ಬೇಗೂರಿನ ಚರ್ಚು
ಬೆಂಗಳೂರು ದಕ್ಷಿಣ ತಾಲೂಕಿನಲ್ಲಿರುವ ಬೇಗೂರಿನ ಒಟ್ಟು ಜನಸಂಖ್ಯೆಯ ೨/೩ ಭಾಗ ಕ್ರೈಸ್ತಧರ್ಮೀಯರು. ಬೇಗೂರಿನ ಕ್ರೈಸ್ತರ ಇತಿಹಾಸ ಸುಮಾರು ೩೫೦ವರ್ಷಗಳಿಗೂ ಹಿಂದಕ್ಕೆ ಸಾಗುತ್ತದೆ. ಜೆಸ್ವಿತರ ನಿರ್ಗಮನದ ನಂತರ ತೀವ್ರವಾಗಿ ತತ್ತರಿಸಿದ ಇಲ್ಲಿನ ಕ್ರೈಸ್ತ ಸಮುದಾಯ ಪುನಃ ೧೮೪೭ರಲ್ಲಿ ಫ್ರೆಂಚ್ ಪಾದ್ರಿ ಜಾರಿಗೆ ಎಂಬುವರಿಂದ ಪುನಶ್ಚೇತನ ಪಡೆದಂತೆ ತೋರುತ್ತದೆ. ಅಲ್ಲದೆ ಮೋನ್ತದ್ರಾ, ತುಫೋ, ಮೋಡ್ಯೂ, ಡ್ಯಾಲೆ, ರೆನಾಡಿನ್, ಬೋಕೆ, ದೆ ಕೆರಿಝೊ, ಕಪ್ಪೆಲ್ ಮುಂತಾದ ಫ್ರೆಂಚ್ ಪಾದ್ರಿಗಳೂ, ಸಿ ಅಂತಪ್ಪ, ಮರಿಸೂಸೆ ನೆಲಪತಿ, ಬಿ ಎಲ್ ಕೊಲಾಸೊ, ತೋಮಾಸ್, ಕಾಣಿಕ್ ರಾಜ್, ಸಂದ್ಯಾಗು, ಮೋಸೆಸ್ ಮುಂತಾದ ದೇಸೀ ಪಾದ್ರಿಗಳೂ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಬೇಗೂರು ಗ್ರಾಮವೊಂದರಿಂದಲೇ ಸುಮಾರು ೧೦೦ ಸನ್ಯಾಸಿನಿಯರು ದೇಶವಿದೇಶಗಳ ಕಾನ್ವೆಂಟುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಾಮಿಗಳಾದ ಇಗ್ನೇಷಿಯಸ್ ಜೋಸೆಫ್, ಇಗ್ನೇಷಿಯಸ್ ಆರೋಗ್ಯಸ್ವಾಮಿ, ಶಾಂತಪ್ಪ ಫಿಲಿಪ್, ಮಾರ್ಟಿನ್ ಅಂತೋಣಿ, ಲೂರ್ದುಸ್ವಾಮಿ ಹಾಗೂ ಜಾಕೋಬ್ ಇವರು ಬೇಗೂರಿನ ಮಣ್ಣಿನ ಮಕ್ಕಳು.
ಸಲೆಸಿನ ನಿರ್ಮಲಮಾತೆಯ ಸನ್ಯಾಸಿನಿ(SMMI = Salesian Missionaries of Mary Immaculate)ಯರ ವತಿಯಿಂದ ಕೇವಲ ಪ್ರಾಥಮಿಕ ಶಾಲೆ ಮಾತ್ರವೇ ಇದ್ದ ಈ ಊರಿನಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿಯೇ ನಡೆಸುತ್ತಿದ್ದರು. ತನ್ನದೇ ಶಾಲೆ ನಡೆಸುವುದರ ಬಗ್ಗೆ ಬೆಂಗಳೂರು ಕ್ರೈಸ್ತಧರ್ಮಪೀಠ ನಕಾರಾತ್ಮಕ ಧೋರಣೆ ತಳೆದಿತ್ತು. ಈಗ ಚರ್ಚಿನ ವತಿಯಿಂದ ಇಲ್ಲಿನ ಜನರು ತಮಗೊಂದು ಶಾಲೆ ಕಟ್ಟಿಕೊಂಡಿದ್ದಾರೆ.