ವಿಷಯಕ್ಕೆ ಹೋಗು

ಆಟಿಯ ಮಾರಿ ಪೂಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಟಿಯ ಮಾರಿ ಪೂಜೆ

[ಬದಲಾಯಿಸಿ]

ತುಳುನಾಡಿನ ಉಡುಪಿಯಿಂದ ಸುಮಾರು ಹನ್ನೆರಡು ಕಿಲೋಮೀಟರ್ ದೂರದಲ್ಲಿರುವ ಕಾಪುವಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ, ಮತ್ತು ಮೂರನೇ ಮಾರಿಗುಡಿ ದೇವಾಲಯಗಳಲ್ಲಿ ಆಟಿ (ಕರ್ಕಟಾಕ/ ಆಷಾಢ) , ಸುಗ್ಗಿ (ಮೀನ/ಫಾಲ್ಗುಣ )ಮತ್ತು ಜಾರ್ದೆ (ವೃಶ್ಚಿಕ/ಕಾರ್ತಿಕ) ಮಾರಿಪೂಜೆ ಏಕಕಾಲದಲ್ಲಿ ನಡೆಯುತ್ತದೆ. ಸುಗ್ಗಿ ಮಾಸದಲ್ಲಿ ನಡೆಯುವ ಈ ಪೂಜೆಗೆ ತುಳುನಾಡಿನಲ್ಲಿ ಅನನ್ಯ ಮಹತ್ವವಿದೆ.[]

ಮಾರಿ ಪೂಜೆಯ ಕ್ರಮ

[ಬದಲಾಯಿಸಿ]

ರಾತ್ರಿ 8 ಗಂಟೆಗೆ ಹೂವಿನ ಪೂಜೆಯ ನಂತರ, ಹಳೇ ಮಾರಿಗುಡಿಗೆ ಕಾಪು ವೆಂಕಟರಮಣ ದೇವಸ್ಥಾನದಿಂದ, ಹೊಸ ಮತ್ತು ಮೂರನೇ ಮಾರಿಗುಡಿಗಳಿಗೆ ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಬಿಂಬ ಮತ್ತು ನಗನಾಣ್ಯಗಳನ್ನು ಶೋಭಾಯಾತ್ರೆಯ ಮೂಲಕ ತಂದು ಗದ್ದುಗೆ ಏರಿಸಲಾಗುತ್ತದೆ. ಈ ಸಂದರ್ಭದಿಂದ ಆಟಿ (ಕರ್ಕಟಾಕ/ ಆಷಾಢ) , ಸುಗ್ಗಿ (ಮೀನ/ಫಾಲ್ಗುಣ )ಮತ್ತು ಜಾರ್ದೆ (ವೃಶ್ಚಿಕ/ಕಾರ್ತಿಕ) ಪೂಜೆಯ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ. ದರ್ಶನ ಸೇವೆಯ ನಂತರ, ಮಾರಿಯಮ್ಮ ದೇವಿಯ ಬಿಂಬವನ್ನು ವಿಸರ್ಜನೆ ಮಾಡಿ ಸಮಾರಂಭವನ್ನು ಸಮಾಪ್ತಿಗೊಳಿಸಲಾಗುತ್ತದೆ.[]

ವಾಣಿಜ್ಯ ಮೇಳ

[ಬದಲಾಯಿಸಿ]

ಉಡುಪಿ ಪರ್ಯಾಯ, ಬಪ್ಪನಾಡು ದುರ್ಗಾಪರಮೇಶ್ವರಿ ಡೋಲು ಜಾತ್ರೆ, ಮೂಲ್ಕಿ ಅರಸರ ಕಂಬಳ, ಕವತ್ತಾರು ಆಯನ, ಧರ್ಮಸ್ಥಳದ ಲಕ್ಷದೀಪೋತ್ಸವ, ಮತ್ತು ಪಡುಬಿದ್ರೆಯ ಢಕ್ಕೆಬಲಿ ಸೇವೆ ಇದರೊಂದಿಗೆ ಕಾಪು ಮಾರಿಪೂಜೆಯೂ ಸೇರಿ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಾಗಿ ಪ್ರಸಿಧ್ಧಿ ಪಡೆದಿದೆ. ಇದು ಈ ಭಾಗದ ಅತ್ಯಂತ ದೊಡ್ಡ ಧಾರ್ಮಿಕ ಸಮಾರಂಭವಷ್ಟೇ ಅಲ್ಲ, ಈ ಜಾತ್ರೆ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುವ ವಾಣಿಜ್ಯ ಮೇಳವಾಗಿಯೂ ಪ್ರಸಿದ್ಧವಾಗಿದೆ. ಹಣ್ಣು, ಕಾಯಿ, ಅಟ್ಟೆ, ಮಲ್ಲಿಗೆ, ಜಾಜಿ, ಪಿಂಗಾರ ಹೂಹಣ್ಣುಗಳ ವ್ಯಾಪಾರದ ಜೊತೆಗೆ, ಆಡು ಮತ್ತು ಕೋಳಿಗಳ ಭರ್ಜರಿ ವಹಿವಾಟು ಕೂಡಾ ನಡೆಯುತ್ತದೆ. ಮಾರಿಯಮ್ಮನನ್ನು "ಕಾಪುದ ಅಪ್ಪೆ" (ಕಾಪುದ ತಾಯಿ) ಎಂದು ತುಳುವಿನಲ್ಲಿ ಪೂಜಿಸಲಾಗುತ್ತದೆ.[]

