ಪದ್ಮಾವತಿ ದೇವಿ ಮುಟ್ಟದ ಬಸದಿ, ಗುಂಡಬಾಳ
ಸ್ಥಳ
[ಬದಲಾಯಿಸಿ]ಮುಟ್ಟದ ಬಸದಿಯೆಂದೇ ಪ್ರಸಿದ್ಧವಾಗಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಾತೆ ಶ್ರೀ ಪದ್ಮಾವತಿ ದೇವಿಯ ಈ ಬಸದಿಯು ಹೊನ್ನಾವರ ತಾಲೂಕು ಗುಂಡಬಾಳ ಗ್ರಾಮದಲ್ಲಿದೆ. ಹೊನ್ನಾವರ -ಸಾಗರ ರಸ್ತೆಯಲ್ಲಿ ಹೊನ್ನಾವರದಿಂದ ೧೦ ಕಿಲೋಮೀಟರ್ ಕ್ರಮಿಸಿದಾಗ ಎಡಬದಿಯಲ್ಲಿ ಸಿಗುವ ಬೃಹತ್ ಸ್ವಾಗತಗೋಪುರದಿಂದ ೬ ಕಿಲೋಮೀಟರ್ ಅಂತರದಲ್ಲಿದೆ. ಬಸದಿಯ ನಿವೇಶನದ ವರೆಗೂ ಡಾಮರ್ ರಸ್ತೆಯಿದೆ. ಇಲ್ಲಿ ಒಂದೇ ಕುಟುಂಬದ ನಾಲ್ಕು ಜೈನ ಶ್ರಾವಕರ ಮನೆಗಳಿವೆ.
ಇತಿಹಾಸ
[ಬದಲಾಯಿಸಿ]ಪ್ರಾಚೀನ ಕಾಲದಲ್ಲಿ ಜಿನದತ್ತರಾಯನು ಉತ್ತರ ಮಧುರೆಯಿಂದ ಹೊಂಬುಜ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಇಲ್ಲಿಗೆ ಆಗಮಿಸಿದ್ದನು. ಆಗ ಆತನನ್ನು ಶತ್ರುಗಳು ಹಿಂಬಾಲಿಸಿಕೊಂಡು ಬರುತ್ತಿದ್ದರು. ಈ ಉಪಟಳವನ್ನು ತಡೆಯಲಾಗದೆ ಆತನು ತನ್ನೊಡನಿದ್ದ ಶ್ರೀ ಪದ್ದಾವತಿ ದೇವಿಯ ಮೂರ್ತಿಯನ್ನು ತಿರುಗಿಸಿ ಹಿಡಿದರೆ ಶತ್ತುಗಳು ನಾಶವಾಗುತ್ತಾರೆಂದು ಆಚಾರ್ಯರೊಬ್ಬರು ಹಿಂದೆಯೇ ತಿಳಿಸಿದ್ದರು. ಅದರ ಅನುಸಾರ ಗುಂಡಬಾಳದ ಈ ಪ್ರದೇಶಕ್ಕೆ ಬಂದಾಗ ಶತ್ತುಗಳನ್ನು ನಿಗ್ರಹಿಸಲು, ತನ್ನೊಡನಿದ್ದ ಆ ಮೂರ್ತಿಯನ್ನು ಜಿನದತ್ತರಾಯನು ಹಿಂದಿರುಗಿಸಿ ಹಿಡಿದ. ಶತ್ತುಗಳು ಎಷ್ಟು ಮುನ್ನಡೆದು ಬಂದರೂ ಜಿನದತ್ತನಿದ್ದ ಈ ಸ್ಥಳಕ್ಕೆ ಬಂದು ಮುಟ್ಟಲಾಗದ ಕಾರಣ, ಈ ವಿಶೇಷ ಕಾರಣಿಕದ ಬಸದಿಯನ್ನು ಮುಟ್ಟದ ಬಸದಿಯೆಂದು ಕರೆಯಲಾಯಿತು. ಆ ಹೆಸರೇ ಶಾಶ್ವತವಾಯಿತು.
