ವಿಷಯಕ್ಕೆ ಹೋಗು

ಜಂತುಹುಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಣ್ಣು ಜಂತುಹುಳು

ಜಂತುಹುಳು ಮಾನವರ ಕರುಳಿನಲ್ಲಿರುವ ಒಂದು ಪರೋಪಜೀವಿ. ಇದು ನೆಮಟೋಡ (ರೌಂಡ್ ವರ್ಮ್) ವಂಶದ ಆಸ್ಕಾರಿಸ್ ಜಾತಿಯ ದುಂಡು ಹುಳು. ಮನುಷ್ಯ ಮತ್ತು ಇತರ ಸ್ತನಿಗಳಿರುವಲ್ಲೆಲ್ಲ ಜಂತುಹುಳದ ವ್ಯಾಪ್ತಿ ಉಂಟು. ಆದರೆ ಒಂದೊಂದು ಪ್ರಾಣಿಯಲ್ಲಿ ಒಂದೊಂದು ಪ್ರಭೇದ ಇರುವುದು ಸಾಮಾನ್ಯ. ಉದಾಹರಣೆಗೆ, ಮಾನವನಲ್ಲಿ ಆ.ಸ್ಕಾರಿಸ್‍ಲುಂಬ್ರಿಕಾಯ್ಡಿಸ್ ಪ್ರಭೇದವು ಕುದುರೆಯಲ್ಲಿ ಆ.ಮೆಗಾಲೊಕಿಫಾಲ ಪ್ರಭೇದವೂ ಹಂದಿಯಲ್ಲಿ ಆ.ಸುಯಿಲ ಪ್ರಭೇದವೂ ಇವೆ. ಆ. ಲುಂಬ್ರಿಕಾಯ್ಡಿಸ್ ಪ್ರಭೇದದಲ್ಲಿ ಆ.ಲುಂ.ಯೂನಿವೇಲೆನ್ಸ್ ಮತ್ತು ಆ.ಲುಂ ಬೈಮೇಲೆನ್ಸ್ ಎಂಬ ಎರಡು ಬಗೆಗಳಿವೆ. ಈ ಬಗೆಗಳಲ್ಲಿ ಅನುಕ್ರಮವಾಗಿ 2 ಮತ್ತು 4 ಕ್ರೋಮಸೋಮುಗಳು ಮಾತ್ರ ಇರುವುದರಿಂದ ಕ್ರೋಮೋಸೋಮಗಳ ವಿನ್ಯಾಸ, ಅನುವಂಶಿಕತೆಯಲ್ಲಿ ಅವುಗಳ ಪಾತ್ರ ಇವೇ ಮುಂತಾದವನ್ನು ಅಧ್ಯಯಿಸಲು ಇವನ್ನು ಪ್ರಯೋಗಗಳಲ್ಲಿ ಬಳಸುತ್ತಾರೆ.

ದೇಹರಚನೆ

[ಬದಲಾಯಿಸಿ]

ಆ.ಲುಂಬ್ರಿಕಾಯ್ಡಿಸ್ ಜಂತು ಹುಳುವಿನಲ್ಲಿ ಹೆಣ್ಣಿನ ದಪ್ಪ 3-4 ಮಿ.ಮೀ. ; ಉದ್ದ 10 ಸೆಂ.ಮೀ. ನಿಂದ 35-40 ಸೆಂ.ಮೀ. ನವರೆಗೂ ಇದೆ.[] ದಪ್ಪ ಹಾಗೂ ಉದ್ದ ಎರಡರಲ್ಲೂ ಗಂಡು ಹೆಣ್ಣಿನ ಅರ್ಧದಷ್ಟು ಮಾತ್ರ ಉಂಟಷ್ಟೆ. ಆ.ಲುಂಬ್ರಿಕಾಯ್ಡಿಸ್ ಹುಳುವಿನ ಮೈಮೇಲೆ ಉಂಗುರ ಗುರುತುಗಳಿವೆ. ಹುಳಕ್ಕೆ ಪಳಪಳನೆ ಹೊಳೆಯುವ ಮಾಸಲು ಬಿಳುಪು ಬಣ್ಣ ಉಂಟು. ಅದರ ಎರಡು ಕೊನೆಗಳೂ ಚೂಪಾಗಿವೆ. ಬಾಲದ ತುದಿ ಕೊಕ್ಕೆಯಂತೆ ಬಗ್ಗದೆ. ತಲೆಕೊನೆಯ ತುದಿಯುಲ್ಲಿ ಬಲು ಸಣ್ಣ ಹಲ್ಲುಗಳಿರುವ ಮತ್ತು ಮೂರು ಅಂಡಾಕಾರದ ಉಬ್ಬುಗಳಿಂದಾದ ಬಾಯಿ ಉಂಟು. ಬಾಯಿಯಿಂದ ಮುಂದಕ್ಕೆ ಚಿಕ್ಕ ಅನ್ನನಾಳವಿದೆ. ಇದರಲ್ಲಿ ಪ್ರಬಲ ಸ್ನಾಯುಗಳಿವೆ. ಇದಕ್ಕೆ ಆಹಾರ ಪದಾರ್ಥಗಳನ್ನು ಹೀರಿಕೊಳ್ಳಬಲ್ಲ ಸಾಮಥ್ರ್ಯ ಉಂಟು. ಅನ್ನನಾಳದಿಂದ ಮುಂದಕ್ಕೆ ಸ್ನಾಯುರಹಿತ ಉದ್ದ ಕರುಳಿದೆ. ಕೊನೆಯಲ್ಲಿ ಗುದದ್ವಾರ. ದೇಹದ ಎರಡು ಪಕ್ಕಗಳಲ್ಲಿ ವಿಸರ್ಜನ ನಾಳಗಳೂ (ಎಕ್ಸ್‍ಕ್ರಿಟರಿ ಡಕ್ಟ್ಸ್) ಮೇಲು ಮತ್ತು ಕೆಳಭಾಗಗಳಲ್ಲಿ ನರ ತಂತುಗಳೂ ಇವೆ. ಮೇಲ್ಮೆಯ ಹೊರ ತ್ವಚವನ್ನು ಕ್ಯೂಟಿಕಲ್ ಎನ್ನುವ ಗಡಸು ಪೊರೆ ಆವರಿಸಿದೆ. ದೇಹಭಿತ್ತಿಯ ಗಾತ್ರ ಪ್ರಧಾನವಾಗಿ ಸ್ನಾಯುಕೋಶಗಳಿಂದಲೇ ಆಗಿದೆ. ಭಿತ್ತಿಯ ಒಳಗೆ ಕರುಳು ಮತ್ತು ಪ್ರಜನನೇಂದ್ರಿಯಗಳು ಭರ್ತಿಯಾಗಿವೆ. ಕರುಳು ನಡುತ್ತಕ್ಕಿನಿಂದ (ಮೀಸೋಡರ್ಮ್) ಆವೃತವಾಗಿಲ್ಲದ್ದರಿಂದ ಅದಕ್ಕೂ ದೇಹಭಿತ್ತಿಗೂ ನಡುವೆ ಇರುವ ಸ್ಥಳ ನಿಜವಾದ ಸೀಲೋಮ್ ಅಲ್ಲ.

ಹೊರತ್ವಕ್ಕು, ನಡುತ್ವಕ್ಕು, ಒಳತ್ವಕ್ಕುಗಳೆಂಬ (ಎಕ್ಟೋಡರ್ಮ್, ಮೀಸೋಡರ್ಮ್, ಎಂಡೋಡರ್ಮ್) ಮೂರು ಭ್ರೂಣಾವಸ್ಥೆಯ ಪದರಗಳು ವಿಕಾಸದಲ್ಲಿ ಮೊದಲಿಗೆ ಕಂಡುಬರುವ ಅಲ್ಪವಿಕಾಸಿ ಜೀವಿಗಳ ಗುಂಪಿಗೆ ಸೇರಿದೆ. ಇದರ ಅಂಗರಚನೆ ಸರಳವಾಗಿದೆ. ಪೂರ್ಣಪರತಂತ್ರ ಜೀವಿಯಾದ್ದರಿಂದ ದೇಹದಲ್ಲಾಗುವ ಅಂಗರಚನಾ ವ್ಯತ್ಯಾಸಗಳನ್ನು ಅಭ್ಯಸಿಸಲೂ ಜಂತುಹುಳು ಒಂದು ಒಳ್ಳೆಯ ಉದಾಹರಣೆ. ಜಂತು ಹುಳುವಿನ ದೇಹದಲ್ಲಿ ಪ್ರಜನನೇಂದ್ರಿಯಗಳು ಅದರ ಮುಂದಿನ 1/3 ಭಾಗದಿಂದ ಪ್ರಾರಂಭವಾಗಿ ಕೊನೆಯತನಕ ಆಕ್ರಮಿಸಿಕೊಂಡಿರುತ್ತದೆ. ಗಂಡಿನಲ್ಲಿ ಸಣ್ಣ ಗಂಟಿನಂತಿರುವ ವೃಷಣ ಸ್ವಲ್ಪ ದೊಡ್ಡದಾಗಿ ನಾಳಾಕಾರವಾಗಿರುವ ವೀರ್ಯಾಣು ತೆರೆದುಕೊಳ್ಳುತ್ತದೆ. ಇದು ಇನ್ನೂ ಮುಂದೆ ವೀರ್ಯಾಣುಗಳು ಶೇಖರವಾಗುವ ದೊಡ್ಡ ನಾಳಾಕಾರದ ವೀರ್ಯಾಣುಕೋಶವಾಗಿ (ಸೆಮಿನಲ್ ವೆಸಿಕಲ್) ಜನನರಂಧ್ರದಲ್ಲಿ ಕೊನೆಗೊಳ್ಳುತ್ತದೆ. ಜನನರಂಧ್ರ ಕರುಳಿನ ತುದಿಯಲ್ಲಿರುವ ಗುದದ್ವಾರದ ಹತ್ತಿರವೇ ಹೊರಕ್ಕೆ ತೆರೆದುಕೊಳ್ಳುವುದು. ಸ್ಥಳದಲ್ಲಿ ಎರಡು ಉಪಗುಚ್ಛಗಳು ಚಾಚಿಕೊಂಡಿವೆ. ಹೆಣ್ಣು ಹುಳುವಿನಲ್ಲಿ ಒಂದು ಜೋಕೆ ಗರ್ಭಕೋಶಗಳು ಯೋನಿಯೊಳಕ್ಕೆ ತೆರೆದುಕೊಳ್ಳುವುವು. ಅಂಡಾಶಯಗಳು ಉದ್ದವಾಗಿ ಸುರುಳಿ ಸುತ್ತಿಕೊಂಡಿವೆ. ಇವುಗಳಲ್ಲಿ ಉತ್ಪತ್ತಿಯಾದ ಅಂಡಾಣುಗಳು ಆಯಾ ಅಂಡನಾಳಗಳ ಮೂಲಕ ಅದೇ ಕಡೆಯ ಗರ್ಭಕೋಶಕ್ಕೆ ಸೇರಿ ಅಲ್ಲಿ ಸಂಗ್ರಹವಾಗುವುವು. ಗರ್ಭಧಾರಣೆ ಆದ ಮೇಲೆ ಹೆಣ್ಣು ಪ್ರತಿದಿವಸವೂ ಸುಮಾರು 2 ಲಕ್ಷ ತತ್ತಿಗಳನ್ನಿಡುತ್ತದೆ. ಇವು ಆಥಿಕೇಯನ ಮಲದ ಮೂಲಕ ದೇಹದಿಂದ ವಿಸರ್ಜಿತವಾಗುತ್ತದೆ. ತತ್ತಿಗಳಿಗೆ ಚಿನ್ನದ ಬಣ್ಣದ ದೃಢವಾದ ರಕ್ಷಣಾ ಕವಚವಿದೆ.

ಹರಡುವಿಕೆ

[ಬದಲಾಯಿಸಿ]

