ಬೆಸಗರಹಳ್ಳಿ ರಾಮಣ್ಣ
ಡಾ| ಬೆಸಗರಹಳ್ಳಿ ರಾಮಣ್ಣ ಇವರು ೧೯೩೮ ಮೇ ೧೮ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ದೊಡ್ಡತಾಯಮ್ಮ ; ತಂದೆ ಚಿಕ್ಕಎಲ್ಲೇಗೌಡ. [೧]
ಬಾಲ್ಯ ಜೀವನ
[ಬದಲಾಯಿಸಿ]ತಮ್ಮಲ್ಲಿದ್ದ ಪ್ರತಿಭೆ, ಶಕ್ತಿ, ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು , ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸುತ್ತಲೇ ಇದ್ದು, ಒಂದೆಡೆ ಸಮುದಾಯದ ದೇಹರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿ, ಗ್ರಾಮೀಣ ಬದುಕಿನ ನೈಜ ಚಿತ್ರಣವನ್ನೂ ತಮ್ಮ ಕಥೆಗಳ ಮೂಲಕ ಹೇಳುತ್ತಲೇ ಬಂದ ವೈದ್ಯರಾದ ಬೆಸಗರಹಳ್ಳಿಯ ರಾಮಣ್ಣನವರು ಹುಟ್ಟಿದ್ದು ೧೯೩೮ ರ ಆಗಸ್ಟ್ ತಿಂಗಳ ಸ್ವಾತಂತ್ರ್ಯ ದಿನಾಚರಣೆಯಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಸಗರ ಹಳ್ಳಿಯಲ್ಲಿ, ತಂದೆ ಕೃಷಿಕರಾದ ಎಲ್ಲೇಗೌಡ, ತಾಯಿ ದೊಡ್ಡತಾಯಮ್ಮ. ಪ್ರಾರಂಭಿಕ ಶಿಕ್ಷಣ ಬೆಸಗರಹಳ್ಳಿ ಮತ್ತು ಮದ್ದೂರಿನಲ್ಲಿ. ಇಂಟರ್ಮೀಡಿಯೇಟ್ ನಂತರ ಎಂ.ಬಿ.ಬಿ.ಎಸ್. ಪದವಿ ಪಡೆದದ್ದು ಮೈಸೂರಿನಲ್ಲಿ. ನಂತರ ಅರಿವಳಿಕೆ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮ. ಅಮೆರಿಕ ಮುಂತಾದ ವಿದೇಶಗಳಿಂದ ಉದ್ಯೋಗಕ್ಕೆ ಆಹ್ವಾನ ಬಂದರೂ ಆಯ್ದುಕೊಂಡದ್ದು ಹಳ್ಳಿಯ ವೈದ್ಯಕೀಯ ಸೇವೆಯ ಬದುಕು. ಗ್ರಾಮೀಣ ಪ್ರದೇಶದಲ್ಲಿ ಸುಮಾರು ೨೦ ವರ್ಷಗಳ ಕಾಲ ವೈದ್ಯರಾಗಿ ಕಾರ್ಯನಿರತರಾಗಿದ್ದರು. ಸರಕಾರಿ ವೈದ್ಯರಾಗಿ ನೇಮಕಗೊಂಡು ಕೊಡಿಯಾಲ, ಬೆಳ್ಳೂರು, ಮೇಲುಕೋಟೆ, ಶ್ರೀರಂಗಪಟ್ಟಣ, ಹಳೇಬೀಡು ಮುಂತಾದ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆಸಲ್ಲಿಸಿ ೧೯೯೬ ರಲ್ಲಿ ನಿವೃತ್ತಿ. ವಿಶ್ವದ ವಿವಿಧ ಭಾಗಗಳಿಂದ ಬಂದಿದ್ದ ವೈದ್ಯರೊಂದಿಗೆ ತಮ್ಮ ಕಾಯಕವನ್ನೂ ಹಂಚಿಕೊಂಡು ಬಿಹಾರದ ಬಾಗಲ್ಪುರದಲ್ಲಿ (೧೯೭೪) ನಡೆದ ಸಿಡುಬು ನಿರ್ಮೂಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಹಳ್ಳಿಯ ಬದುಕಿನೊಂದಿಗೆ ಮಿಳಿತವಾಗಿರುವ ಜಾನಪದ ಸಂಸ್ಕೃತಿಯ ಅಂಗವಾದ ಕಥೆ, ಲಾವಣಿ, ಪದಗಳು ರಾಮಣ್ಣನವರನ್ನೂ ಆಕರ್ಷಿಸಿತು. ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಿದ್ದ ತಂದೆಯ ವಯಸ್ಸಾದ ಸೋದರತ್ತೆ ಬೆಳದಿಂಗಳ ರಾತ್ರಿಗಳಲ್ಲಿ ಚಂದ್ರಲೋಕದ, ಪಾತಾಳಲೋಕದ ಸುರಸುಂದರಿಯರ, ಘನಘೋರ ಮಂತ್ರವಾದಿಗಳ ಹಕೀಕತ್ತುಗಳು, ಅವನೆಲ್ಲಾ ಎದುರಿಸಿ ಗೆದ್ದು ಬರುತ್ತಿದ್ದ ಧೀರ ರಾಜಕುಮಾರರ ಕಥೆಗಳು, ಅಣ್ಣನಾಗಿದ್ದ ದಿವಂಗತ ಪುಟ್ಟಸ್ವಾಮಿ ಗೌಡರು ತಂದುಹಾಕುತ್ತಿದ್ದ ಸಾಹಿತ್ಯ ಕೃತಿಗಳು, ಕುಮಾರವ್ಯಾಸ ಭಾರತದ ಪದ್ಯಗಳನ್ನೂ, ಕುವೆಂಪುರವರ ಸಣ್ಣಕತೆಗಳಿಗೆ ನಾಟಕ ರೂಪಕೊಟ್ಟು ಒಬ್ಬನೇ ಅಭಿನಯಿಸಿ ತೋರಿಸಿ ಸಂತೋಷದ ಸಂದರ್ಭದಲ್ಲಿ ನಗೆತರಿಸಿ, ದುಃಖದ ಸಂದರ್ಭದಲ್ಲಿ ಅಳುತರಿಸುತ್ತಿದ್ದು, ಇಂತಹ ಪ್ರಸಂಗಗಳಿಂದ ಪ್ರಭಾವಿತರಾದರು. ಹೈಸ್ಕೂಲಿನಲ್ಲಿದ್ದಾಗಲೇ ಬಸವರಾಜ ಕಟ್ಟೀಮನಿಯವರ ಕಥೆ, ಕಾದಂಬರಿಗಳು, ಮೆಡಿಕಲ್ ಓದುತ್ತಿದ್ದಾಗ ಕುವೆಂಪುರವರ ಸಂನ್ಯಾಸಿ ಮತ್ತು ಇತರ ಕಥೆಗಳು ಗಾಢ ಪ್ರಭಾವ ಬೀರಿದವು. ಯುವರಾಜ ಕಾಲೇಜಿನಲ್ಲಿದ್ದಾಗ ಜಿ.ಎಸ್. ಶಿವರುದ್ರಪ್ಪನವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ವಸಂತ’ ಪತ್ರಿಕೆಗೆ ಬರೆದ ಮೊದಲ ಕತೆ ‘ಹಸಿವಿನ ಕಹಳೆ’ ದುರದೃಷ್ಟವಶಾತ್ ಪತ್ರಿಕೆ ಪ್ರಕಟವಾಗದಿದ್ದರೂ ಜಿ.ಎಸ್.ಎಸ್. ರವರು ಪ್ರೋತ್ಸಾಹದ ನುಡಿ ಬರೆದು ಹಸ್ತಪ್ರತಿಯನ್ನು ಹಿಂದಿರುಗಿಸಿದರು. ನಿರಾಶರಾಗದ ರಾಮಣ್ಣನವರು ಪ್ರಜಾವಾಣಿ ದೀಪಾವಳಿ ಸಂಚಿಕೆಗೆ (೧೯೬೨) ಬರೆದ ಕತೆ ‘ಹಾವಿಲ್ಲದ ಹುತ್ತ’. ತೀರ್ಪುಗಾರರ ಮೆಚ್ಚುಗೆ ಗಳಿಸಿದರೆ ೧೯೬೫ರ ಇದೇ ಪತ್ರಿಕೆಯ ದೀಪಾವಳಿ ಸಂಚಿಕೆಯಲ್ಲಿ ‘ಸುಗ್ಗಿ’ ಕತೆ ಮೊದಲ ಬಹುಮಾನಗಳಿಸಿ ಕತೆಗಾರರೆನ್ನಿಸಿಕೊಂಡರು. ಬಸವಣ್ಣ, ಗಾಂಧಿ, ಪೆರಿಯಾರ್, ಕುವೆಂಪು ಮುಂತಾದವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸುತ್ತಲಿನ ಅಸಮಾನತೆಯ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಡುತ್ತ, ಸಮಾಜವಾದಿ ಯುವಜನ ಸಭಾ, ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಸಂಘರ್ಷ ಸಮಿತಿ ಮುಂತಾದ ಅನೇಕ ಪ್ರಗತಿಪರ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದರು. ಹಳ್ಳಿಗಾಡಿನ ವೈದ್ಯರಾಗಿ ತಾವು ಕಂಡದ್ದನ್ನೂ ಕಂಡಂತೆ ವಾಸ್ತವ ನೆಲೆಗಟ್ಟಿನ ಮೇಲೆ ಮಾನವೀಯ ಸಂಬಂಧಗಳ ಶೋಧಕರಾಗಿ, ಗ್ರಾಮಾಂತರ ಬದುಕಿನ ನೋವು ನಲಿವುಗಳನ್ನು, ಊಳಿಗಮಾನ್ಯ ಪದ್ಧತಿಯನ್ನು ವಿರೋಧಿಸುವಂತಹ ವಿಭಿನ್ನ ನೆಲೆಗಳಲ್ಲಿ ರಚಿಸಿದ ಕತೆಗಳು.
ಕಥೆಗಳು
[ಬದಲಾಯಿಸಿ]‘ಸೋಲು’, ‘ಕಣಿವೆಯ ಅಂಚು’, ‘ಗರ್ಜನೆ’, ‘ಜೀತ’, ‘ಅವ್ವ’, ‘ಕಳೆ’, ‘ಚೆಲುವನ ಪರಂಗಿಗಿಡಗಳು’ ಪ್ರಮುಖ ಕತೆಗಳೆನಿಸಿದರೆ, ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು’ಪಂಚತಂತ್ರದ ಮಾದರಿಯ ಭಗ್ನವಾದ ಗಾಂಧಿ ತತ್ತ್ವಗಳನ್ನು ಸೆರೆಹಿಡಿದಿಡುತ್ತದೆ. ರಾತ್ರಿ ಬಹುಹೊತ್ತಿನ ವರೆವಿಗು ಕಥಾ ರಚನೆಯಲ್ಲಿಯೇ ತೊಡಗಿರುತ್ತಿದ್ದು ಇಂತಹ ಕತೆಗಳು ಹುಟ್ಟಿದ್ದು ಕಲ್ಲುಕರಗುವ ಸಮಯದಲ್ಲೆ.