ಧಾರ್ಮಿಕ ವಿಧಿವಿಧಾನಗಳು

[ಬದಲಾಯಿಸಿ]

ಮಾರಿಯಮ್ಮ ದೇವಿಗೆ ಬಲಿಯಾಗಿ ಅರ್ಪಿಸುವ ವಸ್ತುಗಳನ್ನು, ಸಾಮಾನ್ಯವಾಗಿ ಮಂಗಳವಾರದಂದು, ಬೇಟೆ ಎಂದು ಕರೆಯಲಾಗುತ್ತದೆ. ಬೇಟೆಯ ನಂತರ ಮಾರಿ ಪೂಜಾ ವಿಧಿವಿಧಾನಗಳು ಆರಂಭವಾಗುತ್ತವೆ. ಹಿಂದೆ ಕುರಿಗಳನ್ನು ಬೇಟೆಯಾಗಿ ಅರ್ಪಿಸಲಾಗುತ್ತಿತ್ತು, ಆದರೆ ಕಾಲಾಂತರದಲ್ಲಿ, ಕುಂಬಳಕಾಯಿಯನ್ನು ಬೇಟೆಯಾಗಿ ತಾಯಿಗೆ ಸಮರ್ಪಿಸಿ, ಪೂಜೆ ಪ್ರಾರಂಭಿಸುವ ಪರಿಪಾಠ ಬಂದಿತು. 'ಕೋಟೆಯ ಹವಾಲ್ದಾರರು' ಎಂದೇ ಪರಿಚಿತವಾದ ಕುರುಬರು ಮತ್ತು ಇತರ ಸಮುದಾಯದವರು, ಕೋಟೆಯ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ಮಾರಿಗುಡಿಗೆ ಹೂವು, ಪಿಂಗಾರ, ಮತ್ತು ಕುಂಬಳಕಾಯಿಯನ್ನು ಮೆರವಣಿಗೆಯಲ್ಲಿ ತರುತ್ತಾರೆ. ಈ ವಸ್ತುಗಳನ್ನು ಮಾರಿಯಮ್ಮ ದೇವಿಯ ಮುಂದಿಟ್ಟು ಪೂಜೆ ಸಲ್ಲಿಸಲಾಗುತ್ತದೆ, ಬಳಿಕ, ಉತ್ತರದ ಬಾಗಿಲ ಮೂಲಕ, ಆ ಕುಂಬಳಕಾಯಿಯನ್ನು ಕೋಟೆ ಮನೆಯ ಮಾಲೀಕರಿಗೆ ಹಸ್ತಾಂತರಿಸುತ್ತಾರೆ.ಮಾರಿ ಪೂಜೆಯ ದಿನ, ಮರದ ದೇವಿಯ ಮೂರ್ತಿಯ ತಯಾರಿ ಸೇರಿದಂತೆ ಇತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗದ್ದುಗೆ ಪೂಜೆಯು ನಡೆಯುತ್ತದೆ. ಇದಾದ ನಂತರ, ಎರಡು ದೇವಾಲಯಗಳಿಂದ ಮಾರಿಯಮ್ಮನ ಬಿಂಬ ಮತ್ತು ಇತರ ಆಭರಣಗಳನ್ನು ಮಾರಿಗುಡಿಗೆ ತರಲಾಗುತ್ತದೆ. ಜೊತೆಗೆ, ಮರದ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠೆ ಮಾಡಲಾಗುತ್ತದೆ. ಅಲ್ಲಿ ಪ್ರಸಾದ ಸ್ವೀಕರಿಸಿದ ನಂತರ, ಪೂಜಿಸಿದ ಕುಂಬಳಕಾಯಿಯನ್ನು ಮಾರಿಗುಡಿಗೆ ತಂದು ಇಡಲಾಗುತ್ತದೆ. ಅಕ್ಕಿಯ ರಾಶಿಯ ಮೇಲೆಯಾಗಿ ಇಡಲಾದ ಈ ಕುಂಬಳಕಾಯಿಯನ್ನು, ಸಾಂಕೇತಿಕವಾಗಿ ಬಲಿಯಾಗಿ, ಒಂದೇ ಏಟಿನಲ್ಲಿ ಕತ್ತರಿಸುತ್ತಾರೆ. ಇದಾದ ನಂತರ ದೇವಾಲಯದ ಶುದ್ದೀಕರಣ ನಡೆಯುತ್ತಿದ್ದು, ಮರದ ದೇವಿಯ ಮೂರ್ತಿಯನ್ನು, ದೇವಾಲಯದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಕಳತ್ತೂರಿನಲ್ಲಿ ವಿಸರ್ಜಿಸಲಾಗುತ್ತದೆ. ಈ ಪ್ರಕ್ರಿಯೆ ಮಾರಿಪೂಜೆಯ ಧಾರ್ಮಿಕ ವಿಧಿವಿಧಾನಗಳ ಸಂಕ್ಷಿಪ್ತ ಚಿತ್ರಣವಾಗಿದೆ.[]

