ವಿಷಯಕ್ಕೆ ಹೋಗು

ಲಿಂಡನ್ ಬೇನ್ಸ್ ಜಾನ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಿಂಡನ್ ಬೇನ್ಸ್ ಜಾನ್ಸನ್

ಲಿಂಡನ್ ಬೇನ್ಸ್ ಜಾನ್ಸನ್ (1908-1973) . ಅಮೆರಿಕ ಸಂಯುಕ್ತ ಸಂಸ್ಥಾನಗಳ 36ನೆಯ ಅಧ್ಯಕ್ಷ. ಅಧಿಕಾರಸ್ಥ ಅಧ್ಯಕ್ಷ ಜಾನ್ ಎಫ್ ಕೆನಡಿಯವರು ಗುಂಡೇಟಿಗೆ ತುತ್ತಾಗಿ ಮರಣ ಹೊಂದಿದಾಗ 1963ರಲ್ಲಿ ಅಧ್ಯಕ್ಷರಾದರು.

ಬದುಕು , ಸಾಧನೆ

[ಬದಲಾಯಿಸಿ]

ಜಾನ್ಸನರ ಜನನ 1908ರ ಆಗಸ್ಟ್ 27ರಂದು. ಟೆಕ್ಸಸಿನ ಜಿಲೆಸ್ಟಿ ಕೌಂಟಿಯ ಸ್ಟೋನ್ ವಾಲ್ ಎಂಬ ಸಣ್ಣ ಪಟ್ಟಣವೊಂದರಲ್ಲಿ. ಸಾಮ್ಯುಯೆಲ್ ಈಲಿ ಜಾನ್ಸನ್ ಮತ್ತು ರೆಬೆಕಾ ಬೇನ್ಸ್‍ಜಾನ್ಸನರ ಮೊದಲನೆಯ ಮಗ. ತಂದೆ ಪಶುಪಾಲಕ, ಸ್ವತ್ತು ವ್ಯವಹಾರ ಅಭಿಕರ್ತ, ರಾಜ್ಯ ವಿಧಾನಮಂಡಲ ಸದಸ್ಯ.

ಲಿಂಡನ್ ಬೇನ್ಸ್ ಜಾನ್ಸನ್ ಸಮೀಪದ ಜಾನ್ಸನ್ ಸಿಟಿಯಲ್ಲಿ ಓದಿ, 15ನೆಯ ವರ್ಷದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದರು. ಅನಂತರ ಲಿಫ್ಟ್ ನಡೆಸುವುದು, ಕಾರು ತೊಳೆಯುವುದೇ ಮುಂತಾದ ಅನೇಕ ಕೆಲಸಗಳನ್ನು ಮಾಡಿ ಕ್ಯಾಲಿಫೋರ್ನಿಯದವರೆಗೆ ಹೋದರು. ಪುನಃ ಟೆಕ್ಸಸಿಗೆ ಹಿದಿರುಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿ, ಸಾನ್ ಮಾರ್ಕೋಸಿನ ಸೌತ್ ವೆಸ್ಟರ್ನ್ ಶಿಕ್ಷಕರ ಕಾಲೇಜು ಸೇರಿದರು. ಹಣದ ಕೊರತೆಯಿಂದಾಗಿ ನಡುವೆ ಒಂದು ವರ್ಷವಿದ್ಯಾಭ್ಯಾಸ ನಿಲ್ಲಿಸಬೇಕಾಗಿ ಬಂತು. ದಕ್ಷಿಣ ಟೆಕ್ಸಸಿನ ಸಣ್ಣ ಪಟ್ಟಣವೊಂದರ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ತಮ್ಮ 22ನೆಯ ವಯಸ್ಸಿನಲ್ಲಿ-ಎಂದರೆ ಕಾಲೇಜಿಗೆ ಸೇರಿದ ಅನಂತರ ಕೇವಲ ಮೂರೂವರೆ ವರ್ಷಗಳಲ್ಲಿ-ಲಿಂಡನ್ ಜಾನ್ಸನ್ ಬ್ಯಾಚಲರ್ ಆಫ್ ಸೈನ್ಸ್ ಡಿಗ್ರಿ ಪಡೆದರು. ಅನಂತರ ಅವರು ಹೂಸ್ಟನಿನ ಒಂದು ಹೈಸ್ಕೂಲಿನಲ್ಲಿ ಶಿಕ್ಷಕರಾದರು. ಎರಡು ವರ್ಷಗಳ ಅನಂತರ ಈ ಕೆಲಸ ಬಿಟ್ಟು ಕಾಂಗ್ರೆಸ್ ಸದಸ್ಯ ರಿಚರ್ಡ್ ಎಂ.ಕ್ಲೆಬರ್ಗರಿಗೆ ಕಾರ್ಯದರ್ಶಿಯಾದರು; ಅದೇ ಸಮಯದಲ್ಲಿ ವಾಷಿಂಗ್ಟನ್‍ನಲ್ಲಿ ಜಾರ್ಜ್‍ಟೌನ್ ವಿಶ್ವವಿದ್ಯಾಲಯದ ನ್ಯಾಯಶಾಲೆಯ ರಾತ್ರಿ ತರಗತಿಯಲ್ಲಿ ವಿದ್ಯಾರ್ಥಿಯಾದರು.