==ಕಥಾ ಸಂಕಲನಗಳು== ನೆಲದ ಒಡಲು, ‘ಗರ್ಜನೆ’, ‘ಹರಕೆಯ ಹಣ’, ‘ಒಂದು ಹುಡುಗನಿಗೆ ಬಿದ್ದ ಕನಸು’, ‘ನೆಲದ ಸಿರಿ’. ‘ಕನ್ನಂಬಾಡಿ’ (೧೯೬೨-೮೫ರವರೆಗೆ) ಎಂಬ ಸಮಗ್ರ ಕಥಾಸಂಕಲನವಲ್ಲದೆ ನಂತರ ಬರೆದ ೧೮ ಕಥೆಗಳ ಸಂಕಲನ ‘ಕೊಳಲು ಮತ್ತು ಖಡ್ಗ’ ಕಥಾಸಂಕಲನಗಳವೂ ಪ್ರಕಟವಾಗಿವೆ. ==ಕಾದಂಬರಿಗಳು==
ರಕ್ತಕಣ್ಣೀರುು ಮತ್ತು ‘ತೋಳಗಳ ನಡುವೆ’ ಇವರು ಬರೆದ ಎರಡು ಕಾದಂಬರಿಗಳಾದರೆ ‘ಶೋಕಚಕ್ರ’ ಕವನ ಸಂಕಲನ. ಕಲ್ಲೇಶಿವೋತ್ತಮರಾವ್‌ರವರು ಜನ ಪ್ರಗತಿಯ ಸಂಪಾದಕರಾಗಿದ್ದ ಸಂದರ್ಭದಲ್ಲಿ ‘ರಕ್ತಕಣ್ಣೀರು’ ಕಾದಂಬರಿಯನ್ನೂ ಧಾರಾವಾಹಿಯಾಗಿ ಪ್ರಕಟಿಸಿದರು. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದಷ್ಟೇ ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡಮಿಯ ಕನ್ನಡ ವಿಭಾಗದ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಇವರು ಬರೆದ ‘ಜಾಡಮಾಲಿ’ ಮತ್ತು ‘ನೂರುರೂಪಾಯಿ ನೋಟು’ ಕಥೆಗಳು ಜ್ಞಾನಪೀಠ ಪ್ರಶಸ್ತಿ ಸಮಿತಿಯ ಆಯ್ಕೆಮಾಡಿ ಪ್ರಕಟಿಸುವ ‘ಭಾರತೀಯ ಕಹಾನಿಯಾ’ ಸಂಕಲನದಲ್ಲಿ ಸ್ಥಾನ ಪಡೆದಿವೆ. ರಾಮಣ್ಣನವರ ಆಯ್ದ ಕಥಾಸಂಕಲನವನ್ನೂ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿಯೂ ಆಯ್ಕೆಮಾಡಲಾಗಿತ್ತು. ೧೯೬೮ ಮತ್ತು ೭೨ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಕಥಾ ಸಾಹಿತ್ಯ ವಿಭಾಗದ ಬಹುಮಾನಗಳು, ‘ಒಂದು ಹುಡುಗನಿಗೆ ಬಿದ್ದ ಕನಸು’ ಕಥಾ ಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯಲ್ಲದೆ ೧೯೯೦ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಯು ದೊರೆತಿದೆ. ಮಂಡ್ಯದಲ್ಲಿ ನಡೆದ ವಿಚಾರ ಸಂಕೀರ್ಣದ ಸಂದರ್ಭದಲ್ಲಿ ರಾಮಣ್ಣನವರ ಸಾಹಿತ್ಯದ ಬಗ್ಗೆ ವಿಸ್ತೃತ ಚರ್ಚೆ ನಡೆದು ಅಂದು ಮಂಡಿಸಿದ ಪ್ರಬಂಧಗಳ ಸಂಕಲನ ‘ಆಲೆಮನೆ’ ಹಾಗೂ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ‘ಕಾಡುಗಿಣಿ’ (೨೦೦೯) ‘ಅಭಿನಂದನ ಗ್ರಂಥವು ಪ್ರಕಟವಾಗಿವೆ. ಪ್ರತಿವರ್ಷವೂ ಡಾ.ಬೆಸಗರಹಳ್ಳಿ ರಾಮಣ್ಣ ನನವರ ನೆನಪಿಗಾಗಿ ‘ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು’ ಕೊಡಮಾಡುತ್ತಿರುವ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಗಳನ್ನು ಸಂತೆಕೆಪಲಗೆರೆ ಪ್ರಕಾಶ್ (೨೦೦೩), ಶ್ರೀಧರ ಬಳಿಗಾರ (೨೦೦೪), ಸುನಂದಾ ಪ್ರಕಾಶ್ ಕಡಮೆ (೨೦೦೫), ವಸುಧೇಂದ್ರ (೨೦೦೬), ತುಕಾರಾಂ ಎಸ್ (೨೦೦೭), ಮಹಾಂತೇಶ್ ನವಲ್‌ಕರ್ (೨೦೦೮), ಸುಮಂಗಲ (೨೦೦೯), ಮಲ್ಲಪ್ಪ ಕೆ.ಕೆ. (೨೦೧೦), ಮಂಜುನಾಥ್ ಲತಾ (೨೦೧೧) ಮುಂತಾದವರುಗಳು ಪಡೆದಿದ್ದಾರೆ.
ವೈದ್ಯರಾದ ರಾಮಣ್ಣನವರು ಸಾಮಾಜಿಕ ರೋಗಗಳನ್ನೂ ಪತ್ತೆ ಹಚ್ಚುತ್ತಿದ್ದರು; ಸಮಾಜದ ಕೊಳೆತ ದೇಹವನ್ನು ಸೀಳಿ ನೋಡುವ ನೈಪುಣ್ಯ ಅವರಿಗಿತ್ತು
'ಹುಡುಗ' ನನ್ನೆದುರು ಕುಳಿತಿದ್ದ. ಆತನ ಕಣ್ಣುಗಳಲ್ಲಿ ಇನ್ನಿಲ್ಲದ ನೋವು ಮಡುಗಟ್ಟಿತ್ತು. ಆಗಲೋ ಈಗಲೋ ಹೊರಗೆ ಜಾರಲು ಕಣ್ಣೀರು ಕಾದು ಕುಳಿತಿತ್ತು. ಆ ಹುಡುಗನ ಎದೆಯಲ್ಲಿ ನೆನಪುಗಳ ಬತ್ತಲಾರದ ಗಂಗೆಯೊಂದು ಅಡಗಿ ಕುಳಿತಿತ್ತು. ಆ 'ಹುಡುಗ' ಇನ್ನಾರೂ ಅಲ್ಲ, ಕನ್ನಡ ಕಥಾ ಲೋಕವನ್ನು ಮಗ್ಗುಲು ಬದಲಾಯಿಸುವಂತೆ ಮಾಡಿದ 'ಒಂದು ಹುಡುಗನಿಗೆ ಬಿದ್ದ ಕನಸು'ವಿನ ಹುಡುಗ-ರವಿಕಾಂತೇಗೌಡ. ಕನ್ನಡ ಓದುಗರು ಪ್ರೀತಿಯಿಂದ ರಾಮಣ್ಣ ಎಂದು ಎದೆಗೆ ಹಚ್ಚಿಕೊಂಡ ಬೆಸಗರಹಳ್ಳಿ ರಾಮಣ್ಣ ಬರೆದ ಕಥೆಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮಾನವೀಯತೆಯ ಬೆಸುಗೆ ಹಾಕಿದವು. ಆಧುನಿಕತೆ ಹೆಜ್ಜೆ ಹಾಕಲು ಸಜ್ಜಾಗುತ್ತಿದ್ದ ಸಮಯದಲ್ಲಿ ಹಳ್ಳಿಯ ಒಡಲು ಅನುಭವಿಸುತ್ತಿದ್ದ ತುಮುಲವನ್ನು ಬೆಸಗರಹಳ್ಳಿ ರಾಮಣ್ಣ ಹೊರಗೆ ಹಾಕಿದ್ದರು. ಅಂತಹ ಸಾಲಿನಲ್ಲಿ ಬಂದ ಒಂದು ಮಹತ್ವದ ಕಥೆ 'ಒಂದು ಹುಡುಗನಿಗೆ ಬಿದ್ದ ಕನಸು.'
- * *
ರವಿಕಾಂತೇಗೌಡರನ್ನು ನಾನು ನೇರಾನೇರ ಕೇಳಿದೆ 'ಆ ಹುಡುಗ ನೀವೇನಾ?' ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಒಂದೇ ಕ್ಷಣಕ್ಕೆ ತಮ್ಮ ಬಾಲ್ಯಕ್ಕೆ ಜಾರಿಹೋಗಿದ್ದರು. ಅವರ ಕಣ್ಣುಗಳು ಭಯ, ಮಿನುಗು ಎರಡನ್ನೂ ಹೊತ್ತಿತ್ತು. ತಾನು ಕಂಡ ಕನಸೊಂದು ಅಪ್ಪನ ಕಥೆಗೆ ಆಹಾರವಾಯಿತಲ್ಲ ಎಂದು ಕಣ್ಣು ಮಿನುಗುತ್ತಿದ್ದರೆ, ಕಂಡ ಆ ಕನಸು ಅವರೊಳಗೆ ಒಂದು ಭಯವನ್ನು ಹುಟ್ಟು ಹಾಕಿತ್ತು. ಆ 'ಹುಡುಗ' ಯಾರು ಎಂದು ನನಗೆ ಗೊತ್ತಾಗಿ ಹೋಗಿತ್ತು. ಆ 'ಕನಸು' ಏನು ಎಂಬುದು ಗೊತ್ತಾಗುವುದು ಮಾತ್ರ ಬಾಕಿಯಿತ್ತು. 'ಏನದು ಕನಸು ?' ಎಂದು ಕೇಳಿದೆ. ಕತ್ತಲೆ, ಬೆಳಕು, ಅರಮನೆ, ಮಗಾಲಯ....ನಟ್ಟ ನಡುರಾತ್ರಿ ನಾನು ಕೂಗುತ್ತಾ ಹಾಸಿಗೆಯ ಮೇಲೆ ಎದ್ದು ಕುಳಿತೆ. ಕನಸು ಒಡೆದು ಹೋಗಿತ್ತು. ಅದು ಒಡೆದು ಹೋದ ಕನಸು, ಎಂದರು. ಬೆಸಗರಹಳ್ಳಿ ರಾಮಣ್ಣ ತಮ್ಮ ಬದುಕು ಹಾಗೂ ಕಥೆಯ ನಡುವೆ ಎಂದೂ ಕೋಟೆಯನ್ನು ಕಟ್ಟಿದವರೇ ಅಲ್ಲ. ಹಾಗಾಗಿಯೇ ಆ 'ಒಂದು ಹುಡುಗನಿಗೆ ಬಿದ್ದ ಕನಸನ್ನು' ಒಂದು ದೇಶದ, ಒಂದು ಸಮಾಜದ ಕನಸಾಗಿ ಬದಲಾಯಿಸುತ್ತಾ ಹೋದರು.
- * *
ದಾರಿಯುದ್ದಕ್ಕೂ ಹಸಿರು ಚಿಮ್ಮಿಸುತ್ತಾ ಇದ್ದ ಗದ್ದೆಗಳನ್ನು ನೋಡುತ್ತಾ ಮಂಡ್ಯ ತಲುಪಿದ ನನಗೆ, ಒಮ್ಮೆ ನನ್ನ ಕಣ್ಣನ್ನೇ ನಂಬಲಾಗದ ಸ್ಥಿತಿ. ಮಂಡ್ಯದ ಆ ಕಲಾಮಂದಿರದ ಅಂಗಳ ವಸ್ತುಷಃ ಒಂದು ಕರ್ನಾಟಕವಾಗಿ ಬದಲಾಗಿ ಹೋಗಿತ್ತು. ಬೆಸಗರಹಳ್ಳಿ ರಾಮಣ್ಣನವರ ನೆನಪಿನ ಕಂದೀಲು ಸದಾ ಉರಿಯುತ್ತಲೇ ಇರುವಂತೆ ನೋಡಿಕೊಳ್ಳಲು ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಕಥೆಗಾರರಿಗೆ ಕೊಡುವ ಪ್ರಶಸ್ತಿ ಕಾರ್ಯಕ್ರಮಕ್ಕೆ ಎಲ್ಲೆಂಲ್ಲಿಂದಲೋ ಮನೆಯ ಮದುವೆಗೆ ಬಂದಂತೆ ಜನ ಹೊರಟು ಬಂದಿದ್ದರು. ನನಗೆ ನೆನಪಾದದ್ದು 'ನೆಲದ ಒಡಲು', ಬೆಸಗರಹಳ್ಳಿ ರಾಮಣ್ಣನವರ ಮನೆಯ ಹೆಸರೂ ಅದೇ. ಅವರ ಮೊದಲ ಕಥಾ ಸಂಕಲನದ ಹೆಸರೂ ಅದೇ. ಹಿಂದೆ ಇದೇ ರವಿಕಾಂತೇಗೌಡರಿಗೆ 'ಹಾಗೇಕೆ?' ಎಂದು ಪ್ರಶ್ನಿಸಿದ್ದೆ. ಆಗ ಅವರು ನೆಲದ ಬಗ್ಗೆ ರಾಮಣ್ಣನವರಿಗಿದ್ದ ಅಪಾರ ಪ್ರೀತಿಯ ಬಗ್ಗೆ ಹೇಳುತ್ತಾ ಹೋಗಿದ್ದರು. ನನ್ನ ಅಪ್ಪ ಸದಾ ಹೇಳುತ್ತಿದ್ದರು. ಹಕ್ಕಿ ಎಷ್ಟು ಎತ್ತರಕ್ಕೆ ಬೇಕಾದರೂ ರೆಕ್ಕೆ ಬಿಚ್ಚಿ ಹಾರಬಹುದು, ಆದರೆ ಅದಕ್ಕೆ ಕಾಳು ಬೇಕೆಂದಾಗ ಈ ನೆಲದ ಒಡಲಿಗೆ ಬರಲೇಬೇಕು, ಎಂದು. ಒಂದು ಕ್ಷಣ ಆ ಅಂಗಳದ ತುಂಬಾ ಇದ್ದ ಜನರ ಪ್ರೀತಿಯನ್ನು ಕಂಡಾಗ ನನಗೆ ಅನಿಸಿತು, ಅಷ್ಟೆತ್ತರಕ್ಕೆ ಹಾರಿ ಹೋದ ರಾಮಣ್ಣ ಎನ್ನುವ ಹಕ್ಕಿಯನ್ನು ಹೇಗೆ ಈ ಎಲ್ಲರೂ ಮತ್ತೆ ಈ ಕಾರ್ಯಕ್ರಮದ ಮೂಲಕ ನೆಲದ ಒಡಲಿಗೆ ಬರುವಂತೆ ಮಾಡಿದ್ದಾರಲ್ಲ ಎಂದು.
