ಶಿಮುಂಜೆಗುತ್ತು ಆದಿನಾಥ ಬಸದಿ, ಶಿರ್ತಾಡಿ
ಶಿರ್ತಾಡಿ ಶಿಮುಂಜೆಗುತ್ತು ಶ್ರೀ ಆದಿನಾಥ ಸ್ವಾಮಿ ಬಸದಿಯು ಕರ್ನಾಟಕ ಜೈನ ಬಸದಿಗಳಲ್ಲಿ ಒಂದಾಗಿದೆ.
ಸ್ಥಳ
[ಬದಲಾಯಿಸಿ]ಭಗವಾನ್ ಆದಿನಾಥ ಸ್ವಾಮಿಯು ವಿರಾಜಮಾನರಾಗಿರುವ ಬಸದಿಯು ಮಂಗಳೂರು ತಾಲೂಕು ಶಿರ್ತಾಡಿ ಗ್ರಾಮದಲ್ಲಿದೆ. ಬಸದಿಯ ಹತ್ತಿರ ಬಸದಿಯನ್ನು ನಿರ್ಮಿಸಿರುವ ಶಿಮುಂಜೆಗುತ್ತು ಮನೆ ಇದೆ. ಶಿರ್ತಾಡಿ ಬಸದಿಯ ಹತ್ತಿರದ ಬಸದಿ ಅಳಿಯೂರು ಆದಿನಾಥ ಬಸದಿ , ಅದು ಇಲ್ಲಿಂದ ೪ ಕಿ. ಮೀ ದೂರದಲ್ಲಿದೆ. ಈ ಬಸದಿಯು ಶಿರ್ತಾಡಿ ಬಸ್ಸು ನಿಲ್ದಾಣದಿಂದ ೨೦೦ ಮೀಟರ್ ದೂರವಿದ್ದು, ತಾರಿನ ರಸ್ತೆಯನ್ನು ಹೊಂದಿದೆ.
ಇತಿಹಾಸ
[ಬದಲಾಯಿಸಿ]ಈ ಬಸದಿಯನ್ನು ಶಿಮುಂಜೆಗುತ್ತಿನ ದಿ। ದೇವರಾಜ ಸೇಮಿತರು ೧೯೧೨ ಇಸವಿಯಲ್ಲಿ ಕಟ್ಟಿಸಿ ೧೯೧೩ರಲ್ಲಿ ಪಂಚಕಲ್ಯಾಣವನ್ನು ನಡೆಸಿರುತ್ತಾರೆ.
ಹಿನ್ನೆಲೆ
[ಬದಲಾಯಿಸಿ]ಬಸದಿ ಇರುವ ಸ್ಥಳದಲ್ಲಿ ದಟ್ಟವಾದ ಕಾಡು ಇದ್ದು ದಿ| ದೇವರಾಜ ಸೇಮಿತರು ತಮ್ಮ ಮಿತ್ರನೊಡನೆ ಮಾತನಾಡುತ್ತಾ ಬರುವಾಗ ದೂರದಲ್ಲಿ ವಾಲಗದ ಸದ್ದು ಕೇಳಿಸಿತು. ಆಗ ತಮ್ಮೊಂದಿಗಿರುವವರೊಡನೆ ಇಲ್ಲಿ ಬಸದಿ ನಿರ್ಮಿಸುವ ಇಚ್ಚೆಯನ್ನು ಪ್ರಕಟಿಸಿದಾಗ ಅದೇ ಬಸದಿ ನಿರ್ಮಾಣಕ್ಕೆ ಬುನಾದಿಯಾಗಿ ಒಂದು ವರ್ಷದೊಳಗೆ ಅಚ್ಚುಕಟ್ಟಾದ ಹಾಗೂ ಸುಂದರವಾದ ಜಿನಮಂದಿರವನ್ನು ತಮ್ಮ ಮನೆಯ ಪಕ್ಕದಲ್ಲಿಯೇ ನಿರ್ಮಿಸಿ ಪಂಚಕಲ್ಯಾಣವನ್ನು ಊರಿನ ಸಮಸ್ತರೊಡನೆ ಸೇರಿ ನೆರವೇರಿಸಿದರು.
