ವಿಷಯಕ್ಕೆ ಹೋಗು

ಸೆವಿರೋ ಒಚಾವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆವಿರೋ ಒಚಾವಾ
Severo Ochoa in 1958
ಜನನSevero Ochoa de Albornoz
(೧೯೦೫-೦೯-೨೪)೨೪ ಸೆಪ್ಟೆಂಬರ್ ೧೯೦೫
Luarca, Asturias, Spain
ಮರಣ1 November 1993(1993-11-01) (aged 88)
Madrid, Spain
ಪೌರತ್ವSpanish (1905–1956), American (1956–1993)
ಕಾರ್ಯಕ್ಷೇತ್ರBiochemistry, molecular biology
ಸಂಸ್ಥೆಗಳುNew York University Grossman School of Medicine
Washington University School of Medicine
ಪ್ರಸಿದ್ಧಿಗೆ ಕಾರಣDiscovery of mechanisms in the biological synthesis of RNA and DNA
ಗಮನಾರ್ಹ ಪ್ರಶಸ್ತಿಗಳು
ಸಂಗಾತಿCarmen Garcia Cobian[]

ಸೆವಿರೋ ಒಚಾವಾ (೨೪,ಸೆಪ್ಟಂಬರ್,೧೯೦೫- ೧,ನವಂಬರ್ ೧೯೯೩)- .ಸ್ಪ್ಯಾನಿಷ್ ಅಮೆರಿಕನ್ ಜೈವಿಕಶಾಸ್ತ್ರ ವಿಜ್ಞಾನಿ. ವೈದ್ಯಕೀಯ ವಿಜ್ಞಾನ ವಿಭಾಗದ ನೊಬೆಲ್ ಪ್ರಶಸ್ತಿ ವಿಜೇತ (1959).[][][][]

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಸ್ಪೇನ್ ದೇಶದ ಉತ್ತರ ತೀರದ ಅಸ್ಟುರಿಯಾ ಜಿಲ್ಲೆಯ ಲಾರ್ಕಾ ಎಂಬ ಹಳ್ಳಿಯಲ್ಲಿ ಮೂರು ಜನ ಸಹೋದರರು ಮತ್ತು ಮೂರು ಜನ ಸಹೋದರಿಯರನ್ನೊಳಗೊಂಡ ತುಂಬು ಸಂಸಾರದಲ್ಲಿ ಇವನೇ ಕಡೆಯವನಾಗಿ ಹುಟ್ಟಿದ. ತಂದೆ ವಕೀಲ. ಒಚಾವಾ ಏಳು ವರ್ಷದ ಬಾಲಕನಾಗಿದ್ದಾಗಲೇ ಆತನ ತಂದೆ ತೀರಿಕೊಂಡ. ಮುಂದೆ ಈ ಕುಟುಂಬ ಸ್ಪೇನಿನ ದಕ್ಷಿಣ ತೀರದಲ್ಲಿರುವ ಮಲಾಗ ಎಂಬ ಊರಿಗೆ ಹೋಯಿತು. ಇಲ್ಲಿಯೇ ಒಚಾವಾನ ವಿದ್ಯಾಭ್ಯಾಸದ ಮೊದಲನೆಯ ಘಟ್ಟ ಮುಗಿದದ್ದು. 1921ರಲ್ಲಿ ಈತ ಬ್ಯಾಚುಲರ್ ಆಫ್ ಆಟ್ರ್ಸ್‌ ಪದವಿ ಪಡೆದು ಮರುವರ್ಷ ಮ್ಯಾಡ್ರಿಡ್ ವಿಶ್ವವಿದ್ಯಾಲಯದ ಮೆಡಿಕಲ್ ಸ್ಕೂಲನ್ನು ಸೇರಿ 1929ರಲ್ಲಿ ಡಾಕ್ಟರ್ ಆಫ್ ಮೆಡಿಸನ್ ಪದವಿಯನ್ನು ಗಳಿಸಿದ.

ವೃತ್ತಿ ಜೀವನ

[ಬದಲಾಯಿಸಿ]
Ochoa with wife Carmen García Cobián, in Sweden, 1959

ಒಚಾವಾ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೇ ದೇಹವಿಜ್ಞಾನ (ಫಿಸಿಯಾಲಜಿ) ಪ್ರಯೋಗ ಶಾಲೆಯಲ್ಲಿ ಬೋಧಕನಾಗಿಯೂ ನೇಮಕಗೊಂಡಿದ್ದ. 1931ರಲ್ಲಿ ವೈದ್ಯಶಾಲೆಯಲ್ಲಿ ದೇಹವಿಜ್ಞಾನ ಮತ್ತು ಜೈವಿಕ ರಸಾಯನ ವಿಜ್ಞಾನದ ಅಧ್ಯಾಪಕನಾಗಿಯೂ 1935ರಲ್ಲಿ ಮ್ಯಾಡ್ರಿಡ್ ವಿಶ್ವವಿದ್ಯಾಲಯದ ನೂತನ ವೈದ್ಯಕೀಯ ಸಂಶೋಧನ ಸಂಸ್ಥೆಯ ಪ್ರಥಮ ಮುಖ್ಯಾಧಿಕಾರಿಯಾಗಿಯೂ ಆಗಿ ನೇಮಿತನಾದ. ಆದರೆ ಇದರಿಂದ ಇವನ ಜ್ಞಾನತೃಷೆ ಹಿಂಗಲಿಲ್ಲ. 1936ರಲ್ಲಿ ಒಚಾವಾ ಜರ್ಮನಿಯ ಹೀಡಲ್ ಬರ್ಗಿನ ಕೈಸರ್ ವಿಲ್ಹೆಲ್ಮ್‌ ಸಂಸ್ಥೆಯನ್ನು ಸೇರಿದ. ಅಲ್ಲಿನ ಪ್ರಸಿದ್ಧ ವಿಜ್ಞಾನಿ ಮೇಯರ್ ಹಾಫ್ನ ಹಿರಿತನದಲ್ಲಿ ಸಂಶೋಧನೆ ಕೈಗೊಂಡ. 1937ರಲ್ಲಿ ಇಂಗ್ಲೆಂಡಿಗೆ ಹೋಗಿ ಕೊಂಚ ಕಾಲ ಪ್ಲಿಮತ್ನಲ್ಲಿ ಇದ್ದ. ಅನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಆರ್. ಪೀಟರ್ಸ್‌ ಒಂದಿಗೆ ಸಹಾಯಕ ಸಂಶೋಧಕನಾಗಿ ಕೆಲಸಮಾಡಿದ (1938-41). ಹೀಗೆ ಯೂರೋಪಿನ ಹಲವಾರು ದೇಶಗಳಲ್ಲಿ ಕೆಲಸಮಾಡಿ ಅಮೆರಿಕಕ್ಕೆ ವಲಸೆ ಹೋಡ.[][]

ಅಮೆರಿಕದಲ್ಲಿ

[ಬದಲಾಯಿಸಿ]

ಈ ವೇಳೆಗೆ (1941) ಮಿಸೂರಿಯ ಸೇಂಟ್ ಲೂಯಿಸ್ ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮೆಡಿಸನ್ನಲ್ಲಿ ಕೋರಿ ದಂಪತಿಗಳೊಂದಿಗೆ ಕೆಲಸ ಮಾಡುವ ಅವಕಾಶ ಒಚಾವಾನಿಗೆ ಲಭಿಸಿತು. ಅಮೆರಿಕ ದೇಶಕ್ಕೆ ವಲಸೆ ಹೋದ ಇವನಿಗೆ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮೆಡಿಸನ್ ಸಂಸ್ಥೆಯಲ್ಲಿ ಸಹ-ಸಂಶೋಧಕನ ಕೆಲಸ ದೊರೆಯಿತು (1942)[][]. ಅಲ್ಲಿಯೇ 1945ರಲ್ಲಿ ಜೈವಿಕ ರಸಾಯನವಿಜ್ಞಾನ ಅಸಿಸ್ಟೆಂಟ್ ಪ್ರೊಫೆಸರ್ ಆಗಿಯೂ 1946ರಲ್ಲಿ ಫಾರ್ಮಕಾಲಜಿಯ ಪ್ರೊಫೆಸರ್ ಆಗಿಯೂ ನೇಮಿತನಾದ (1946-54). ೧೯೫೬ರಲ್ಲಿ ಅಮೆರಿಕದ ಪೌರತ್ವ ಪಡೆದ[]

ಸಂಶೋಧನೆ

[ಬದಲಾಯಿಸಿ]

ಸಂಶೋಧನಕ್ಷೇತ್ರ ಮತ್ತು ಜೈವಿಕವಿಜ್ಞಾನದ ಬೆಳೆವಣಿಗೆಗೆ ಈತನ ಕೊಡುಗೆ ಅಪಾರ. ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ಜೈವಿಕ ರಸಾಯನವಿಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ತನ್ನ ಜೀವನವನ್ನು ಮುಡುಪಾಗಿಡುವ ನಿರ್ಧಾರವನ್ನು ಈತ ಕೈಗೊಂಡ. ಎಡರುತೊಡುಗಳನ್ನು ಲೆಕ್ಕಿಸದೆ ಗುರಿಯೆಡೆಗೆ ನಿಶ್ಚಲಧ್ಯೇಯದಿಂದ ಮುನ್ನಡೆದ ವಿಜ್ಞಾನಿ ಒಚಾವಾ. ಈತ ಪ್ರಾರಂಭದಲ್ಲಿ ಆರಿಸಿಕೊಂಡ ಕ್ಷೇತ್ರ ಮಾಂಸಖಂಡಗಳ ಸಂಕೋಚನದ ಅಧ್ಯಯನ. ಮೇಯರ್ ಹಾಫ್ನ ಪ್ರಯೋಗಶಾಲೆಯಲ್ಲಿ ಮಾಂಸಖಂಡಗಳ ಸಂಕುಚನ ಕ್ರಿಯೆಯ ಶಕ್ತಿ ಮೂಲಗಳನ್ನು ಕುರಿತು ಸಂಶೋಧನೆ ನಡೆಸಿದ. ಫಾಸ್ಫಾಜನ್ ವಸ್ತುವನ್ನು ಆಗತಾನೇ ಕಂಡುಹಿಡಿಯಲಾಗಿತ್ತು. ಇದೇ ವೇಳೆಗೆ ಲುಂಡ್ಸ್‌ಗಾರ್ಡ್ ಎಂಬಾತ ಮಾನೋಐಯೋಡೋ ಅಸಿಟಿಕ್ ಆಮ್ಲದಿಂದ ನಂಜುಗೊಳಿಸಿದ ಮಾಂಸಖಂಡಗಳು ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸದಂತೆಯೇ ಕೊಂಚ ಕಾಲ ಕೆಲಸ ಮಾಡಬಲ್ಲವು ಎಂದು ತೋರಿಸಿದ್ದ. ಇನ್ಸುಲಿನ್ ಪರಿಷ್ಕೃತವಾದ ಮತ್ತು ಗ್ಲೈಕೋಜನನ್ನು ಕಳೆದುಕೊಂಡಿದ್ದ ಕಪ್ಪೆಯ ಮಾಂಸಖಂಡಗಳು ಅದುವರೆಗೆ ಪರಿಚಿತವಾಗಿದ್ದವಕ್ಕಿಂತ ಭಿನ್ನವಾದ ಮೂಲಗಳಿಂದ ಶಕ್ತಿಯನ್ನು ದೊರಕಿಸಿಕೊಳ್ಳುತ್ತವೆಂದು ಒಚಾವಾ ತೋರಿಸಿದ.

ಇಂಗ್ಲೆಂಡಿನಲ್ಲಿ

[ಬದಲಾಯಿಸಿ]

