ಚಕಮಕಿ ಕಲ್ಲು
ಚಕಮಕಿ ಕಲ್ಲು ಸಿಲಿಕದ ಅಸ್ಫಟಿಕ ರೂಪದಿಂದಾದ ಶಿಲೆ (ಫಿಂಟ್). ಬೆಣಚುಕಲ್ಲಿನ ಇನ್ನೊಂದು ರೂಪ. ಬಣ್ಣ ಕಪ್ಪು ಅಥವಾ ಊದಾ ಕಪ್ಪು. ಚಕಮಕಿ ಕಲ್ಲು ಮುಖ್ಯವಾಗಿ ಉಂಡೆ ಇಲ್ಲವೆ ಮುದ್ದೆಮುದ್ದೆಯಾಗಿ ಚಾಕ್ ಮತ್ತು ಸುಣ್ಣ ಶಿಲೆಗಳಲ್ಲಿ ದೊರೆಯುತ್ತದೆ. ಇದು ಬಲು ಕಠಿಣ ಹಾಗೂ ತೂಕವಾದ ಕಲ್ಲು. ಇದರ ಕಾಠಿಣ್ಯಾಂಕ 7.5. ಇದನ್ನು ಸುತ್ತಿಗೆಯಿಂದ ಬಡಿದಾಗ ಹೋಳುಗಳಾಗಿ ಒಡೆಯುತ್ತದೆ. ಮೈಗಳು ಸಿಬಿರು ಸಿಬಿರಾಗಿರುತ್ತವೆ. ಹೋಳುಮೈಯ ಒಳಭಾಗದಲ್ಲಿ ಉಕ್ಕಿನಂಥ ಊದಾಬಣ್ಣವನ್ನೂ ಹೊರಭಾಗದಲ್ಲಿ ಬಿಳಿಯ ಬಣ್ಣವನ್ನೂ ಕಾಣಬಹುದು. ಆದಿಮಾನವನಿಗೂ ಈ ಶಿಲೆಗಳಿಗೂ ಬಹಳ ನಂಟು. ಆತ ಈ ಶಿಲೆಯಿಂದಲೇ ಆಯುಧಗಳನ್ನು ನಿರ್ಮಿಸುತ್ತಿದ್ದ. ಅಲ್ಲದೆ ಬೆಂಕಿಯನ್ನು ಆವಿಷ್ಕರಿಸಿದ್ದು ಪ್ರಾಯಶಃ ಚಕಮಕಿಯಿಂದ ಹೊರಟ ಕಿಡಿಯಿಂದ. ಹದಿನೆಂಟನೆಯ ಶತಮಾನದ ಅಂತ್ಯದವರೆಗೂ ಈ ಕಲ್ಲಿನಿಂದ ಚಕಮಕಿ ಮೀಟಿಕೆಗಳನ್ನು (ಫ್ಲಿಂಟ್ ಲಾಕ್ಸ್) ತಯಾರಿಸಿ ಬಂದೂಕಗಳಲ್ಲಿ ಅಳವಡಿಸುತ್ತಿದ್ದರು. ಹತ್ತಿಯನ್ನು ಚಕಮಕಿ ಕಲ್ಲಿನ ಮೇಲಿಟ್ಟು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಿಂದ ಉಕ್ಕಿನ ಚೂರನ್ನು ಒಂದೆರಡು ಬಾರಿ ಚಕಮಕಿಸಿದರೆ ಸಾಕು. ಅದರಿಂದ ಬರುವ ಕಿಡಿಯಿಂದ ಹತ್ತಿ ಹೊತ್ತಿಕೊಂಡು ಬೆಂಕಿ ಸಿದ್ಧವಾಗುತ್ತದೆ. ಅಶುದ್ಧವಾದ ಚಕಮಕಿಗೆ ಚರ್ಟ್ಶಿಲೆ ಎಂದು ಹೆಸರು. ಈ ಕಲ್ಲು ಮಂದವಾದ ಪೊರೆಗಳಲ್ಲಿ ಅಪಾರದರ್ಶಕ, ಸೂಕ್ಷ್ಮ ತೆಳುಪೊರೆಗಳಲ್ಲಿ ಪಾರದರ್ಶಕ. ಅತಿ ಕಾಠಿಣ್ಯ ಮತ್ತು ಬಣ್ಣದಿಂದಾಗಿ ಇದರ ಉಪಯುಕ್ತತೆ ಹೆಚ್ಚು. ಕಪ್ಪು ಚಕಮಕಿಯನ್ನು ಅಕ್ಕಸಾಲಿಗರು ಹಾಗೂ ಚಿನ್ನ ವ್ಯಾಪಾರಿಗಳು ಚಿನ್ನದ ಪರಿಶುದ್ಧತೆಯನ್ನು ಪರೀಕ್ಷಿಸುವ ಒರೆಗಲ್ಲುಗಳನ್ನಾಗಿ ಉಪಯೋಗಿಸುತ್ತಾರೆ.
ಒಳ್ಳೆಯ ದರ್ಜೆಯ ಚಕಮಕಿ ಕಲ್ಲು ಬಿಲ್ಜಿಯಮ್, ಇಂಗ್ಲೆಂಡ್ ಹಾಗೂ ಪ್ಯಾರಿಸುಗಳಲ್ಲಿ ದೊರೆಯುವುದು. ಭಾರತದಲ್ಲಿ ಇದು ಬೆಸಾಲ್ಟ್ ಎಂಬ ಅಗ್ನಿಶಿಲೆ ದೊರೆಯುವ ಪ್ರದೇಶಗಳಲ್ಲಿ ಜಾಸ್ಟರ್, ಅಗೇಟ್, ಚಾಲ್ಸ್ ಡನಿ ಮತ್ತು ಚರ್ಟುಗಳೊಂದಿಗೆ ಸಿಕ್ಕುತ್ತದೆ. ಈ ಖನಿಜಗಳೆಲ್ಲವೂ ದಖನ್ ಟ್ರಾಪ್ ಮತ್ತು ರಾಜಮಹಲ್ ಟ್ರಾಪುಗಳಲ್ಲಿ ಹೇರಳವಾಗಿ ಇವೆ. ಗೋದಾವರಿ, ಕೃಷ್ಣ ಮತ್ತು ನರ್ಮದ ನದಿಗಳಲ್ಲೂ ಚಕಮಕಿ ಉಂಡೆಗಳನ್ನು ಕಾಣಬಹುದು. ಕರ್ನಾಟಕದಲ್ಲಿ ಗುಲ್ಬರ್ಗ, ಬೆಳಗಾಂವಿ, ಬಿಜಾಪುರ ಹಾಗೂ ಬೀದರ್ ಜಿಲ್ಲೆಗಳಲ್ಲಿ ದೊರೆಯುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Flint Architecture of East Anglia Book by Stephen Hart
- Flintsource.net European Artefacts – detailed site
- Flint circles and paramoudra – Beeston Bump Archived 2017-12-28 ವೇಬ್ಯಾಕ್ ಮೆಷಿನ್ ನಲ್ಲಿ.
- Paramoudras and flint circles photograph collection
- Winchester Cathedral Close
- Flint and the Conservation of Flint Buildings Introduction to the historical use of flint in construction and the repair and conservation of historic flint buildings