ತತ್ತಿಗಳ ಸೋಂಕಿರುವ ಆಹಾರ, ನೀರುಗಳ ಮೂಲಕ ಮಾನವನಿಂದ ಮಾನವನಿಗೆ ಸೋಂಕು ಹರಡುವುದು. ನೇರವಾಗಿ ವಿಸರ್ಜಿತವಾದ ತತ್ತಿಗಳಲ್ಲಿ ಭ್ರೂಣ ನೆರಳಿರುವ ಕಡೆ, ಹಸಿಯಾದ ಆದರೆ ಬೆಚ್ಚಗಿರುವ ಮಣ್ಣಿನಲ್ಲಿ 2-3 ವಾರ ಬೆಳೆಯುತ್ತದೆ. ಆದರೂ ತತ್ತಿ ಒಡೆಯುವುದಿಲ್ಲ. ಅಪರೂಪವಾಗಿ ತತ್ತಿಗಳು ಒಡೆದು ಮರಿಗಳು ಹೊರಬಿದ್ದು ಇವು ಆತಿಥೇಯ ಜೀವಿಯ ಚರ್ಮವನ್ನು ಕೊರೆದುಕೊಂಡು ರಕ್ತಗತವಾಗುವುದೂ ಕಂಡುಬಂದಿದೆ. ಹುಳುವಿರುವ ವ್ಯಕ್ತಿ ವಾಸಿಸುತ್ತಿರುವ ಕಡೆ ಸ್ವಾಭಾವಿಕವಾಗಿಯೇ ಮಲವಿಸರ್ಜನಾ ಸ್ಥಳದ ಮಣ್ಣಿನಲ್ಲಿ ಲಕ್ಷಾಂತರ ತತ್ತಿಗಳು ಇರುತ್ತವೆ. ಇಂಥ ಮಣ್ಣು ಬೆರೆತ ನೀರು ತರಕಾರಿಗಳ ಸೇವನೆಯಿಂದ ಇತರ ವ್ಯಕ್ತಿಯೊಳಗೆ ಹುಳುವಿನ ಪ್ರವೇಶವಾಗುತ್ತದೆ. ಆದರೆ ತತ್ತಿಯಿಂದ ಜಂತುಹುಳು ನೇರವಾಗಿ ಬೆಳೆದುಬರದೆ ತತ್ತಿಯ ಕರುಳಿನಲ್ಲಿ ಒಡೆದು ಮರಿಯಾಗಿ, ಈ ಮರಿಗಳು ಕರುಳಿನ ರಕ್ತನಾಳ ದುಗ್ಧರಸನಾಳಗಳ ಮೂಲಕ ಪುಪ್ಪುಸಗಳನ್ನು ಸೇರಿ ಅಲ್ಲಿ ಕೆಲದಿವಸಗಳ ಕಾಲ ಬೆಳೆಯುತ್ತವೆ. ಅನಂತರ ಶ್ವಾಸನಾಳಗಳ ಮೂಲಕ ಗಂಟಲಿಗೆ ಬಂದು ಉಗುಳಿನೊಡನೆ ನುಂಗಲ್ಪಟ್ಟು ಪುನಃ ಜಠರ ಕರುಳುಗಳನ್ನು ಸೇರುತ್ತವೆ. ಶ್ವಾಸಕೋಶವನ್ನು ತಲುಪಿ ಅಲ್ಲಿ ಕೆಲದಿವಸಗಳ ಕಾಲ ಬೆಳೆಯಬೇಕಾದ್ದು ಅಗತ್ಯ. ತತ್ತಿಯ ಸೇವನೆಯಿಂದ ಪೂರ್ಣವಾಗಿ ಬೆಳೆದ ಹುಳುವಾಗುವುದಕ್ಕೆ ಮಾನವರಲ್ಲಿ ಸುಮಾರು ಹತ್ತು ದಿವಸಗಳು ಬೇಕು. ಕರುಳನ್ನು ಸೇರಿದ ಮೇಲೆ ಅಲ್ಲಿ ನೆಲೆನಿಲ್ಲುವುದು ಮಾನವರಲ್ಲಿರುವ ಜಂತುಹುಳುವಿನದ ಪ್ರಭೇದ ಮಾತ್ರ. ಬೇರೆ ಪ್ರಾಣಿಗಳಲ್ಲಿರುವ ಪ್ರಭೇದಗಳು ಅಕಸ್ಮಾತ್ ಮಾನವ ದೇಹದೊಳಹೊಕ್ಕರೆ ಅವು ಹೀಗೆ ನೆಲೆವಿಲ್ಲಲಾರದೆ ಮಲದೊಂದಿಗೆ ವಿಸರ್ಜಿತವಾಗುತ್ತವೆ. ಜಂತುಹುಳುವಿನ ಸಾಮಾನ್ಯ ವಾಸ ಕರುಳಿನಲ್ಲೇ. 3ರಿಂದ 5 ವರ್ಷದ ಮಕ್ಕಳಲ್ಲಿ ಇದರ ಹಾವಳಿ ಬಹಳ, ಹುಳು ಕರುಳುಭಿತ್ತಿಯನ್ನು ಕಚ್ಚಿಕೊಂಡಿರುವುದಿಲ್ಲ ; ಅಲ್ಲದೆ ಅದಕ್ಕೆ ಚಲನಶೀಲತೆ ಉಂಟು. ಹೀಗಾಗಿ ಅದು ಜೀರ್ಣನಾಳದಲ್ಲಿ ಅಲ್ಲಿಂದಿಲ್ಲಿಗೆ ಚಲಿಸುತ್ತ ಗುದದ್ವಾರದಿಂದಲೋ ಕೆಲವು ಸಮಯ ಬಾಯಿಯಿಂದಲೋ ಹೊರಬಂದು