1935ರಲ್ಲಿ ಅವರಿಗೆ ಟೆಕ್ಸಸಿಗೆ ಹಿಂದಿರುಗುವ ಅವಕಾಶ ದೊರೆಯಿತು. ಅಧ್ಯಕ್ಷ ಫ್ರಾಂಕ್ಲಿನ್ ಡಿ.ರೂಸ್‍ವೆಲ್ಟರು ಜಾನ್ಸನರನ್ನು ಆ ವರ್ಷ ರಾಷ್ಟ್ರೀಯ ಯುವಜನ ಸಂಘದ ಟೆಕ್ಸಸ್ ಸಂಸ್ಥಾನದ ಆಡಳಿತಗಾರರನ್ನಾಗಿ ನೇಮಕ ಮಾಡಿದರು. 1937ರಲ್ಲಿ ರಾಷ್ಟ್ರದ ಶ್ರೇಷ್ಠ ರಾಷ್ಟ್ರೀಯ ಯುವಜನ ಸಂಘದ ಆಡಳಿತಗಾರರೆಂಬ ಪ್ರಶಸ್ತಿ ಅವರಿಗೆ ಬಂತು. ಅನಂತರ ಜಾನ್ಸನ್ ಆ ಹುದ್ದೆಗೆ ರಾಜೀನಾಮೆ ಕೊಟ್ಟರು. ಕಾಂಗ್ರೆಸಿನ ಸ್ಥಾನವೊಂದಕ್ಕೆ ನಡೆದ ಸ್ಪರ್ಧೆಯಲ್ಲಿ ಒಂಬತ್ತು ಉಮೇದುವಾರರನ್ನು ಸೋಲಿಸಿ ಗೆದ್ದರು. ಎರಡನೆಯ ಮಹಾಯುದ್ಧ ಆರಂಭವಾದಾಗ 6` 3`` ಎತ್ತರದ ಶಾಸಕ ಜಾನ್ಸನ್ ಕಾರ್ಯನಿರತ ಮಿಲಿಟರಿ ಸೇವೆಗೆ ಪ್ರವೇಶಿಸಿದ ಪ್ರತಿನಿಧಿಸಭಾ ಸದಸ್ಯರಲ್ಲಿ ಮೊದಲಿಗರು. ನ್ಯೂಗಿನಿಯಲ್ಲಿ ಶತ್ರು ನೆಲೆಗಳ ಮೇಲೆ ನಡೆಸಿದ ಹಾರಾಟಗಳಲ್ಲಿ ತೋರಿಸಿದ ಧೈರ್ಯಕ್ಕಾಗಿ ಅವರಿಗೆ ರಜತ ನಕ್ಷತ್ರ ಪದಕ ಬಂತು.

