ಅರ್ನೆಸ್ಟ್‌ ಟಾಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ನೆಸ್ಟ್‌ ಟಾಲರ್ (1893-1939). ಜರ್ಮನ್ ಕವಿ, ನಾಟಕಕಾರ, ರಾಜಕೀಯ ಚಳವಳಿಗಾರ. ಮೊದಲ ಮಹಾಯುದ್ಧದ ಅನಂತರದಲ್ಲಿ ಎಡಪಂಥದ ಕ್ರಾಂತಿಕಾರೀ ಲೇಖಕರಲ್ಲಿ ಪ್ರಮುಖ.

ಬದುಕು ಮತ್ತು ಸಾಹಿತ್ಯ[ಬದಲಾಯಿಸಿ]

ಹುಟ್ಟಿದ್ದು ಸಾಮೋಕಿನ್ ಪಟ್ಟಣದಲ್ಲಿ. ತನ್ನ ಇಪ್ಪತ್ತೊಂದನೆಯ ವಯಸ್ಸಿನವರೆಗೆ ಸ್ವಯಂ ಶಿಕ್ಷಣದಲ್ಲಿ ನಿರತನಾಗಿದ್ದ. ಈತ 1914ರಲ್ಲಿ ಯುದ್ಧ ಪ್ರಾರಂಭವಾದೊಡನೆ ಉತ್ಸಾಹದಿಂದ ಸೈನಿಕನಾಗಲು ಮುಂದೆ ಬಂದ. ಯುದ್ಧರಂಗದ ಮುಂಚೂಣಿಯಲ್ಲಿ ಆದ ಅನುಭವದಿಂದ, ಹಲವಾರು ಬುದ್ಧಿಜೀವಿಗಳಂತೆ, ಈತನಲ್ಲೂ ತೀವ್ರ ಮಾನಸಿಕ ವೇದನೆ ಉಂಟಾಗಿ ಬದುಕಿನ ಅರ್ಥವನ್ನು ಪ್ರಶ್ನಿಸುವ ದೃಷ್ಟಿ ಮೂಡಿತು. ಇದರ ಫಲವಾಗಿ ತೀವ್ರ ಕಾಯಿಲೆಗೊಳಗಾಗಿ ಸೈನ್ಯದಿಂದ ಬಿಡುಗಡೆ ಪಡೆದು, ಯುದ್ಧವಿರೋಧಿ ಶಾಂತಿವಾದಿಯಾದ. ಅನಂತರ ರಾಜಕೀಯ ಪ್ರಭಾವ, ಬುದ್ಧಿಜೀವಿಗಳ ಅಭಿವ್ಯಕ್ತವಾದದ ಪ್ರಭಾವಕ್ಕೊಳಗಾಗಿ ಕ್ರಾಂತಿಕಾರೀ ಸಮಾಜವಾದಿಯಾದ. ಸ್ವತಂತ್ತ ಸಮಾಜವಾದೀ ಪಕ್ಷ ಸೇರಿ 1918ರಲ್ಲಿ ನಡೆದ ಮ್ಯೂನಿಕ್ ದಂಗೆಯಲ್ಲಿ ಭಾಗವಹಿಸಿದ.

ಸೆರೆಮನೆಯಲ್ಲಿದ್ದಾಗ ಈತ ಅಭಿವ್ಯಕ್ತವಾದದ ರೀತಿಯಲ್ಲಿ ಡೀ ವಾಂಡ್ ಲುಂಗ್ (1919) ಎಂಬ ಮೊದಲ ನಾಟಕವನ್ನು ರಚಿಸಿದ. ಇದರಲ್ಲಿ ನಾಯಕ ಕ್ರಮೇಣ ಬದಲಾಗುತ್ತ ಬದುಕು ಹಾಗೂ ಸಮಾಜದ ಬಗ್ಗೆ ವಿಚಾರಗಳನ್ನು ರೂಪಿಸಿಕೊಳ್ಳುತ್ತ ಬೆಳೆಯುವ ಚಿತ್ರಣ ಕಾಣಬಹುದು. ವಾಸ್ತವ ಬದುಕು, ಹಾಗೂ ಸಂಕೇತ ಜೀವನ-ಎರಡೂ ಮಜಲುಗಳಲ್ಲಿ ನಾಟಕ ಬೆಳೆದಿದೆ. ವಾಸ್ಯವ ಬದುಕಿನ ಸ್ತರದಲ್ಲಿ ಇವನ ಅನುಭವಗಳೂ ಸಂಕೇತದ ಮಡಿಲಿನಲ್ಲಿ ಇವನ ತಿಳಿ ಮನಸ್ಸಿನ ಕನಸುಗಳೂ ಚಿತ್ರಿತಗೊಂಡಿವೆ. ಈ ನಾಟಕದಲ್ಲಿನ ನಾಯಕ ಪ್ರಾರಂಭದಲ್ಲಿ ದೇಶ ಪ್ರೇಮಿಯಾಗಿದ್ದು ಸ್ವದೇಶಕ್ಕಾಗಿ ಯುದ್ಧದಲ್ಲಿ ಸೈನಿಕನಾಗಿ ದುಡಿಯುವ ಉತ್ಸಾಹದಿಂದ ರಣರಂಗಕ್ಕೆ ಹೋಗುತ್ತಾನೆ. ಆತನ ಬದಲಾವಣೆ ಯುದ್ಧವಿರೋಧಿಯಾಗಿ ಕ್ರಾಂತಿಕಾರೀ ನಾಯಕನಾಗುವುದರಲ್ಲಿ ಪರ್ಯವಸಾನವಾಗುತ್ತದೆ. ಈ ನಾಟಕದ ವಿಶಿಷ್ಟ ತಂತ್ರವೆಂದರೆ ವಾಸ್ತವ ಅನುಭವಕ್ಕಿಂತ ಸಂಕೇತದ ಕನಸಿನ ಚಿತ್ರ ಒಂದು ಹೆಜ್ಜೆ ಮುಂದಿದ್ದು, ಕನಸಾದುದೆಲ್ಲ ವಾಸ್ತವ ಜೀವನದ ಮುಂದಿನ ಘಟನೆಯಾಗಿ ಪರಿಣಮಿಸುತ್ತದೆ. ಈ ನಾಟಕ ಟಾಲರನಿಗೆ ಹೆಸರು ತಂದಿತು. ಬಂಡಾಯವೇಳುವ ಜನತೆಯ ಮನಸ್ಸನ್ನು ಈತನ ಎಲ್ಲ ನಾಟಕಗಳೂ ಸೂಚಿಸುತ್ತವೆ. ಮಾಸ್ ಮೆನ್ಷ್ (1921); ಡಿ ಮಷೀನೆನ ಷ್ಟುರ್ಮರ್(1925); ಹಿಂಕೆಮನ್ (1924) ಮುಂತಾದುವು ಈತನ ಪ್ರಸಿದ್ಧ ನಾಟಕಗಳು. ಕೊನೆಯ ನಾಟಕ ಈತನ ಅತ್ಯುತ್ತಮ ರಂಗನಾಟಕವೆಂದು ಹೆಸರಾಗಿದೆ. ಈ ವೇಳೆಗಾಗಲೇ ಆದರ್ಶವಾದದಿಂದ ವಾಸ್ತವ ಬದುಕಿನ ಬಗೆಗೆ ಸಿನಿಕತನ ಇವನ ನಾಟಕದಲ್ಲಿ ಕಾಣಿಸಿಕೊಂಡಿತು. ಹೋಪ್ಲ ವಿರರ್ ಲೆಬೆನ್ (1927) ಎಂಬ ನಾಟಕದಲ್ಲಿ ಇದು ಸ್ಪಷ್ಟವಾಗಿ ಮೂಡಿದೆ. ಈ ನಾಟಕಗಳಲ್ಲೆಲ್ಲ ಜರ್ಮನಿಯ ಆ ಕಾಲದ ರಾಜಕೀಯ ಚಿತ್ರಣ ಸ್ಪಷ್ಟವಾಗಿ ಮೂಡಿದೆ. ರಾಜಕೀಯದಲ್ಲಿ ಅಭಿವ್ಯಕ್ತವಾದವನ್ನು ಪ್ರಬಲವಾಗಿ ಪ್ರತಿಪಾದಿಸಿದ ಟಾಲರ್ 1930ರಲ್ಲಿ ಫೌವೆವರ್ ಔನ್ ಡೆನ್ ಕೆಸೆಲ್ನ್ (1930) ಎಂಬ ನಾಟಕದಲ್ಲಿ ಜರ್ಮನಿಯಲ್ಲಾದ 1917ರ ನೌಕಾ ಕ್ರಾಂತಿಯ ವಿಫಲತೆಯ ಚಿತ್ರಣ ಕೊಟ್ಟಿದ್ದಾನೆ. 1932ರಲ್ಲಿ ಡೀ ಬ್ಲಿಂಡ್ ಗಾಟಿನ್ (1936) ಎಂಬ ನಾಟಕದಲ್ಲಿ ನ್ಯಾಯಾಲಯಗಳಲ್ಲಿನ ಕುರುಡು ನಿಯಮಗಳನ್ನು ಖಂಡಿಸಿದ್ದಾನೆ. ಈ ನಡುವೆ ಎರಡು ಕವನಸಂಗ್ರಹಗಳನ್ನು ಈತ ಪ್ರಕಟಿಸಿದ. ಈತನ ಹೊಪ್ಲ ವಿರ್‍ಲೆಬೆನ್ ನಾಟಕದ ನಾಯಕ ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಬಕುಕಿನ ಬಗ್ಗೆ ಬೇಸರದಿಂದ. ಒಂದು ದೃಷ್ಟಿಯಲ್ಲಿ ಇದು ಟಾಲರನ ಜೀವನದ ಬೆಳೆವಣಿಗೆಯ ಸಂಕೇತವೇ ಎನ್ನಬಹುದು.

ಜನತೆಯ ಬಗ್ಗೆ ನಂಬಿಕೆ ಕಳೆದುಕೊಂಡು ಟಾಲರ್, 1933ರಲ್ಲಿ ಗೆಲ್ಲರ್ ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದ ಅನಂತರ, ದೇಶವನ್ನು ಬಿಟ್ಟು ಹೊರಟ. ಜರ್ಮನಿಯ ಅಭಿವ್ಯಕ್ತಿವಾದದ ಲೇಖಕರಲ್ಲಿ ಪಾಶ್ಚಾತ್ಯ ದೇಶಗಳಲ್ಲೆಲ್ಲ ಅತ್ಯಂತ ಪ್ರಸಿದ್ಧಿಪಡೆದ ಟಾಲರ್ ನ್ಯೂಯಾರ್ಕಿನ ಒಂದು ಕೋಣೆಯಲ್ಲಿ 1939ರ ಮೇ 22ನೆಯ ತಾರೀಕು ಆತ್ಮಹತ್ಯೆ ಮಾಡಿಕೊಂಡ. ಈತನ ಆತ್ಮಕಥೆ, ಐ ವಾಸ್ ಎ ಜರ್ಮನ್ (ಆಂಗ್ಲ ಅನುವಾದ) ಎಂಬುದು 1934ರಲ್ಲಿ ಪ್ರಕಟವಾಯಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: