ಟಾರ್ಸಿಯರ್ ಕೋತಿ
ಟಾರ್ಸಿಯರ್ ಕೋತಿ - ಪ್ರೈಮೇಟು ಗುಣ ಹಾಗೂ ಪ್ರೋಸಿಮಿಯೈ ಉಪಗಣಗಳ ಟಾರ್ಸೈಯಿಡೀ ಕುಟುಂಬಕ್ಕೆ ಸೇರಿದ ಸ್ತನಿ. ವೈಜ್ಞಾನಿಕ ಹೆಸರು ಟಾರ್ಸಿಯಸ್. ಇಂಡೋಮಲಯ ಪ್ರದೇಶದ ದಟ್ಟಕಾಡುಗಳಲ್ಲಿ ಮಾತ್ರ ಕಾಣಬರುತ್ತದೆ.
ಟಾ.ಸೈರಿಕ್ಟ (ಫಿಲಿಪೀನ್ಸ್ ಟಾರ್ಸಿಯರ್), ಟಾ.ಟ್ಯಾಂಕಾನಸ್ (ಮಲೇಷಿಯದ ಟಾರ್ಸಿಯರ್) ಮತ್ತು ಟಾ.ಸ್ಪೆಕ್ಟ್ರಮ್ (ಸೆಲಬೀಸ್ ಟಾರ್ಸಿಯರ್) ಎಂಬ ಮೂರು ಮುಖ್ಯಪ್ರಭೇದಗಳಿವೆ. ಫಿಲಿಪೀನ್ಸ್ ದ್ವೀಪಸ್ತೋಮದ ಸಾಮಾರ್, ಲೇಟೀ, ಬೋಹಾಲ್ ಮತ್ತು ಮಿಂಡನಾವೊ ದ್ವೀಪಗಳಲ್ಲಿ ಸುಮಾತ್ರದ ದಕ್ಷಿಣ ಭಾಗ, ಬೋರ್ನಿಯೊ, ಬ್ಯಾಂಕ ಮತ್ತು ಬಲೀಟಾನ್ ಹಾಗೂ ದಕ್ಷಿಣ ಚೀನ ಸಮುದ್ರದ ನಾಟುವ ದ್ವೀಪಗಳಲ್ಲಿ ಸೆಲಬೀಸ್ ಮತ್ತು ಸಲಾಯಾರ್ ದ್ವೀಪಗಳಲ್ಲಿ ವಾಸಿಸುತ್ತವೆ. ಈ ಸ್ತನಿಗಳು ಕೆಲವೇ ಸೆಂ.ಮೀ. ಉದ್ದವಿದ್ದು 80-150 ಗ್ರಾಂ. ತೂಕವಿರಬಹುದು.
ದೇಹದ ಎರಡರಷ್ಟು ಉದ್ದದ ಬಾಲವಿದೆ. ಬಾಲದ ಮೇಲೆ ಕೂದಲುಗಳಿಲ್ಲ, ತುದಿಯಲ್ಲಿ ಮಾತ್ರ ರೋಮಗುಚ್ಚವಿದೆ. ಬೆನ್ನ ಮೇಲೆಲ್ಲ ಬೂದುಮಿಶ್ರಿತ ಕಂದು ಇಲ್ಲವೆ ದಟ್ಟಕಂದು ಬಣ್ಣದ ರೇಷ್ಮೆಯಂತಹ ಮೃದುವಾದ ಕೂದಲುಗಳಿವೆ. ಹೊಟ್ಟೆಯ ಮೇಲಿನ ಕೂದಲಿನ ಬಣ್ಣ ಬೂದಿ ಇಲ್ಲವೆ ಮಾಸಲು ಕಂದು. ತಲೆ ಗುಂಡಗಿದೆ. ಮೂತಿ ಹಾಗೂ ಕತ್ತುಗಳು ಚಿಕ್ಕವು. ಕಣ್ಣುಗಳು ಬಲು ದೊಡ್ಡವು; ಇವುಗಳ ಸುತ್ತಳತೆ ಸುಮಾರು 16 ಮಿ.