ಡಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾಮ - ಆರ್ಟಿಯೊಡಾಕ್ಟಿಲ ಗಣ, ಸರ್ವಿಡೀ ಕುಟುಂಬ, ಸರ್ವಿನೀ ಉಪಕುಟುಂಬಕ್ಕೆ ಸೇರಿದ ಜಿಂಕೆ. ಇದಕ್ಕೆ ಫ್ಯಾಲೊ ಜಿಂಕೆ ಎಂಬ ಹೆಸರೂ ಉಂಟು.

ಯುರೋಪಿನ ಫ್ಯಾಲೊ ಜಿಂಕೆ

ಇದರಲ್ಲಿ ಡಾಮ ಡಾಮ ಮತ್ತು ಡಾಮ ಮೆಸೊಪೋಟೇಮಿಕ ಎಂಬ ಎರಡು ಪ್ರಭೇದಗಳುಂಟು. ಮೊದಲನೆಯದು ದಕ್ಷಿಣ ಯೂರೋಪಿನ ಮೆಡಿಟರೇನಿಯನ್ ವಲಯ ಮತ್ತು ಏಷ್ಯ ಮೈನರ್‍ಗಳಲ್ಲೂ ಎರಡನೆಯದು ಪರ್ಷಿಯ, ಇರಾಕ್‍ಗಳಲ್ಲೂ ಕಂಡುಬರುತ್ತವೆ. ಡಾಮ ಡಾಮವನ್ನು ಗ್ರೇಟ್ ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನ, ಪಶ್ಚಿಮ ಉಕ್ರೇನ್, ಬಾಲ್ಟಿಕ್ ದೇಶಗಳಲ್ಲೂ ಪರಿಚಯಿಸಲಾಗಿದೆ. ಡಾಮ ಡಾಮ ಜಿಂಕೆಯ ಎತ್ತರ ಸುಮಾರು 1 ಮೀ. ಉದ್ದ 1.3-1.6 ಮೀ. ತೂಕ 40-80 ಕೆ.ಜಿ. ಇದಕ್ಕೆ ಸುಮಾರು 18 ಸೆಂ.ಮೀ. ಉದ್ದದ ಬಾಲ ಉಂಟು. ದೇಹದ ಬಣ್ಣ ಹಳದಿಮಿಶ್ರಿತ ಕಂದು. ಬೆನ್ನಮೇಲೆಲ್ಲ ಬಿಳಿಯ ಚುಕ್ಕೆಗಳುಂಟು. ಉದರ ಭಾಗದ ಬಣ್ಣ ಬಿಳಿ. ಚಳಿಗಾಲದಲ್ಲಿ ದೇಹದ ಬಣ್ಣ ಬೂದಿ ಮಿಶ್ರಿತ ಹಳದಿಗೆ ತಿರುಗುತ್ತದೆ. ಚುಕ್ಕೆಗಳೂ ಕಾಣೆಯಾಗುವುವು. ಗಂಡು ಜಿಂಕೆಗಳಲ್ಲಿ ಮಾತ್ರ ಉದುರು ಗೊಂಬುಗಳಿವೆ. ಕೊಂಬುಗಳು ಚಪ್ಪಟೆಯಾಗಿ ಅಗಲವಾಗಿ ಹಸ್ತದಂತೆ ಹರಡಿಕೊಂಡಿವೆ. ಇವುಗಳ ಅಂಚಿನಲ್ಲಿ ಬೆರಳುಗಳಂಥ ಅನೇಕ ಕವಲುಗಳುಂಟು. ಸಾಧಾರಣವಾಗಿ ಕೊಂಬುಗಳು ಏಪ್ರಿಲ್ ತಿಂಗಳಿನಲ್ಲಿ ಉದುರಿಬಿದ್ದು ಮತ್ತೆ ಆಗಸ್ಟ್ ವೇಳೆಗೆ ಹೊಸ ಕೊಂಬುಗಳು ಹುಟ್ಟಿಕೊಳ್ಳುವುವು. ಡಾಮ ಸಂಘಜೀವಿ; ಸಣ್ಣ ಹಿಂಡುಗಳಲ್ಲಿ ಜೀವಿಸುತ್ತದೆ. ಬೆದೆಗಾಲವನ್ನುಳಿದು ಬೇರೆ ಸಮಯದಲ್ಲಿ ಗಂಡುಗಳು ಪ್ರತ್ಯೇಕ ಗುಂಪುಗಳಲ್ಲಿಯೂ ಹೆಣ್ಣು ಮತ್ತು ಚಿಕ್ಕಮರಿಗಳು ಬೇರೆ ಗುಂಪುಗಳಲ್ಲಿಯೂ ತಿರುಗಾಡುತ್ತವೆ. ಗಂಡು ಹೆಣ್ಣುಗಳು ಕೂಡುವ ಕಾಲ ಸೆಪ್ಟೆಂಬರ್-ಅಕ್ಟೋಬರ್. ಆ ಕಾಲದಲ್ಲಿ ಗಂಡುಗಳು ಅನೇಕ ಹೆಣ್ಣುಗಳ ಜೊತೆಗೆ ಗುಂಪು ಕಟ್ಟಿಕೊಂಡು ಸ್ಪರ್ಧಿಗಳೊಂದಿಗೆ ಸೆಣಸಿ ಓಡಿಸುವುವಲ್ಲದೆ ಮಂದ್ರಸ್ವರದಲ್ಲಿ ಧ್ವನಿಗೈಯುತ್ತ ಒಂದು ವಿಧದ ಪ್ರಣಯನೃತ್ಯವಾಡುತ್ತ ಕಾಲಕಳೆಯುವುವು. ಜೂನ್-ಜುಲೈ ವೇಳೆಗೆ ಮರಿಗಳು ಹುಟ್ಟುವುವು. ಗರ್ಭಧಾರಣೆಯ ಅವಧಿ ಸುಮಾರು 230 ದಿವಸಗಳು. ಒಂದು ಸೂಲಿಗೆ ಒಂದೇ ಒಂದು ಮರಿ ಹುಟ್ಟುತ್ತದೆ. ಮರಿಗಳ ಮೈಬಣ್ಣ ವಯಸ್ಕಗಳಿಗಿಂತ ಗಾಢವಾದುದು. ಬಿಳಿ ಚುಕ್ಕೆಗಳು ಇದ್ದೇ ಇರುತ್ತವೆ. ಡಾಮ ಜಿಂಕೆಯ ಆಯಸ್ಸು ಸುಮಾರು 15 ವರ್ಷಗಳು. ಇವನ್ನು ಸುಲಭವಾಗಿ ಸಾಕಬಹುದು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಡಾಮ&oldid=1080235" ಇಂದ ಪಡೆಯಲ್ಪಟ್ಟಿದೆ