- * *
ರವಿಕಾಂತೇಗೌಡರು ಮತ್ತು ನಾನು ಗಂಟೆಗಟ್ಟಲೆ ರಾಮಣ್ಣನವರ ಬಗ್ಗೆ ಮಾತಾಡಿದ್ದೇವೆ. ಕಥೆಯೆಂಬ ಹುಲಿಯ ಬೆನ್ನೇರಿದ ರಾಮಣ್ಣನನ್ನು ನಾನು ಎಟುಕಿಸಿ ಕೊಂಡಿದ್ದು ಅವರ ಕಥೆಗಳ ಮೂಲಕ ಮಾತ್ರವಲ್ಲ, ರಾಮಣ್ಣ ಒಬ್ಬ ಜಾನಪದ ಮಾಯಕಾರನೋ ಎಂಬಂತೆ ಹಲ ಜನರ ನಾಲಿಗೆಯಲ್ಲಿ ನಲಿದಾಡಿದ್ದನ್ನು ಕೇಳುವ ಮೂಲಕ ಕೂಡ. ಬಹುಶಃ ಕನ್ನಡದ ಎಷ್ಟು ಕಥೆಗಾರರಿಗೆ ಆ ಭಾಗ್ಯವಿದೆಯೋ ಗೊತ್ತಿಲ್ಲ. ಬೆಸಗರಹಳ್ಳಿ ರಾಮಣ್ಣ ಓದುಗರಿಗೆ ಎಂದೂ ಬಹುವಚನದ ರಾಮಣ್ಣ ಆಗಿರಲೇ ಇಲ್ಲ. ತಮ್ಮ ಮನೆಯ ಒಬ್ಬ ನೆಂಟನೇನೋ ಎನ್ನುವಂತೆ ಒಳಗು ಮಾಡಿಕೊಂಡುಬಿಟ್ಟಿದ್ದರು.
ವೈದ್ಯರಾದ ರಾಮಣ್ಣನವರು ಸಾಮಾಜಿಕ ರೋಗಗಳನ್ನೂ ಪತ್ತೆ ಹಚ್ಚುತ್ತಿದ್ದರು. ಅದರ ಕೊಳೆತ ದೇಹವನ್ನು ಸೀಳಿ ನೋಡುವ ನೈಪುಣ್ಯವಿತ್ತು. ಅದು ನೆನಪಾದದ್ದು ಅವರ ಮಗ ರವಿಕಾಂತೇಗೌಡರು ಹೇಳಿದ ಒಂದು ಘಟನೆಯಿಂದ. ಒಂದು ದಿನ ರಾಮಣ್ಣ ಮನೆಗೆ ಬಂದವರೇ ಮಾತನಾಡದೆ ಕುಳಿತರು. ಅವರ ಕಣ್ಣುಗಳಲ್ಲಿ ನೀರು ಉಕ್ಕುತ್ತಿತ್ತು. ಮಲೇರಿಯಾ ಅಧಿಕಾರಿಯಾಗಿದ್ದ ರಾಮಣ್ಣ, ಕೆ ಆರ್ ಪೇಟೆಯಿಂದ ಬರುತ್ತಿರುವಾಗ ಒಂದು ಹೊಲದಲ್ಲಿ ಉಳುಮೆ ನಡೆಯುತ್ತಿತ್ತು. ಆ ಕಡೆ ಕಣ್ಣು ಹಾಯಿಸಿದ ರಾಮಣ್ಣನವರಿಗೆ ಕಾದಿದ್ದದ್ದು ಒಂದು ದೊಡ್ಡ ಶಾಕ್. ಅಲ್ಲಿ ರೈತನೊಬ್ಬ ಒಂದು ನೊಗಕ್ಕೆ ಎತ್ತನ್ನೂ, ಇನ್ನೊಂದು ನೊಗಕ್ಕೆ ತನ್ನ ಹೆಂಡತಿಯನ್ನೂ ಹೂಡಿ ಹೊಲ ಉಳುತ್ತಿದ್ದ. ಗ್ರಾಮೀಣ ಭಾರತದ ನೋವು ರಾಮಣ್ಣನ ಎದೆ ಹೊಲದೊಳಗೂ ಇಳಿಯುತ್ತಾ ಹೋಗಿದ್ದು ಹೀಗೆ.
ರವಿಕಾಂತೇಗೌಡರು ನೆನಪುಗಳನ್ನು ಬಿಚ್ಚುತ್ತಾ ಹೋದರು. ನಾನು ಪಿಯುಸಿ ಪಾಸಾದಾಗ ನನ್ನ ಅಜ್ಜಿ ಒಂದು ಸಾವಿರ ರೂ. ಕೊಟ್ಟರು. ಅಪ್ಪ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅಷ್ಟು ಹಣಕ್ಕೂ ಪುಸ್ತಕ ಕೊಡಿಸಿ 'ನಾನು ಸಾಹಿತ್ಯದ ಸ್ಪರ್ಶಕ್ಕೆ ಸಿಗದೇ ಹೋಗಿದ್ದರೆ ಕ್ರಿಮಿನಲ್ ಆಗಿರುತ್ತಿದ್ದೆ. ಸಾಹಿತ್ಯ ಮನುಷ್ಯನ ಘನತೆಯನ್ನು ಎತ್ತಿ ಹಿಡಿಯುತ್ತದೆ. ಅಷ್ಟೇ ಅಲ್ಲ, ಸದಾ ಅದನ್ನು ನೆನಪಿಸುತ್ತದೆ, ಎಂದರು. ಅವರ ಕಣ್ಣುಗಳನ್ನೇ ನಿಟ್ಟಿಸಿ ನೋಡಿದೆ. ನೆನಪುಗಳು ಹೊರಗೆ ಜಿಗಿಯಲು ಇನ್ನೂ ಕಾದಿದ್ದವು. ನಾನು ಪೊಲೀಸ್ ಇಲಾಖೆಗೆ ಆಯ್ಕೆ ಯಾದಾಗ ಅಪ್ಪ ಒಂದೇ ಮಾತು ಹೇಳಿದರು; ನೋಡು ಫ್ಯಾನು, ಫೋನು ಇದ್ದಾಗ ಅದರ ಕೆಳಗೆ ಇದ್ದು ದೊಡ್ಡ ಮಾತನಾಡುವುದು ಸುಲಭ. ವ್ಯವಸ್ಥೆಯ ಆಚೆ ಇದ್ದು ದೊಡ್ಡ ಮಾತಾಡಬಹುದು, ಆದರೆ ಆ ವ್ಯವಸ್ಥೆಯ ಒಳಗಿದ್ದು ಏನು ಸುಧಾರಣೆ ಮಾಡುತ್ತೀಯ ಎನ್ನುವುದು ಮುಖ್ಯ.
ನೆನಪುಗಳು ಒಂದು ಕೆಲಿಡಿಯೋಸ್ಕೋಪ್‌ನಂತೆ ಎಷ್ಟೊಂದು ಬಣ್ಣ ಬಣ್ಣ. ಅಷ್ಟೇ ಅಲ್ಲ, ಅದನ್ನು ಹೊರಳಿಸಿ ದಷ್ಟೂ ಹೊಸ ಹೊಸ ಚಿತ್ತಾರ. ಇಲ್ಲಿಯೂ ಹಾಗೇ ಆಯಿತು. 'ಅಪ್ಪನ ತೋಳನ್ನು ಮಿಸ್ ಮಾಡಿಕೊಳ್ತೀರಾ?' ಎಂದೆ. ರವಿಕಾಂತೇಗೌಡರು ಅದುವರೆಗೂ ಹಿಡಿದಿಟ್ಟಿದ್ದ ಕಣ್ಣೀರು, ಅವರ ಮಾತನ್ನು ಕೇಳದೆಯೇ ಹೊರಗೆ ಜಿಗಿಯಿತು. ಅಪ್ಪನನ್ನು ಮಣ್ಣು ಮಾಡುವಾಗ ಧೋ ಎಂದು ಮಳೆ ಸುರಿಯುತ್ತಿತ್ತು. ಆ ಮಳೆಯಲ್ಲಿ ನಮ್ಮ ಕಣ್ಣೀರೂ ಹರಿದು ಭೂಮಿ ಸೇರಿತು. ಅದು ನಮ್ಮ ಕಣ್ಣೀರು ಮಾತ್ರವಲ್ಲ, ಅಲ್ಲಿಗೆ ಹಿಂಡುಗಟ್ಟಿ ಬಂದ ಎಲ್ಲರ ಕಣ್ಣೀರನ್ನೂ ಸೇರಿಸಿಕೊಂಡು ಮಳೆ ಭೂಮಿಗಿಳಿಯುತ್ತಿತ್ತು, ಎಂದರು. ನನಗೆ ರವಿಕಾಂತೇಗೌಡರನ್ನು ಆಗ ನಿಟ್ಟಿಸಿ ನೋಡಲು ಖಂಡಿತ ಸಾಧ್ಯವಾಗಲಿಲ್ಲ.
ಅಪ್ಪನನ್ನು ಮಣ್ಣು ಮಾಡಲು ಹೊರಟಾಗ ಮಟಮಟ ಬಿಸಿಲು. ಶವಯಾತ್ರೆ ಸಾಗುತ್ತಿದ್ದಾಗ ದಾರಿಹೋಕ ನೊಬ್ಬ ಓಡೋಡಿ ಬಂದು, ರಾಮಣ್ಣನ ಮುಖ ಬಾಡಿ ಹೋಗುತ್ತೆ ಅಂತ ಹೇಳಿ ತನ್ನ ಬಳಿ ಇದ್ದ ಕೊಡೆಯನ್ನು ಅವರ ಮುಖಕ್ಕೆ ಹಿಡಿದ. ಆ ಕೊಡೆ ಅಂದಿನಿಂದ ಇಂದಿಗೂ ನಮ್ಮ ಮನೆಯಲ್ಲಿದೆ, ಅಪ್ಪ ಹಾಗೂ ಜನರ ನಡುವಿನ ಪ್ರೀತಿಯ ಕೊಂಡಿಯಾಗಿ, ಎಂದರು. ಬೆಸಗರಹಳ್ಳಿ ರಾಮಣ್ಣ ಎನ್ನುವುದೇ ಒಂದು ಕೊಡೆ. ಅದು ನೊಂದ ಮನಸ್ಸು ಗಳು ಮತ್ತಷ್ಟು ಬೇಯದಿರಲಿ ಎಂದು ಮುಚ್ಚಟೆ ಯಿಂದ ಕಾಪಾಡಿದ ಕೊಡೆ. ಬೆಸಗರಹಳ್ಳಿ ರಾಮಣ್ಣ ಎಂಬ ಕೊಡೆ ಹಿಡಿದು ಹೊರಟವರೆಷ್ಟೋ.
ನಿನ್ನೆ ಅಪ್ಪನ ದಿನಾಚರಣೆ. ಹಾಗಾಗಿ ರವಿಕಾಂತೇಗೌಡರ ಈ ಅಪ್ಪನ ಪ್ರೀತಿ ನೆನಪಾಯಿತು. ರವಿಕಾಂತೇಗೌಡರಿಗೆ ಮಾತ್ರ ನಿನ್ನೆಯೊಂದೇ ಅಪ್ಪನ ದಿನವಲ್ಲ. ಪ್ರತಿ ದಿನವೂ ಅಪ್ಪನ ದಿನ.
ಕತೆಯೆಂಬ ಹುಲಿಯ ಬೆನ್ನೇರಿದ್ದ ರಾಮಣ್ಣ:ಕೆ.ವಿ.ನಾರಾಯಣ ಮುನ್ನುಡಿ
ಡಾ.ಕೆ.ವಿ.ನಾರಾಯಣ
ಶನಿವಾರ, 10 ಸೆಪ್ಟೆಂಬರ್ 2011 (08:23 IST)
ಡಾ. ಬೆಸಗರಹಳ್ಳಿ ರಾಮಣ್ಣ (ಚಿತ್ರ: ಕೆ.ಟಿ.ಶಿವಪ್ರಸಾದ್)
ಕಥೆಗಾರ ಬೆಸಗರಹಳ್ಳಿ ರಾಮಣ್ಣನವರ ಸಮಗ್ರ ಸಾಹಿತ್ಯ ಸಂಪುಟ `ಕಣಜ' ಮಂಡ್ಯದಲ್ಲಿ ಬಿಡುಗಡೆಯಾಗಿದೆ. `ಕಣಜ'ಕ್ಕೆ ಹಿರಿಯ ವಿಮರ್ಶಕ ಡಾ.ಕೆ.ವಿ.ನಾರಾಯಣ ಬರೆದ ಮುನ್ನುಡಿ ಇಲ್ಲಿದೆ.
ರಾಮಣ್ಣ ಎಲ್ಲ ಅರ್ಥದಲ್ಲೂ ಕತೆಗಾರರು. ಮೊದಮೊದಲ ಕತೆಗಳನ್ನು ಬರೆಯಲು ಅವರಿಗೆ ಹಂಬಲವಿದ್ದರೂ ಅದಕ್ಕೆ ಬೇಕಾದ ಯಾವುದೇ ಯಾವ ಒತ್ತಾಸೆಯೂ ಇದ್ದಿಲ್ಲದಿರಬಹುದು. ಆದರೆ ಒಮ್ಮೆ ಕತೆ ಬರೆಯುವ ಹುಲಿಯ ಬೆನ್ನೇರಿದ ರಾಮಣ್ಣ ಅದರಿಂದ ಇಳಿಯಲಾಗಲಿಲ್ಲ; ಅಷ್ಟೇ ಅಲ್ಲ ಆ ಹುಲಿಯ ಬೆನ್ನ ಮೇಲಿಂದ ಅವರು ಇಳಿಯಲು ಬಯಸಲೂ ಇಲ್ಲ. ಕತೆ ಬರೆಯುವುದು ಈ ಕತೆಗಾರರ ಪಾತ್ರದ ಒಂದು ನೆಲೆ ಮಾತ್ರ. ಕತೆ ಕೇಳುವುದು; ಕತೆ ಓದುವುದು ಕೂಡ ಈ ಪಾತ್ರದ ನೆಲೆಗಳೇ. ಇದೆಲ್ಲವನ್ನೂ ರಾಮಣ್ಣ ತಮ್ಮದೇ ಆದ ಬಗೆಯಲ್ಲಿ ನಿರ್ವಹಿಸಿದವರು. ಅಲ್ಲದೆ ಲೋಕವನ್ನು ನೋಡುವ ಬಗೆಯಲ್ಲೂ ಅವರ ಈ ಕತೆಗಾರನ ಬಗೆ ಮುಂಚೂಣಿಯಲ್ಲಿರುತ್ತಿತ್ತು. ಒಂದು ಕಡೆ ಕತೆಗಾರನಾಗಿ ತಾವು ಆಯ್ದುಕೊಂಡ ಮತ್ತು ಆರೋಪಿಸಿಕೊಂಡ ನೈತಿಕತೆಯ ನೆಲೆಯಲ್ಲಿ ಲೋಕವನ್ನು ನೋಡುತ್ತಿದ್ದರೆ ಇನ್ನೊಂದು ಕಡೆ ಲೋಕವನ್ನು ಕತೆಯಲ್ಲಿ ಇಳಿಸಿಕೊಳ್ಳಲು ಅನುವಾಗುವಂತೆ ಅಲ್ಲಿನ ಘಟನೆ ಮತ್ತು ಪಾತ್ರಗಳನ್ನು ಅವುಗಳ ಚಹರೆಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು. ತಾವು ಓದಿದ್ದನ್ನು, ಕಂಡಿದ್ದನ್ನು ಕತೆಯಾಗಿಸುವ ತವಕ ಅವರಲ್ಲಿ ಯಾವಾಗಲೂ ತುಂಬಿಕೊಂಡಿರುತ್ತಿತ್ತು. ಹಾಗೆ ನೋಡಿದರೆ ಕತೆ ಬರೆಯುವುದು ಅವರಿಗೆ ಒಂದು ಲೋಲುಪ ಚಟುವಟಿಕೆಯಾಗಿದ್ದಂತೆ ತೋರುವುದಿಲ್ಲ. ಅವರ ಕತೆಗಳ ಹಿಂದೆ ಇರುವ ನಿಲುವುಗಳನ್ನು ಗಮನಿಸಿದರೆ ಕತೆ ಬರೆಯುವುದು ಅವರಿಗೆ ತಮ್ಮ ಸಾಮಾಜಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮತ್ತು ಹಾಗೆ ರೂಪಿಸಿಕೊಂಡ ವ್ಯಕ್ತಿತ್ವದ ಹೊಣೆಗಾರಿಕೆಯನ್ನು ನಿಭಾಯಿಸುವ ಬಗೆಯಾಗಿತ್ತೆಂದು ತಿಳಿಯಬಹುದು. ಈ ಎಲ್ಲ ಕತೆಗಳನ್ನು ಅವರು ಬರೆಯದಿದ್ದರೂ ಆ ಎಲ್ಲ ಕತೆಗಳನ್ನು ಅವರು ತಮ್ಮ ಬದುಕಿನ ಭಾಗವನ್ನಾಗಿಯೇ ಮಾಡಿಕೊಂಡಿರುತ್ತಿದ್ದರು ಅಂಬ ಬಗೆಗೆ ಯಾವ ಸಂಶಯವೂ ನನಗಿಲ್ಲ. ಹೀಗೆ ಇಡೀ ಬದುಕನ್ನೇ ಒಬ್ಬ ಕತೆಗಾರನ ನೆಲೆಗೆ ರವಾನಿಸಿಕೊಂಡವರು ಕನ್ನಡದಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಇದು ನನ್ನ ತಿಳುವಳಿಕೆ.
ರಾಮಣ್ಣನವರಿಗೆ ಕನ್ನಡದ ಹಲವು ಬರೆಹಗಾರರ ಬರವಣಿಗೆ ತುಂಬ ಆಪ್ತವಾಗಿತ್ತು. ಅದರೊಡನೆ ಅವರು ಭಾರತದ ಹಲವು ಲೇಖಕರನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಪ್ರೇಮಚಂದ್, ಶರಶ್ಚಂದ್ರ ಚಟರ್ಜಿ ಆ ಪಟ್ಟಿಯಲ್ಲಿ ಮೊದಲಿಗರು. ಅಲ್ಲದೆ ರಶಿಯಾದ ಕ್ರಾಂತಿಗೂ ಮೊದಲಿನ ಬರಹಗಾರಾದ ಫಿದೋರ್ ದಾಸ್ತೊವಸ್ಕಿ ಮತ್ತು ಲಿಯೋ ಟಾಲ್ಸಟಾಯ್ ಅವರ ಕಥನಗಳನ್ನು ಓದಿಕೊಂಡದ್ದಷ್ಟೇ ಅಲ್ಲದೇ ಆ ಕಥನಗಳಿಂದ ತಮಗೆ ಮೆಚ್ಚಿಗೆಯಾದ ಭಾಗಗಳನ್ನು ಗೆಳೆಯರೊಡನೆ ನೆನಪಿನಿಂದ ಹೇಳಿ ಸುಖಿಸುತ್ತಿದ್ದರು. ಅಂದರೆ ಅವರ ಸಾಹಿತ್ಯಕ ವ್ಯಕ್ತಿತ್ವ ಕೇವಲ ತಮ್ಮ ಬರವಣಿಗೆಗಳಿಗೆ ಮಾತ್ರ ಮಿತಗೊಂಡಿರಲಿಲ್ಲ. ಅವರು ತಮ್ಮ ವೃತ್ತಿ ಮತ್ತು ಕೌಟುಂಬಿಕ ಬದುಕಿನೊಡನೆ ಸಾಹಿತ್ಯವನ್ನು ಬೇರ್ಪಡಿಸಲಾಗದಂತೆ ಬೆಸೆದುಕೊಂಡಿದ್ದರು. ಹಾಗಾಗಿ ಅವರೊಬ್ಬ ಕನಸುಣಿಯಂತೆ ಹಲವರಿಗೆ ತೋರಿದ್ದರೆ ಅಚ್ಚರಿಯಲ್ಲ. ನಗೆಗಾರರಂತೆ ಕಾಣುತ್ತಿದ್ದ ರಾಮಣ್ಣನವರು ಹೊಸ ಓದು ಮತ್ತು ಜೀವನ ಕ್ರಮಗಳು ಹಲವರಿಗೆ ತಂದು ಕೊಟ್ಟಿದ್ದ ಆಧುನಿಕ ನಡಾವಳಿಗಳಿಂದ ದೂರವೇ ಉಳಿದಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಒಮ್ಮೆ ತಾವು ಕೆಲಸ ಮಾಡುತ್ತಿದ್ದ ಆರೋಗ್ಯ ಕೇಂದ್ರದ ಸುತ್ತ ನಳನಳಿಸುವ ಮರಗಳ ತೋಪೊಂದನ್ನು ನಿರ್ಮಿಸಿದ್ದರು. ಅವರ ಅಂತರಂಗದೊಳಗೆ ಅವರ ಓದು ಮತ್ತು ಬರಹಗಳು ಇಂತಹುದೇ ಒಂದು ನಳನಳಿಸುವ ತೋಪನ್ನು ಬೆಳೆಸಿದ್ದವು. ಆ ತೋಪನ್ನು ಅವರು ಸದಾ ನೀರೆರೆದು ಪೋಷಿಸುತ್ತಿದ್ದರು.
ತಮ್ಮ ಹೆಸರಿನೊಡನೆ ಬೆಸಗರಹಳ್ಳಿ ಎಂಬೊಂದು ಭಾಗವನ್ನು ಅವರು ಸೇರಿಸಿಕೊಂಡಿದ್ದರು. ಹೀಗೆ ತಮ್ಮ ಊರಿನ ಹೆಸರನ್ನು ನಿಜ ಹೆಸರಿನ ಹಿಂದೆ ಇಲ್ಲವೆ ಮುಂದೆ ಸೇರಿಸಿಕೊಳ್ಳುತ್ತಿದ್ದ ತಲೆಮಾರಿಗೆ ರಾಮಣ್ಣ ಸೇರಿದ್ದವರು. ಶಾಲೆಗಳಲ್ಲಿ ಒಂದು ಇಂಗ್ಲಿಷ್ ಅಕ್ಷರವಾಗುತ್ತಿದ್ದ ಊರಿನ ಹೆಸರು, ಇಡಿಯಾಗಿ ತಮ್ಮ ಹೆಸರಿನ ಭಾಗವೇ ಆಗಬೇಕೆಂದು ಬಯಸಿದ್ದು ಕೇವಲ ಹೊಸತನಕ್ಕಾಗಿ ಮಾತ್ರ ಇರಲಾರದು. ಆ ಮೂಲಕ ಒಂದು ದೃಷ್ಟಿಕೋನವನ್ನು ತಮ್ಮದನ್ನಾಗಿಸಿಕೊಳ್ಳಲು ಯತ್ನಿಸಿದಂತೆ ತೋರುತ್ತದೆ. ರಾಮಣ್ಣನವರ ಜೊತೆಗಿನ ಬೆಸಗರಹಳ್ಳಿ ಅವರ ಕತೆಯ ಜಗತ್ತಿನಲ್ಲಿ ಆವರಣವಾಗಿ, ನುಡಿಗಟ್ಟಾಗಿ ಇಲ್ಲವೇ ನಿಲುವಾಗಿ ಸದಾ ನೆಲೆನಿಂತುಬಿಟ್ಟಿದೆ.
