ಹೆನ್ರಿ ಆಸ್ಟಿನ್ ಡಾಬ್ಸನ್
ಹೆನ್ರಿ ಆಸ್ಟಿನ್ ಡಾಬ್ಸನ್ (1840-1921). ಇಂಗ್ಲಿಷ್ ಕವಿ, ಪ್ರಬಂಧಕಾರ ಮತ್ತು ಹೆಸರಾಂತ ಚರಿತ್ರಕಾರ.
ಬದುಕು
[ಬದಲಾಯಿಸಿ]ಹುಟ್ಟಿದ್ದು ಪ್ಲಿಮತ್‍ನಲ್ಲಿ. ತಂದೆ ಸಿವಿಲ್ ಎಂಜಿನಿಯರ್. ಎಂಟು ವರ್ಷದವನಾಗಿದ್ದಾಗ ಇಡೀ ಕುಟುಂಬ ಹಾಲಿವುಡ್‍ಗೆ ತೆರಳಿತು. ಈತನ ವಿದ್ಯಾಭ್ಯಾಸ ಬೊಮ್ಯಾರಸ್ ಗ್ರಾಮರ್ ಶಾಲೆಯಲ್ಲೂ ಸ್ಟ್ರಾಸ್‍ಬರ್ಗ್‍ನ ಗಿಮ್‍ನಸೆಯಲ್ಲೂ ನಡೆಯಿತು. ತಂದೆಯಂತೆ ಮಗನೂ ಎಂಜಿನಿಯರ್ ಆಗಬಹುದೆಂಬ ನಿರೀಕ್ಷೆ ಆ ಕುಟುಂಬಕ್ಕೆ ಇತ್ತು. ಆದರೆ ಈತ ತನ್ನ ಒಲವನ್ನು ಸಾಹಿತ್ಯದ ಕಡೆ ಹರಿಸಿದ. ಈತ ತನ್ನ ಶಾಲಾದಿನಗಳಲ್ಲೇ ಅನೇಕ ಕವನಗಳನ್ನು ರಚಿಸಿದ. ಆಸ್ಟಿನ್ ಮೆಕ್ಯಾನಿಕಲ್ ನಕಾಶೆಗಾರನಾಗಿ (ಡ್ರಾಫ್ಟ್ಸ್‍ಮನ್) ಪರಿಣತಿ ಹೊಂದಿದ್ದರೂ ಎಂಜಿನಿಯರ್ ಆಗುವುದಕ್ಕೆ ಇಷ್ಟಪಡಲಿಲ್ಲ. ಸರ್ಕಾರಿ ನೌಕರಿಯೊಂದನ್ನು ಹಿಡಿದು ಗುಮಾಸ್ತನಾದ. ಅಲ್ಲೇ ನಿವೃತ್ತಿಹೊಂದುವವರೆಗೆ ಉಳಿದ (1901). ದೃಷ್ಟಿಮಾಂದ್ಯ ಹಾಗೂ ವಾತರೋಗಪೀಡಿತನಾದ ಈತ ಹೃದಯಾಘಾತದಿಂದ ಸತ್ತ.
ಸಾಹಿತ್ಯ
[ಬದಲಾಯಿಸಿ]ವಿನ್ಯೆಟ್ ಇನ್ ರೈಮ್ (1873) ಮತ್ತು ಪ್ರಾವರ್ಟ್ಸ್ ಇನ್ ಪೊರ್ಸ್‍ಲಿನ್ (1877), ಅಟ್ ದಿ ಸೈನ್ ಆಫ್ ದಿ ಲೈರ್ (1885)- ಇವು ಈತನ ಕವನ ಸಂಕಲನಗಳು. 18ನೆಯ ಶತಮಾನದ ವಿಮರ್ಶಕರಲ್ಲಿ ಈತನ ಹೆಸರು ಪ್ರಮುಖವಾದುದು. ಈತನ ಎಯ್ಟೀಂತ್ ಸೆಂಚುರಿ ವಿನ್ಯೆಟ್ಸ್ (1892, 1894, 1896) ಎಂಬ ಪ್ರಬಂಧಗಳ (ಮೂರು ಸಂಪುಟಗಳು) ಸಂಕಲನ ಪ್ರಸಿದ್ಧ ಗ್ರಂಥ. ಫೀಲ್ಡಿಂಗ್ (1883); ರಿಚರ್ಚ್ ಸ್ಟೀಲ್ (1886); ಗೋಲ್ಡ್ ಸ್ಮಿತ್ (1888); ಹಾರಸ್ ವಾಲ್‍ಪೋಲ್ (1890); ಸ್ಯಾಮ್ಯುಯಲ್ ರಿಚರ್ಡ್‍ಸನ್ (1902); ಫ್ಯಾನಿಬರ್ನೆ (1903) ಮತ್ತು ಹೋಗಾರ್ತ್ (1897)- ಇವು ಹಲವಾರು ಕವಿಗಳನ್ನು ಕುರಿತು ಈತ ಬರೆದ ಜೀವನ ಚರಿತ್ರೆಗಳು.