ಬಿಡಬಹುದು. ಮಲವಿಸರ್ಜನೆ ಮಾಡುವಾಗ ಮತ್ತು ವಾಂತಿಯಾದಾಗ ಹೀಗೆ ಹೊರಬರುವುದು ಸಾಮಾನ್ಯ. ಅನೇಕ ವೇಳೆ ವ್ಯಕ್ತಿಯಲ್ಲಿ ಹುಳುಗಳಿರುವ ವಿಷಯ ಗೊತ್ತಾಗುವುದು ಒಂದು ಹುಳು ಹೀಗೆ ಹೊರಬಂದಮೇಲೆಯೇ. ಮಲ ಪರೀಕ್ಷೆಯಿಂದ ತತ್ತಿಗಳನ್ನು ಗುರುತಿಸಿ ವ್ಯಕ್ತಿಯಲ್ಲಿ ಹುಳು ಇರುವ ವಿಷಯ ಪತ್ತೆ ಹಚ್ಚಬಹುದು. ಒಬ್ಬ ವ್ಯಕ್ತಿಯಲ್ಲಿ ಕೇವಲ ನಾಲ್ಕಾರು ಹುಳುಗಳು ಇರಬಹುದು. ಇನ್ನೂ ಹೆಚ್ಚಾಗಿದ್ದರು ಇವು ಯಾವ ಗಣನೀಯವಾದ ತೊಂದರೆಯನ್ನೂ ಮಾಡದೆ ಪತ್ತೆಯಾಗದೇ ಹೋಗಬಹುದು. ಅಪರೂಪವಾಗಿ ಇವು ನೂರಾರು ಇದ್ದು ಗಂಟು ಕಟ್ಟಿಕೊಂಡು ಕರುಳಿನಲ್ಲಿ ಆಹಾರ ಸಾಗಾಣಿಕೆಗೆ ಅಡಚಣೆಯನ್ನು ಉಂಟುಮಾಡಿ ಹೊಟ್ಟೆನೋವು, ಉಬ್ಬರ, ವಮನಗಳನ್ನು ಉಂಟು ಮಾಡಬಹುದು. ಕೆಲವು ಸಲ ಸ್ವಲ್ಪವೇ ಹುಳುಗಳಿದ್ದರೂ ನಾನಾ ತೊಂದರೆಗಳ ಅನುಭವವಾಗಬಹುದು. ಹುಳುಗಳು ಒಸರಿಸುವ ಆಸ್ಕರಾನ್ ಅಥವಾ ಆಸ್ಕರೇಸ್ ಎಂಬ ವಿಶಿಷ್ಟವಾದ ವಿಷಪದಾರ್ಥದಿಂದ ನರೋದ್ರೇಕಜ, ಅಲರ್ಜಿ ಮುಂತಾದ ತೊಂದರೆಗಳು ಸಂಭವಿಸಬಹುದು ಎಂಬ ಅಭಿಪ್ರ್ರಾಯ ಉಂಟು. ಅಲ್ಲದೆ ಅಲಸ್ಯ, ನಿಶ್ಯಕ್ತಿ, ತಲೆಸುತ್ತು, ಮಾನಸಿಕ ಉದ್ರೇಕ, ನಿದ್ರಾನಾಶ ಮುಂತಾದವು ಕಂಡುಬರುತ್ತವೆ. ಜ್ವರ, ಕೆಮ್ಮು, ಉಬ್ಬಸ, ಮೈಕಡಿತ ಇವೂ ಉಂಟಾಗಬಹುದು. ಮಕ್ಕಳು ನಿದ್ರೆಯ ವೇಳೆಯಲ್ಲಿ ಕಟಕಟನೆ ಹಲ್ಲು ಕಡಿಯುತ್ತಿದ್ದರೆ ಉದರಲ್ಲಿ ಜಂತುಹುಳು ಇರುವುದೆಂಬ ನಂಬಿಕೆ. ಆದರೆ ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಹುಳುವಿಗೆ ಚಲನಸಾಮಾಥ್ರ್ಯ ಇರುವುದರಿಂದ ಅದು ಪಿತ್ತಕೋಶ, ಪಿತ್ತನಾಳಗಳನ್ನೂ ಆಕ್ರಮಿಸಿ ಪಿತ್ತರಸದ ಹರಿಯುವಿಕೆಗೆ ಅಡಚಣೆ ಮಾಡಿ ಕಾಮಾಲೆಯನ್ನು ಉಂಟು ಮಾಡಬಹುದು, ಸೋಂಕು ಅಂಟಿದಾಗ ಅಸಂಖ್ಯಾತ ಮರಿಗಳು ಏಕಕಾಲಿಕವಾಗಿ ಪುಪ್ಪಸವನ್ನು ತಲುಪಿದರೆ ನ್ಯೂಮೋನಿಯಾವನ್ನು ಹೋಲುವ ರೋಗಸ್ಥಿತಿ ಉಂಟಾಗಬಹುದು. ಮರಿಗಳು ರಕ್ತನಾಳಗಳ ಮೂಲಕ ಪುಪ್ಪಸವನ್ನು ಸೇರುವುದಲ್ಲದೆ ಅಕಸ್ಮಾತ್ ಮಿದುಳನ್ನು ತಲುಪಿದರೆ ಅಲ್ಲಿ ನೇರಕೇಂದ್ರಗಳು ಉದ್ರೇಕಗೊಂಡು ಅನೇಕ ಮಕ್ಕಳಲ್ಲಿ ನರಸಂಬಂಧ ಅವ್ಯವಸ್ಥೆಗಳು ಕೂಡ ಕಂಡುಬರುವುದು.

ಚಿಕಿತ್ಸೆ

[ಬದಲಾಯಿಸಿ]

ಹುಳು ಇರುವ ವ್ಯಕ್ತಿಗೆ ಕೆಲವು ವರ್ಷಗಳ ಹಿಂದೆ ಸ್ಯಾನ್ ಟೋನಿನ್ ಎಂಬ ಮದ್ದನ್ನು ಕೊಡಲಾಗುತ್ತಿತ್ತು. ಈಚೆಗೆ ಪೈಪರಿಸಿನ್ ಸಂಯುಕ್ತಗಳನ್ನು ಕೊಡಲಾಗುತ್ತದೆ. ಬೆಫೀನಿಯಮ್ ಹೈಡ್ರಾಕ್ಸಿನ್ಯಾಫ್ತೊಯೇಟ್, ಡೈಈಥೈಲ್ ಕಾರ್ಬಮಸೀನ್, ಥೈಯಬೆಂಡಸೋಲ್‍ಗಳನ್ನೂ ಜಂತುಹುಳು ನಿರ್ಮೂಲನಕ್ಕಾಗಿ ಬಳಸಬಹುದು. ಮೇಲಿಂದ ಮೇಲೆ ಸೋಂಕು ಉಂಟಾಗಿ ಜನತೆಯಲ್ಲಿ ಜಂತುಹುಳುವಿನ ಇರುವಿಕೆ ಸ್ಥಳೀಯ ಪಿಡುಗಾಗಬಹುದಾದ್ದರಿಂದ ಇದನ್ನು ನಿವಾರಿಸಲು ವ್ಯಕ್ತಿ ಚಿಕಿತ್ಸೆ ಮಾತ್ರವಲ್ಲದೆ ಸಾರ್ವಜನಿಕ ಕ್ರಮಗಳನ್ನೂ ಕೈಗೊಳ್ಳಬೇಕು. ವಿಸರ್ಜಿತ ಮಲವನ್ನು ಸರಿಯಾದ ರೀತಿಯಲ್ಲಿ ನಿರುಪಾಧಿಕವಾಗಿ ವಿತರಣೆ ಮಾಡಬೇಕು.

ಉಲ್ಲೇಖಗಳು

[ಬದಲಾಯಿಸಿ]
  1. "eMedicine - Ascaris Lumbricoides : Article by Aaron Laskey". Archived from the original on 27 January 2008. Retrieved 2008-02-03.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: