ಬಾಣಂತಿ ಸನ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಣಂತಿ ಸನ್ನಿ ಎನ್ನುವುದು ಬಾಣಂತಿಯರಲ್ಲಿ ಕಾಣಿಸಿಕೊಳ್ಳುವ ಒಂದು ಮಾನಸಿಕ ಖಾಯಿಲೆ.[೧] ಕೆಲವು ಸ್ತ್ರೀಯರಲ್ಲಿ ಹೆರಿಗೆಯ ನಂತರ ಒಂದೆರಡು ವಾರಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ತೀವ್ರಖಿನ್ನತೆ, ಭಾವನೆಗಳ ಏರು ಪೇರು, ವಿಚಿತ್ರ ನಡವಳಿಕೆಗಳು, ದೈಹಿಕ ಸ್ವಚ್ಛತೆ ಕಡೆ ನಿರ್ಲಕ್ಷ, ಮಗುವಿನ ಬಗ್ಗೆ ನಿರಾಸಕ್ತಿ ಮುಂತಾದ ಲಕ್ಷಣಗಳಿರುತ್ತವೆ. ಇದು ಕೆಲವರಲ್ಲಿ ತಾತ್ಕಾಲಿಕವಾಗಿದ್ದು ಕ್ರಮೇಣ ಗುಣವಾಗುತ್ತದೆ. ಕೆಲವರಲ್ಲಿ ಇದು ಹಾಗೇ ಮುಂದುವರೆದು ಸ್ಕಿಜೋಫ್ರೇನಿಯಾ ಮತ್ತು ಅಫೆಕ್ಟಿವ್ ಡಿಸಾರ್ಡರ್ ನಂತಹ ತೀವ್ರತರವಾದ ಮಾನಸಿಕ ಖಾಯಿಲೆಗಳಿಗೆ ಕಾರಣವಾಗಬಲ್ಲುದು.[೨] ಈ ಸನ್ನಿಗೆ ಒಳಗಾದ ತಾಯಿ ತೀವ್ರತರವಾದ ಆತಂಕದ ಸ್ಥಿತಿಯನ್ನು ಹೊಂದಿರುತ್ತಾಳೆ. ಸಾಮಾನ್ಯವಾಗಿ ಚೊಚ್ಚಲ ಹೆರಿಗೆಯಲ್ಲಿ ಬಾಣಂತಿ ಸನ್ನಿ ಅಥವಾ ಖಿನ್ನತೆ ಕಂಡು ಬರುವುದು. ಇದನ್ನು ಇಂಗ್ಲೀಷಿನಲ್ಲಿ 'puerperal ಅಥವಾ postpartum psychosis' ಎಂದು ಕರೆಯುತ್ತಾರೆ.

ಕಾರಣಗಳು[ಬದಲಾಯಿಸಿ]

ಬಾಣಂತಿ ಸನ್ನಿಗೆ ಹಲವಾರು ಕಾರಣಗಳಿದ್ದು ಒಬ್ಬರಿಂದ ಒಬ್ಬರಿಗೆ ಇದು ಬೇರೆ ಬೇರೆ ಇರಬಹುದು. ಸಾಮಾನ್ಯವಾಗಿ ಈ ಕೆಳಗಿನ ಕಾರಣಗಳಿಂದ ಬಾಣಂತಿಯರು ಸನ್ನಿಗೆ ಒಳಗಾಗಬಹುದು.

  • ಮಗುವನ್ನು ಹೊಂದಲು ಇಷ್ಟವಿಲ್ಲದೆ ಗರ್ಭಧಾರಣೆಯಾಗಿದ್ದರೆ ಅಂತಹ ಸಂದರ್ಭದಲ್ಲಿ ಮಗುವಿನೆಡೆಗೆ ಯಾವ ಮಮಕಾರ ಮೂಡದೆ ಖಿನ್ನತೆಗೆ ಒಳಗಾಗುತ್ತಾರೆ.
  • ಬಸುರಿತನದಲ್ಲಿ ಸೂಕ್ತ ಆರೈಕೆ ದೊರೆಯದಿದ್ದರೆ, ಪೌಷ್ಠಿಕಾಂಶವಿರುವ ಆಹಾರ ಕೊರತೆ ಉಂಟಾಗಿದ್ದರೆ.
  • ಗರ್ಭಿಣಿಯಾಗಿದ್ದಾಗ, ಮೂರ್ಛೆರೋಗ ಬರುವುದು, ರಕ್ತದೊತ್ತಡ ಮುಂತಾದ ಆರೋಗ್ಯ ಸಮಸ್ಯೆಯಿದ್ದರೆ.
  • ಮಾನಸಿಕ ಒತ್ತಡ ಮತ್ತು ಹೆರಿಗೆ ನಂತರ ದೈಹಿಕ ನೋವು,
  • ಮನೆಯವರ ನಿರ್ಲಕ್ಷ್ಯ, ಮಗುವಿನ ಆರೈಕೆಗೆ ಮನೆಯವರ ಸಹಕಾರ ಇಲ್ಲದೇ ಇದ್ದಾಗ.
  • ಆರೋಗ್ಯಕರವಾದ ಮಗು ಹುಟ್ಟದಿದ್ದರೆ ಮನನೊಂದು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ.
  • ಇದು ಅನುವಂಶೀಯವಾಗಿಯೂ ಬರುವ ಸಾಧ್ಯತೆಗಳಿರುತ್ತದೆ.[೩]

ಲಕ್ಷಣಗಳು[ಬದಲಾಯಿಸಿ]

  • ಮಂಕುತನ ಚಡಪಡಿಕೆ ಮತ್ತು ಅತೀ ಚಟುವಟಿಕೆ
  • ಸರಿಯಾಗಿ ಆಹಾರ ಸೇವಿಸದಿರುವುದು, ಸಾಕಷ್ಟು ನಿದ್ದೆ ಮಾಡದಿರುವುದಂತಹ ಖಿನ್ನತೆಯ ಲಕ್ಷಣಗಳು
  • ಅರ್ಥವಿಲ್ಲದೆ ನಗುವುದು, ಅಳುವುದು, ಕೋಪ ಮತ್ತು ಭಯಪಟ್ಟುಕೊಳ್ಳುವುದು
  • ಭ್ರಮೆಯಲ್ಲಿರುವುದು
  • ಆಹಾರ ಮತ್ತು ನಿದ್ರೆಯಲ್ಲಿ ವ್ಯತ್ಯಯ
  • ಶಿಶುವಿನ ಕಡೆ ನಿರ್ಲಕ್ಷ್ಯ
  • ಅಸಹಜ, ಅಸ್ವಾಭಾವಿಕ, ವಿಚಿತ್ರ ನಡುವಳಿಕೆ
  • ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯ
  • ಹಿಂಸಾಚಾರ ಮತ್ತು ಆತ್ಮ ಹತ್ಯೆ ಪ್ರಯತ್ನ[೪][೫]
  • ತೀವ್ರವಾದ ಗೊಂದಲ[೬]

ಚಿಕಿತ್ಸೆ ಮತ್ತು ಪರಿಹಾರಗಳು[ಬದಲಾಯಿಸಿ]

  • ಬಾಣಂತಿಯನ್ನು ಮನೋವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಬೇಕು.
  • ಆರಂಭಿಕ ಹಂತದಲ್ಲಾದರೆ ಚಿತ್ತವಿಕಲತೆ ನಿರೋಧಕ ಔಷಧಿ, ಖಿನ್ನತೆ ಮತ್ತು ಆತಂಕ ನಿವಾರಣಾ ಔಷಧಿಯನ್ನು 2-3 ದಿನ ನೀಡಿದರೆ ಗುಣಮುಖರಾಗುವವರು.
  • ಈ ಕಾಯಿಲೆ ವಿಪರೀತಕ್ಕೆ ತಲುಪಿದ್ದರೆ ವಿದ್ಯುತ್ ಕಂಪನ ಚಿಕಿತ್ಸೆ(ECT)ಯ ಮೂಲಕ ಚಿಕಿತ್ಸೆ ನೀಡಬೇಕಾಗುತ್ತದೆ.
  • ಬಾಣಂತಿಯರಿಗೆ ಇರುವ ರಕ್ತಹೀನತೆ, ದೈಹಿಕ ಅಪೌಷ್ಟಿಕತೆಯನ್ನು ನೀಗಿಸಬೇಕು.
  • ಮನೆಯವರು ಚೆನ್ನಾಗಿ ಸಹಕಾರ ಕೊಟ್ಟು ಮಗುವಿನ ಪಾಲನೆಯಲ್ಲಿ ಪ್ರೋತ್ಸಾಹ ನೀಡಬೇಕು.[೭]

ಉಲ್ಲೇಖಗಳು[ಬದಲಾಯಿಸಿ]

  1. "ಬಾಣಂತಿ ಸನ್ನಿ". ನಮ್ಮ ನಾಡು. Archived from the original on 30 ಸೆಪ್ಟೆಂಬರ್ 2020. Retrieved 24 September 2021.
  2. ಬಾಣಂತಿ ಮಹಿಳೆಗೆ ಕಾಡುವ 'ಬಾಣಂತಿ ಸನ್ನಿ', ವೆಬ್ ದುನಿಯಾ, 22 ನವೆಂಬರ್ 2014
  3. ವೈದ್ಯಸಾಹಿತ್ಯ ಸಮೃದ್ಧ ಆರೋಗ್ಯ-೧ : ಆಹ್ವಾನಿತ ಲೇಖನಗಳು – ೨೨. ಬಾಣಂತಿ ಸನ್ನಿ, ಕಣಜ ಮಾಹಿತಿ ಕೋಶ
  4. ಸನ್ನಿ ಬಾಣಂತಿಯರಿಗೆ ಕಾಡುವ ಮಾನಸಿಕ ಕಾಯಿಲೆ, ಕನ್ನಡ ಬೋಲ್ಡ್ ಸ್ಕೈ, 22 ಫೆಬ್ರುವರಿ 2012
  5. ಬಾಣಂತಿ ಸನ್ನಿ ಬಗ್ಗೆ ತಿಳಿಯಬೇಕೆ?, ವಿಜಯ ಕರ್ನಾಟಕ, 29 ಏಪ್ರಿಲ್ 2020
  6. https://www.nhs.uk/mental-health/conditions/post-partum-psychosis/
  7. ಡಾ. ಲಕ್ಷ್ಮೀಶ ಭಟ್, ತಾಯಂದಿರನ್ನು ಕಾಡುವ ಬಾಣಂತಿ ಸನ್ನಿ, ನಿರಂತರ ಪ್ರಗತಿ, ಮೇ೨೦೨೧

ಬಾಹ್ಯಸಂಪರ್ಕ ಕೊಂಡಿಗಳು[ಬದಲಾಯಿಸಿ]