ಚಂದ್ರನಾಥ ಸ್ವಾಮಿ ಬಸದಿ, ಹಟ್ಟಿಯಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಟ್ಟಿಯಂಗಡಿಯ ಶ್ರೀ ಚಂದ್ರನಾಥ ಸ್ವಾಮಿ ಬಸದಿಯು ಕರ್ನಾಟಕದ ಹಳೆಯ ಬಸದಿಗಳಲ್ಲೊಂದು.

ಸ್ಥಳ[ಬದಲಾಯಿಸಿ]

ಶ್ರೀ ಚಂದ್ರನಾಥಸ್ವಾಮಿ ಬಸದಿ ಜೈನ್ ಕ್ಷೇತ್ರ ಹಟ್ಟಿಯಂಗಡಿಯು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿದೆ.

ಇತಿಹಾಸ[ಬದಲಾಯಿಸಿ]

ಜೈನ್ ಸಮಾಜದಿಂದ ಹಾಗೂ ಇತರ ಸಮಾಜಗಳಿಂದ ಸಮಾನವಾಗಿ ಗೌರವಿಸಿ, ಆಚರಿಸಲ್ಪಡುವುದು ಇದರ ವೈಶಿಷ್ಟ್ಯ.ಈ ಜೈನ್ ಕ್ಷೇತ್ರ ಹಟ್ಟಿಯಂಗಡಿಯು ಹೊಂಬುಚ್ಚದ ಅರಸ ಜಿನದತ್ತರಾಯನಿಗೆ ಸಂಬಂಧಪಟ್ಟ ಅರಮನೆ, ರಸಬಾವಿ ಅರಮನೆಯ ಪ್ರಾಂಗಣ ಇತ್ಯಾದಿಗಳ ಕುರುಹುಗಳನ್ನು ಹೊಂದಿರುವುದು ಇದರ ವಿಶೇಷವಾದ ಮಹತ್ತ್ವ. ಆ ಅರಸು ಮನೆತನದವರು ಆಳಿಕೊಂಡಿದ್ದ ಇಲ್ಲಿಯ ಸಮೃದ್ಧ ರಾಜ್ಯಕ್ಕೆ ಜೈನ ಮತ್ತು ಜೈನೇತರರು ತುಂಬು ಹೃದಯದ ಸಹಕಾರವನ್ನು ಕೊಡುತ್ತಿದ್ದರು. ವಿಧೇಯತೆಯಿಂದ ಕಂದಾಯ, ಕಪ್ಪಕಾಣಿಕೆಗಳನ್ನು ಸಮರ್ಪಿಸುತ್ತಿದ್ದರು. ಪರಿಣಾಮವಾಗಿ ಅರಸರು ಈ ಪ್ರದೇಶದಲ್ಲಿ ಜೈನ ಬಸದಿ, ದೇವಸ್ಥಾನ, ರಸ್ತೆ, ಶಾಲೆ, ಸಂಕ, ನೀರಾವರಿ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದರು.[೧]

ಆವರಣ, ಆಚರಣೆಗಳು[ಬದಲಾಯಿಸಿ]