ರಚನಾ ವಿನ್ಯಾಸ
[ಬದಲಾಯಿಸಿ]ಈ ಬಸದಿಗೆ ಗರ್ಭಗೃಹದ ಮೇಲ್ಗಡೆ ಮೇಗಿನ ನೆಲೆಯಂತಹ ರಚನೆ ಇದೆ. ಆದರೆ ಇಲ್ಲಿ ಬೇರೊಂದು ಜಿನಬಿಂಬವಾಗಲೀ ಅದಕ್ಕೆ ಪೂಜೆ ನಡೆಸುವ ಪದ್ಧತಿಯಾಗಲಿ ಇರುವುದಿಲ್ಲ. ಕೆಳಗೆ ಗರ್ಭಗೃಹದಲ್ಲಿ ಶ್ರೀ ಪಾಶ್ವನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ದೇವಿಯ ಒಂದೊಂದು ಬೃಹನ್ಮೂರ್ತಿಗಳಿವೆ. ಧರಣೀಂದ್ರ ಯಕ್ಷ, ಬ್ರಹ್ಮ ಯಕ್ಷ, ಸರಸ್ವತಿ ದೇವಿ, ಶ್ರೀ ಅನಂತನಾಥ ತೀರ್ಥಂಕರ ಮುಂತಾದ ಮೂರ್ತಿಗಳಿವೆ. ಬಸದಿಗೆ ಮಾನಸ್ತಂಭವಿಲ್ಲ. ದ್ವಜಾರೋಹಣ ಸ್ತಂಭವಿದೆ, ಬಲಿಪೀಠವಿದೆ. ಬದಿಯಲ್ಲಿ ಹಲವಾರು ಪಾರಿಜಾತದ ಗಿಡಗಳಿವೆ. ಇಲ್ಲಿರುವ ಕರಿ ಲಕ್ಕಿಗಿಡಗಳು ಗಮನೀಯ ಮತ್ತು ಹೆಚ್ಚು ಮಹತ್ವಪೂರ್ಣವಾದವುಗಳು. ಈಗ ಮರದಾಕಾರದಲ್ಲಿ ಬೆಳೆದಿದೆ. ಬಸದಿಯ ಎದುರುಗಡೆ ಸ್ವಲ್ಪ ತಗ್ಗಿನಲ್ಲಿ ಚಂದ್ರಶಾಲೆಯಿದೆ. ಇದನ್ನು ವಿಶೇಷ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಾರೆ. ಇಲ್ಲಿ ಒಂದು ಬೃಹತ್ತ್ ಶಿಲಾಶಾಸನವಿದೆ.
ಗರ್ಭಗೃಹ ವರ್ಣನೆ
[ಬದಲಾಯಿಸಿ]ಗರ್ಭಗೃಹ ಇರುವ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಿಂಬವು ಕರಿಶಿಲೆಯಿಂದ ಮಾಡಲ್ಪಟ್ಟಿದ್ದು, ಪದ್ಮಾಸನ ಭಂಗಿಯಲ್ಲಿದೆ. ಇದಕ್ಕೆ ವಜ್ರಲೇಪನ ಆಗಿರದಿದ್ದರೂ ಅಷ್ಟೇ ಚೆನ್ನಾಗಿ ಹೊಳೆಯುತ್ತಿದೆ. ಮೇಲ್ಗಡೆ ಸರಳವಾದ ನಾಗಫಣವಿದೆ. ಹಿಂಬದಿಯಿಂದ ಈ ಸರ್ಪವು ಸುತ್ತಿಕೊಂಡಿದೆ. ಸ್ವಾಮಿಯ ಎಡಬಲಗಳಲ್ಲಿ ಯಕ್ಷ ಯಕ್ಷಿಯರ ಬಿಂಬಗಳಿಲ್ಲದಿದ್ದರೂ ಆ ಸ್ಥಳದಲ್ಲಿ ಒಂದೊAದು ಸ್ತಂಭದಾಕೃತಿಗಳಿವೆ. ಇವುಗಳ ಮೇಲ್ಬಾಗದಲ್ಲಿ ಮುಕ್ಕೊಡೆಯು ಕೀರ್ತ ಮುಖವೂ ಇವೆ. ಮಕರ ತೋರಣ ಇರುವ ಸ್ಥಳದಲ್ಲಿ ವೃತ್ತಾಕಾರದ ಚಿತ್ರಿಕೆಗಳಿವೆ. ಈ ಎಲ್ಲಾ ಲಕ್ಷಣಗಳಿಂದ ಈ ಬಿಂಬವು ಸುಮಾರು ೮-೯ನೇ ಶತಮಾನದ್ದೆಂದು ಹೇಳಬಹುದು.
ನಿರ್ಮಾಣ
[ಬದಲಾಯಿಸಿ]ಪ್ರಾಚೀನ ಕಾಲದಲ್ಲಿ ರಾಣಿ ನಾಗಲಾದೇವಿಯ ಮಗ ಮಲ್ಲಿದೇವ ಎಂಬವನು ಈ ಬಸದಿಯನ್ನು ಕಟ್ಟಿಸಿದುದಾಗಿ ಹೇಳಲಾಗುತ್ತದೆ. ಆತನಾದರೋ ತಾನು ೧೦೮ ಬಸದಿಗಳನ್ನು ಕಟ್ಟಿಸಿರುವುದಾಗಿ ಹೇಳಿಕೊಂಡಿದ್ದಾನೆ. ಇಲ್ಲಿರುವ ಒಂದು ಶಾಸನದಿಂದ ಕ್ರಿ.ಶ. ೧೧೪೩ರ ಸುಮಾರಿಗೆ ಚಂದಾವರದ ಕದಂಬರಾಜ ತ್ರಿಭುವನಮಲ್ಲದೇವನ ಆಳ್ವಿಕೆಯಲ್ಲಿ ಒಬ್ಬ ಸ್ರೀಯು ಈ ಬಸದಿಗೆ ಭೂಮಿಯನ್ನು ಉಂಬಳಿ ಬಿಟ್ಟಿದ್ದಳು ಎಂದು ತಿಳಿದುಬರುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಪುರಾತತ್ವ ಪುರಾವೆಗಳು ಪರಿಸರದಲ್ಲಿ ಹಾಗು ಎದುರಿನ ಗುಡ್ಡಗಳಲ್ಲಿ ಕಂಡುಬರುತ್ತವೆ. ಅದರಂತೆ ಹಿಂದೆ ಇಲ್ಲಿ ನೂರಾರು ಜೈನರ ಮನೆಗಳಿದ್ದಂತೆ ಕಂಡುಬರುತ್ತದೆ. ಮನೆಯ ಅಸ್ತಿವಾರಗಳು, ಬಾವಿಕಟ್ಟೆಗಳು ಕಾಣಸಿಗುತ್ತದೆ. ಅಂತಹ ಬಸದಿಗಳ ಪೈಕಿ ಪ್ರಸ್ತುತ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಬಳಿಯಲ್ಲಿರುವ ಹೊಸ ಬಸದಿಯೂ ಒಂದು. ಬಳಿಯಲ್ಲಿರುವ ಈ ಹೊಸ ಬಸದಿಯು ಒಮದೇ ಮಂಟಪವನ್ನು ಹೊಂದಿದ್ದು ಅದರಲ್ಲಿ ಶಿಲ್ಪಾಲಂಕಾರಗಳಿAದ ಕಂಗೊಳಿಸುವ ಬೃಹದಾಕಾರದ ಭಗವಾನ್ ಆದಿನಾಥ ಸ್ವಾಮಿ, ಭಗವಾನ್ ಅಭಿನಂದನ ಮತ್ತು ಭಗವಾನ್ ಮಹಾವೀರರ ಮೂರ್ತಿಗಳಿವೆ. ಇವುಗಳು ಇಲ್ಲಿಯವುಗಳಲ್ಲವಂತೆ. ಬೇರೆ ಬೇರೆ ಬಸದಿಗಳಿಗೆ ಸಂಬಂಧಿಸಿದವುಗಳು. ಇವರ ಪೂರ್ವಿಕರು ಇಲ್ಲಿ ತಂದು ಇರಿಸಿದವುಗಳು. ಈಗ ಒಂದೇ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ನಿತ್ಯವೂ ಪೂಜೆ ನಡೆಸಲಾಗುತ್ತದೆ. ಎರಡು ಬಿಂಬಗಳ ಪೀಠಗಳ ಮೇಲೆ ಬರವಣಿಗೆ ಇದೆ. ಪ್ರತಿಮಾ ಲಕ್ಷಣಗಳ ದೃಷ್ಟಿಯಿಂದ ಅಧ್ಯಯನ ಮಾಡಿದರೆ ಇವು ಮೂರೂ ಒಮದೇ ಕಾಲದಲ್ಲಿ ಮಾಡಲ್ಪಟ್ಟವುಗಳು ಎಂದು ಹೇಳಬಹುದು. ಮುಕ್ಕೊಡೆಯ ಎಡ ಬಲಗಳಲ್ಲಿ ಚಾಮರಧಾರಿಗಳಿದ್ದಾರೆ. ಮಕರ ತೋರಣದ ಬದಲಾಗಿ ವೃತ್ತಾಕಾರದ ಚಿತ್ರಿಕೆಗಳಿವೆ. ಮಧ್ಯದಲ್ಲಿರುವ ಬಿಂಬಗಳು ಪರ್ಯಂಕಾಸನ ಭಂಗಿಯಲ್ಲಿವೆ. ಈ ಮೂರೂ ಬೃಹತ್ ಮೂರ್ತಿಗಳ ಹಿಂದುಗಡೆಯಲ್ಲಿ ಚತುರ್ವಿಂಶತಿ ತೀರ್ಥಂಕರ ಪೈಕಿ ಕೆಲವು ತೀರ್ಥಂಕರ ಬಿಂಬಗಳನ್ನು ಸಾಲಾಗಿ ಇಡಲಾಗಿದೆ. ಇವೆಲ್ಲಾ ಒಂದೇ ಆಕಾರ, ಎತ್ತರ ಮತ್ತು ಅಗಲದವುಗಳು. ಇವು ಹಿಂದೆ ಹರಿಪೀಠದ ಮೇಲೆ ಸ್ಥಾಪಿಸಲ್ಪಟ್ಟಿದ್ದವುಗಳು. ಎದುರುಗಡೆಯಲ್ಲಿ ಇದೇ ವರ್ಗಕ್ಕೆ ಸೇರಿದ ಇನ್ನೊಂದು ತೀರ್ಥಂಕರರ ಮೂರ್ತಿಗಳನ್ನು ಚರಸ್ಥಿತಿಯಲ್ಲಿ ಇಡಲಾಗಿದೆ. ಒಂದು ಬದಿಯಲ್ಲಿ ಪರ್ಯಂಕಾಸನದ ಒಂದು ಶಿಲಾ ಜಿನಬಿಂಬವೂ ಇನ್ನೊಂದು ಕಡೆಯಲ್ಲಿ ಅಮೃತಶಿಲೆಯ ಜಿನಬಿಂಬವೂ ಇವೆ. ಪಕ್ಕದಲ್ಲಿ ದೈನಂದಿನ ಪೂಜೆಯ ಸಾಮಗ್ರಿಗಳೂ ಇವೆ. ಈ ಮೂರ್ತಿ ಸಂಕುಲದ ಬದಿಯಲ್ಲಿ ಒಂದು ಬೃಹತ್ ಗಣಪತಿಯ ಬಿಂಬ, ಒಂದು ಹೆಡೆ ಎತ್ತಿ ನಿಂತಿರುವ ನಾಗಬಿಂಬ, ಅದರ ಬಳಿಯಲ್ಲಿ ವೀರಭದ್ರನ ಬಿಂಬ, ಬಳಿಯಲ್ಲಿ ತತ್ವೋಪದೇಶ ಮಾಡುತ್ತಿರುವ ಜೈನ ಮುನಿಗಳ ಇನ್ನೊಂದು ಬಿಂಬ ಮತ್ತು ಈ ಬಿಂಬಗಳ ಬಲಭಾಗದಲ್ಲಿ ಕೆಳಗಡೆ ದೇವಿಯೊಬ್ಬಳ ಬಿಂಬ - ಇತ್ಯಾದಿಗಳನ್ನು ಕಾಣಬಹುದು. ಇವೆಲ್ಲವುಗಳಿಗೆ ದಿನವೂ ಪೂಜೆ ನಡೆಯುತ್ತಿದೆಯಂತೆ.
