ಮಲಿಕ್ ಮಹಮದ್ ಜಾಯಸಿ
ಮಲಿಕ್ ಮಹಮದ್ ಜಾಯಸಿ (1520-1600). ಮಧ್ಯಕಾಲೀನ ಹಿಂದೀ ಸಾಹಿತ್ಯದ ಪ್ರೇಮಾಖ್ಯಾನ ಕವಿಗಳಲ್ಲಿ ಒಬ್ಬ ; ಫಕೀರ. ಜಾತಿಯಲ್ಲಿ ಮುಸಲ್ಮಾನನಾದರೂ ಪ್ರವೃತ್ತಿಯಿಂದ ಉದಾರ ದೃಷ್ಟಿಯುಳ್ಳವನಾಗಿ ಭಾರತೀಯ ಸಂಸ್ಕೃತಿ ದರ್ಶನದಿಂದ ತೀವ್ರವಾಗಿ ಪ್ರಭಾವಿತನಾಗಿ ಇಲ್ಲಿನ ಅನುಭಾವದ ಸೋಪಾನದ ಮೆಟ್ಟಲುಗಳನ್ನೆ ತನ್ನ ಸಿದ್ಧಾಂತಗಳಿಗನುಗುಣವಾಗಿ ಅಳವಡಿಸಿಕೊಂಡು ಭಾರತೀಯ ಕಥಾಚೌಕಟ್ಟಿನಲ್ಲಿ ಸೂಫಿ ಪ್ರೇಮತತ್ತ್ವಗಳನ್ನು ನಿರೂಪಿಸಿದ್ದಾನೆ. ತನ್ನ ಸುತ್ತಿನ ಪರಿಸರವನ್ನು ಪ್ರತಿಬಿಂಬಿಸುವಂಥ ಕಾವ್ಯಗಳನ್ನು ರಚಿಸಿದ್ದಾನೆ.
ಬದುಕು
[ಬದಲಾಯಿಸಿ]ಈತ ಹುಟ್ಟಿದ್ದು ಜಾಯಸ್‍ನಲ್ಲಿ. ತಂದೆ ಮಲ್ಲಿಕ್ ಶೇಖ್ ಮನುರೇಜ್. ತಾಯಿ ಮಾನಿಕಪುರದ ಶೇಖ್ ಅಲಹಾಬಾದ್‍ರವರ ಪುತ್ರಿ (ಹೆಸರು ತಿಳಿದುಬಂದಿಲ್ಲ). ಜಾಯಸಿ ತುಂಬ ಕುರೂಪಿಯಾಗಿದ್ದ. ಚಿಕ್ಕವನಾಗಿದ್ದಾಗಲೇ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥನಾದ ಈತ ಸಾಧುಸಂತರ ಸಹವಾಸದಲ್ಲಿರತೊಡಗಿದ. ಈತನ ಗುರುಗಳ ಬಗ್ಗೆ ವಿಮರ್ಶಕರಲ್ಲಿ ಒಂದು ಅಭಿಪ್ರಾಯವಿಲ್ಲವಾದರೂ ಸೂಫಿಧರ್ಮದ ನಾಲ್ಕು ಪ್ರಮುಖ ಸಂಪ್ರದಾಯಗಳಲ್ಲಿ ಒಂದಾದ ಚಿಶ್ತಿ ಸಂಪ್ರದಾಯದ ಶಿಷ್ಯಪರಂಪರೆಯಲ್ಲಿ 12ನೆಯವನಾದ ಶೇಖ್ ಮಇನುದ್ದೀನ್ ಈತನ ಗುರುಗಳಲ್ಲಿ ಪ್ರಮುಖನೆಂಬುದು ನಿರ್ವಿವಾದ. ಜಾಯಸಿ ವೃತ್ತಿಯಿಂದ ರೈತನಾಗಿದ್ದ. ಒಮ್ಮೆ ಮನೆ ಕುಸಿದುಬಿದ್ದಾಗ ಅದರ ಕೆಳಗೆ ಸಿಕ್ಕಿ ಈತನ ಏಳು ಜನ ಮಕ್ಕಳೂ ಸಾವನ್ನಪ್ಪಿದರು. ಇದರಿಂದ ವಿರಾಗ ತಾಳಿದ ಕವಿ ಫಕೀರನಾಗಿ ಊರೂರು ಅಲೆದ. ಅಲ್ಲಿಂದಾಚೆಗೆ ಈತನ ಹೃದಯ ದೇವರ ಮರ್ಮವನ್ನರಿಯಲು ಎಷ್ಟು ತೀವ್ರವಾಗಿ ಯತ್ನಿಸಿತೆಂಬುದನ್ನು ರತ್ನಸೇನನ ಪಾತ್ರದ (ಪದ್ಮಾವತ್ ಕಾವ್ಯದ ಒಂದು ಪಾತ್ರ) ಹಿನ್ನೆಲೆಯಲ್ಲಿ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
ಕವಿತ್ವ
[ಬದಲಾಯಿಸಿ]ಜಾಯಿಸಿ ಹೆಚ್ಚು ಓದಿಬರೆದವನಲ್ಲದಿದ್ದರೂ ಬಹುಶ್ರುತನಾಗಿದ್ದನೆಂಬುದಂತೂ ನಿಜ. ಅನುಭವದಿಂದ ಬಂದ ಕಾವ್ಯ ವ್ಯಾಕರಣ ಪುರಾಣಾದಿಗಳ ಜ್ಞಾನ ಮಾತ್ರ ಈತನ ಕೃತಿಗಳಲ್ಲಿ ಎದ್ದುಕಾಣುತ್ತದೆ.
