ವಿಷಯಕ್ಕೆ ಹೋಗು

ಶ್ರೀ ಚಂದ್ರನಾಥ ಸ್ವಾಮಿ ಲೆಪ್ಪದ ಬಸದಿ, ಮೂಡಬಿದರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಚಂದ್ರನಾಥ ಸ್ವಾಮಿ ಲೆಪ್ಪದ ಬಸದಿ, ಮೂಡಬಿದರೆ

ಪರಿಚಯ

[ಬದಲಾಯಿಸಿ]

ಈ ದೇವಾಲಯವನ್ನು ೧೪ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಪದ್ಮಾಸನ ಸ್ಥಿತಿಯಲ್ಲಿರುವ ಭಗವಾನ್ ಚಂದ್ರನಾಥರ ವಿಗ್ರಹವನ್ನು ಮುಖ್ಯ ದೇವತೆಯಾಗಿ ಹೊಂದಿದೆ. ಈ ದೇವಾಲಯದಲ್ಲಿ ಜ್ವಾಲಾಮಾಲಿನಿ ದೇವಿಯ ವಿಗ್ರಹವನ್ನು ಸಹ ನಾವು ಕಾಣಬಹುದು.[]

ಮೂಡುಬಿದರೆಯ ಜೈನ ಪೇಟೆಯಲ್ಲಿ ಶ್ರೀ ಗುರು ಬಸದಿಯ ಸನಿಹದಲ್ಲಿ, ಎತ್ತರದಲ್ಲಿ ಈ ಬಸದಿ ಇದೆ. ಇದಕ್ಕೆ ತಾಗಿಕೊಂಡು ಪಕ್ಕದಲ್ಲಿ ದೇರಮ್ಮ ಶೆಟ್ಟಿ ಬಸದಿ ಇದೆ.[] ಇಲ್ಲಿ ಶ್ರೀ ಚಂದ್ರನಾಥ ಸ್ವಾಮಿಯನ್ನು ಮೂಲ ನಾಯಕರನ್ನಾಗಿ ಪೂಜಿಸಲಾಗುತ್ತಿದೆ. ಇದು ತಾಲೂಕು ಕೇಂದ್ರದಿಂದ ಸುಮಾರು ೧.೫ ಕಿಲೋ ಮೀಟರ್‌ ದೂರದಲ್ಲಿದೆ. ಇದು ಚೌಟರ ಅರಮನೆಗೆ ಸಂಬಂಧಪಟ್ಟ ಬಸದಿಯಾಗಿದ್ದು ಏನಾದರೂ ವಿಶೇಷ ಕಾರ್ಯಕ್ರಮವಿದ್ದಲ್ಲಿ ಅವರು ಬಸದಿಗೆ ಬರುತ್ತಾರೆ. ಮೂಡಬಿದರೆಯಿಂದ ಜೈನ ಟೆಂಪಲ್‍ ರಸ್ತೆಯಲ್ಲಿ ಸಾಗಿದರೆ ಈ ಬಸದಿಯನ್ನು ಸಂಪರ್ಕಿಸಬಹುದು.[]

ಆಡಳಿತ

[ಬದಲಾಯಿಸಿ]

ಇದು ಕಾರ್ಕಳ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ಇದರ ಆಡಳಿತವನ್ನು ಜೈನಮಠ ಮೂಡಬಿದಿರೆ ಹಾಗೂ ನೌಕರರ ಮನೆಯವರು ನಡೆಸಿಕೊಂಡು ಬರುತ್ತಿದ್ದು ಬೇರೆ ವ್ಯವಸ್ಥಾಪಕ ಮಂಡಳಿ ಇಲ್ಲ.

ವಿನ್ಯಾಸ

[ಬದಲಾಯಿಸಿ]