ಮೀ. ಕಿವಿಗಳು ತೆಳುವಾಗಿಯೂ ರೋಮರಹಿತವಾಗಿಯೂ ಇವೆ. ಮೂಗಿನ ಹೊಳ್ಳೆಗಳ ಅಂಚುಗಳ ಮೇಲೆ ಮತ್ತು ತುಟಿಗಳ ಮೇಲ್ಭಾಗದಲ್ಲಿ ಮೋಟುಕೂದಲುಗಳುಂಟು. ಈ ಲಕ್ಷಣದಿಂದಾಗಿ ಟಾರ್ಸಿಯರ್ಗಳು ಲೀಮರ್ಗಳಿಗಿಂತ ಭಿನ್ನವಾಗಿವೆ. ಮುಂಗಾಲುಗಳು (ಕೈಗಳು) ಚಿಕ್ಕವು. ಹಿಂಗಾಲುಗಳು ತುಂಬ ಉದ್ದವಾಗಿವೆ. ಕೈಯಿನ ಹಾಗೂ ಕಾಲಿನ ಬೆರಳುಗಳು ನೀಳವಾಗಿ ತೆಳುವಾಗಿವೆಯಲ್ಲದೆ ಇವುಗಳ ತುದಿಯಲ್ಲಿ ದೊಡ್ಡ ಅಂಟುಮೆತ್ತೆಗಳುಂಟು. ಇದರಿಂದಾಗಿ ಟಾರ್ಸಿಯರ್ ಸುಲಭವಾಗಿ ಮರದ ರೆಂಬೆಗಳನ್ನು ಹಿಡಿಯಬಲ್ಲುದು. ಎರಡು ಮತ್ತು ಮೂರನೆಯ ಬೆರಳುಗಳಲ್ಲಿ ಪಂಜದಂಥ ಉಗುರುಗಳಿವೆಯಾದರೆ ಉಳಿದ ಬೆರಳುಗಳಲ್ಲಿ ಮನುಷ್ಯನಲ್ಲಿರುವಂಥ ಉಗುರುಗಳಿವೆ. ಇದಕ್ಕೆ ತನ್ನ ತಲೆಯನ್ನು ಹೆಚ್ಚುಕಡಿಮೆ 360' ತಿರುಗಿಸಬಲ್ಲ ಸಾಮಥ್ರ್ಯ ಉಂಟು.
ಇದು ನಿಶಾಚರಿ ಹಾಗೂ ಪ್ರಧಾನವಾಗಿ ವೃಕ್ಷವಾಸಿ. ಹಗಲೆಲ್ಲ ಯಾವುದಾದರೊಂದು ರೆಂಬೆಯನ್ನು ಗಟ್ಟಿಯಾಗಿ ಕೈಕಾಲುಗಳಿಂದ ಹಿಡಿದು ನಿದ್ರಿಸುತ್ತದೆ. ಹೀಗೆ ಮಲಗಿರುವಾಗ ಜಾರದೆ ಇರುವುದಕ್ಕಾಗಿ ಬಾಲವನ್ನು ರೆಂಬೆಗಳ ಮೇಲೆ ಚಾಚಿ ಆಧಾರವನ್ನಾಗಿ ಮಾಡಿಕೊಂಡಿರುತ್ತದೆ. ಮರದಿಂದ ಮರಕ್ಕೆ ಸುಲಭವಾಗಿ ಮರಗಪ್ಪೆಯ ರೀತಿಯಲ್ಲಿ ನೆಗೆಯುತ್ತ ಓಡಾಡುತ್ತದೆ. ನೆಲದ ಮೇಲೂ ಹೀಗೆಯೇ ಕುಪ್ಪಳಿಸುತ್ತ ಸಾಗುತ್ತದೆ. ಕೆಲವು ಸಲ ನಾಲ್ಕು ಕಾಲುಗಳ ಮೇಲೆ ನಡೆಯುವುದೂ ಉಂಟು ಟಾರ್ಸಿಯರ್ ಒಂಟಿಜೀವಿ. ಅಪರೂಪವಾಗಿ ಜೋಡಿಗಳಲ್ಲಿ ಇಲ್ಲವೆ 3-4ರ ಗುಂಪುಗೂಡಿ ಇರುವುದುಂಟು.