ಜಾಯಸಿ ತನ್ನ ಯುಗದ ಅತ್ಯಂತ ಪ್ರತಿಭಾನ್ವಿತ ಕವಿಗಳಲ್ಲೊಬ್ಬ ಎಂಬುದು ಈತ ಬರೆದಿರುವ 24 ಗ್ರಂಥಗಳ ಬೃಹತ್ತು ಹಾಗೂ ಮಹತ್ತಿನಿಂದ ಅರಿವಾಗುತ್ತದೆ. ಅವುಗಳಲ್ಲಿ ಪ್ರಮುಖವಾದುವೆಂದರೆ ಪದ್ಮಾವತ್, ಅಖರಾವಟ್, ಅಖಿರಿ ಕಲಾಮ್, ಮಹರೀ ಬಾಯಿಸಿ, ಚಿತ್ರಾವತ್, ಪೋಸ್ತಿನಾಮಾ. ಪ್ರೇಮಾಖ್ಯಾನ ಕಾವ್ಯ ಪದ್ಮಾವತ್ ಈತನ ಮೇರುಕೃತಿ. ಪ್ರಬಂಧಕಾವ್ಯದ ಎಲ್ಲ ಲಕ್ಷಣಗಳನ್ನೂ ಮೈಗೂಡಿಸಿಕೊಂಡು ರೂಪುಗೊಂಡಿರುವ ಮಹಾಕಾವ್ಯ. ಉದಾತ್ತ ಐತಿಹಾಸಿಕ ವಸ್ತು, ಮಾರ್ಮಿಕ ಅಭಿವ್ಯಕ್ತಿ, ಭಾಷೆಯ ವಿಲಕ್ಷಣ ಶಕ್ತಿ, ಬದುಕಿನ ಸರ್ವಾಂಗೀಣ ಚಿತ್ರಣ ಹಾಗೂ ದರ್ಶನಗಳಿಂದಾಗಿ ಈ ಕೃತಿ ಮಧ್ಯಯುಗದ ಶ್ರೇಷ್ಠ ಕಾವ್ಯವಷ್ಟೇ ಅಲ್ಲ, ಸಂವೇದನೆ ಹಾಗೂ ಮೌಲ್ಯಗಳ ದೃಷ್ಟಿಯಿಂದ ಆಧುನಿಕ ಯುಗದ ಗಟ್ಟಿಕಾವ್ಯವೂ ಹೌದು. 1924ರಲ್ಲಿ ಪಂಡಿತ ರಾಮಚಂದ್ರ ಶುಕ್ಲರವರು ತಮ್ಮ ವಿಮರ್ಶಾ ಲೇಖನದೊಂದಿಗೆ ಈ ಕೃತಿಯನ್ನು ಕಾಶಿಯ ನಾಗರೀಪ್ರಚಾರಿಣಿ ಸಭೆಯಿಂದ ಪ್ರಕಟಿಸಿದರು.