ಇಂಗ್ಲೆಂಡಿಗೆ ಬಂದ ಮೇಲೆಯೂ ಮಾಂಸಖಂಡಗಳ ಸಂಕುಚನ ಕ್ರಿಯೆಯಲ್ಲಿ ಒಚಾವಾನ ಆಸಕ್ತಿ ಉಳಿದಿತ್ತು. ಜೊತೆಗೆ ಪೀಟರ್ಸ್‌ ಮತ್ತು ಆತನ ಸಹೋದ್ಯೋಗಿಗಳು ಅಭ್ಯಸಿಸುತ್ತಿದ್ದ ಪೈರೂವಿಕ್ ಆಮ್ಲದ ಚಯಾಪಚಯ ವಿಧಾನ ಕ್ರಮದಲ್ಲಿಯೂ ಆಸಕ್ತಿ ತಳೆದ. ಈತನ ಸಂಶೋಧನೆಗಳ ಫಲವಾಗಿ ಮಿದುಳಿನಿಂದ ಪೈರೂವಿಕ್ ಆಮ್ಲ ಉತ್ಕರ್ಷಿತವಾಗುವ ಕ್ರಿಯಾವೇಗವನ್ನು ಅ4 ಡೈ ಕಾರ್ಬಾಕ್ಸಿಲಿಕ್ ಆಮ್ಲಗಳು ತ್ವರಿತಗೊಳಿಸುತ್ತವೆಯೆಂದೂ ಈ ಕ್ರಿಯೆಯಲ್ಲಿ ವಿಟಮಿನ್ ಃ1 ಭಾಗವಹಿಸುತ್ತದೆಯೆಂದೂ ಕೋಕಾರ್ಬಾಕ್ಸಿಲೇಸ್ (ಥಯಾಮಿನ್ ಪೈರೋಫಾಸ್ಫೇಟ್) ವಿಟಮಿನ್ ಃ1ರ ಸಕ್ರಿಯಾ ರೂಪವೆಂದೂ ಗೊತ್ತಾಯಿತು. ಅಲ್ಲದೆ ಪೈರೂವಿಕ್ ಆಮ್ಲದ ಉತ್ಕರ್ಷಣ ಕ್ರಿಯೆಗೂ ಎಟಿಪಿಯ ಸಂಶ್ಲೇಷಣೆಗೂ ಇರುವ ನಿಕಟ ಸಂಬಂಧದ ಪರಿಚಯವೂ ಆಯಿತು.

ಸಂಶೋಧನಾ ಕ್ಷೇತ್ರಕ್ಕೆ ಕೊಡುಗೆ

[ಬದಲಾಯಿಸಿ]

1942ರಿಂದೀಚೆಗೆ ಒಚಾವಾ ನಡೆಸಿರುವ ಸಂಶೋಧನೆಗಳನ್ನು ಮುಖ್ಯವಾಗಿ ಮೂರು ವರ್ಗಗಳಾಗಿ ವಿಭಾಗಿಸಬಹುದು

  • ಜೈವಿಕ ವ್ಯವಸ್ಥೆಯಲ್ಲಿ ನಡೆಯುವ ಕಾರ್ಬಾಕ್ಸಿಲೇಷನ್ (ಇಂಗಾಲದ ಡೈ ಆಕ್ಸೈಡನ್ನು ಸ್ವೀಕರಿಸುವ) ಮತ್ತು ಡೀಕಾರ್ಬಾಕ್ಸಿಲೇಷನ್ (ಇಂಗಾಲದ ಡೈ ಆಕ್ಸೈಡನ್ನು ವಿಮೋಚನೆಗೊಳಿಸುವ) ಕ್ರಿಯಾವಿಧಾನಗಳ ಅಧ್ಯಯನ ಮತ್ತು ಮ್ಯಾಲಿಕ್ ಕಿಣ್ವದ ಪರಿಶೋಧನೆ.
  • ಸಿಟ್ರಿಕ್ ಆಮ್ಲ ವರ್ತುಲಕ್ಕೆ ಸೇರಿದ ಕಿಣ್ವಗಳ ಕ್ರಿಯಾವಿಧಿಗಳ ಅಧ್ಯಯನ ಮತ್ತು ಘನಿಸುವ ಕಿಣ್ವದ ಪರಿಶೀಲನೆ.
  • ಪಾಲಿನ್ಯೂಕ್ಲಿಯೋಟೈಡುಗಳ ಕಿಣ್ವವರ್ಧಿತ ಸಂಶ್ಲೇಷಣೆ ಮತ್ತು ಪಾಲಿನ್ಯೂಕ್ಲಿಯೋಟೈಡ್ ಫಾಸ್ಫಾರಿಲೇಸ್ ಕಿಣ್ವದ ಪರಿಶೋಧನೆ.