ಸಾನಿಧ್ಯ ವಿಶೇಷತೆ
[ಬದಲಾಯಿಸಿ]ಈ ಬಸದಿಗೆ ಸಂಬಂಧಿಸಿದ ಕ್ಷೇತ್ರಪಾಲ ಸನ್ನಿಧಿಯು ವಿಶೇಷವಾದುದು. ಅಲ್ಲಿ ಜಟ್ಟಿಂಗ, ವೀರಭದ್ರ, ಮಣಿಭದ್ರ, ಗಣಪತಿ ಮತ್ತು ನಾಗಯಕ್ಷಿ, ಮಹಿಷಾಸುರ ಮರ್ದಿನಿ ಮುಂತಾದ ಮೂರ್ತಿಗಳಿವೆ. ಇಲ್ಲಿಯ ವಿಶೇಷತೆ ಎಂದರೆ ಈ ಊರಿನ ಶ್ರದ್ಧಾಕೇಂದ್ರಗಳಿಗೆ ಮೂಲಶಕ್ತಿ ಈ ಕ್ಷೇತ್ರಪಾಲನ ಸನ್ನಿಧಿಯೆಂದು ಇಲ್ಲಿನ ಪೂರ್ವಿಕರು ಹೇಳುತ್ತಿದ್ದರಂತೆ. ಊರಿನಲ್ಲಿ ಯಾವುದೇ ಪೂಜೆ ಪುರಸ್ಕಾರಾದಿಗಳನ್ನು ನಡೆಸುವುದಿದ್ದರೂ ಇಲ್ಲಿಗೆ ಆಗಮಿಸಿ ಗಣಪತಿ ಮತ್ತು ವೀರಭದ್ರರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಈ ಎರಡೂ ಬಸದಿಗಳು, ಕ್ಷೇತ್ರಪಾಲನ ಸನ್ನಿಧಿ, ಮನೆ ಪಂಚಾಂಗಗಳು, ಬಾವಿಗಳು ಮತ್ತಿತರ ಹಲವಾರು ಸ್ಮಾರಕಗಳು ಇಲ್ಲಿಯ ಸುಮಾರು ೧೨ ಎಕರೆ ಜಮೀನಿನಲ್ಲಿ ಕಂಡುಬರುತ್ತವೆ. ಕೆಲವುಕಡೆ ನಾಗರಕಲ್ಲುಗಳಿವೆ. ಕೆಲವು ಕಡೆ ಜೌಡಿ, ಮಹಾಸತಿ, ರಾಹು ಇತ್ಯಾದಿ ದೈವೀಕ ಮೂರ್ತಿಗಳು ಕಂಡುಬರುತ್ತವೆ. ಇಲ್ಲಿಯ ಶ್ರೀ ಪಾರ್ಶ್ವನಾಥ ಜನಾಲಯದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಹಾಥಿಗೇರಿ ಎಂಬ ಆನೆ ಕಟ್ಟುವ ಸ್ಥಳವಿದೆ. ಇಲ್ಲಿನ ರಾಜನ ಆಳ್ವಿಕೆಯ ಕಾಲದಲ್ಲಿ ಆನೆಗಳನ್ನು ಅಲ್ಲಿ ಕಟ್ಟುತ್ತಿದ್ದರಂತೆ. ಇಲ್ಲಿ ಒಂದು ದೊಡ್ಡ ಕೆರೆಯಿದೆ. ಪರಿಸರದಲ್ಲಿ ಹಲವಾರು ದೇವತೆಗಳ ಮತ್ತು ತೀರ್ಥಂಕರರ ಶಿಲ್ಪಗಳಿವೆ. ಬಸದಿಯಂತಹ ಕಟ್ಟಡಗಳ ಅಸ್ತಿವಾರಗಳು, ದ್ವಾರಪಾಲಕರ ಬಿಂಬಗಳು, ದೇವಕೋಷ್ಟಗಳು ಮತ್ತು ಗಜಲಕ್ಷಿಯ ಬಿಂಬಗಳು ಇವೆ. ಪ್ರಾಯಶಃ ಇಲ್ಲಿ ನರಿಗೆ ಅರಸರಿಗೆ ಸಂಬAಧಪಟ್ಟ ಧಾರ್ಮಿಕ ಹಾಗು ಸೈನಿPರÀ ತರಬೇತಿ ಕೇಂದ್ರಗಳೂ ಇದ್ದಿರಬೇಕು. ಇಲ್ಲಿಯ ಕೆಲವು ಕಡೆಗಳಲ್ಲಿ ಉತ್ಖನನ ಮಾಡಿದರೆ ಕೆಲವು ಐತಿಹಾಸಿಕ ಪುರಾವೆಗಳು ಮತ್ತು ಮಾಹಿತಿಗಳು ಸಿಗಬಹುದು. ಇನ್ನೂ ಹೆಚ್ಚಿನ ಇತಿಹಾಸ ಬೆಳಕಿಗೆ ಬರಬಹುದು. ಅಂತಹ ಉಪಯುಕ್ತ ಕೆಲಸಕ್ಕೆ ಇಲ್ಲಿ ಅಳಿದು ಉಳಿದಿರುವ ಸ್ಮಾರಕಗಳು, ಶಿಲಾಶಾಸನಗಳು, ಮಾಸ್ತಿಕಲ್ಲುಗಳು ಮತ್ತು ನೆಲಸಮವಾಗಿರುವ ಜಿನಾಲಯ, ದೇವಾಲಯ, ವೀರಗಲ್ಲುಗಳು ಕೈ ಬೀಸಿ ಕರೆಯುತ್ತಿವೆ.
ಉಲ್ಲೇಖಗಳು
[ಬದಲಾಯಿಸಿ]