರು.

ಇವುಗಳನ್ನೂ ನೋಡಿ[ಬದಲಾಯಿಸಿ]