ಕನ್ನಡ ಕತೆಗಳ ಲೋಕಕ್ಕೆ ಹಳ್ಳಿಗಳು ಬರತೊಡಗಿ ಹಲವು ದಶಕಗಳೇ ಕಳೆದಿವೆ. ಗಾಂಧಿಯವರು ಗ್ರಹಿಸಿದ ಹಳ್ಳಿಗಳ ಮಾದರಿಯನ್ನು ಮಂಡಿಸಲು ಮೊದಮೊದಲ ಹಲವು ಬರೆಹಗಾರರು ಯತ್ನಿಸಿದ್ದಾರೆ. ಆ ಮಾದರಿಯಲ್ಲಿ ಆ ಹಳ್ಳಿಗಳಲ್ಲಿ ರಿಕ್ತತೆಯಿದ್ದರೂ ಹೃದಯವಂತಿಕೆ ಇರುತ್ತದೆ; ವೈವಿಧ್ಯಗಳಿಂದ ತುಂಬಿದ ಸಮುದಾಯಗಳಿರುತ್ತವೆ; ಹಲವು ಸೋಜಿಗಗಳಿರುತ್ತವೆ. ದುಷ್ಟವೆನಿಸಿದ್ದು ಮಣಿಯುವಿಕೆಯತ್ತ ಹೆಜ್ಜೆ ಹಾಕುತ್ತಿರುತ್ತದೆ; ಹಾಗೆ ನೋಡಿದರೆ ಹುಷ್ಟವೆನಿಸಿದ್ದೂ ಕೂಡ ಒಳಿತಿನ ಒಂದು ಮುಖಮಾತ್ರ. ಒಳಿತು ತನ್ನ ಗಟ್ಟಿತನವನ್ನು ಸಾಬೀತು ಮಾಡಿಕೊಳ್ಳಲು ಆಗಾಗ ಈ ದುಷ್ಟತನದ ಲೀಲೆಯಲ್ಲಿ ಪಾಲ್ಗೊಳ್ಳುತ್ತಿರುತ್ತದೆ; ಅಲ್ಲಿ ವ್ಯಕ್ತಿ ಮತ್ತು ಸಮುದಾಯದ ನಡುವೆ ಎದ್ದು ಕಾಣುವ ಬಿರುಕುಗಳಿರುವುದಿಲ್ಲ; ಅಷ್ಟ್ಟಿಷ್ಟು ಬಿರುಕುಗಳಿದ್ದರೂ ಅದನ್ನು ಸರಿಮಾಡುವ ಚೈತನ್ಯವುಳ್ಳವರು ಆ ಸಮುದಾಯಕ್ಕಾಗಿ ತಮ್ಮ ಜೀವನವನ್ನು ಮುಡುಪಿಟ್ಟಿರುತ್ತಾರೆ. ದೀಪದ ಬತ್ತಿಯಲ್ಲಿ ಕಟ್ಟಿದ ಕರುಕನ್ನು ಮೆಲ್ಲಗೆ ತೆಗೆದು ಕುಡಿ ಮತ್ತೆ ಚೆನ್ನಾದ ಬೆಳಕು ಚೆಲ್ಲುವಂತೆ ಮಾಡುವ ಹಿರಿಯರು ಆ ಹಳ್ಳಿಗಳಲ್ಲಿ ಒಬ್ಬಿಬ್ಬರು ಇದ್ದೇ ಇರುತ್ತಾರೆ. ಮಾಸ್ತಿಯವರ ‘ಉಗ್ರಪ್ಪನ ಉಗಾದಿ’, ‘ಸುಬೇದಾರರಿಗೆ ಪ್ಯಾದೆಮಾತು’, ‘ಜ್ಯೋಗೋರ ಅಂಜಪ್ಪನ ಕೋಳಿಕತೆ’ ಮುಂತಾದ ಕತೆಗಳನ್ನು ಈ ನೆಲೆಯಲ್ಲಿ ನೆನಪು ಮಾಡಿಕೊಳ್ಳಬಹುದು.
ಹೊಸ ಬಗೆಯ ಬದುಕು ಹಳ್ಳಿಗಳ ಒಳಗೆ ಕಾಲಿಡಲು ಮೊದಲಾದ ಮೇಲೆ ಹಳ್ಳಿಗಳ ಮನೆಯ ಒಳಗಿನ ಮತ್ತು ಹೊರಗಿನ ಜಗತ್ತು ಬದಲಾಗತೊಡಗಿದವು. ಆ ಬಳಿಕ ಬಂದ ಬರೆಹಗಾರರು ಈ ಬದಲಾವಣೆಯನ್ನು ತಮ್ಮದೇ ಆದ ಬಗೆಯಲ್ಲಿ ತಮ್ಮ ಬರವಣಿಗೆಯಲ್ಲಿ ಮಂಡಿಸುವುದನ್ನು ನೋಡುತ್ತೇವೆ. ‘ದೇವನಿಹನು ವ್ಯೋಮದಲ್ಲಿ ಎಲ್ಲ ಸೌಖ್ಯ ಭೂಮಿಯಲ್ಲಿ’ ಎಂಬ ನೆಲೆಗೀಗ ಬೇರುಗಳಿಲ್ಲವೆಂಬುದು ಅರಿವಿಗೆ ಬರುವಂತಾಗಿದೆ.. ಹಳ್ಳಿಗಳೀಗ ಮೈತೆರೆದ ಕೆರೆಗಳಂತೆ ಕಾಣತೊಡಗುತ್ತವೆ. ಗೊರೂರು ರಾಮಸ್ವಾಮಯ್ಯಂಗಾರ್ ಮಂಡಿಸಿದ ಗ್ರಾಮಭಾರತದ ಮಾದರಿಯ ಹಳ್ಳಿಗಳ ಒಳಗಿನ ಚಹರೆಗಳು ಮರೆಯಾದವು. ಹಳ್ಳಿಗಳು ಹೊಸ ಬೆಳಕಿನಲ್ಲಿ ತಮ್ಮ ಹೊಸ ಚಹರೆಗಳನ್ನು ತೋರುವಂತಾಯಿತು. ಹೊಸ ಬದುಕಿನ ಲಯಗಳು ಆ ಹಳ್ಳಿಗಳಲ್ಲಿ ತಂದ ಬದಲಾವಣೆಗಳನ್ನು ಕತೆಗಾರರು ಮಂಡಿಸುವತ್ತ ಹೊರಡುವುದನ್ನು ನೋಡುತ್ತೇವೆ. ಹೀಗೆ ಮಂಡಿಸಲು ಮುಂದಾದ ಮೊದಲ ತಲೆಮಾರಿನ ಲೇಖಕರಲ್ಲಿ ರಾಮಣ್ಣ ಒಬ್ಬರು. ಗಾಂಧಿ ಚಿಂತನೆಗಳ ನೆರಳಿನಲ್ಲಿ ಮೊದಮೊದಲು ಲೇಖಕರು ಹಳ್ಳಿಗಳಲ್ಲಿ ಗ್ರಾಮಭಾರತದ ಧಾರಣಾ ಕೇಂದ್ರವಿದೆಯೆಂದು ನಂಬಿ ಬರೆಯುತ್ತಿದ್ದರು. ಈ ಧಾರಣಾ ಕೇಂದ್ರದ ಆಯಸ್ಸು ಕೂಡ ನಶಿಸುತ್ತಿರುವುದನ್ನು ಅಲ್ಲಲ್ಲಿ ಲೇಖಕರು ಹೇಳುವುದನ್ನು ಕಾಣುತ್ತೇವೆಯಾದರೂ ಅದು ಗಟ್ಟಿ ದನಿಯಾಗಿರಲಿಲ್ಲ. ಅದರಲ್ಲೂ ಒಂದು ಸಮುದಾಯವಾಗಿ ಹಳ್ಳಿ ಎಲ್ಲರನ್ನು ಸಂಗೋಪನೆ ಮಾಡುವ ಒಳ ಕಸುವೊಂದನ್ನು ಪಡೆದಿದೆಯೆಂಬ ನಂಬುಗೆಯ ಬುಡಗಳು ಈಗ ಸಡಿಲವಾಗಿದೆ ಎನ್ನುವ ಅರಿವು ಕೆಲವು ಲೇಖಕರಲ್ಲಿ ಮೂಡಿದ್ದಂತೂ ದಿಟ.
ಈ ಹೊಸದು ಎಂಬುದೇನು? ಕೆಲವರಿಗೆ ಅದು ಹೊಸ ಸಾಮಾಜಿಕ ವ್ಯವಸ್ಥೆಯಾಗಿ ಕಾಣುತ್ತದೆ. ಚುನಾವಣೆಗಳು, ರಾಜಕಾರಣ, ಶಾಲೆಗಳು, ಹೊಟೆಲುಗಳು, ಬಸ್ಸು, ರೈಲು, ರೇಡಿಯೋ ಹೀಗೆ ಹತ್ತಾರು ಹೊಸ ಸಂಗತಿಗಳು ಹಳ್ಳಿಗಳ ಸಾವಯವತೆಯನ್ನು ಒಡೆಯುವ ಪರಿಕರಗಳಂತೆ ತೋರಿವೆ. ಮತ್ತೆ ಕೆಲವರಿಗೆ ಮೊದಮೊದಲು ಹಳ್ಳಿಗಳಲ್ಲಿ ಇದೆಯೆಂದು ತಿಳಿದಿದ್ದ ಧಾರಣಾ ಕೇಂದ್ರವೇ ಹುಸಿಯೆನಿಸುವ ನೆಲೆ ದಿಟವೆನಿಸುವಂತಿದೆ. ಅಂದರೆ ಭ್ರಮೆಗಳೆದು ದಿಟವನ್ನು ಎದುರಿಸಬೇಕಾದ ಕಾಲದಲ್ಲಿ ಇಂತಹ ಕತೆಗಾರರು ಬರೆಯಬೇಕಾಗಿ ಬಂದಿತ್ತು. ರಾಮಣ್ಣ ಮತ್ತವರ ತಲೆಮಾರಿನ ಕತೆಗಾರರು ಈ ಭ್ರಮನಿರಸನದ, ಕನಸೊಡೆದೆದ್ದ ಅವಸ್ಥೆಯನ್ನು ಅನುಭವಿಸುತ್ತಲೇ ಬರೆದವರು.
ರಾಮಣ್ಣನವರ ಕತೆಗಳನ್ನು ಎರಡು ಗುಂಪುಗಳಲ್ಲಿ ಇರಿಸಿ ನೋಡಬಹುದು. ಮೊದಲ ಗುಂಪಿನ ಕತೆಗಳು ಹಳ್ಳಿಗಳಲ್ಲಿ ನಡೆಯುತ್ತವೆ. ಅಲ್ಲದೆ ಅವುಗಳ ನಿರೂಪಕರು ಆ ಹಳ್ಳಿಯ ಬದುಕಿನೊಡನೆ ಇನ್ನೂ ಕರುಳುಬಳ್ಳಿಯ ನಂಟನ್ನು ಇರಿಸಿಕೊಂಡಿರುವಂತಹವರು. ಎರಡನೆಯ ಗುಂಪಿನ ಕತೆಗಳಲ್ಲಿ ಕೆಲವು ಹಳ್ಳಿಗಳಲ್ಲಿ ನಡೆದರೆ ಮತ್ತೆ ಕೆಲವು ಹೊಸ ಭಾರತ ರೂಪಿಸಿಕೊಂಡ ನಗರ, ತಾಲೂಕು ಕೇಂದ್ರಗಳಲ್ಲಿ ನಡೆಯುತ್ತವೆ. ಈ ಕತೆಗಳ ನಿರೂಪಕರು ಕತೆಗಳ ಜಗತ್ತಿನ ಭಾಗವಾಗಿರುವುದಿಲ್ಲ. ಹಾಗೆಂದು ಸಾಕ್ಷಿಯಾಗಿ ನೋಡುವವರೂ ಅಲ್ಲ. ಎರಡೂ ಬಗೆಯ ಕತೆಗಳಲ್ಲಿ ಇರುವುದು ದಟ್ಟವಾದ ನೈತಿಕ ಪ್ರಜ್ಙೆ. ಇದು ತುಂಬ ಎಚ್ಚರದಿಂದ ಗಮನಿಸಬೇಕಾದ ಸಂಗತಿಯಾಗಿದೆ. ಹಳ್ಳಿಗಳನ್ನು ಅಲ್ಲಿನ ಬದುಕನ್ನು ಕೇಂದ್ರ ಮಾಡಿಕೊಂಡು ಬರೆದ ಕತೆಗಳಲ್ಲಿ ಸಮುದಾಯದ ಕಟ್ಟುವ ಶಕ್ತಿ ಕಳೆದು ಹೋಗಿದ್ದರೂ ಅಂತಹ ಕಟ್ಟುವ ಶಕ್ತಿಯೊಂದು ಮನುಷ್ಯರ ಒಳಗೆಲ್ಲೋ ಅಡಗಿರುತ್ತದೆ ಎನ್ನುವ ನಂಬಿಕೆ ಕೆಲಸ ಮಾಡುತ್ತದೆ. ಸಂಬಂಧಗಳು ಬೇರೆ ಬೇರೆ ಕಾರಣಕ್ಕಾಗಿ ಬಿರುಕುಬಿಡುವ ಹಂತಗಳು ಬಂದಾಗ ಈ ಒಳಗಿನ ಕಟ್ಟುವ ಶಕ್ತಿ ಎಚ್ಚರಗೊಂಡು ಮನುಷ್ಯರು ಹಾದಿ ತಪ್ಪದಂತೆ ಕಾಯುವುದೆಂಬ ನೈತಿಕತೆಯೊಡನೆ ರಾಮಣ್ಣ ಈ ಮೊದಲ ಗುಂಪಿನ ಕತೆಗಳನ್ನು ಬರೆಯುತ್ತಾರೆ.