ಪ್ರತಿನಿಧಿಸಭೆಗೆ ಎರಡು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಗಳಲ್ಲಿ ಇವರು ಅನುಕ್ರಮವಾಗಿ ಐದು ಸಾರಿ ಆಯ್ಕೆಗೊಂಡು. 1948ರಲ್ಲಿ ಜಾನ್ಸನ್ ಸೆನೆಟಿಗೆ ಸ್ಪರ್ಧಿಸಿದರು. ಅದರಲ್ಲೂ ಅವರಿಗೆ ಜಯ ಲಭಿಸಿತು. ಡೆಮಾಕ್ರಾಟಿಕ್ ಸಹಸದಸ್ಯರು ಜಾನ್ಸನರನ್ನು 83ನೆಯ ಕಾಂಗ್ರೆಸಿನ ಅಲ್ಪಸಂಖ್ಯಾತ ಮುಖಂಡರೆಂದು ಸರ್ವಾನುಮತದಿಂದ ಆಯ್ಕೆಮಾಡಿದರು. ಆ ಸ್ಥಾನಕ್ಕೆ ಆಯ್ಕೆಯಾದವರಲ್ಲಿ ಅವರೇ ಅತ್ಯಂತ ಕಿರಿಯರು. ಅನಂತರ 84, 85 ಮತ್ತು 86ನೆಯ ಕಾಂಗ್ರೆಸ್‍ಗಳಲ್ಲಿ ಡೆಮೊಕ್ರಾಟರು ಮತ್ತೆ ಬಹುಮತ ಪಡೆದಾಗ, ಅವರನ್ನು ಬಹುಸಂಖ್ಯಾತ ಮುಖಂಡರೆಂದು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ತಮ್ಮ ಮುಖಂಡತ್ವದ ಹೊಣೆಯ ನಿರ್ವಹಣೆಯೊಂದಿಗೆ ಜಾನ್ಸನರು ಡೆಮೊಕ್ರಾಟಿಕ್ ನೀತಿ ಸಮಿತಿ, ಡೆಮೊಕ್ರಾಟಿಕ್ ಸ್ಟಿಯರಿಂಗ್ ಸಮಿತಿ ಮತ್ತು ಸೆನೆಟ್‍ನ ಡೆಮೊಕ್ರಾಟಿಕ್ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಅವರು ಸೆನೆಟಿನ ವಾಯುಯಾನ ಮತ್ತು ಬಾಹ್ಯಾಂತರಿಕ್ಷ ವಿಜ್ಞಾನಿಗಳ ಸಮಿತಿಗೂ ಸನ್ನದ್ಧತಾ ತನಿಖಾ (ಪ್ರಿಪೇರ್ಡ್‍ನೆಸ್ ಇನ್ ವೆಸ್ಟಿಗೇಟಿಂಗ್) ಉಪಸಮಿತಿಗೂ ಅಧ್ಯಕ್ಷರಾಗಿದ್ದರು. ಸಶಸ್ತ್ರ ಸೇವೆಗಳ ಮತ್ತು ಹಣ ವಿಂಗಡಣೆಯ ಸಮಿತಿಗಳ ಸದಸ್ಯರಲ್ಲೊಬ್ಬರೂ ಆಗಿದ್ದರು.

1960ರ ಚುನಾವಣೆಯಲ್ಲಿ ಕೆನಡಿಯವರು ಜಾನ್ಸನರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಿ ಆಯ್ಕೆ ಮಾಡಿದರು. ಚುನಾವಣೆಯಲ್ಲಿ ಜಯಗಳಿಸಿದ ಜಾನ್ಸನರು 1961ರಲ್ಲಿ ಉಪಾಧ್ಯಕ್ಷರಾದರು.

ಕೆನೆಡಿಯ ಮರಣಾನಂತರ ಇವರು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದು 1963ರ ನವೆಂಬರ್ 22ರಂದು. 1964ರ ನವೆಂಬರಿನಲ್ಲಿ ನಡೆದ ಚುನಾವಣೆಗಳಲ್ಲಿ ಜಾನ್ಸನ್ ಹಿಂದೆ ಯಾವ ಅಧ್ಯಕ್ಷರೂ ಪಡೆಯದಿದ್ದಷ್ಟು ಹೆಚ್ಚಿನ ಬಹುಮತ ಪಡೆದು ಆಯ್ಕೆಯಾಗಿ 1965ರ ಜನವರಿಯಿಂದ ಮತ್ತೆ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು.

23 ವರ್ಷಗಳ ಕಾಲ ಶಾಸಕರಾಗಿ ಮತ್ತು ಸುಮಾರು ಮೂರು ವರ್ಷಗಳಕಾಲ ಉಪಾಧ್ಯಕ್ಷರಾಗಿ ಅಮೆರಿಕದ ರಾಜಕೀಯ ರಂಗದಲ್ಲಿದ್ದ ಜಾನ್ಸನರ ಅಧ್ಯಕ್ಷ ಪದವಿಯ ಕಾಲದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ಷೇತ್ರಗಳಲ್ಲಿ ಹಲವು ಮಹತ್ವದ ಘಟನೆಗಳು ಜರುಗಿದುವು.

ರಷ್ಯದೊಡನೆ ಸೌಮನ್ಯಸದ ಬೀಜಾಂಕುರವಾದ್ದು ಜಾನ್ಸನರ ಅಧಿಕಾರದ ಅವಧಿಯಲ್ಲಿ. ಕಾನ್ಸುಲೇಟ್‍ಗಳ ವಿನಿಮಯ, ಉಭಯ ದೇಶಗಳ ನಡುವೆ ವ್ಯಾಪಾರೀ ವಿಮಾನಯಾನ, ಬಾಹ್ಯಾಂತರಿಕ್ಷದಲ್ಲಿ ಪರಮಾಣು ಅಸ್ತ್ರಗಳ ನಿಷೇಧ, ಗಗನಯಾತ್ರಿಗಳ ರಕ್ಷಣೆ, ಮುಂತಾದವನ್ನು ಕುರಿತ ಒಡಂಬಡಿಕೆಗಳಾದುವು. ಪರಮಾಣು ಅಸ್ತ್ರಗಳ ವಿಸ್ತರಣೆಯನ್ನು ನಿಷೇಧಿಸುವ ಕರಾರಿಗೆ ಸಹಿಯಾದ್ದು 1968ರಲ್ಲಿ.