ಒಚಾವಾ ತನ್ನ ಸಹೋದ್ಯೋಗಿಗಳೊಂದಿಗೆ ಆನುವಂಶಿಕ ಸಂಕೇತದ ಸಮಸ್ಯೆಯನ್ನು ಬಿಡಿಸುವುದರಲ್ಲಿ ಶ್ರಮವಹಿಸಿ, ಈ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾನೆ. ಡಿಎನ್ಎ ಅಣುವಿನ 4 ಭಿನ್ನ ನ್ಯೂಕ್ಲಿಯೋಟೈಡುಗಳ ಅನುಕ್ರಮ ಪಾಲಿಪೆಪ್ಟೈಡಿನ (ಪ್ರೋಟೀನಿನ) 20 ಅಮೈನೋ ಆಮ್ಲಗಳ ಅನುಕ್ರಮವನ್ನು ಹೇಗೆ ನಿರ್ಧರಿಸುವುದೆಂಬುದೇ ಜೀವವಿಜ್ಞಾನಿಯ ಮುಂದಿರುವ ಸಮಸ್ಯೆ. ಡಿಎನ್ಎಯಲ್ಲಿ ಅಡಗಿರುವ ಆನುವಂಶಿಕ ಸಂದೇಶವನ್ನು ಅಮೈನೋ ಆಮ್ಲಗಳ ಭಾಷೆಗೆ ಕರಾರುವಾಕ್ಕಾಗಿ ತರ್ಜುಮೆ ಮಾಡುವ ಮತ್ತು ಸಂದೇಶದ ಪ್ರಕಾರ ಅಮೈನೋ ಆಮ್ಲಗಳನ್ನು ಜೋಡಿಸಿ ವಿಶಿಷ್ಟ ಪ್ರೋಟೀನನ್ನು ಸಿದ್ಧಗೊಳಿಸುವ ವಸ್ತುವೊಂದಿರಲೇಬೇಕು.ಆರ್‍ಎನ್‍ಎ ಸಂದೇಶವಾಹಕವಾಗಿಯೂ ಪ್ರೋಟೀನನ್ನು ಸಿದ್ಧಗೊಳಿಸುವ ಯಂತ್ರದಂತೆಯೂ ವರ್ತಿಸುತ್ತದೆಯೆಂದು ಪ್ರಯೋಗಗಳ ಮೂಲಕ ತಿಳಿದುಬಂದಿದೆ. ಜಟಿಲವಾದ ಕೋಶದಲ್ಲಿ ನಡೆಯುವ ಈ ಕ್ರಿಯೆಯನ್ನು ಪ್ರನಾಳದಲ್ಲಿ ನಡೆಸಬೇಕಾದರೆ, ನೈಸರ್ಗಿಕ ಆರ್‍ಎನ್‍ಎ ಕಾರ್ಯವನ್ನು ಅನುಕರಣೆ ಮಾಡಬಲ್ಲ ಕೃತಕ ಆರ್‍ಎನ್‍ಎ ಆವಶ್ಯಕವಾಗಿ ಬೇಕು. 1961ರಲ್ಲಿ ಒಚಾವಾ ಪ್ರಯೋಗಶಾಲೆಯಲ್ಲಿ ತಮ್ಮ ಪಾಲಿನ್ಯೂಕ್ಲಿಯೋಟೈಡ್ ಫಾಸ್ಫಾರಿಲೇಸ್ ಕಿಣ್ವದ ಸಹಾಯದಿಂದ ಎರಡು ಅಥವಾ ಹೆಚ್ಚಿನ ನ್ಯೂಕ್ಲಿಯೊಟೈಡುಗಳನ್ನೊಳಗೊಂಡ ಕೃತಕ ಕೋಪಾಲಿನ್ಯೂಕ್ಲಿಯೋಟೈಡುಗಳನ್ನು ಸಂಶ್ಲೇಷಿಸಿ ಕೋಶರಹಿತ ವ್ಯವಸ್ಥೆಯಲ್ಲಿ ಇವನ್ನು ಸಂದೇಶವಾಹಕಗಳಂತೆ ಉಪಯೋಗಿಸಿ ಅಮೈನೋ ಆಮ್ಲಗಳನ್ನೊಳಗೊಂಡ ಪ್ರೋಟೀನಿನಂಥ ವಸ್ತುವನ್ನು ತಯಾರಿಸುವುದರಲ್ಲಿ ಜಯಶೀಲನಾದ. ಪ್ರೋಟೀನಿನ ಯಾವುದೊಂದು ಸ್ಥಳದಲ್ಲಿ ಪ್ರವೇಶಿಸುವ ಅಮೈನೋ ಆಮ್ಲದ ಪ್ರಕೃತಿ ಕೃತಕ ಬಹ್ವಂಶಿಯ (ಪಾಲಿಮರ್) ಪ್ರತ್ಯಾಮ್ಲ ಅನುಕ್ರಮವನ್ನು ಅವಲಂಬಿಸುತ್ತದೆಂದು ಸಿದ್ಧಾಂತ ಮಾಡಿದ.

ವ್ಯಕ್ತಿತ್ವ

[ಬದಲಾಯಿಸಿ]

ವೈಜ್ಞಾನಿಕ ಸಂಶೋಧನೆಗೆ ತನ್ನ ಜೀವನವನ್ನೇ ಧಾರೆಯೆರೆದ ವ್ಯಕ್ತಿ ಒಚಾವಾ. ವಿಜ್ಞಾನದಲ್ಲಿರುವ ಈತನ ಉತ್ಸಾಹ, ಆಸಕ್ತಿಗಳಿಗೆ ಮೇರೆಯೇ ಇಲ್ಲ. ತನ್ನ ಸಹೋದ್ಯೋಗಿಗಳಿಗೆ ಸತತವಾಗಿ ಪ್ರೋತ್ಸಾಹವನ್ನು ನೀಡುವ ವೇಗವರ್ಧಕ ಈ ಉತ್ಸಾಹ. ಒಚಾವಾನ ದೃಷ್ಟಿಯಲ್ಲಿ ವಿಜ್ಞಾನ ಒಂದು ಬೌದ್ಧಿಕ ಸಾಹಸ. ಪ್ರಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕೆಂಬ ಕುತೂಹಲವುಳ್ಳ ಆತನಿಗೆ ಸತ್ಯಕ್ಕೋಸ್ಕರವಾಗಿಯೇ ಅನ್ವೇಷಣೆ ಮಾಡಬೇಕೆಂಬುದು ಪರಮ ಗುರಿ, ಅನ್ವೇಷಣೆಯಿಂದ ವ್ಯಾವಹಾರಿಕ ಪ್ರಯೋಜನವಾಗುತ್ತದೆಯೇ ಇಲ್ಲವೇ ಎಂಬುದರ ಕಡೆಗೆ ಆತನದು ದಿವ್ಯ ನಿರ್ಲಕ್ಷ್ಯ. ವ್ಯಾವಹಾರಿಕ ಪ್ರಯೋಜನಗಳಾಗುತ್ತವೆಂಬ ಕಾರಣವನ್ನು ಮುಂದೊಡ್ಡಿ ವೈಜ್ಞಾನಿಕ ಸಂಶೋಧನೆಯನ್ನು ಸಮರ್ಥಿಸಿಕೊಂಡು ತಮ್ಮ ಬೌದ್ಧಿಕ ಪ್ರಾಮಾಣಿಕತೆಯನ್ನು ನೀಗಿಕೊಳ್ಳಲು ಅವನು ಸರ್ವಥಾ ಸಿದ್ದನಲ್ಲ. 35 ವರ್ಷಗಳ ಸಾರ್ಥಕ ಸಂಶೋಧನೆಗಳ ಫಲವಾಗಿ ಇಂದು ಅವನು ಗೌರವದ ಉನ್ನತ ಶೃಂಗವನ್ನು ಮುಟ್ಟಿದ್ದರೂ ಒಚಾವಾ ಸ್ವಭಾವತಃ ನಿರಹಂಕಾರಿ ಹಾಗೂ ವಿನಯಶೀಲ. ಆತನ ಸೌಜನ್ಯ, ಮಾರ್ದವ ಮತ್ತು ನೈಜ ಕಾರುಣ್ಯಗಳು ಸಹೋದ್ಯೋಗಿಗಳ ಪ್ರೀತಿಯನ್ನೂ ವಿದ್ಯಾರ್ಥಿಗಳ ಗೌರವವನ್ನೂ ಒಚಾವಾನಿಗೆ ಸಂಪಾದಿಸಿಕೊಟ್ಟಿವೆ. ಸ್ಪೇನಿನಲ್ಲಿ ಜನಿಸಿ, ಜರ್ಮನಿ ಮತ್ತು ಇಂಗ್ಲೆಂಡಿನಲ್ಲಿ ತರಬೇತಿ ಹೊಂದಿ ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಕೆಲಸ ಮಾಡಿದ ಈ ವಿಜ್ಞಾನಿ ವಿಜ್ಞಾನದ ಅಂತಾರಾಷ್ಟ್ರೀಯತೆಯ ನೈಜಪ್ರತೀಕ. ಪ್ರಪಂಚದ ಎಲ್ಲ ದೇಶಗಳ ಶಿಷ್ಯರೂ ಇವನ ತಂಡದಲ್ಲಿ ಇದ್ದಾರೆ, ಪ್ರಪಂಚದ ನಾನಾ ವಿಶ್ವವಿದ್ಯಾನಿಲಯಗಳು ಈತನಿಗೆ ಗೌರವ ಪದವಿಗಳನ್ನು ಕೊಟ್ಟು ಪುರಸ್ಕರಿಸಿವೆ. ಒಚಾವಾ ಅನೇಕ ವೈಜ್ಞಾನಿಕ ಸಂಘಗಳ ಸದಸ್ಯನೂ ಹೌದು. 1961ರಲ್ಲಿ ಜೈವಿಕ ರಸಾಯನವಿಜ್ಞಾನ ಅಂತಾರಾಷ್ಟ್ರೀಯ ಸಂಘದ ಅಧ್ಯಕ್ಷನಾಗಿ ಈತ ಚುನಾಯಿತನಾದ. ಸಂಗೀತ, ಸಾಹಿತ್ಯ ಮತ್ತು ಕುಶಲಕಲೆಗಳಲ್ಲಿ ಈತನಿಗೆ ಅಭಿರುಚಿ.