ಇದು ಸಂಪೂರ್ಣ ಶಿಲಾಮಯವಾಗಿದೆ. ಇಲ್ಲಿಯ ಮೃಣ್ಮಯ ಮೂರ್ತಿಗಳು ಒಂದೇಕಾಲದಲ್ಲಿ ನಿರ್ಮಾಣವಾದವುಗಳು. ಹಾಗೂ ಈ ಬಸದಿಯ ಮೃಣ್ಮಯ ಮೂರ್ತಿ ವಿಶೇಷವಾಗಿ ತಯಾರಿಸಿದ ಲೆಪ್ಪ ಮಣ್ಣಿನಿಂದ ಮಾಡಲ್ಪಟ್ಟಿದ್ದು ಪ್ರತಿ ೧೨ ವರ್ಷಗಳಿಗೊಮ್ಮೆ ಜೀರ್ಣೋದ್ಧಾರಗೊಳಿಸಿ ಬಿಂಬ ಶುದ್ಧಿ ಮೊದಲಾದ ವಿಧಾನಗಳನ್ನು ನಡೆಸಲಾಗುತ್ತದೆ. ಈ ಬಸದಿಗೆ ಮಾನಸ್ತಂಭವಿದೆ. ಬಸದಿಯ ಆವರಣದಲ್ಲಿ ಇದ್ದಂತಹ ಹೂವಿನ ಗಿಡಗಳನ್ನು ಅಂಗಣಕ್ಕೆ ಕಾಂಕ್ರೀಟು ಹಾಕುವ ಸಂದರ್ಭದಲ್ಲಿ ತೆಗೆದಿದ್ದರಿಂದ ಈಗ ಇಲ್ಲಿ ಯಾವುದೇ ಹೂವಿನ ಗಿಡಗಳು ಕಂಡುಬರುವುದಿಲ್ಲ. ಬಸದಿಗೆ ಪ್ರವೇಶಿಸುವಾಗ ಸಿಗುವ ಇಕ್ಕೆಲಗಳ ಗೋಪುರವನ್ನು ವಿಶೇಷ ಶುಭ ಸಮಾರಂಭದಂದು ಶ್ರಾವಕರಿಗೆ ಕುಳಿತುಕೊಳ್ಳಲು ಬಳಸಲಾಗುತ್ತದೆ. ಇದರ ಮಾಡಿನಲ್ಲಿ ಸುಂದರವಾದ ಹಲವು ಅಧೋಮುಖ ಕಮಲದ ಕೆತ್ತನೆಯಿದೆ. ಇಲ್ಲಿ ಹಿಂದೆ ಯಾವುದೇ ಮುನಿಗಳು ಇದ್ದ ಬಗ್ಗೆ ಮಾಹಿತಿ ಇಲ್ಲ. ಬಸದಿಯ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಎರಡು ಬದಿಗಳಲ್ಲಿ ದ್ವಾರಪಾಲಕರ ಅಂದವಾದ ವರ್ಣಚಿತ್ರಗಳಿವೆ. ಆದರೆ ಕಲ್ಲಿನ ಮೂರ್ತಿಗಳಿಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪವಿದ್ದು ಅದರಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗುಹಾಕಲಾಗಿದೆ. ಇಲ್ಲಿನ ಕಂಬಗಳಲ್ಲಿ ಅಥವಾ ಗೋಡೆಗಳಲ್ಲಿ ಕೆಲವು ಚಿತ್ರಿಕೆಗಳು ಕಂಡುಬರುತ್ತದೆ. ಪ್ರಾರ್ಥನಾ ಮಂಟಪದಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪವೆಂದು ಕರೆಯುತ್ತಾರೆ.[] ಇಲ್ಲಿ ಪ್ರಾರ್ಥನಾ ಮಂಟಪ, ತೀರ್ಥ ಮಂಟಪ, ಗರ್ಭಗುಡಿ ಎಂಬ ಮೂರು ಸ್ಥರದ ಮಂಟಪಗಳಿವೆ. ಗಂಧಕುಟಿಯು ತೀರ್ಥ ಮಂಟಪದಲ್ಲಿ ಇದ್ದು ಅದರ ಬಳಿಯಲ್ಲಿ ಶೃತಗಣಧರಪಾದ ಇತ್ಯಾದಿ ಮೂರ್ತಿಗಳಿವೆ.