ಇತಿಹಾಸ

[ಬದಲಾಯಿಸಿ]

ಕಾಪು ಭೂಮಿಯ ಒಡೆಯನಾದ ಶ್ರೀ ಲಕ್ಷ್ಮೀಜನಾರ್ದನ ದೇವರ ಪ್ರಭಾವದಿಂದ ಮಹಾಮಾತೆ ಮಾರಿ ದೇವಿಯು "ಸತ್ಯದಪ್ಪೆ" (ಸತ್ಯದ ತಾಯಿ) ಎಂಬ ಹೆಸರಿನಲ್ಲಿ, ಸತ್ಯನಿಷ್ಠೆಯಿಂದ ಜೀವನ ನಡೆಸುವ ಜನರು ಹಾಗೂ ಭಕ್ತರು "ಶರಣು ದುರ್ಗೆ" ಎಂದು ಭಕ್ತಿಯಿಂದ ಪೂಜಿಸುತ್ತಾರೆ. ಮಂಗಳವಾರ ದಿನದಂದು ಮಾರಿಯಮ್ಮನ ಸನ್ನಿಧಿಯಲ್ಲಿ ನಡೆಯುವ ಮಾರಿಪೂಜೆ, ಚಂಡಿಕಾ ಯಾಗ, ಮತ್ತು ಗದ್ದುಗೆ ಪೂಜೆಗಳು ವಿಶೇಷ ಮಹತ್ವ ಹೊಂದಿವೆ. ಕಾಪು ಪ್ರದೇಶವು ಹಿಂದಿನ ಕಾಲದಲ್ಲಿ ಅನೇಕ ರಾಜರು ಮತ್ತು ಚಕ್ರವರ್ತಿಗಳ ಆಳ್ವಿಕೆಯ ಸ್ಥಳವಾಗಿದ್ದು, ಈ ತಾಯಿಯು ಭಕ್ತರ ಮನೋಭೀಲಾಷೆಗಳನ್ನು ಪೂರೈಸುವ ಮೂಲಕ "ದಂಡಿನ ಮಾರಿಯಮ್ಮ" ಆಗಿ ಕಾಪುವಿನಲ್ಲಿ ನೆಲೆಸಿದಳು. ವಿಜಯನಗರದ ಆಡಳಿತದ ನಂತರ, ತುಳುನಾಡಿನ ಆಡಳಿತವನ್ನು ಕೆಳದಿಯ ನಾಯಕರು ಹಸ್ತಗತ ಮಾಡಿಕೊಂಡಾಗ, ಮಾರಿಯಮ್ಮ ದೇವಿಯು ಇಲ್ಲಿ ಪ್ರವೇಶಿಸಿದ್ದಾಳೆ ಎಂಬ ಉಲ್ಲೇಖವೂ ಇದೆ. []

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ "Udupi : ಇಂದಿನಿಂದ 2 ದಿನ ತುಳುನಾಡಿನ ಐತಿಹಾಸಿಕ ಕಾಪು ಕಾಲಾವಧಿ 'ಸುಗ್ಗಿ ಮಾರಿಪೂಜೆ'". Vijay Karnataka.