ಓದಲು ಹಳ್ಳಿಯನ್ನು ಬಿಟ್ಟು ಹೋದ ಹುಡುಗರು ಮರಳಿ ಹಳ್ಳಿಗೆ ಬಂದಾಗ ಆ ಹಳ್ಳಿಗಳೆಲ್ಲ ಸಾಮಾನ್ಯವಾಗಿ ಪಳಯುಳಿಕೆಗಳಂತೆ ತೋರುತ್ತವೆ. ಅವುಗಳು ಬದಲಾವಣೆಗೆ ಸಿದ್ಧಗೊಳ್ಳದ ಹೊರತು ಅಲ್ಲಿನ ಬದುಕಿಗೆ ಹೊರದಾರಿಯೆ ಇಲ್ಲವೆಂದು ಅನಿಸತೊಡಗುತ್ತದೆ. ಆದರೆ ರಾಮಣ್ಣನವರ ಮೊದಲ ಗುಂಪಿನ ಕತೆಗಳು ಹೀಗೆ ಹಳ್ಳಿಗಳನ್ನು ಮತ್ತು ಅಲ್ಲಿನ ಬದುಕನ್ನು ಹೊರಗಿಡುವ ಆಯ್ಕೆಯನ್ನು ಬಿಟ್ಟುಕೊಡುತ್ತವೆ. ಆ ಬದುಕು ಬದಲಾಗಬೇಕೆಂಬ, ಅದನ್ನು ಬದಲಿಸಬೇಕೆಂಬ ಹಂಬಲ ಅವರ ಕತೆಗಳ ಮುಖ್ಯ ಕಾಳಜಿಯಾಗುವುದಿಲ್ಲ. ತೀರ ಪ್ರಗತಿಪರರೆಂದು ತಿಳಿದುಕೊಂಡವರಿಗೆ ರಾಮಣ್ಣನವರ ಈ ದೃಷ್ಟಿಕೋನ ಹಿಡಿಸದೆಯೂ ಇರಬಹುದು. ಎಣ್ಣೆ ತೀರಿದ ದೀಪದ ಮುಂದೆ ಬತ್ತಿ ಹೊಸೆಯುವ ಕಾಯಕದಂತೆ ತೋರಬಹುದು. ಆದರೆ ರಾಮಣ್ಣ ಮನುಷ್ಯರ ಒಳಗಿನ ಒಳಿತನ್ನು ನಂಬಿದವರು. ಅವರ ಮೊದಮೊದಲ ಕತೆಗಳಲ್ಲಿ ಕುಟುಂಬಗಳ ಒಳಗೆ ಸಣ್ಣ ಬಿರುಕೊಂದು ಕಾಣಿಸಿಕೊಳ್ಳುವ ಮತ್ತು ಆ ಬಿರುಕನ್ನು ಕತೆಗಳ ಕೊನೆಗೆ ಮುಚ್ಚುವ ಮಾದರಿಯೊಂದು ಮಂಡಿತವಾಗುತ್ತದೆ. ಈ ಎರಡೂ ಸಂಗತಿಗಳೂ ದಿಟವಾದವುಗಳೆ. ಬಿರುಕು ಬಿಡದಿದ್ದರೆ ಅದು ಬದುಕಲ್ಲ; ಹಾಗೆಯೆ ಹಾಗೆ ಬಿರುಕು ಬಿಟ್ಟಾಗ ಅದನ್ನು ಬೆಳೆಯಲು ಬಿಡದೆ ಮುಚ್ಚುವ ಹಾಗೆ ಮಾಡದಿದ್ದರೂ ಅದು ಬದುಕಲ್ಲ. ಈ ಕತೆಗಳನ್ನು ಬರೆಯುವಾಗ ರಾಮಣ್ಣ ತೀವ್ರ ಆಶಾವಾದಿಯಂತೆ ಕಂಡರೂ ಸತ್ಯವನ್ನು ಎದುರಿಸಲು ಹೆದರುವ ಹೆಂಬೇಡಿಯಂತೆ ತೋರುವುದಿಲ್ಲ. ಅದಕ್ಕೆ ಕಾರಣ ಅವರು ಕತೆಯನ್ನು ಕಟ್ಟುವ ಬಗೆ.
ಇಂತಹ ಕತೆಗಳಲ್ಲಿ ಎರಡು ಬಗೆಯ ನಿಸರ್ಗಗಳು ನಮ್ಮೆದುರು ಕಾಣುತ್ತವೆ. ಒಂದು: ಮನುಷ್ಯರು ತಮ್ಮ ದುಡಿಮೆಯಿಂದ ಬೆಳೆದ ಬೆಳೆಯನ್ನು ಹೊತ್ತು ನಿಂತ ನಿಸರ್ಗ. ಇನ್ನೊಂದು: ಜನರ ಸ್ವಭಾವದ ನಿಸರ್ಗ. ಎರಡೂ ನೆಲೆಗಳನ್ನು ಒಂದೇ ಸಮನಾದ ಉತ್ಸುಕತೆಯಲ್ಲಿ ಕತೆಗಳು ಬಣ್ಣಿಸುತ್ತವೆ. ಅದರಲ್ಲೂ ಬೆಳೆದು ನಿಂತ ಹೊಲಗದ್ದೆಗಳ ಸಮೃದ್ಧತೆಯನ್ನು ಬಣ್ಣಿಸುವ ರಾಮಣ್ಣನವರ ಭಾಷೆಯನ್ನು ಓದಿಯೇ ನೋಡಬೇಕು. ಅಲ್ಲಿ ಎಲ್ಲಿಯೂ ಅವರು ಕೇವಲ ಮುಗ್ಧತೆಯಿಂದ ಬರೆಯುವುದಿಲ್ಲ. ಆ ಸಮೃದ್ಧ ನಿಸರ್ಗಕ್ಕೆ ಇರುವ ಕಟ್ಟುವ, ಪೊರೆಯುವ ಮತ್ತು ಹೊಸದನ್ನು ಹುಟ್ಟಿ ಹಾಕುವ ಗುಣದಲ್ಲಿ ಅವರಿಗಿರುವ ಶ್ರದ್ಧೆಗೆ ಗಡಿಗಳೇ ಇಲ್ಲವೇನೋ ಎನಿಸುತ್ತದೆ. ಹಸಿರು ಬಣ್ಣ ಅವರ ಈ ಬಣ್ಣನೆಗಳಲ್ಲಿ ಹಲವು ಛಾಯೆಗಳಲ್ಲಿ ಮೈದಳೆಯುತ್ತದೆ. ಹಾಗೆಂದು ಅವರು, ಮನುಷ್ಯ ಒಬ್ಬ ನೋಟಕನಾಗಿರುವ ನೆಲೆಯಲ್ಲಿ ಇಲ್ಲವೇ ಹೊರಗೆ ನಿಂತು ನೋಡುವ ಬಗೆಯಲ್ಲಿ ನಿಸರ್ಗವನ್ನು ಬಣ್ಣಿಸುವುದಿಲ್ಲ. ಅಲ್ಲಿ ಹಾರುವ ಹಕ್ಕಿಗಳು ಮನುಷ್ಯರಲ್ಲಿ ಅಡಗಿರುವ ಹತ್ತಿಕ್ಕಲಾಗದ ಬಿಡುಗಡೆಯ ಹಂಬಲವನ್ನು ತೋರುವ ಹಕ್ಕಿಗಳಲ್ಲ. ಅವು ಅವನು ಬೆಳೆದ ಬೆಳೆಯನ್ನು ಅವಲಂಬಿಸಿದ ಹಕ್ಕಿಗಳು. ಮನುಷ್ಯರ ಜತೆಯಲ್ಲಿ ಬದುಕಲೆಂದು ಇರುವ ಹಕ್ಕಿಗಳು. ಹಾಗಾಗಿ ಈ ಕತೆಗಳಲ್ಲಿ ಇರುವ ಬಣ್ಣನೆಗಳಿಗೆ ಒಂದು ವಿಶಿಷ್ಟ ಬಗೆಯ ಕಾಂತಿಯಿದೆ. ಜೊತೆಗೆ ಕನ್ನಡಕ್ಕೆ ವಿಶಿಷ್ಟವಾದ ತಾತ್ವಿಕತೆಯಿದೆ. ಇಂತಹ ಬಣ್ಣನೆಗಳಲ್ಲಿ, ಬಣ್ಣಿಸುವವರು ಹೊರಗಿನವರಂತೆ ತೋರುವುದಿಲ್ಲ. ಅದರೊಡನೆ ಬೆರೆತು ಹೋಗಿರುವವರಂತೆ ತೋರುತ್ತಾರೆ.
ಅವರ ಈ ಬಗೆಯ ಕತೆಗಳಲ್ಲಿ ಬರುವ ಇನ್ನೊಂದು ನಿಸರ್ಗ ಕೂಡ ಹೀಗೆಯೇ ಒಳಗೊಳ್ಳುವ ಬಗೆಯದು. ಇಲ್ಲಿ ಜನರ ನಡುವೆ ‘ತಂದಿಕ್ಕುವವರು’ ಇದ್ದಂತೆ ಅವರೆಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವವರೂ ಇರುತ್ತಾರೆ. ಇಲ್ಲಿಯೂ ಎಲ್ಲವೂ ತಂತಾನೆ ಹುಟ್ಟಿ ಬೆಳೆಯುವುದಿಲ್ಲ. ಉತ್ತು ಬಿತ್ತು ಕಳೆ ತೆಗೆದು ಕಾಯ್ದರೆ ಮಾತ್ರ ಸುಗ್ಗಿಯ ಕೊಯ್ಲಿನಲ್ಲಿ ಹೊಟ್ಟೆ ತುಂಬಲು ಕಾಳು ಸಿಗುತ್ತವೆ. ಅಂದರೆ ಮನುಷ್ಯರ ಕಟ್ಟುವ ಸ್ವಭಾವ ಕೂಡ ಹುಟ್ಟಿನಿಂದ ದತ್ತವಾಗಿ ಬಂದುದಲ್ಲ. ಅದನ್ನು ಸರಿಯಾಗಿ ಹಸನು ಮಾಡಿ ಬೆಳೆಸಿಕೊಳ್ಳಬೇಕು. ಇದೂ ಒಂದು ಬಗೆಯ ವ್ಯವಸಾಯವೇ ಸರಿ. ಹಾಗಾಗಿ ಇಡಿಯಾಗಿ ಕೆಟ್ಟವರು ಇಲ್ಲವೇ ಇಡಿಯಾಗಿ ಒಳ್ಳೆಯವರು ಎಂಬ ಗೆರೆಯೆಳೆದ ಗುಂಪುಗಳಲ್ಲಿ ಮನುಷ್ಯರನ್ನು ಇರಿಸಲು ಬರುವುದಿಲ್ಲ. ಅವರು ‘ಹಾಗೆ ಆಗಲು’ ದುಡಿಯುತ್ತಾರೆ ಎನ್ನುವುದಷ್ಟೆ ದಿಟ.
ಈಗ ಆ ಕತೆಗಳನ್ನು ಓದುವಾಗ ಅಲ್ಲಿನ ಹಳ್ಳಿಗಳ ಸಾಮಾಜಿಕ ಬದುಕಿನಲ್ಲಿ ಸಾಮಾಜಿಕ ಸಂಬಂಧಗಳು ಹಿಂದೆ ಸರಿದು ಮನುಷ್ಯ ಸಂಬಂಧಗಳು ಮುನ್ನೆಲೆಗೆ ಬಂದಿವೆ ಎನ್ನಿಸುವುದು ಸಹಜ. ನೆಲದ ಮೇಲಿನ ಒಡೆತನ ಮತ್ತು ದುಡಿಮೆಯನ್ನು ನೆಮ್ಮಿದವರು ಒಂದೆಡೆಯಾದರೆ, ನೆಲದ ಒಡೆತನವಿಲ್ಲದೆ ದುಡಿಯುವವರು ಇನ್ನೊಂದೆಡೆ ಇದ್ದಾರೆ. ಜೊತೆಗೆ ನೆಲದ ಸಂಬಂಧವಿಲ್ಲದಿದ್ದರೂ ಜೀವನ ನಿರ್ವಹಣೆಯ ಹಾದಿಯನ್ನು ಕೈವಶಮಾಡಿಕೊಂಡವರೂ ಇದ್ದಾರೆ. ಇವರಲ್ಲಿ ಕತೆಗಾರರ ದೃಷ್ಟಿ ಮೊದಲ ಗುಂಪಿನವರಲ್ಲಿ ನೆಲೆಸಿದೆ. ಎರಡನೆಯ ಗುಂಪಿನವರು ಸದಾ ಮುಖಾಮುಖಿಯಾಗುತ್ತಿರುತ್ತಾರೆ. ಕೆಲವೊಮ್ಮೆ ಸವಾಲುಗಳನ್ನೂ ಹಾಕುವುದುಂಟು. ಆದರೆ ಇವೆಲ್ಲವೂ ಈ ಗುಂಪಿನ ಕತೆಗಳಲ್ಲಿ ಸಂಘರ್ಷಕ್ಕೆ ಕಾರಣವಾಗುವುದಿಲ್ಲ. ಮೊದಲೇ ಹೇಳಿದಂತೆ ಕೊನೆಗೂ ನೆಲೆನಿಂತು ಗೆಲ್ಲುವುದು ಮನುಷ್ಯರ ಒಳ್ಳೆಯತನವಷ್ಟೆ ಎಂಬುದು ನಿರೂಪಕರ ಗಟ್ಟಿ ನಂಬಿಕೆ. ಕನ್ನಡ ಕತೆಗಳ ಲೋಕವೀಗ ರಾಮಣ್ಣನವರ ಈ ನಂಬಿಕೆಯ ನೆಲೆಯಿಂದ ಬಹುದೂರ ಸರಿದಿದೆಯಾದರೂ ಇದರಿಂದ ರಾಮಣ್ಣನವರ ಕತೆಗಳ ಒಳಗಿನ ನಳನಳಿಸುವಿಕೆ ಮಾತ್ರ ಎಂದೂ ಮಾಸದಂತಿದೆ.
