ಅನಂತಸ್ವಾಮಿ ಬಸದಿ, ಕೇಳದಪೇಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಳದಪೇಟೆಯ ಶ್ರೀ ಅನಂತಸ್ವಾಮಿ ಬಸದಿಯು ಬೆಳ್ತಂಗಡಿಯಿಂದ ಸುಮಾರು ೩೬ ಕಿ.ಲೋ.ಮೀಟರ್ ದೂರದಲ್ಲಿದೆ. ಈ ಬಸದಿಗೆ ನಾವು ಬೆಳ್ತಂಗಡಿಯಿಂದ ಹೊರಟು ಗುರುವಾಯನಕೆರೆ ಮಾರ್ಗವಾಗಿ ವೇಣೂರಿಗೆ ಬಂದು ಅಲ್ಲಿಂದ ಪಡ್ಡಂದಡ್ಕ ತಲುಪಿ ಅಲ್ಲಿಂದ ನಂತರ ಕಾಶಿಪಟ್ಣ ಮಾರ್ಗವಾಗಿ ಕೇಳದಪೇಟೆಗೆ ಬಂದರೆ ಅಲ್ಲಿ ನಮಗೆ ಶ್ರೀ ಅನಂತಸ್ವಾಮಿ ಬಸದಿಯು ಕಾಶಿಪಟ್ಣದ ಪೆರಾಡಿಯ ಕೇಳದಪೇಟೆಯಲ್ಲಿದೆ. ಈ ಬಸದಿಗೆ ಹೋಗಲು ಸಾರ್ವಜನಿಕವಾದ ಬಸ್ಸಿನ ವ್ಯವಸ್ಥೆ ಈಗ ಇಲ್ಲ.

ಪೂಜಾ ಮೂರ್ತಿ[ಬದಲಾಯಿಸಿ]

ಈ ಬಸದಿಯಲ್ಲಿ ಮುಖ್ಯವಾಗಿ ಪೂಜಿಸಲ್ಪಡುವ ತೀರ್ಥಂಕರರು ಶ್ರೀ ಅನಂತಸ್ವಾಮಿ. ಇವರು ತೀರ್ಥಂಕರರುಗಳ ಪೈಕಿ ೧೪ನೆಯವರು. ತೀರ್ಥಂಕರರ ಮೂರ್ತಿಯು ಶಿಲೆಯಿಂದ ನಿರ್ಮಿಸಿದ್ದಾಗಿದೆ. ಈ ಜಿನ ಬಿಂಬಕ್ಕೆ ಕಂಚಿನ ಪ್ರಭಾಲಯವು ಇದೆ. ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದೆ. ಕೆಳಗಡೆ ಕರಡಿಯ ಲಾಂಛನವಿದ್ದು ಈ ಮೂರ್ತಿಯು ಸರ್ವಾಂಗ ಸುಂದರವಾಗಿ ಕಾಣುತ್ತದೆ. ಶ್ರೀ ಅನಂತನಾಥ ಸ್ವಾಮಿಗೆ ಅಷ್ಟಮಹಾ ಪ್ರಾತಿಹಾರ್ಯಗಳನ್ನು ಅಂದರೆ ಚಾಮರ, ಮುಕ್ಕೊಡೆ, ಪುಷ್ಪವೃಷ್ಟಿ, ದಿವ್ಯಧ್ವನಿ, ಇತ್ಯಾದಿಗಳನ್ನು ತೋರಿಸಲಾಗಿದೆ. ತೀರ್ಥಂಕರರ ಮೂರ್ತಿಯ ಪಕ್ಕದಲ್ಲಿ ಬೇರೆ ಯಾವ ಮೂರ್ತಿಯೂ ಇಲ್ಲ. ಅಥವಾ ಬೇರೆ ಯಾವುದೇ ವಸ್ತುವಿಲ್ಲ. ಅನಂತನಾಥ ಸ್ವಾಮಿ ಮೂರ್ತಿಗೆ ಜಲ, ಕ್ಷೀರ, ಪಂಚಾಮೃತ, ಸೀಯಾಳ ಇತ್ಯಾದಿಗಳನ್ನು ಬಳಸಿಕೊಂಡು ಅಭಿಷೇಕ ಮಾಡಲಾಗುತ್ತದೆ.

ಇತರೆ ಮೂರ್ತಿಗಳು ಮತ್ತು ಪೂಜೆ[ಬದಲಾಯಿಸಿ]

ಬಸದಿಯ ಗಂಧಕುಟಿಯಲ್ಲಿ ಶ್ರುತ, ಗಣಧರ ಪಾದ, ಚೌವೀಸ ತೀರ್ಥಂಕರರು, ಸರ್ವಾಹ್ಣ ಯಕ್ಷ ಮತ್ತು ಭಗವಾನ್ ಬಾಹುಬಲಿಯ ಮೂರ್ತಿಗಳಿವೆ. ಆದರೆ ಅವುಗಳ ಮೇಲೆ ಯಾವುದೇ ಬರವಣಿಗೆ ಕಾಣಸಿಗುವುದಿಲ್ಲ. ಈ ಬಸದಿಯಲ್ಲಿ ಮೂಲ ತೀರ್ಥಂಕರರ ಜೊತೆಗೆ ೧೪ ಇತರ ಮೂರ್ತಿಗಳಿಗೆ ಪೂಜೆ ನಡೆಸಲಾಗುತ್ತದೆ. ಬಸದಿಯಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿಯೂ ಇದೆ. ಅದು ಪಂಚಲೋಹದ್ದಾಗಿದೆ. ಇದು ಉತ್ತರ ದಿಕ್ಕಿಗೆ ಮುಖ ಮಾಡಿದೆ. ಪದ್ಮಾವತಿ ಅಮ್ಮನವರಿಗೆ ಸೀರೆ, ಬಳೆ ತೊಡಿಸಿ ಪೂಜೆ ನಡೆಸದಲಾಗುತ್ತದೆ. ಇಲ್ಲಿ ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ.ಇಲ್ಲಿ ಹೂವು ಹಾಕಿ ನೋಡುವ ಕ್ರಮ ಇಲ್ಲ. ಪದ್ಮಾವತಿ ಅಮ್ಮನವರಿಗೆ ಪೂಜೆ ನಡೆಸುವಾಗ ಚರು, ನೈವೇದ್ಯವನ್ನು ಬಳಸಿ ಪೂಜೆ ನಡೆಸಲಾಗುತ್ತದೆ. ಅಮ್ಮನವರಿಗೆ ಜನರು ಕಷ್ಟದ ಸಮಯದಲ್ಲಿ ವಿಶೇಷ ಹರಕೆಗಳನ್ನು ಹೇಳುತ್ತಾರೆ. ಈ ಹರಕೆಗಳು ಈಡೇರಿದ ಸಾಕಷ್ಟು ಸನ್ನಿವೇಶಗಳು ಇವೆ.ಈ ಬಸದಿಯಲ್ಲಿ ಬ್ರಹ್ಮದೇವರ ಮೂರ್ತಿಯೂ ಇದೆ. ಇದು ಕುದುರೆ ಮೇಲೆ ಕುಳಿತಿರುವ ಭಂಗಿಯಲ್ಲಿದೆ. ಅದರ ಕೆಳಗೆ ನಾಯಿಯ ಆಕೃತಿಯನ್ನು ಕಾಣಬಹುದಾಗಿದೆ. ಬ್ರಹ್ಮದೇವರು ಯಾರ ಮೇಲೆ ಕೂಡಾ ಇಲ್ಲಿ ಆವೇಶ ಬರುವುದಿಲ್ಲ. [೧]

ಬಸದಿ ವಿನ್ಯಾಸ[ಬದಲಾಯಿಸಿ]

ನಾವು ಬಸದಿಯ ಗರ್ಭಗೃಹದಿಂದ ಹೊರಗಡೆ ಬರುತ್ತಿರುವಂತೆಯೇ ಸುಕನಾಸಿ, ಯೆಡನಾಳಿ, ಗಂಧಕುಟಿ, ತೀರ್ಥಮಂಟಪ, ಘಂಟಾ ಮಂಟಪ ಮತ್ತು ಪ್ರಾರ್ಥನಾ ಮಂಟಪಗಳನ್ನು ಕಾಣಬಹುದು. ಈ ಬಸದಿಯ ನೆಲಕ್ಕೆ ಸಿಮೆಂಟಿನ ಕಾವಿ ಹಾಕಲಾಗಿದೆ. ಬಸದಿಯ ಗೋಡಿಯಲ್ಲಿ ದ್ವಾರಪಾಲಕರ ಬಣ್ಣದ ಚಿತ್ರಗಳಿವೆ. ಬಸದಿಯ ಎದುರು ಭಾಗದಲ್ಲಿ ಗೋಪುರಗಳನ್ನು ಕಾಣಬಹುದು ಮತ್ತು ಆ ಗೋಪುರದ ಗೋಡೆಯಲ್ಲಿ ಯಾವುದೇ ರೀತಿಯಾದ ಚಿತ್ರಗಳು ಕಾಣಸಿಗುವುದಿಲ್ಲ. ಗೋಪುರದ ಕಂಬಗಳನ್ನು ಸಿಮೆಂಟಿನಿಂದ ಮಾಡಲಾಗಿದೆ.ಯಾವುದೇ ರೀತಿಯ ಕೆತ್ತನೆ, ಚಿತ್ರ ಮತ್ತು ಬರೆದಂತಹ ಅಕ್ಷರಗಳು ಈಗ ಕಾಣಸಿಗುವುದಿಲ್ಲ.ಈ ಬಸದಿಯಲ್ಲಿ ಮೇಗಿನ ನೆಲೆ ಇದೆ. ಅಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪೂಜೆ ನಡೆಸಲಾಗುತ್ತದೆ. ಬಸದಿಯ ಸುತ್ತಲೂ ಅಂಗಳ ಇದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೨೧೨-೨೧೩.