ಇದರ ಆಹಾರ ಮುಖ್ಯವಾಗಿ ಕೀಟಗಳು, ಕೆಲವೊಮ್ಮೆ ಸಣ್ಣಪುಟ್ಟ ಓತಿಕೇತಗಳನ್ನು, ಮರಗಪ್ಪೆಗಳನ್ನು, ಬಸವನಹುಳುಗಳನ್ನು ತಿನ್ನುತ್ತದೆ. ಹೊಂಚುಹಾಕಿ ತನ್ನೆರಡು ಕೈಗಳಿಂದ ಒಂದೇ ಸಲಕ್ಕೆ ಎರೆಯನ್ನು ಹಿಡಿದು ನಿಧಾನವಾಗಿ ತಿನ್ನುವುದು. ತಿನ್ನುವಾಗ ತನ್ನೆರಡು ಕಣ್ಣುಗಳನ್ನೂ ಬಲವಾಗಿ ಮುಚ್ಚಿಕೊಳ್ಳುವುದು ಇದರ ವಿಚಿತ್ರ ಲಕ್ಷಣ. ನಾಯಿಗಳ ರೀತಿಯಲ್ಲಿ ನೀರನ್ನು ಕುಡಿಯುತ್ತದೆ. ಟಾರ್ಸಿಯರ್ ಸಾಧುಸ್ವಭಾವದ ಪ್ರಾಣಿ. ಇದನ್ನು ಸುಲಭವಾಗಿ ಸಾಕಬಹುದು ಎಂದು ಹೇಳಲಾಗಿದ್ದರೂ ಪ್ರಾಣಿಸಂಗ್ರಹಾಲಯಗಳಲ್ಲಿ ಇದು ಅಪರೂಪ. ಬಹುಶಃ ಇದರ ಆಹಾರಕ್ರಮದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿರುವುದೇ ಕಾರಣವಿರಬಹುದು. ಸಂತಾನೋತ್ಪತ್ತಿ ವರ್ಷದ ಯಾವ ಕಾಲದಲ್ಲಾದರೂ ನಡೆಯಬಹುದು. ಒಂದು ಸಲಕ್ಕೆ ಒಂದೇ ಒಂದು ಮರಿ ಹುಟ್ಟುತ್ತದೆ. ಆಗತಾನೇ ಹುಟ್ಟಿದ ಮರಿ ಪೂರ್ಣವಾಗಿ ರೂಪಗೊಂಡಿರುತ್ತದೆ. ಸಮತಟ್ಟಾದ ನೆಲದಲ್ಲಿ ನೆಗೆಯುತ್ತ ಓಡಾಡಲೂ ಬಲ್ಲುದು. ಮರ ಹತ್ತಬಲ್ಲದಾದರೂ ಒಂದೆರಡು ತಿಂಗಳವರೆಗೂ ತಾಯೊಂದಿಗೆ ಇದ್ದು ಅನಂತರ ಸ್ವತಂತ್ರ ಜೀವನ ನಡೆಸುತ್ತದೆ.
ಯೂರೋಪು, ಉತ್ತರ ಅಮೆರಿಕಗಳಲ್ಲಿ ಪೇಲಿಯೊಸೀನ್ ಶಿಲೆಗಳಲ್ಲಿ (ಅಂದರೆ 65 ದಶಲಕ್ಷ ವರ್ಷಗಳ ಹಿಂದಿನ ಶಿಲೆಗಳಲ್ಲಿ) ಇದರ ಪಳೆಯುಳಿಕೆಗಳು ಸಿಕ್ಕಿವೆ.