ಪೂಜಾಕೈಂಕ್ರಯ
[ಬದಲಾಯಿಸಿ]ಸುಮಾರು ೬ ಇಂಚು ಎತ್ತರದ ಮಾತೆ ಪದ್ಮಾವತಿ ದೇವಿಯ ಮೂರ್ತಿ ಇದ್ದು ದೇವಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ, ಹೂವಿನಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಮೂರ್ತಿಯ ಉತ್ತರಕ್ಕೆ ಮಾಡಿದ್ದು ಕಾಲಿನ ಬಳಿ ಕುಕ್ಕುಟ ಸರ್ಪ ಇದೆ. ದಿನವೂ ಮೂಲ ಸ್ವಾಮಿ ಆದಿನಾಥರಿಗೆ ಕ್ಷೀರಾಭಿಷೇಕ, ಪಂಚಾಮಮೃತ ಅಭಿಷೇಕ, ಜಲಾಭಿಷೇಕ ಇತ್ಯಾದಿಗಳನ್ನು ಮಾಡಲಾಗುತ್ತದೆ. ಆ ಸ್ವಾಮಿಗೆ ಇತರ ಪೂಜೆಗಳು, ವಿಶೇಷ ಪೂಜೆಗಳು ಇತ್ಯಾದಿಗಳನ್ನು ಮಾಡುತ್ತಾರೆ. ಸ್ವಾಮಿಯ ಬಿಂಬವು ಪಂಚಲೋಹದಿಂದ ಎರಕ ಹೊಯ್ದದ್ದಾಗಿದ್ದು ಬಹಳ ಸುಂದರವಾಗಿದೆ. ೩ ಅಡಿ ೪ ಅಂಗುಲ ಎತ್ತರವಿದ್ದು ಖಡ್ಗಾಸನವನ್ನು ಹೊಂದಿರುತ್ತದೆ, ದಿನಕ್ಕೆ ಎರಡು ಸಲ ಪೂಜೆ ನಡೆಯುತ್ತದೆ, ದೀಪಾವಳಿಯಂದು ಅಷ್ಟಾಹಿಕ ಪರ್ವ, ನೋಂಪಿಗಳು ನಡೆಯುತ್ತವೆ. ದಿನಕ್ಕೆ ಎರಡು ಬಾರಿ ನಿರಂತರ ಪೂಜೆ ನಡೆಯುತ್ತದೆ. ಅಷ್ಟಾಹಿಕ ಪರ್ವ, ಶೋಡಷ ಭಾವನೆ ನವರಾತ್ರಿ ಪೂಜೆ ಊರಿನ ಸಮಸ್ತರ ಕೂಡುವಿಕೆಯಿಂದ ನಡೆಯುತ್ತದೆ.
ಪ್ರಾಂಗಣ
[ಬದಲಾಯಿಸಿ]ಒಳಾಂಗಣ ಪ್ರಾಂಗಣ
[ಬದಲಾಯಿಸಿ]ಬಸದಿಗೆ ಮೇಗಿನ ನೆಲೆಯಲ್ಲಿ ಮಹಾವೀರಸ್ವಾಮಿಯ ಪಂಚಲೋಹದ ಮೂರ್ತಿ ಇದ್ದು, ೯ ಇಂಚು ಉದ್ದವಿದು, ಇದ್ದು ಖಡ್ಗಾಸನದಲ್ಲಿದೆ. ಗಂಧಕುಟಿಯಲ್ಲಿ ೨೪ ತೀರ್ಥಂಕರರ ಮೂರ್ತಿಗಳಿವೆ. ಪದ್ಮಾವತಿ ಅಮ್ಮನವರ ಮೂರ್ತಿ ಇದ್ದು ಪೂಜೆ ನಡೆಯುತ್ತದೆ. ಇಲ್ಲಿ ವಿಶಾಲವಾದ ಪಡಸಾಲೆ ಇದ್ದು ಸುಮಾರು ೧೦೦ ಮಂದಿ ಕುಳಿತುಕೊಳ್ಳುವಷ್ಟು ದೊಡ್ಡದಿದ್ದು , ಉತ್ತಮವಾಗಿ ಕಲ್ಲಿನ ಕಂಬದಿಂದ ನಿರ್ಮಿತವಾಗಿ ಉತ್ತಮ ಸುಸ್ಥಿತಿಯಲ್ಲಿದೆ. ಬಲಬದಿಯಲ್ಲಿ ಮುನಿ ನಿವಾಸಕ್ಕಾಗಿ ಒಂದು ಕೋಣೆ ಇದೆ. ಬಸದಿಯ ಎದುರಿನ ಪ್ರಾರ್ಥನಾ ಮಂಟಪದ ಬಾಗಿಲಿನ ದ್ವಾರಬಂಧ (ದಾರಂದ)ದಲ್ಲಿ ಮರದಿಂದ ನಿರ್ಮಿಸಲ್ಪಟ್ಟ ದ್ವಾರಪಾಲಕರ ಕೆತ್ತನೆಯಿದೆ. ಮುಖ ದ್ವಾರದ ದಾರಂದಲ್ಲಿ ಸರ್ವಾಹಣಯಕ್ಕನ ಕೆತ್ತನೆ ಇದೆ. ಅದರ ಮೇಲೆ ಪಾರ್ಶ್ವನಾಥ ಸ್ವಾಮಿಯ ಕೆತ್ತನೆಯ ಮೂರ್ತಿ ಇದೆ. ಪ್ರಾರ್ಥನಾ ಮಂಟಪದಲ್ಲಿ ೪ ಸುಂದರವಾದ ಮರದ ಕಂಬಗಳಿವೆ. ಜಯಗಂಟೆಯನ್ನು ಗೋಪುರದ ಮಧ್ಯದಲ್ಲಿ ದೇವರ ಬಿಂಬದ ಸರಿಯಾದ ಎದುರು ಭಾಗದಲ್ಲಿ ಸ್ಥಾಪಿಸಲಾಗಿದೆ. ಇದನ್ನು ಬಾರಿಸಿದಾಗ ತುಂಬಾ ದೂರದವರೆಗೆ ಕೇಳಿಸುತ್ತದೆ. ಪ್ರಾರ್ಥನಾ ಮಂಟಪದಲ್ಲಿ ಜಯಘೋಷ ಗಂಟೆಗಳಿವೆ. ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ತೀರ್ಥ ಮಂಟಪ ಸಿಗುತ್ತದೆ. ಗಂಧಕುಟಿ ತೀರ್ಥಂಕರ ಮಂಟಪದಲ್ಲಿ ಇದೆ. ದಿನಾಲೂ ಪೂಜೆ ನಡೆಯುತ್ತದೆ. ಕಂಚಿನ ಗಣಧರಪಾದ ಇದೆ.
ಹೊರಾಂಗಣ ಪ್ರಾಂಗಣ
[ಬದಲಾಯಿಸಿ]ಬಸದಿಯ ಸುತ್ತಲೂ ಅಷ್ಟದಿಕ್ಷಾಲಕರ ಕಲ್ಲುಗಳಿವೆ . ಕ್ಷೇತ್ರಪಾಲನ ಸನ್ನಿಧಿ, ನಾಗರಕಲ್ಲು, ತ್ರಿಶೂಲ ಇದೆ . ಇವೆಲ್ಲಾ ಒಂದೇ ಪೀಠದಲ್ಲಿ ಸ್ಥಾಪಿತವಾಗಿವೆ . ಬಸದಿಯ ಸುತ್ತಲೂ ಎತ್ತರವಾದ ಕೆಂಪು ಮುರಕಲ್ಲಿನಿಂದ ಕಟ್ಟಿದ ಪ್ರಾಕಾರ ಗೋಡೆ ಇದೆ.(ಮುರಕಲ್ಲಿನಿಂದ ಕಟ್ಟಲ್ಪಟ್ಟಿದೆ).[೧]
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜುಶೀ ಪ್ರಿಂಟರ್ಸ್. p. ೨೯೭.