ಈ ಬಸದಿಯ ಪೂಜೆಯನ್ನು ಶ್ರೀ ವೃಷಭರಾಜ ಇಂದ್ರರು ನಡೆಸುತ್ತಿದ್ದಾರೆ. ಮೂಡಬಿದಿರೆ ಶ್ರೀ ಮಠದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಇಲ್ಲಿಯ ಚೌಟರ ಅರಮನೆಯವರು ಪೂಜಾ ಕಾರ್ಯಗಳನ್ನು ನೆರವೇರಿಸುತ್ತಾರೆ. ಈ ಬಸದಿಗೆ ಮೇಗಿನ ನೆಲೆಯಿಲ್ಲ. ಇಲ್ಲಿ ಪದ್ಮಾವತಿ ಅಮ್ಮನವರ ಮತ್ತು ಬ್ರಹ್ಮದೇವರ ಮೂರ್ತಿ ಇಲ್ಲ. ಆದ್ದರಿಂದ ಪದ್ಮಾವತಿ ದೇವಿಯ ಬದಲಾಗಿ ಜ್ವಾಲಾಮಾಲಿನಿಗೆ ಎಲ್ಲಾ ಪೂಜಾ ವಿಧಿಗಳನ್ನು ನಡೆಸಲಾಗುತ್ತದೆ. ಜ್ವಾಲಾಮಾಲಿನಿಯನ್ನು ಯಕ್ಷಿಯರನ್ನಾಗಿ ಪೂಜಿಸಲಾಗುತ್ತದೆ. ಮಾತೆ ಜ್ವಾಲಾಮಾಲಿನಿಯ ಮೂರ್ತಿಯು ಪಶ್ಚಿಮಕ್ಕೆ ಮುಖ ಮಾಡಿಕೊಂಡಿದ್ದು, ಸೀರೆ ಉಡಿಸಿ ಬಳೆ ತೊಡಿಸಿ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಇಲ್ಲಿ ಜ್ವಾಲಾಮಾಲಿನಿ ಅಮ್ಮನವರೆದುರು ಹೂ ಹಾಕಿ ನೋಡುವ ಕ್ರಮ ಇದೆ. ಇಲ್ಲಿನ ಕೆಲವು ಲೋಹದ ಜಿನಬಿಂಬಗಳಲ್ಲಿ ಅಸ್ಪಷ್ಟವಾದ ಬರವಣಿಗೆಗಳು ಕಂಡುಬರುತ್ತದೆ. ಪಯರ್ಂಕಾಸನ ಭಂಗಿಯಲ್ಲಿರುವ ಮೂಲ ಸ್ವಾಮಿಯ ಬಿಂಬವು ಮಣ್ಣಿನಿಂದ ಮಾಡಲ್ಪಟ್ಟಿದ್ದು ಸುಮಾರು ಐದು ಅಡಿ ಎತ್ತರವಿದೆ. ಇಲ್ಲಿ ಮಕರ ತೋರಣ ಪ್ರಭಾವಳಿ ಕಂಡುಬರುವುದಿಲ್ಲ. ಇಲ್ಲಿ ಮೂಲ ಸ್ವಾಮಿಯ ಬಿಂಬವು ಮಣ್ಣಿನದ್ದಾದ್ದರಿಂದ ಮೂಲ ಸ್ವಾಮಿಯ ಬೇರೆ ಕಂಚಿನ ಮೂರ್ತಿಗೆ ನಿತ್ಯವೂ ಕ್ಷೀರಾಭಿಷೇಕ, ಜಲಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿಗಳನ್ನು ಕೊಡಲಾಗುತ್ತದೆ. ಬಸದಿಯಲ್ಲಿ ಬೆಳಗ್ಗೆ ಒಂದು ಹೊತ್ತು ಮಾತ್ರ ಪೂಜೆ ನಡೆಯುತ್ತದೆ. ವಾರ್ಷಿಕೋತ್ಸವ ರಥೋತ್ಸವವನ್ನು ಡಿಸೆಂಬರ್ ೧೫ ರಂದು ನಡೆಸಲಾಗುತ್ತದೆ. ಇಲ್ಲಿ ವಾರ್ಷಿಕ ಅಟ್ಟಳಿಗೆ ಅಭಿಷೇಕವು ನಡೆಯುತ್ತದೆ.[] ಮತ್ತು ದೀಪಾವಳಿ, ನೂಲ ಹುಣ್ಣಿಮೆ, ಜೀವನಯಾಷ್ಟಮಿ ಮುಂತಾದ ಪಂಚ ಪರ್ವಗಳನ್ನು ನಡೆಸಲಾಗುತ್ತದೆ. ಬಸದಿಯ ಬಲ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದ್ದು, ಅಲ್ಲಿ ಕ್ಷೇತ್ರಪಾಲ, ನಾಗನ ಕಲ್ಲು, ತ್ರಿಶೂಲಗಳನ್ನು ಒಂದೇ ಪೀಠದ ಮೇಲೆ ಪ್ರತಿಷ್ಟಾಪಿಸಲಾಗಿದೆ. ಬಸದಿಯ ಸುತ್ತಲೂ ಮುರಕಲ್ಲಿನಿಂದ ಮಾಡಲ್ಪಟ್ಟ ಭದ್ರವಾದ ಪ್ರಕಾರ ಗೋಡೆ ಇದೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.jainheritagecentres.com/jainism-in-india/karnataka/moodabidri/
  2. https://web.archive.org/web/20050426232914/http://www.hindu.com/mag/2005/04/24/stories/2005042400340800.htm
  3. https://www.inditales.com/moodbidri-ancient-jain-temple-karnataka/
  4. ಶೆಣೈ, ಉಮನಾಥ್ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. pp. ೧೪೩.
  5. https://www.suddi9.com/archives/110054