ಈ ಬಸದಿಯ ಬಳಿಯಲ್ಲೇ ಪ್ರಸಿದ್ಧವಾದ ಕ್ಷೇತ್ರಪಾಲ ಬ್ರಹ್ಮದೇವರ ಗುಡಿ ಇದೆ. ಬಸದಿಯ ಸಮೀಪದಲ್ಲಿ ಹಿಂದೆ ಅರಮನೆ ಇದ್ದ ಜಾಗ ಹಾಗೂ ವಿಶಾಲವಾದ ಪ್ರಾಂಗಣ ಇದ್ದು, ಇಲ್ಲಿ ವಾರಾಹಿ ನದಿ ಹರಿಯುತ್ತಿದೆ. ಇದಕ್ಕೆ ಹತ್ತಿರದ ಜಿನಮಂದಿರವೆಂದರೆ ಕೊಕ್ಕರ್ಣೆಯ ಶ್ರೀ ಪಾರ್ಶ್ವನಾಥ ಬಸದಿ. ಇಲ್ಲಿಯ ಪೂಜಾದಿಗಳಿಗೆ ಬೇರೆ ಕಡೆಯಿಂದ ಜೈನರು ಹಾಗೂ ಜೈನೇತರರು ಬರುತ್ತಾರೆ. ಇದು ಶಿವಮೊಗ್ಗ ಜಿಲ್ಲೆ ಹೊಂಬುಚ್ಚ ಕ್ಷೇತ್ರದ ಶ್ರೀ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಸೇರಿದೆ. ಈ ಬಸದಿಯು ಸುಮಾರು ೧೪೦೦ ವರ್ಷಗಳ ಹಿಂದೆ ಹೊಂಬುಚ್ಚದ ಅರಸ ಜಿನದತ್ತರಾಯನಿಂದ ನಿರ್ಮಾಣವಾಯಿತೆಂದು ಹೇಳಲಾಗುತ್ತದೆ. ಈ ಬಸದಿಗೆ ಮೇಗಿನ ನೆಲೆ ಇದ್ದು, ಅಲ್ಲಿ ಶ್ರೀ ನೇಮಿನಾಥಸ್ವಾಮಿ ಮತ್ತು ಕೂಷ್ಮಾಂಡಿನೀ ದೇವಿಯ ಆರಾಧನೆ ನಡೆಯುತ್ತದೆ. ಕೆಳಗೆ ಗರ್ಭಗೃಹದಲ್ಲಿ ಜಿನೇಶ್ವರರ ಬಿಂಬಗಳು, ಶ್ರೀ ಪದ್ಮಾವತೀ ದೇವಿಯ ಬಿಂಬ ಹಾಗೂ ಬ್ರಹ್ಮದೇವರ ಮೂರ್ತಿ ಇವೆ. ಇವುಗಳಿಗೆ ಪ್ರತಿದಿನವೂ ಸಾಂಗೋಪಾಂಗವಾಗಿ ಅಭಿಷೇಕ-ಪೂಜಾದಿಗಳು ನಡೆಯುತ್ತವೆ. ಅದಕ್ಕಿಂತ ಮುಂದಿನ ಮಂಟಪವನ್ನು ತೀರ್ಥಂಕರ ಮಂಟಪವೆಂದು ಕರೆಯುತ್ತಾರೆ. ಬಸದಿಯಲ್ಲಿ ಪದ್ಮಾವತೀ ದೇವಿಗೆ ಸೀರೆ ಉಡಿಸಿ, ಹೂಗಳಿಂದ ಅಲಂಕಾರ ಮಾಡಿ ಪೂಜೆಯನ್ನು ನಡೆಸಲಾಗುತ್ತದೆ. ಇಲ್ಲಿರುವ ಜಿನಬಿಂಬಗಳ ಮೇಲೆ ಅಸ್ಪಷ್ಟವಾದ ಬರವಣಿಗೆಗಳು ಇವೆ.

ಕಲಾಕೃತಿ[ಬದಲಾಯಿಸಿ]

ಬಸದಿಯ ಗರ್ಭಗೃಹದಲ್ಲಿ ಶ್ರೀ ಚಂದ್ರನಾಥಸ್ವಾಮಿಯ ಖಡ್ಗಾಸನ ಭಂಗಿಯ ಸುಂದರ ಮುರ್ತಿ ಇದೆ. ಇದು ಸುಮಾರು ೫ ಅಡಿ ಎತ್ತರವಿರಬಹುದು. ಈ ಜಿನಬಿಂಬದ ಶಿಲೆಯ ಪ್ರಭಾವಳಿಯಲ್ಲಿ ಕೆಳಗಡೆ ಯಕ್ಷ-ಯಕ್ಷಿಯರ ಉಬ್ಬು ಶಿಲ್ಪಗಳಿವೆ. ಸ್ವಾಮಿಯ ಭುಜ ಪ್ರದೇಶದಿಂದ ಪ್ರಭಾವಳಿಯಲ್ಲಿ ಸುರುಳಿ ಸುರುಳಿಯಾಗಿರುವ ಮಕರ ತೋರಣದ ಅಲಂಕಾರವಿದೆ. ಅದಕ್ಕಿಂತ ಒಳಗಡೆಯಲ್ಲಿ ಇನ್ನೂ ಕೆಲವು ಅಲಂಕಾರಿಕ ಚಿತ್ರಕೆಗಳಿವೆ. ಪ್ರಭಾವಳಿಯ ಮೇಲ್ಗಡೆ ಮಧ್ಯಭಾಗದಲ್ಲಿ ಮುಕ್ಕೊಡೆಯೂ, ಅದಕ್ಕಿಂತ ಮೇಲ್ಗಡೆ ಕೀರ್ತಿ ಮುಖವೂ ಇವೆ. ಇವುಗಳ ರಚನಾ ವಿನ್ಯಾಸವನ್ನು ಅಧ್ಯಯನ ಮಾಡಿದರೆ ಈ ಜಿನಬಿಂಬವು ಸುಮಾರು ಹನ್ನೊಂದನೇ ಶತಮಾನಕ್ಕೆ ಸೇರಿದ್ದೆಂದು ಹೇಳಬಹುದು. ಶ್ರೀ ಪ್ರಧಾನ ಜಿನಬಿಂಬದ ಬಳಿಯಲ್ಲಿ ಕೆಳಗಡೆ ಇನ್ನೊಂದು ಜಿನ ಬಿಂಬವೂ ಇದೆ. ಇವೆರಡಕ್ಕೂ ಇಲ್ಲಿ ಆರಾಧನೆ ನಡೆಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್.