ಪದ್ಮಾವತ್ ಕಾವ್ಯರಚನೆಯ ಕಾಲದ ಬಗ್ಗೆ ವಿದ್ವಾಂಸರಲ್ಲಿ ಒಂದು ಅಭಿಪ್ರಾಯವಿಲ್ಲ. ಸದ್ಯಕ್ಕೆ ಅದು 1540-42ರ ಸುಮಾರಿನಲ್ಲಿ ಹುಟ್ಟಿರಬಹುದೆಂದು ಹೇಳಬಹುದು. ಕಥಾವಿಸ್ತಾರ, ಸಾಹಿತ್ಯಿಕ ದೃಷ್ಟಿ ಮತ್ತು ಸೂಫಿಸಿದ್ಧಾಂತಗಳ ಅಭಿವ್ಯಂಜನೆಯ ದೃಷ್ಟಿಯಿಂದ ಪದ್ಮಾವತ್ ಕಥೆಯ ಪೂರ್ವಾರ್ಧ ತುಂಬ ಮಹತ್ತ್ವವುಳ್ಳದ್ದು. ಉತ್ತರಾರ್ಧದ ಕಥೆ ಐತಿಹಾಸಿಕವಾಗಿ ಮಹತ್ತ್ವದ್ದಾಗುತ್ತದೆ. ಪೂರ್ವಾರ್ಧದಲ್ಲಿ ಸಾಧಕನ (ಜೀವಾತ್ಮ) ಕಷ್ಟಗಳನ್ನು ಮತ್ತು ಅವನ ಪ್ರೇಮಭಾವನೆಗಳನ್ನು ಸುಂದರವಾಗಿ ಅಭಿವ್ಯಂಜಿಸಲಾಗಿದೆ. ಹಾಗೆ ನೋಡಿದರೆ ಇಡೀ ಕಾವ್ಯವನ್ನು ಒಂದು ಸುಂದರ ರೂಪಕ ಕಾವ್ಯವೆಂದೇ ಹೇಳಬೇಕು. ಲೌಕಿಕ ಕಥಾಪ್ರಸಂಗಗಳಿಗೆ ಅನುಭಾವದ ಅರ್ಥಗಳನ್ನು ತುಂಬಿ ವಿಶೇಷವಾದ ಮಹತ್ತ್ವವನ್ನು ಕಲ್ಪಿಸಿರುವುದು ಜಾಯಸಿಯ ರಹಸ್ಯವಾದದ ಪ್ರಮುಖ ವೈಶಿಷ್ಟ್ಯ. ಸೂಫಿ ಸಂಪ್ರದಾಯದಲ್ಲಿ ಪುರುಷ ಜೀವಾತ್ಮನ, ಸ್ತ್ರೀ ಪರಮಾತ್ಮನ ಪ್ರತೀಕವಾಗಿರುತ್ತಾರೆ. ಇಲ್ಲಿ ರತ್ನ ಸೇನ ಆತ್ಮನ ಹಾಗೂ ಪದ್ಮಾವತಿ ಪರಮಾತ್ಮನ ಅಲೌಕಿಕ ಸೌಂದರ್ಯಗಳ ಪ್ರತೀಕವಾಗಿದ್ದಾರೆ. ಹೀಗೆ ಇಡೀ ಕಾವ್ಯ ಪರಮಾತ್ಮನ ಅನಂತ ತೇಜಸ್ಸಿನತ್ತ ಜೀವಾತ್ಮನ ತೆರಳುವಿಕೆಯ ಸಮಯದಲ್ಲಿನ ದ್ವಂದ್ವ, ಸಂಘರ್ಷಗಳ ವಿಸ್ತøತ ವ್ಯಾಖ್ಯೆಯಾಗಿದೆ.
ಅಯೋಧ್ಯೆ, ಆಗ್ರಾ, ಬಂದೇಲ್‍ಖಂಡ, ನಾಗಪುರ, ಮಧ್ಯ ಪ್ರದೇಶದಲ್ಲಿ ಪ್ರಚಲಿತವಾಗಿದ್ದ ಆಡುಮಾತಿನ ಅವಧಿ ಭಾಷೆಯಲ್ಲಿ ರಚಿತವಾಗಿರುವ ಪದ್ಮಾವತ್‍ನಲ್ಲಿ ಮಧ್ಯಯುಗದ ಸಾಂಸ್ಸ್ಕೃತಿಕ ಅಧ್ಯಯನಕ್ಕೆ ಅನುವು ಮಾಡಿಕೊಡುವ ಮಹತ್ತ್ವಪೂರ್ಣ ಅಂಶಗಳಿವೆ. ಈ ಹಿನ್ನೆಲೆಯಲ್ಲಿ ಜಾಯಸಿಯ ಇತರ ಕಾವ್ಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಪ್ರೇಮಾಖ್ಯಾನ ಕಾವ್ಯಗಳಿಗೊಂದು ನಿಶ್ಚಿತ ರೂಪ ಕೊಟ್ಟ ಜಾಯಸಿಯನ್ನು ಅನುಕರಿಸಿದ ಮಂಝನ್, ಉಸ್ಮಾನ್ ಮುಂತಾದವರು ಈ ದಿಶೆಯಲ್ಲಿ ಒಂದುಪರಂಪರೆಯನ್ನೇ ಸೃಷ್ಟಿಸಿದ್ದಾರೆ.