ಉಲ್ಲೇಖಗಳು

[ಬದಲಾಯಿಸಿ]
  1. "The Nobel Prize in Physiology or Medicine 1959". NobelPrize.org. Archived from the original on 15 March 2023. Retrieved 15 March 2023.
  2. cornberg, Arthur (1997). "Severo Ochoa (24 September 1905–1 November 1993)". Proceedings of the American Philosophical Society. 141 (4): 479–491. JSTOR 987224.
  3. Kornberg, Arthur (2001). "Remembering our teachers". The Journal of Biological Chemistry. 276 (1): 3–11. doi:10.1016/S0021-9258(18)44198-1. PMID 11134064. Archived from the original on 1 April 2016. Retrieved 30 July 2020.
  4. ೪.೦ ೪.೧ Ochoa, S. (1980). "A Pursuit of a Hobby". Annual Review of Biochemistry. 49: 1–30. doi:10.1146/annurev.bi.49.070180.000245. PMID 6773467.
  5. ೫.೦ ೫.೧ ಸೆವಿರೋ ಒಚಾವಾ on Nobelprize.org ಇದನ್ನು ವಿಕಿಡೇಟಾದಲ್ಲಿ ಸಂಪಾದಿಸಿ
  6. Singleton, R. Jr. (2007). "Ochoa, Severo." In New Dictionary of Scientific Biography, Noretta Koertge (ed.), vol. 5, pp. 305–12. Detroit: Charles Scribner's Sons.:]
  7. "Severo Ochoa". www.nasonline.org. Retrieved 2022-11-23.
  8. "Severo Ochoa". American Academy of Arts & Sciences (in ಇಂಗ್ಲಿಷ್). Archived from the original on 23 November 2022. Retrieved 2022-11-23.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: