ಜೀನ್ ಗಾಸ್ಟನ್ ಡಾರ್ಬೋ
ಜೀನ್ ಗಾಸ್ಟನ್ ಡಾರ್ಬೋ (1842-1917) ಒಬ್ಬ ಫ್ರೆಂಚ್ ಗಣಿತ ವಿಜ್ಞಾನಿ. ಲಂಬಾತ್ಮಕ ತಲಗಳು (orthogonal surfaces), ಅನಂತ ಸೂಕ್ಷ್ಮಾತ್ಮಕ ಜ್ಯಾಮಿತಿ (infinitesimal geometry), ಬೃಹತ್ಸಂಖ್ಯೆಗಳ ಉತ್ಪನ್ನಗಳಿಗೆ ಸನ್ನಿಹಿತೀಕರಣ (approximation) ಮತ್ತು ವಿಚ್ಛಿನ್ನ ಉತ್ಪನ್ನಗಳು ಮುಂತಾದವುಗಳ ಮೇಲೆ ಕಾರ್ಯ ನಡೆಸಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾನೆ.
ಬದುಕು
[ಬದಲಾಯಿಸಿ]ಡಾರ್ಬೋ ಜನಿಸಿದ್ದು ಫ್ರಾನ್ಸಿನ ನೈಮ ಎಂಬಲ್ಲಿ (13-8-1842); ಮರಣ ಪ್ಯಾರಿಸಿನಲ್ಲಿ (25-2-1917). ಈತ ಏಳು ವರ್ಷದವನಾಗಿದ್ದಾಗ ತಂದೆಯನ್ನು ಕಳೆದುಕೊಂಡ. ತಾಯಿಯ ಪ್ರೋತ್ಸಾಹ ಹಾಗೂ ನಿರ್ದೇಶನದಲ್ಲಿ ಪ್ಯಾರಿಸ್ ನಗರದ ಎಕೋಲೆ ನಾರ್ಮಲ್‍ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಂಡಿತು. ಅದೇ ಶಾಲೆಯಲ್ಲಿ ಲೂಯಿ ಪಾಸ್ತರನು ಇವನಿಗೆ ಅಧ್ಯಾಪಕ ಹುದ್ದೆಯನ್ನು ಕೊಡಿಸಿದ. ಕಾಲೇಜ್-ಡಿ-ಫ್ರಾನ್ಸ್‍ನಲ್ಲಿ ಗಣಿತಭೌತವಿಜ್ಞಾನದ ಮುಖ್ಯಸ್ಥನಾಗಿದ್ದ ಜೋಸೆಫ್ ಬಟ್ರ್ರಾಂಡ್ ಎಂಬಾತನಿಗೆ ಸಹಾಯಕನಾಗಿ ಕೆಲಸಮಾಡಿದ (1866-67). ಮುಂದೆ ಫ್ರಾನ್ಸಿನ ಪ್ರಸಿದ್ಧ ವಿದ್ಯಾಶಾಲೆಗಳಾದ ಲೈಸೀ-ಲೂಯೀ-ಲಿ-ಗ್ರಾಂಡ್, ಎಕೊಲೆ ನಾರ್ಮಲ್ (1872-73) ಮತ್ತು ಸೋರ್ಬೊನ್ (1873-1890) ಎಂಬಲ್ಲಿ ಸಹ ಅಧ್ಯಾಪಕನಾಗಿದ್ದ. ಇಂಗ್ಲೆಂಡಿನ ರಾಯಲ್ ಸೊಸೈಟಿಯ ವಿದೇಶೀಯ ಸದಸ್ಯನೂ ಆಗಿದ್ದ. ಪ್ರಸಿದ್ಧವಾದ ಸಿಲ್ವೆಸ್ಟರ್ ಪಾರಿತೋಷಿಕ ಪದಕವನ್ನು 1916ರಲ್ಲಿ ಪಡೆದ.
ಗಣಿತದಲ್ಲಿನ ಸಾಧನೆ
[ಬದಲಾಯಿಸಿ]ಜ್ಯಾಮಿತಿಯಲ್ಲಿ ಡಾರ್ಬೋನ ಮೊದಮೊದಲ ಲೇಖನಗಳು (1864-66) ಲಂಬಾತ್ಮಕ ತಲಗಳಿಗೆ ಸಂಬಂಧಿಸಿದವು. 1873ರಲ್ಲಿ ಪ್ರಕಟಿಸಿದ "ಗಮನಾರ್ಹವಾದ ವಕ್ರರೇಖೆಗಳು ಮತ್ತು ಬೈಜಿಕ ತಲಗಳ ಒಂದು ವಿಶಿಷ್ಟವರ್ಗ" ಎಂಬ ಉಪಾಖ್ಯಾನದಲ್ಲಿ ಚಾಕ್ರಿಕಗಳು (cycloids) ಎಂಬ ಒಂದು ವಿಶೇಷ ಜಾತಿಯ ತಲಗಳ ಸಿದ್ಧಾಂತವನ್ನು ಡಾರ್ಬೋ ಪ್ರತಿಪಾದಿಸಿದ್ದಾನೆ. "ತಲಗಳ ಸಾಮಾನ್ಯ ಸಿದ್ಧಾಂತ ಮತ್ತು ಜ್ಯಾಮಿತಿಯಲ್ಲಿ ಕಲನಶಾಸ್ತ್ರದ ಅನ್ವಯಗಳು" ಎಂಬುದು ಡಾರ್ಬೋನ ಪ್ರಮುಖವಾದ ಗ್ರಂಥ. ಇದರಲ್ಲಿ ಅವಕಲ ಜ್ಯಾಮಿತಿಯನ್ನು ದೀರ್ಘವಾಗಿ ಪ್ರತಿಪಾದಿಸಿದ್ದಾನೆ. "ಲಂಬಾತ್ಮಕ ವ್ಯವಸ್ಥೆಗಳು ಮತ್ತು ವಕ್ರೀಯ ನಿರ್ದೇಶಕಗಳು" ಎಂಬ ಗ್ರಂಥವನ್ನು 1898ರಲ್ಲಿ ಪ್ರಕಟಿಸಿದ. ಇದರಲ್ಲಿ ಪರಸ್ಪರ ಲಂಬಾತ್ಮಕ ತಲಗಳ ವಿಷಯದಲ್ಲಿ ಡ್ಯೂಪಿನ್ ಎಂಬಾತನ ಸಿದ್ಧಾಂತಗಳನ್ನು ಡಾರ್ಬೋ ವ್ಯಾಪಕವಾಗಿ ಸಾರ್ವತ್ರೀಕರಿಸಿರುವನು. ಗಣಿತ ವಿಶ್ಲೇಷಣೆಯಲ್ಲೂ ಈತನ ಸಂಶೋಧನೆಗಳು ಸಾರವತ್ತಾದವು. 1870ರ ಲೇಖನ ಒಂದರಲ್ಲಿ ಎರಡನೆಯ ದರ್ಜೆಯ ಆಂಶಿಕ ಅವಕಲ ಸಮೀಕರಣಗಳನ್ನು ಬಿಡಿಸುವ ಹೊಸ ಮಾರ್ಗವೊಂದನ್ನು ಡಾರ್ಬೋ ಪ್ರತಿಪಾದಿಸಿದ್ದಾನೆ. ರೀಮಾನ್ ಅನುಕಲನ ಸಿದ್ಧಾಂತದಲ್ಲಿ ಡಾರ್ಬೋನ ಪ್ರಮೇಯ ಮತ್ತು ಡಾರ್ಬೋನ ಮಧ್ಯಸ್ಥಮೌಲ್ಯದ ಪ್ರಮೇಯಗಳು ಹೆಸರಾದುವು. ಮಿಶ್ರ ಉತ್ಪನ್ನಗಳ ಸಿದ್ಧಾಂತದಲ್ಲಿ ಕೆಲವು ಮೂಲಭೂತವಾದ ಪ್ರಮೇಯಗಳು ಕೂಡ ಈತನ ಹೆಸರಿನಲ್ಲವೆ. ಬೃಹತ್ ಧನಪೂರ್ಣಾಂಕಗಳ ಉತ್ಪನ್ನಗಳನ್ನು ಅಂದಾಜು ಮಾಡುವ ಸಿದ್ಧಾಂತವನ್ನು ಒಳಗೊಂಡ ಒಂದು ಲೇಖನವನ್ನು ಈತ 1878ರಲ್ಲಿ ಪ್ರಕಟಿಸಿದ. ಇದರಿಂದ ತ್ರಿಕೋನ ಮಿತೀಯ ಶ್ರೇಣಿಗಳ ಗುಣವಿಶೇಷಗಳನ್ನು ಸಂಶೋಧಿಸಲು ಅನುಕೂಲವಾಯಿತು.