ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಥಾಮಸ್ ಟೆಲ್ಫರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಥಾಮಸ್ ಟೆಲ್ಫರ್ಡ್ (1757-1834). ಬ್ರಿಟಿಷ್ ವಾಸ್ತು ಶಿಲ್ಪಿ.

ಜನನ ಸ್ಕಾಟ್ಲೆಂಡಿನ ಡಂಫ್ರಿಷೈರಿನಲ್ಲಿ (9-8-1757).

ಸಾಧನೆಗಳು

[ಬದಲಾಯಿಸಿ]

ಓದಿದ್ದು ರಸಾಯನ ವಿಜ್ಞಾನವಾದರೂ ಕೆಲಸ ಮಾಡಿದ್ದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ. ಇದರೊಂದಿಗೆ ವಾಸ್ತು ಶಿಲ್ಪವನ್ನು ಅಧ್ಯಯಿಸಿ ಇಗರ್ಜಿಗಳ ಶೈಲಿ ಹಾಗೂ ರಚನಾ ಕ್ರಮಗಳಲ್ಲಿ ಪಾರಂಗತನಾದ. ಅನತಿಕಾಲದಲ್ಲಿಯೇ ಈತನಿಗೆ ಎಡಿನ್‍ಬರೋ ನಗರದಲ್ಲಿ ಹಲವಾರು ಕಟ್ಟಡಗಳ ಮೇಲ್ವಿಚಾರಣೆಯ ಅವಕಾಶ ಉಂಟಾಗಿ ಭಾರಿ ಕಟ್ಟಡಗಳ ರಚನೆಯಲ್ಲಿ ನಿಷ್ಣಾತನೆನ್ನಿಸಿದ. ಇದರಿಂದಾಗಿ ಲಂಡನ್ನಿನ ಸಾರ್ವಜನಿಕ ಕಟ್ಟಡಗಳ ನಿಯಂತ್ರಣಾಧಿಕಾರ ಲಭಿಸಿ (1782) ಅಲ್ಲಿ ಹೆಸರಾಂತ ಕಟ್ಟಡಗಳ ನಿರ್ಮಾಣದ ಅವಕಾಶಕ್ಕೆ ದಾರಿಯಾಯಿತು. 1793ರಲ್ಲಿ ಎಲ್ಲೆಸ್ಮಿಯರ್ ಕಾಲುವೆ ನಿರ್ಮಾಣಕ್ಕೆ ನೇಮಿಸಲ್ಪಟ್ಟು ಆ ಕೆಲಸವನ್ನು ತ್ವರಿತವಾಗಿಯೂ ಯಶಸ್ವಿಯಾಗಿಯೂ ನೆರವೇರಸಿದ. ಇಂಗ್ಲೆಂಡಿನ ಮತ್ತು ಎಡಿನ್‍ಬರೋ ರಾಯಲ್ ಸೊಸೈಟಿಗಳ ಸದಸ್ಯತ್ವ 1827ರಲ್ಲಿ ಈತನಿಗೆ ದೊರೆಯಿತು. ಇದೇ ವೇಳೆ ಈತ ಕೈಗೊಂಡ ಅನೇಕ ಶಿಲ್ಪಗಳಲ್ಲಿ ಕಲಾ ಮತ್ತು ಸೃಜನ ಚಾತುರ್ಯಗಳನ್ನು ಕಾಣಬಹುದು. 1795ರಿಂದ 1834ರ ಅಂತರದ ನಲವತ್ತು ವರ್ಷಗಳ ಅವಧಿಯಲ್ಲಿ ಟೆಲ್‍ಫರ್ಡ ಸಾಧಿಸಿದ ತಾಂತ್ರಿಕ ಮಹಾಕಾರ್ಯಗಳ ಯಾದಿಯಲ್ಲಿ ಸವರನ್ ನದಿಯ ಉಕ್ಕಿನ ಸೇತುವೆ (1794-98) ಡೀನ್ ಕಣಿವೆಗೆ ಅಡ್ಡವಾಗಿ ನಿರ್ಮಿಸಿದ ಸೇತುವೆ, ಕೆಲಿಡೋನೆಯನ್ ಯಾನ ಕಾಲುವೆ. ಮನೈ ಭೂಕಂಠದ ತೂಗುಸೇತುವೆ (1819-25), ಗೋಥಾ ಕಾಲುವೆ. (1808-10) ಇಂಗ್ಲೆಂಡಿನ ಅನೇಕ ಹೆದ್ದಾರಿಗಳು. ಬರ್ಮಿಂಗ್ ಹ್ಯಾಮ್ ಲಿವರ್‍ಪೂಲ್‍ಗಳ ನಡುವಣ ಕಾಲುವೆ (1810-14), ಟೆಕ್ಸ್‍ಬರಿ ಗ್ಲಾಸ್ಟರ್‍ಗಳಲ್ಲಿಯ ಸೇತುವೆಗಳು, ಎಡಿನ್‍ಬರೋನಡೀನ್ ಸೇತುವೆ (1831) ಗ್ಲಾಸ್ಗೋದ ಕ್ಲೈಡ್ ಸೇತುವೆ-ಮುಖ್ಯವಾದವು. ಇವುಗಳ ಜೊತೆಗೆ ಇವನೇ ಡೋವರ್, ಅಬರ್‍ಡೀನ್, ಡಂಡೀ ಮುಂತಾದೆಡೆಗಳಲ್ಲಿಯ ಬಂದರುಗಳನ್ನು ವಿಸ್ತರಿಸಿ ಅಭಿವೃದ್ಧಿಪಡಿಸಿದ. ಲಂಡನ್ನಿನ ಸೇಂಟ್ ಕ್ಯಾಥರೀನ್ ಡಾಕ್ ಎಂಬ ನದೀರೇವು ಈತನ ಶಿಲ್ಪ ಕೌಶಲದ ಬಗ್ಗೆ ಹೆಗ್ಗುರುತಾಗಿ ಉಳಿದಿದೆ.




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: