ವಿಷಯಕ್ಕೆ ಹೋಗು

ಹೆಲನ್ ಹಂಟ್ ಜ್ಯಾಕ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಲನ್ ಮೇರಿಯಾ ಹಂಟ್ ಜ್ಯಾಕ್ಸನ್ (1830-1885). ಅಮೆರಿಕದ ಕವಿಯಿತ್ರಿ ಹಾಗೂ ಕಾದಂಬರಿಕಾರಳು. ಈಕೆಯ ಕೆಲವೊಂದು ಕೃತಿಗಳು ಎಚ್. ಎಚ್. (ಹೆಲನ್ ಹಂಟ್) ಎಂಬ ಅಕ್ಷರ ಸಂಕ್ಷೇಪದಲ್ಲಿ ಅಂಕಿತಗೊಂಡು ಪ್ರಕಟವಾದುವು.

ಆರಂಭಿಕ ಬದುಕು

[ಬದಲಾಯಿಸಿ]

ಆ್ಯಮ್‍ಹಸ್ರ್ಟ್ ಕಾಲೇಜಿನ ಪ್ರಾಧ್ಯಾಪಕ ನ್ಯಾಥನ್‍ವೆಲ್ಟಿ ಫಿಸ್ಕೆ ಎಂಬಾತನ ಮಗಳು ಈಕೆ. ಬಾಲ್ಯದಲ್ಲೇ ಈಕೆಯ ಅಸಾಧಾರಣ ಬುದ್ಧಿಶಕ್ತಿ ಹಾಗೂ ಉತ್ಸಾಹಸಕ್ತಿಗಳ ಬಹುಮುಖತೆ ಪ್ರಕಾಶಕ್ಕೆ ಬಂತು. ಮೊದಲು ಇಪ್ಸ್‍ವಿಚ್‍ನ ಫೀಮೇಲ್ ಸೆಮಿನರಿ ಶಾಲೆಯಲ್ಲೂ ಬಳಿಕ ನ್ಯೂಯಾರ್ಕಿನ ಖಾಸಗಿ ಶಾಲೆಯೊಂದರಲ್ಲೂ ಈಕೆಯ ಶಿಕ್ಷಣ ನಡೆಯಿತು. 1852ರಲ್ಲಿ ಈಕೆ ಅಮೆರಿಕ ಸಂಯುಕ್ತಸಂಸ್ಥಾನದ ಎಂಜಿನಿಯರ್ ಪಡೆಗೆ ಸೇರಿದ ಕ್ಯಾಪ್ಟನ್ (ಮುಂದೆ ಈತ ಮೇಜರ್ ಪದವಿಗೇರಿದ) ಎಡ್ವರ್ಡ್ ಬಿಸೆಲ್ ಹಂಟ್ (1822-63) ಎಂಬಾತನನ್ನು ಮದುವೆಯಾದಳು. ಈತ 1863ರಲ್ಲಿ, ತಾನೇ ಆವಿಷ್ಕರಿಸಿದ ಒಂದು ಜಲಾಂತರ್ನೌಕೆಯ ಸಾಧನವನ್ನು ಪರೀಕ್ಷಿಸುತ್ತಿದ್ದಾಗ ಆಕಸ್ಮಿಕ ಮೃತ್ಯುವಿಗೆ ತುತ್ತಾದ. ಇದ್ದ ಇಬ್ಬರು ಗಂಡು ಮಕ್ಕಳೂ ಸ್ವಲ್ಪ ಕಾಲದಲ್ಲೇ ತೀರಿಕೊಂಡುವು. ಈ ದುರಂತಗಳಿಂದ ಉಂಟಾದ ತೀವ್ರ ದುಃಖದಿಂದ ಶ್ರೀಮತಿ ಹಂಟ್ ತನ್ನ ಬಾಳಿನ ಕಥೆ ಇಲ್ಲಿಗೇ ಮುಗಿಯಿತೆಂದು ಭಾವಿಸಿದಳು. ತತ್ಪರಿಣಾಮವಾಗಿಯೇ ಈಕೆ ಲೇಖನಕಾರ್ಯಕ್ಕೆ ತಿರುಗಿದುದು. 1865ರಿಂದ ತೊಡಗಿ, ಬದುಕಿರುವಷ್ಟು ಕಾಲವೂ ಈಕೆ ಲೇಖನವೃತ್ತಿಯನ್ನು ನಡೆಸಿಕೊಂಡು ಬಂದಳು. ದಿ ನೇಷನ್, ಇಂಡಿಪೆಂಡಟ್, ಹಾರ್ತ್ ಅಂಡ್ ಹೋಮ್ ಮತ್ತು ಇತರ ನಿಯತಕಾಲಿಕೆಗಳಲ್ಲಿ ಈಕೆಯ ಕವಿತೆಗಳು, ಲೇಖನಗಳು, ಕಥೆಗಳು ಪ್ರಕಟವಾದುವು. ಸ್ಕ್ರಿಬ್‍ನರ್ಸ್ ಮನ್ತ್ಲೀ ಎಂಬ ಪತ್ರಿಕೆಯಲ್ಲಿ ಪ್ರಕಟಿತವಾದ ಸ್ಯಾಕ್ಸ್‍ಹೋಮ್ ಸ್ಟೋರೀಸ್ ಎಂಬ ಕಥಾಮಾಲೆ ಈಕೆಯ ಕೃತಿಯೆಂದು ಹೇಳಲಾಯಿತು. ಆದರೆ ತಾನು ಈ ಕಥೆಗಳ ಲೇಖಕಿಯೆಂದು ಹೆಲನ್ ಕಡೆಯವರೆಗೂ ಒಪ್ಪಲೇ ಇಲ್ಲ. ಅಲ್ಲದೆ ಈಕೆ ತನ್ನ ಕೃತಿಗಳಲ್ಲಿ ಬಹುಪಾಲನ್ನೆಲ್ಲ ಅನಾಮಧೇಯವಾಗಿಯೇ ಪ್ರಕಟಿಸಿದಳು. 1872-74ರಲ್ಲಿ ಹೆಲನ್ ಕ್ಯಾಲಿಫೋರ್ನಿಯ ಮತ್ತು ಕಾಲೊರ್ಯಾಡೋಗಳಲ್ಲಿ ಪ್ರವಾಸಮಾಡುತ್ತಿದ್ದಳು. ಕಾಲೊರ್ಯಾಡೋ ಸ್ಪ್ರಿಂಗ್ಸ್‍ನಲ್ಲಿ ವಿಲಿಯಮ್ ಷಾರ್ಪ್‍ಲೆಸ್ ಜಾಕ್ಸಸ್ ಎಂಬ ಶ್ರೀಮಂತ ಕೈಗಾರಿಕೋದ್ಯಮಿಗೂ ಈಕೆಗೂ ಪರಿಚಯವುಂಟಾಗಿ 1875ರಲ್ಲಿ ಇವರ ವಿವಾಹ ಜರುಗಿತು.

ಪಶ್ಚಿಮ ಪ್ರಾಂತ್ಯದಲ್ಲಿದ್ದಾಗ ಹೆಲನಳಿಗೆ ರೆಡ್ ಇಂಡಿಯನ್ನರ ವಿಷಯದಲ್ಲಿ ತೀವ್ರಾಸಕ್ತಿ ಹುಟ್ಟಿತು. ಸರ್ಕಾರ ಇವರನ್ನು ಸಂಪೂರ್ಣವಾಗಿ ಉಪೇಕ್ಷಿಸಿದ್ದುದು ಈಕೆಯ ಮನಸ್ಸಿನಲ್ಲಿ ಪ್ರಬಲವಾದ ಆಗ್ರಹವನ್ನು ಕೆರಳಿಸಿತು. ನ್ಯೂಯಾರ್ಕಿನ ಆ್ಯಸ್ಟರ್ ಲೈಬ್ರರಿಯಲ್ಲಿ ಹಲವಾರು ತಿಂಗಳಕಾಲ ಸಂಶೋಧನೆ ನಡೆಸಿದ ಬಳಿಕ ಒಂದು ಸಮೀಕ್ಷೆಯನ್ನು ಬರೆದಳು. ಇದರಲ್ಲಿ ಸರ್ಕಾರ ರೆಡ್ ಇಂಡಿಯನ್ನರಿಗೆ ಎಸಗಿದ್ದ ಅನೇಕ ಅನ್ಯಾಯ-ಅಪಚಾರಗಳನ್ನು ಹೃದಯಂಗಮವಾಗಿ ಚಿತ್ರಿಸಿದ್ದಳು. ಸ್ವಂತ ಖರ್ಚಿನಲ್ಲಿ ಈ ಸಮೀಕ್ಷೆಯ ಪ್ರತಿಗಳನ್ನು ಅಚ್ಚಿಸಿ ಅಮೆರಿಕದ ಕಾಂಗ್ರೆಸ್ ಸದಸ್ಯರಿಗೆಲ್ಲ ಹಂಚಿದಳು. ಈ ಕೃತಿಗೆ ಆಕೆ ಕೊಟ್ಟಿದ್ದ ಹೆಸರು ಎ ಸೆಂಚುರಿ ಆಫ್ ಡಿಸಾನರ್ (1881) ಎಂದು. 1882ರಲ್ಲಿ ಅಮೆರಿಕ ಸರ್ಕಾರ ಹೆಲನನ್ನೂ ಆಬಟ್ ಕಿನ್ನಿ ಎಂಬುವವರನ್ನೂ ಒಳಗೊಂಡ ಒಂದು ನಿಯೋಗವನ್ನು ನೇಮಕ ಮಾಡಿತು. ಈ ನಿಯೋಗಕ್ಕೆ ವಹಿಸಿದ ಕೆಲಸ ಕ್ಯಾಲಿಫೋರ್ನಿಯದ ರೆಡ್ ಇಂಡಿಯನ್ ಮಿಷನ್‍ಗಳ ಸ್ಥಿತಿಗತಿಗಳು ಮತ್ತು ಅಗತ್ಯಗಳನ್ನು ಪರಿಶೀಲಿಸಿ ವರದಿ ಒಪ್ಪಿಸಬೇಕೆಂಬುದು. ಈ ವರದಿಯಿಂದೇನೂ ಫಲವಾಗಲಿಲ್ಲ. ಆಗ ಹೆಲನ್ ರೆಡ್ ಇಂಡಿಯನ್ನರ ದುಃಸ್ಥಿತಿಯ ಬಗೆಗೆ ಸಾರ್ವಜನಿಕರಲ್ಲಿ ಜಾಗೃತಿಯುಂಟುಮಾಡುವುದರ ಮೂಲಕ ಅವರ ಸ್ಥಿತಿಯನ್ನು ಸುಧಾರಿಸುವಂತೆ ಒತ್ತಾಯ ತರಬೇಕೆಂದು ಸಂಕಲ್ಪಿಸಿದಳು. 1884ರಲ್ಲಿ ರವೋನಾ ಎಂಬ ಕಾದಂಬರಿಯನ್ನು ಪ್ರಕಟಿಸಿದಳು. ಒಡನೆಯೇ ಅದು ಜನಪ್ರಿಯವಾಯಿತು. ಕ್ಯಾಲಿಫೋರ್ನಿಯ ಸಂಸ್ಥಾನವನ್ನು ಕುರಿತ ಅತ್ಯುತ್ತಮ ಕಾದಂಬರಿಯೆಂದು ಅದಕ್ಕೆ ಹೆಸರು ಬಂತು. ಟೆಕ್ನಿಕಲರ್‍ನಲ್ಲಿ ಅದರ ಚಲನಚಿತ್ರವನ್ನೂ ತಯಾರಿಸಲಾಗಿದೆ.

ಮರ್ಸಿ ಫಿಲ್‍ಬ್ರಿಕ್ಸ್ ಚಾಯ್ಸ್ ಎಂಬುದು ಹೆಲನ್ ಬರೆದ ಇನ್ನೊಂದೇ ಒಂದು ಗಮನಾರ್ಹ ಕಾದಂಬರಿ. ಶಾಲೆಯಲ್ಲಿ ಈಕೆಯ ಒಡನಾಡಿಯಾಗಿದ್ದು ಮುಂದೆ ಈಕೆಗೆ ಜೀವಾವಧಿ ಗೆಳತಿಯಾಗಿದ್ದ ಎಮಿಲಿ ಡಿಕಿನ್‍ಸನ್ ಎಂಬಾಕೆಯ ಜೀವನವನ್ನು ಆಧಾರವಾಗಿಟ್ಟುಕೊಂಡು ಬರೆದ ಕೃತಿ ಇದೆಂದು ಭಾವಿಸಲಾಗಿದೆ. 

ಯುರೋಪು ಮತ್ತು ಅಮೆರಿಕಗಳಲ್ಲಿ ಹೆಲನ್ ಮಾಡಿದ ಸಂಚಾರಗಳ ಸ್ಮರಣೆಗಳನ್ನೊಳಗೊಂಡ ಗ್ಲಿಂಪ್ಸಸ್ ಆಫ್ ತ್ರೀ ಕೋಸ್ಟ್ಸ್ (1886) ಮತ್ತು ಬಿಟ್ವೀನ್ ವ್ಹೈಲ್ಸ್ (1887) ಎಂಬ ಕಥಾಸಂಗ್ರಹ ಇವೆರಡೂ ಹೆಲನ್ ಹಂಟಳ ಮರಣಾನಂತರದ ಪ್ರಕಟಣೆಗಳು. ರೆಡ್ ಇಂಡಿಯನ್ನರಿಗೆ ಆಗುತ್ತಿದ್ದ ಅನ್ಯಾಯ-ದೌರ್ಜನ್ಯಗಳನ್ನು ತಪ್ಪಿಸಿದ ಕೀರ್ತಿ ಈಕೆಗೆ ಸೇರಿದ್ದು.