ಎರಡನೆಯ ಗುಂಪಿನ ಕತೆಗಳಲ್ಲಿ ವೈದ್ಯ ರಾಮಣ್ಣನವರಿದ್ದಾರೆ. ವೈದ್ಯರಾಗಿ ಕಂಡ ಬದುಕನ್ನು ಚಿತ್ರಿಸುತ್ತಾರೆ. ವೈದ್ಯರು ದೇಹವನ್ನು ಕೇವಲ ದೇಹ ರಚನೆಯ ನೆಲೆಯಲ್ಲಿ ಮಾತ್ರ ನೋಡುವವರಲ್ಲ; ಜೊತೆಗೆ ಅಂಗಾಂಗಗಳ ನಡುವಣ ಸಂಬಂಧ ಮತ್ತದರ ಏರುಪೇರುಗಳ ನೆಲೆಯಲ್ಲೂ ನೋಡುವವರು. ಈ ಎರಡೂ ನೆಲೆಗಳನ್ನು ವೈದ್ಯ ರಾಮಣ್ಣನವರು ಕತೆಗಾರ ರಾಮಣ್ಣನವರಿಗೆ ಒದಗಿಸಿದಂತಿದೆ. ಹಾಗೆಯೇ ಅದು ಅವರು ಜೀವನವನ್ನು ನೋಡುವ ದೃಷ್ಟಿಯಲ್ಲೂ ಬದಲಾವಣೆಯನ್ನು ತಂದಿದೆ. ಈ ಬದಲಾವಣೆ ಮತ್ತೆ ಅವರಲ್ಲಿದ್ದ ಆಳವಾದ ನೈತಿಕ ಪ್ರಜ್ಞೆಯ ಸ್ವರೂಪವನ್ನು ಬದಲಾಯಿಸಿದೆ. ಹೊಸ ಬಗೆಯ ಬದುಕು, ಜೀವನ ಮೌಲ್ಯಗಳು ಮನುಷ್ಯರಲ್ಲಿರುವ ಒಳಗಿನ ಒಳ್ಳೆಯತನವನ್ನು ಹಾಳುಗೆಡಹಿವೆ ಎಂಬ ನೆಲೆಗೆ ನಿರೂಪಕರು ತಲುಪಿದ್ದಾರೆ. ಈ ಕತೆಗಳಲ್ಲೂ ಬಿರುಕು ಬಿಡುವ ಬದುಕಿದೆ. ಆದರೆ ಆ ಬಿರುಕನ್ನು ಮುಚ್ಚುವ ಮನುಷ್ಯರಿಲ್ಲ. ಇರುವವರೂ ಹತಾಶರಾಗಿದ್ದಾರೆ.
ಈ ಗುಂಪಿನ ಕತೆಗಳಲ್ಲೂ ಎರಡು ಬಗೆಯವಿವೆ. ಒಂದು ಬಗೆಯ ಕತೆಗಳು ಬದಲಾದ ಹಳ್ಳಿಗಳಲ್ಲಿ ನಡೆದರೆ ಮತ್ತೊಂದು ಬಗೆಯ ಕತೆಗಳು ರಾಜಕೀಯ ಮತ್ತು ಆರ್ಥಿಕ ಅಧಿಕಾರದ ಕೇಂದ್ರಗಳಲ್ಲಿ ನಡೆಯುತ್ತವೆ. ಹಳ್ಳಿಗಳಲ್ಲಿ ನಡೆಯುವ ಕತೆಗಳಲ್ಲಿ ಈಗ ‘ಹೊಂದಿಕೊಂಡು’ ಹೋಗುವ ಪರಿಯಿಲ್ಲ. ‘ಹರಕೆಯ ಹಣ’ ಕತೆಯಲ್ಲಿ ಅಧಿಕಾರ ಕೇಂದ್ರದ ಎದುರು ಸೆಟೆದು ನಿಲ್ಲುವ ಪಾತ್ರವಿದೆ. ತನ್ನದೇ ಆದ ಬಗೆಯಲ್ಲಿ ಪಲ್ಲಟಗಳಿಗೆ ಕಾರಣವಾಗುವಂತೆ ಕ್ರಿಯಾವಿಧಾನವನ್ನು ಇಂತಹ ಪಾತ್ರಗಳು ರೂಪಿಸಿಕೊಳ್ಳುತ್ತವೆ. ಜಾತಿಗಳ ನಡುವಣ ವೈರುಧ್ಯವೀಗ ಶತ್ರುತ್ವದ ನೆಲೆಗೆ ತಲುಪಿದೆ. ಎಲ್ಲರೂ ತಮ್ಮ ಫಿರ್ಕಾಗಳನ್ನು ಕಾಯ್ದುಕೊಳ್ಳುವ ಹುನ್ನಾರಗಳನ್ನು ಹುಡುಕುವವರೇ ಆಗಿದ್ದಾರೆ. ರಾಮಣ್ಣ ಬರೆದ ಕೊನೆಕೊನೆ ಬರಹಗಳಲ್ಲಿ ಒಂದಾದ ‘ತೋಳಗಳ ನಡುವೆ’ ಎಂಬ ಕಿರು ಕಾದಂಬರಿಯಲ್ಲಿ ಈ ನೆಲೆ ಢಾಳಾಗಿ ಮಂಡಿತವಾಗಿದೆ. ಆ ಕೃತಿಯಲ್ಲಿ ಎಲ್ಲರೂ ಯಾವುದೋ ಒಂದು ಆಟದಲ್ಲಿ ಭಾಗಿಯಾದಂತೆ ಯಾರೋ ಬರೆದ ರಂಗಕೃತಿಯ ಪಾತ್ರಗಳಂತೆ ವರ್ತಿಸುತ್ತಾರೆ. ಅಲ್ಲಿ ನೈತಿಕತೆ ಎಂಬುದು ಪಾತ್ರಗಳನ್ನು ನಡೆಸುವ ಶಕ್ತಿಯಾಗಿ ಉಳಿಯುವುದಿಲ್ಲ. ನಿರೂಪಕರ ವ್ಯಂಗ್ಯ, ಒಳ ಕುದಿತಗಳಲ್ಲಿ ಈ ನೈತಿಕತೆ ನೆಲೆಗೊಳ್ಳುತ್ತದೆ. ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು’ ಮತ್ತು ‘ಗಾಂಧಿ’ ಕತೆಗಳನ್ನೂ ಈ ಮಾದರಿಯ ಉದಾಹರಣೆಗಳನ್ನಾಗಿ ನೋಡಬಹುದು.
ರಾಮಣ್ಣನವರ ಕತೆಗಳ ಲೋಕದಲ್ಲಿ ಈ ಬದಲಾವಣೆ ಕಾಣಿಸಿಕೊಂಡದ್ದು ೧೯೭೫ರ ಬಳಿಕ ಎಂಬುದನ್ನು ಗಮನಿಸಬೇಕು. ಇದು ಕೇವಲ ಕುತೂಹಲದ ಮಾಹಿತಿಯಲ್ಲ. ಆ ಹೊತ್ತಿನಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸುತ್ತಿದ್ದ ಬಿಕ್ಕಟ್ಟು ತುರ್ತು ಪರಿಸ್ಥಿತಿಯ ಘೋಷಣೆಯಲ್ಲಿ ಮೈತಳೆದಿತ್ತು. ಇದು ನಮ್ಮ ಹಲವು ಲೇಖಕರ ಲೋಕ ದೃಷ್ಟಿಯ ಮೇಲೆ ದಟ್ಟವಾದ ಪರಿಣಾಮವನ್ನು ಬೀರಿದೆ. ಅದೇ ಸರಿ ಸುಮಾರಿನ ‘ಸಂಪೂರ್ಣ ಕ್ರಾಂತಿ’ ಪರಿಕಲ್ಪನೆ ಮತ್ತು ಚಳುವಳಿ ಕೂಡ ರಾಮಣ್ಣನವರನ್ನು ಸೆಳೆದಿತ್ತು. ಹಾಗಿಲ್ಲದಿದ್ದರೆ ಅವರು ಬಿಹಾರಕ್ಕೆ ಸಿಡುಬು ನಿರ್ಮೂಲನ ತಂಡದ ವೈದ್ಯರಾಗಿ ಕರ್ನಾಟಕದಿಂದ ಹೋಗುವುದಕ್ಕೆ ಮುಂದಾಗುತ್ತಿರಲಿಲ್ಲ. ಅಲ್ಲಿ ಹೋದಾಗ ಅವರು ಬರೆದ ‘ಬೇಲಾ’ ಕತೆ ಅವರಿಗೆ ಬಹು ಪ್ರಿಯವಾಗಿತ್ತು. ಬಿಹಾರದ ನೆನಪುಗಳನ್ನು ಮೀಟುವ ಆ ಕತೆ ರಾಮಣ್ಣನವರ ಕತೆಗಳ ಲೋಕದಲ್ಲಿರುವ ಎರಡು ಮಾದರಿಗಳಿಗೆ ಸೇತುವೆಯಂತೆ ತೋರುತ್ತದೆ. ಅದರಲ್ಲಿ ಎರಡೂ ಮಾದರಿಯ ನೆಲೆಗಳು ಬೆಸೆದುಕೊಂಡಿವೆ. ಅಲ್ಲದೆ ವೈದ್ಯನಾದ ನಿರೂಪಕನಲ್ಲಿರುವ ಸಾಹಿತ್ಯದ ಸೆಳೆವುಗಳು ಕೂಡ ಅದರಲ್ಲಿ ಪ್ರಕಟಗೊಳ್ಳುತ್ತವೆ. ಸಾವಿರಾರು ವರ್ಷಗಳಿಂದ ಹಸುರುಕ್ಕಿಸುತ್ತಿದ್ದರೂ ಜನಜೀವನ ರಿಕ್ತವಾಗಿಯೇ ಉಳಿದ ಗಂಗೆಯ ತಟದ ಬದುಕು ಈ ಕತೆಗಾರರ ನಂಬುಗೆಯ ಬುಡವನ್ನು ಬಲವಾಗಿ ಅಲ್ಲಾಡಿಸಿದೆ. ಹಾಗಿದ್ದರೂ ಬೇಲಾ ವಿದಾಯದ ಹೊತ್ತಿನಲ್ಲಿ ನೀಡಿದ ಕುಂಕುಮ ಭರಣಿ ಮತ್ತು ಫಣೀಶ್ವರ ನಾಥ ರೇಣು ಅವರ ಮೈಲಾ ಆಂಚಲ್ ಕಾದಂಬರಿಯ ಬಣ್ಣನೆಗಳು ಕತೆಗಾರರಲ್ಲಿ ಆಪ್ತ ಚಿತ್ರಗಳಾಗಿ ಉಳಿದುಕೊಳ್ಳುತ್ತವೆ. ನಿಜವಾದ ಕತೆಗಾರ ರಾಮಣ್ಣ ಮೈತಳೆಯುವುದು ಇಂತಹ ಕಡೆಗಳಲ್ಲಿ ಎಂದು ನನ್ನ ತಿಳುವಳಿಕೆ.
೭೫ರ ಬಳಿಕ ಬರೆದ ಕತೆಗಳಲ್ಲಿ ರಾಮಣ್ಣ ಅಲ್ಲಲ್ಲಿ ಜೀವನದ ಬಗೆಗೆ ಅದರಲ್ಲಿ ಸಂಭವಿಸುತ್ತಿರುವ ಮೌಲ್ಯ ಪಲ್ಲಟಗಳ ಬಗೆಗೆ ಕಹಿ ಮತ್ತು ಕಟಕಿಗಳ ಭಾವವನ್ನು ಹೊಂದಿದಂತೆ ತೋರುತ್ತದೆ. ‘ಕರುಣಾಳು ಬಾ ಬೆಳಕೆ’ ಮಾದರಿಯ ಕತೆಗಳು ಇಂತಹ ನೆಲೆಯನ್ನು ನಮ್ಮೆದುರು ಮುಂದಿಡುತ್ತವೆ. ಒಳಗಿನಿಂದಲೇ ಕುಟ್ಟೆ ಹಿಡಿಯುತ್ತಿರುವ ಮರವನ್ನು ಬಣ್ಣಿಸುವ ನೋವು ಈ ಮಾದರಿಯ ಕತೆಗಳಲ್ಲಿ ಇದೆ. ಹೂಬಿಟ್ಟು, ಹಣ್ಣುಗಳನ್ನು ಕೊಡುವ ಮರವೀಗ ದಿನಗಳನ್ನು ಎಣಿಸುತ್ತಿದೆಯೇನೋ ಎಂಬ ಹತಾಶೆಯೂ ಇಣುಕುತ್ತದೆ. ಈ ಹತಾಶೆಯನ್ನು ಮರೆಮಾಡಲು. ಅದರಿಂದ ಉಂಟಾದ ಕೊರೆಯನ್ನು ತುಂಬಿಕೊಳ್ಳಲು ರಾಮಣ್ಣ ಜೀವ ಸಮೃದ್ಧಿಯ ಕಥಾನಕಗಳ ಮೊರೆ ಹೋಗುತ್ತಿದ್ದರು. ಕಟ್ಟುವ ತವಕವುಳ್ಳ ಏನಾದರೂ ಅವರನ್ನು ಸೆಳೆದುಕೊಳ್ಳುತ್ತಿತ್ತು. ಈ ನೆಲೆಯಿಂದ ಅವರು ಮತ್ತೇನನ್ನು ಕನ್ನಡ ಬರವಣಿಗೆಗೆ ಕೊಡುತ್ತಿದ್ದರೋ ಈಗ ಅದು ಕೇವಲ ಊಹೆಯ ಮಾತಷ್ಟೇ ಆಗಬಹುದು. ಕವಿತೆಗಳ ಕಡೆಗೆ ಹೊರಳುತ್ತಿದ್ದ ಅವರೊಳಗೆ ಇದ್ದ ಒಳಕುದಿತ ದೊಡ್ಡದೊಂದನ್ನು ಕಟ್ಟುವ ಹಂಬಲವನ್ನು ಹೊಂದಿತ್ತು ಎಂಬುದಂತೂ ನಿಜ. ಈ ಹಂತದಲ್ಲಿ ಅವರು ಎರಡು ವಿರುದ್ಧ ನೆಲೆಗಳ ಹೊಂದಾಣಿಕೆಯ ಆತಂಕವನ್ನು ಅನುಭವಿಸುತ್ತಿದ್ದಂತೆ ಈಗ ತೋರುತ್ತದೆ. ಕೊಳಲು ಮತ್ತು ಖಡ್ಗಗಳೆರಡೂ ಅಧೀನಗೊಳಿಸುವ ಪರಿಕರಗಳೆ. ಆದರೆ ಅವುಗಳಲ್ಲಿ ಕೊಳಲನ್ನು ತೊರೆದ ಹೊರತು ಖಡ್ಗಕ್ಕೆ ಜಾಗವಿಲ್ಲ. ಹಾಗೆಯೇ ಖಡ್ಗ ಹಿಡಿದ ಕೈ ಕೊಳಲನ್ನು ತೊರೆಯಲೇ ಬೇಕು. ಭಾಗವತದ ಕೃಷ್ಣ ಈ ಇಕ್ಕಟ್ಟನ್ನು ಪರಿಹರಿಸಿಕೊಂಡಿದ್ದು ಎರಡು ಲೋಕಗಳನ್ನು ಬೇರ್ಪಡಿಸಿಕೊಳ್ಳುವ ಮೂಲಕ. ಗೋಕುಲ ಮತ್ತು ರಾಜಕಾರಣದ ಕೇಂದ್ರವೆನಿಸಿದ ನಗರಗಳು ಬೇರೆಬೇರೆ ಲೋಕಗಳೇ ಸರಿ. ಆದರೆ ಈ ಪರಿಹಾರ ನಮ್ಮ ಕಾಲದಲ್ಲಿ ಆಗದೆಂಬ ನೋವು ರಾಮಣ್ಣನವರನ್ನು ಕಾಡುತ್ತಿದ್ದಂತೆ ಈಗ ಅನಿಸುತ್ತಿದೆ. ಕೊಳಲು ಮತ್ತು ಖಡ್ಗಗಳ ನಡುವೆ ಈಗ ಆಯ್ಕೆಗಳಿಲ್ಲ. ಎರಡನ್ನು ಹೇಗೆ ಒಟ್ಟಿಗೆ ನಿಭಾಯಿಸಬೇಕೆಂಬುದೇ ಇಂದಿನ ಸವಾಲಾಗಿದೆ.
ರಾಮಣ್ಣನವರ ಕತೆಗಳ ಭಾಷೆಯನ್ನು ಗಮನಿಸಿದ ಯಾರಿಗಾದರೂ ಆ ಕತೆಗಳ ಪಾತ್ರಗಳು ಆಡುವ ಕನ್ನಡದ ಬಿಸುಪು ತಟ್ಟದೇ ಇರದು. ಅದು ಯಾವ ಭಾವವನ್ನೇ ಹೊರಹಾಕುತ್ತಿರಲಿ ಆ ನುಡಿಗಳಲ್ಲಿ ಕನ್ನಡದ ಪ್ರಭೇದವೊಂದರ ನೆಲೆಗಳು ಗಟ್ಟಿಯಾಗಿ ಹೆಣೆದುಕೊಂಡುಬಿಟ್ಟಿರುತ್ತವೆ. ಮೇಲು ನೋಟಕ್ಕೆ ಮಂಡ್ಯದ ಆಸುಪಾಸಿನ ಕನ್ನಡದ ಮಾದರಿಗಳು ಅವರ ಹಲವು ಕತೆಗಳಲ್ಲಿ ನೆಲೆಕಂಡುಕೊಂಡಿವೆ. ಆದರೆ ಅವರು ವರ್ಣನೆಗಳಲ್ಲಿ ಬಳಸುವ ಕನ್ನಡದಲ್ಲಿ ಈಗ ಚಾಲ್ತಿಯಲ್ಲಿರುವ ಬರವಣಿಗೆಯ ಪ್ರಮಾಣ ಕನ್ನಡದ ಮಾದರಿ ಇದೆ. ಆದರೆ ಅವರ ಕತೆಗಳ ಪಾತ್ರಗಳ ಮಾತುಗಳಲ್ಲಿ ಅವರು ಬದುಕಿನ ಅಡ್ಡಕೊಯ್ತಗಳನ್ನೇ ಮುಂದಿಡುತ್ತಾರೆ. ಆ ಪಾತ್ರಗಳು ತಮ್ಮ ಮಾತನ್ನು ಕತೆಗಾರರಿಗಾಗಿ ಚಿಂತಿಸಿ ನುಡಿಯುವುದಿಲ್ಲ. ಅಂತಹ ಒಳಮುಖಿಯಾದ ನುಡಿಗಳು ರಾಮಣ್ಣನವರ ಕತೆಗಳಲ್ಲಿ ಇಲ್ಲವೇ ಇಲ್ಲ. ಹಾಗೆಂದು ಅವರ ಪಾತ್ರಗಳು ತಮ್ಮ ಅಂತರಂಗವನ್ನು ಹೊಕ್ಕು ನೋಡಿಕೊಳ್ಳುವುದಿಲ್ಲವೆಂದಲ್ಲ. ಆದರೆ ಅದಕ್ಕಾಗಿ ಈ ಕತೆಗಳಲ್ಲಿ ಅನುಸರಿಸಲಾಗುವ ತಂತ್ರಗಳೇ ಬೇರೆ. ಪಾತ್ರಗಳ ದೈಹಿಕ ಚಹರೆಗಳು ಮತ್ತು ನಡಾವಳಿಗಳನ್ನು ಹಾಗೂ ಪರಿಸರದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ಈ ತುಯ್ದಾಟಗಳನ್ನು ಹೊರಹಾಕಲು ಕತೆಗಾರರು ಬಳಸಿಕೊಳ್ಳುತ್ತಾರೆ. ಅದಕ್ಕಾಗಿ ಅವರ ಮಾತಿನ ಕನ್ನಡವನ್ನು ತಿದ್ದಿ ತೀಡಲು ಹೋಗುವುದಿಲ್ಲ. ಇದೂ ಕೂಡ ಕನ್ನಡ ಕತೆಗಳ ನೆಲೆಯಲ್ಲಿ ಗಮನಿಸಬೇಕಾದ ಸಂಗತಿಯೆಂದು ತಿಳಿಯುತ್ತೇನೆ. ಈ ಹಂತದಲ್ಲಿ ಕನ್ನಡ ಬರಹಗಾರರು ಎದುರಿಸಿದ ಬಿಕ್ಕಟ್ಟೊಂದನ್ನು ರಾಮಣ್ಣ ಹೇಗೆ ನಿರ‍್ವಹಿಸಿದ್ದಾರೆಂಬ ಬಗೆಗೆ ಕೆಲವು ಮಾತುಗಳು ಬೇಕೆನಿಸುತ್ತಿದೆ. ಕತೆಗಳ ನಿರೂಪಣೆಯಲ್ಲಿ ಪಾತ್ರಗಳು ತಮ್ಮೊಳಗೆ ತಾವೇ ಹೊಕ್ಕು ನೋಡಿಕೊಳ್ಳುವ ನೆಲೆ ಬಂದಾಗ ಬಹುಪಾಲು ಕತೆಗಾರರು ಅವರದ್ದೇ ಆದ ಕನ್ನಡ ಶೈಲಿಯೊಂದನ್ನು ಕಟ್ಟಿಕೊಳ್ಳುತ್ತಾರೆ. ಆದರೆ ನಡುಗನ್ನಡದ ಹಲವು ಕವಿಗಳು ಅದರಲ್ಲೂ ಕುಮಾರವ್ಯಾಸನಂತಹ ಕವಿ ಬೇರೊಂದು ಹಾದಿಯನ್ನು ತುಳಿದಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅದೆಂದರೆ ದೈಹಿಕ ಚಹರೆಗಳು ಮತ್ತು ಆಂಗಿಕ ನೆಲೆಗಳ ಮೂಲಕ ಪಾತ್ರಗಳ ಒಳ ಜಗತ್ತನ್ನು ಹೊರಗಿಡುವ ಮಾದರಿಯಿದು. ರಾಮಣ್ಣನವರು ಈ ಹಾದಿಯನ್ನು ಹೆಚ್ಚಾಗಿ ಅವಲಂಬಿಸಿದವರು.
ಹತ್ತಿರದಿಂದ ರಾಮಣ್ಣನವರನ್ನು ಬಲ್ಲವರು ಅವರು ಯಾವುದೇ ಸನ್ನಿವೇಶವನ್ನು ಒಂದು ನಾಟಕೀಯ ಗುಣದಿಂದ ಬದಲಿಸಿಬಿಡುತ್ತಿದ್ದುದನ್ನು ಚೆನ್ನಾಗಿ ತಿಳಿದಿರುತ್ತಾರೆ. ಈ ನಾಟಕೀಯ ಗುಣ ಆ ಸನ್ನಿವೇಶದ ಗಹನತೆಯು ಆದು ನಡೆಯುತ್ತಿರುವ ಹೊತ್ತಿನಲ್ಲೇ ಮೈದಳೆಯುವಂತೆ ಮಾಡಬೇಕೆಂಬ ಹಂಬಲದಿಂದ ಹುಟ್ಟಿದ್ದು. ಹಾಗೆ ಮಾಡುವ ರಾಮಣ್ಣನವರಿಗೆ ಅಲ್ಲಿ ತಾವು ಕೇಂದ್ರವಾಗಿ ಮೆರೆಯಬೇಕೆಂಬ ಹಂಬಲ ಇರುತ್ತಿರಲಿಲ್ಲ. ಅವರು ಬದುಕಿದ ಈ ಬಗೆ ಅವರ ಕತೆಗಳಲ್ಲಿ ಮೊಳಕೆಯೊಡೆದಿರುವುದನ್ನು ನಾನು ಕಂಡಿದ್ದೇನೆ.
ರಾಮಣ್ಣನವರ ಎಲ್ಲ ಬರಹಗಳನ್ನು ಒಟ್ಟಾಗಿ ಪ್ರಕಟಿಸುತ್ತಿರುವ ಈ ಹೊತ್ತಿನಲ್ಲಿ ಅವರ ಬರವಣಿಗೆಯನ್ನು ಕುರಿತು ಕೆಲವು ಮಾತುಗಳನ್ನು ಬರೆಯುವ ಅವಕಾಶ ದೊರಕಿದ್ದು ನನಗೆ ಸಂತಸವನ್ನು ತಂದಿದೆ.
(ಡಾ.ಬೆಸಗರಹಳ್ಳಿ ರಾಮಣ್ಣ ಅವರ ಸಮಗ್ರ ಕಥನ ಸಾಹಿತ್ಯ `ಕಣಜ' ಬಿಡುಗಡೆ ಹಾಗೂ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭ. ಸೆಪ್ಟೆಂಬರ್ 10, 2011, ಶನಿವಾರ ಸಂಜೆ 4 ಕ್ಕೆ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ಸರ್ ಎಂವಿ ಕ್ರೀಡಾಂಗಣದ ಹಿಂಭಾಗ, ಮಂಡ್ಯ)
ಪುರಸ್ಕಾರ
[ಬದಲಾಯಿಸಿ]- ‘ನೆಲದ ಒಡಲು’ ಕಥಾಸಂಕಲನಕ್ಕೆ ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.
- ‘ಗರ್ಜನೆ’ ಕಥಾಸಂಕಲನಕ್ಕೆ ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.
ಉಲ್ಲೇಖಗಳು
[ಬದಲಾಯಿಸಿ]