ದೇಶೀಯ ರಂಗದಲ್ಲಿ ಅಧ್ಯಕ್ಷ ಜಾನ್ಸನ್ ಮಹಾ ಸಮಾಜದ ಧ್ಯೇಯಸಾಧನೆಗೆ ಅನೇಕ ಕ್ರಮಗಳನ್ನು ಕೈಗೊಂಡರು. 1964, 1965 ಮತ್ತು 1968ರ ಪೌರ ಹಕ್ಕುಗಳ ಕಾಯಿದೆಗಳು, ವಯಸ್ಕರಿಗೆ ವೈದ್ಯಕೀಯ ಸೌಲಭ್ಯಗಳು, ಶಿಕ್ಷಣಕ್ಕೆ ನೆರವು, ಬಡತನದ ವಿರುದ್ಧ ಹೋರಾಟ, ಬಳಕೆದಾರರಿಗೆ ರಕ್ಷಣೆ-ಇವೆಲ್ಲ ಅವರ ಈ ಧ್ಯೇಯಕ್ಕೆ ಬೆಂಬಲವಾದ ಕ್ರಮಗಳು. ಜಾನ್ಸನರ ಆಡಳಿತದಲ್ಲಿ ಜಾರಿಗೆ ಬಂದ ಶಾಸನಗಳು ಹಲವಾರು. 1969ರ ಆದಿಯಲ್ಲಿ ಅಮೆರಿಕದಲ್ಲಿ ದೇಶೀಯ ಸಾಮಾಜಿಕ ಕಾರ್ಯಗಳಿಗೆ ಸಂಬಂಧಿಸಿದಂತೆ 435 ಕಾರ್ಯಕ್ರಮಗಳು ಜಾರಿಯಲ್ಲಿದ್ದುವು; 1965ರಲ್ಲಿ ಇದ್ದ ಇಂಥ ಕಾರ್ಯಕ್ರಮಗಳ ಸಂಖ್ಯೆ ಕೇವಲ 45.

ಜಾನ್ಸನರ ಅಧಿಕಾರಾವಧಿಯಲ್ಲಿ ದೇಶೀಯ ಹಾಗೂ ವಿದೇಶೀಯ ರಂಗಗಳಲ್ಲಿ ಅನೇಕ ಸಫಲ ಸಾಧನೆಗಳಾದರೂ ಅವರ ವಿದೇಶ ನೀತಿಯಲ್ಲಿ ಅತೀವ ನಿರಾಶಾದಾಯಕ ಸೋಲುಂಟಾಯಿತು. ಇದು ಅವರನ್ನು ಹತಾಶರನ್ನಾಗಿ ಮಾಡಿತು. ವಿಯೆಟ್‍ನಾಮ್‍ನಲ್ಲಿ ಶಾಂತಿ ಸ್ಥಾಪಿಸಲು ಅವರಿಗೆ ಸಾಧ್ಯವಾಗಲಿಲ್ಲ. ಬಾಂಬ್ ದಾಳಿಗಳ ನಿಲುಗಡೆಗೆ ಆಜ್ಞೆ ಮಾಡಿ ಪ್ಯಾರಿಸ್‍ನಲ್ಲಿ ಸಂಧಾನವನ್ನು ಅವರು ಆರಂಭಿಸಿದರೂ ಅವರ ಜನಪ್ರಿಯತೆ ಕಡಿಮೆಯಾಯಿತು. ವಿಯೆಟ್‍ನಾಮ್ ಸಮಸ್ಯೆ ಬಗೆಹರಿಯಲಿಲ್ಲ. ಹತಾಶೆಗೊಂಡು ಅವರು ಪುನಃ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ವಿಚಾರ ತ್ಯಜಿಸಿದರು. ಜಾನ್ಸನರ ಪತ್ನಿ ಆಲ್ವಾ (ಲೇಡಿ ಬರ್ಡ್) ಟೇಲರ್. ಅವರ ಮಕ್ಕಳು ಲಿಂಡಾ ಬರ್ಡ್ ಮತ್ತು ಲೂಸಿ ಬೇನ್ಸ್. ಜಾನ್ಸನ್ 1973ರ ಜನವರಿ 22 ರಂದು ತಮ್ಮ ಮನೆಯಲ್ಲಿ ಹಠಾತ್ತನೆ ಹೃದಯಾಘಾತ ಕ್ಕೊಳಗಾದರು. ಆಸ್ಪತ್ರೆ ತಲುಪುವ ಮುಂಚೆ ತೀರಿಕೊಂಡರು.