ಪ್ರಚಾರ
ಪ್ರಚಾರ ಎಂದರೆ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ, ತಿದ್ದುವ ಅದರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ವಿಷಯ, ವಾದ, ವದಂತಿ ಮುಂತಾದವುಗಳ ವಿತರಣೆ, ಪ್ರಸಾರ.[೧] ಇಂಗ್ಲಿಷಿನಲ್ಲಿ ಪಬ್ಲಿಸಿಟಿ, ಪ್ರಾಪಗ್ಯಾಂಡ ಎಂಬ ಎರಡು ಪದಗಳ ಪೈಕಿ ಪಬ್ಲಿಸಿಟಿಯನ್ನು ಕೈಗೊಂಡ, ಅಥವಾ ಸತ್ಪರಿಣಾಮವನ್ನುಂಟುಮಾಡುವ ಪ್ರಚಾರವೆಂದೂ ಪ್ರಾಪಗ್ಯಾಂಡವನ್ನು ದುರುದ್ದೇಶದಿಂದ ಕೈಗೊಂಡ, ದುಷ್ಪರಿಣಾಮ ಉಂಟುಮಾಡುವ ಪ್ರಚಾರವೆಂದೂ ಪರಿಗಣಿಸಿ ಮೊದಲನೆಯದನ್ನು ಪ್ರಕಟಣೆ ಅಥವಾ ಪ್ರಚಾರ ಕಾರ್ಯವೆಂದೂ ಎರಡನೆಯದನ್ನು ಪ್ರಚಾರ ಎಂದೂ ಕರೆಯುವುದುಂಟು. ಸಾರ್ವಜನಿಕರ ಆಸೆ-ಆಕಾಂಕ್ಷೆಗಳನ್ನು ಅಧೀನಪಡಿಸಿಕೊಂಡು ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರಿ ಅದನ್ನು ಬದಲಾಯಿಸುವ ಕಲೆ ಮತ್ತು ತಂತ್ರವೇ ಪ್ರಚಾರವೆಂದೂ ಸಾರ್ವಜನಿಕ ಸೇವೆ ಮಾಡುವ ಉದ್ದೇಶದಿಂದ ವಾಸ್ತವಾಂಶಗಳನ್ನು ಸರಿಯಾಗಿ ತಿಳಿಸುವುದು ಪ್ರಚಾರ ಕಾರ್ಯವೆಂದೂ ಹೇಳಲಾಗಿದೆ. ವಿವಿಧ ಹಿತಗಳ ಸಂಘರ್ಷಣೆಗಳಿಂದ ಕೂಡಿದ, ಅತ್ಯಂತ ಸಂಕೀರ್ಣವಾದ, ಅಗಾಧ ಪ್ರಚಾರ ಸಾಧನಗಳಿಂದ ಕೂಡಿದ ಇಂದಿನ ಸಮಾಜದಲ್ಲಿ ಈ ವ್ಯತ್ಯಾಸವನ್ನು ಗುರುತಿಸುವುದು ಕಷ್ಟವಾಗುತ್ತದೆ. ಸುಳ್ಳನ್ನೇ ಹಲವು ಸಾರಿ ಹೇಳಿದಾಗ ಅದು ನಿಜವೆಂದೇ ಭ್ರಮೆ ಹುಟ್ಟುತ್ತದೆ. ಎಲ್ಲವನ್ನೂ ಪ್ರಚಾರವೆಂದೂ ದುರುದ್ದೇಶದಿಂದ ಕೂಡಿದ, ತಪ್ಪು ಹಾದಿಗೆ ಎಳೆದೊಯ್ಯುವ, ಸ್ವಾರ್ಥ ಮೂಲವಾದ ಪ್ರಚಾರವನ್ನು ಅಪಪ್ರಚಾರವೆಂದೂ ಪರಿಗಣಿಸಬಹುದಾಗಿದೆ. ಸ್ವಹಿತ ಸಾಧಿಸುವ ಸಲುವಾಗಿ ವಿಚಾರಗಳನ್ನು ತಪ್ಪಾಗಿ ತಿಳಿಸುವುದು ಅಪಪ್ರಚಾರ. ಸಾರ್ವಜನಿಕ ಅಭಿಪ್ರಾಯದ ಮೇಲೆ ಅದು ಅನುಚಿತ ಪ್ರಭಾವ ಬೀರುತ್ತದೆ. ಅನೇಕ ವೇಳೆ ಅದು ಅಗೋಚರವಾಗಿರುತ್ತದೆ. ಅದು ಸುಳ್ಳು ವಿಚಾರಗಳ ಮೂಲಕ ಸಾರ್ವಜನಿಕರ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಅದರ ಗುರಿ ವಿನಾಶಕಾರಿ. ಪ್ರಚಾರಕರು ಯಾರನ್ನು ದ್ವೇಷಿಸುತ್ತಾರೋ ಅವರ ವಿರುದ್ಧವಾಗಿ ಸಾರ್ವಜನಿಕರ ಕ್ರೋಧವನ್ನು, ಯಾರನ್ನು ಪ್ರೀತಿಸುತ್ತಾರೋ ಅವರ ಬಗ್ಗೆ ಸಾರ್ವಜನಿಕರ ಒಲವನ್ನು ತಿರುಗಿಸಲು ಇಂಥ ಪ್ರಚಾರ ಉಜ್ಜುಗಿಸುತ್ತದೆ. ಜರ್ಮನಿಯ ಹಿಟ್ಲರನ ನಾಟ್ಸಿ ಸರ್ಕಾರ ಇಂಥ ಪ್ರಚಾರ ಕೈಗೊಂಡಿತ್ತು. ಅವನ ಮಂತ್ರಿ ಗೊಬೆಲ್ಸನ ಪ್ರಚಾರ ತುಂಬ ಪ್ರಸಿದ್ಧವಾಗಿದೆ.
ಪ್ರಜಾಪ್ರಭುತ್ವದ ಗುರಿಸಾಧನೆಯಲ್ಲಿ ಪ್ರಚಾರದ ಪಾತ್ರ ಮಹತ್ತರವಾದ್ದು. ಆಧುನಿಕ ಯುಗವನ್ನು ಪ್ರಜಾಪ್ರಭುತ್ವದ ಯುಗವೆಂದು ಪರಿಗಣಿಸಲಾಗಿದೆ. ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ ಪ್ರಜಾಸತ್ತಾತ್ಮಕ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ. ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿ ಪರಮಾಧಿಕಾರವನ್ನು ಪಡೆದಿರುವ ಪ್ರಜೆಗಳೇ ಒಡೆಯರು. ಅವರ ಪೂರ್ಣ ಸಹಕಾರವಿಲ್ಲದಿದ್ದರೆ ಸುಖೀರಾಜ್ಯದ ಗುರಿಯುಳ್ಳ ಆಧುನಿಕ ರಾಷ್ಟ್ರ ವಿವಿಧ ಕಾರ್ಯಗಳನ್ನು ನಿರ್ವಹಿಸಲಾರದು. ಸಾರ್ವಜನಿಕ ವ್ಯವಹಾರಗಳ ಬಗ್ಗೆ ನಿಖರವಾದ ವಿವರಗಳನ್ನು ಸಾರ್ವಜನಿಕರಿಗೆ ತಿಳಿಯುವಂತೆ ಮಾಡದಿದ್ದರೆ ಆಡಳಿತ ಕಾರ್ಯಗಳಲ್ಲಿ ಅವರ ಸಹಕಾರ ಪಡೆಯುವುದು ಕಷ್ಟವಾಗುತ್ತದೆ. ಪ್ರಜಾಸತ್ತಾತ್ಮಕ ಆಡಳಿತ ಪ್ರಜೆಗಳ ಆಶೋತ್ತರಗಳನ್ನು ಅರಿತು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಾದರೆ ಸಾರ್ವಜನಿಕ ಅಭಿಪ್ರಾಯದ ಬಗ್ಗೆ ತಿಳಿವಳಿಕೆ ಹೊಂದಿರಬೇಕಾಗುತ್ತದೆ. ಅದನ್ನು ಸುಮುಖವಾಗಿ ರೂಪಿಸಬೇಕಾಗುತ್ತದೆ.
ಸಾರ್ವಜನಿಕ ಅಭಿಪ್ರಾಯಗಳನ್ನು ಸಾಮಾಜಿಕ ರಾಜಕೀಯ ನಾಯಕರು, ಪಕ್ಷಗಳು ಹಾಗೂ ಆರ್ಥಿಕ ಒತ್ತಡ ಗುಂಪುಗಳು ರೂಪಿಸಬಹುದು, ಮಾರ್ಪಡಿಸಬಹುದು ಇಲ್ಲವೇ ಬದಲಾಯಿಸಬಹುದು. ಸಾಮೂಹಿಕವಾಗಿ ವ್ಯಕ್ತಿಗಳ ಜೊತೆ ವ್ಯವಹಾರ ಪ್ರಚಾರದ ಮೂಲಕ ಸಾಧ್ಯ. ರಾಜಕಾರಣಿಗಳ, ಒತ್ತಡ ಗುಂಪುಗಳ ಹಾಗೂ ಸಮಾಜ ಸುಧಾರಕರ ಸಾಧನವಾಗಿ ಪ್ರಚಾರ ಬಳಕೆಯಾಗದಂತೆ ತಡೆಯುವುದು ಅವಶ್ಯ. ಇಂಥ ಸಂದರ್ಭದಲ್ಲಿ ಅರಿವಿನ ಬದಲು ಪೂರ್ವಾಗ್ರಹದಿಂದ ಕೂಡಿದ ಅಭಿಪ್ರಾಯ ಸಮಾಜದಲ್ಲಿ ಮೂಡುತ್ತದೆ. ಪ್ರಜೆಗಳ ಉದ್ವೇಗ, ಕ್ರೋಧ ಮತ್ತು ಆವೇಶಗಳನ್ನು ಚುರುಕುಗೊಳಿಸಿ ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳನ್ನು ವಶಪಡಿಸಿಕೊಳ್ಳಲು ರಾಜಕಾರಣಿಗಳು, ಸಮಾಜ ಸುಧಾರಕರು ಹಾಗೂ ಒತ್ತಡ ಗುಂಪುಗಳು ಪ್ರಯತ್ನ ನಡೆಸುತ್ತವೆ. ಪರಿಣಾಮವಾಗಿ ಸಮಾಜದಲ್ಲಿ ಸಾಮಾಜಿಕ ಬಿಕ್ಕಟ್ಟು ಉಂಟಾಗುತ್ತದೆಯೇ ಹೊರತು ಸಾಮಾಜಿಕ ಸಾಮರಸ್ಯ ಇರುವುದಿಲ್ಲ. ಈ ಶಕ್ತಿಗಳಿಂದ ಮುಕ್ತವಾಗಿ ವಾಸ್ತವವಾದ ಶಿಕ್ಷಣ ಹಾಗೂ ಸರಿಯಾದ ತಿಳಿವಳಿಕೆಯನ್ನು ನೀಡುವುದೇ ಒಳ್ಳೆಯ ಪ್ರಚಾರದ ಗುರಿಯಾಗಬೇಕು.
ಒಂದು ಅರ್ಥದಲ್ಲಿ ಪ್ರಚಾರವೂ ಜಾಹಿರಾತು ಎನ್ನಬಹುದು. ವೃತ್ತ ಪತ್ರಿಕೆ, ಚಲನಚಿತ್ರ, ಆಕಾಶವಾಣಿ, ದೂರದರ್ಶನಗಳ ಮೂಲಕ ಯಾವುದಾದರೂ ಒಂದು ಕಾರ್ಯದ, ವಸ್ತುವಿನ, ವ್ಯಕ್ತಿಯ ಅಥವಾ ಸಂಸ್ಥೆಯ ಬಗ್ಗೆ ನೀಡಿದ ಜಾಹಿರಾತು ಅದು. ಜಾಹಿರಾತು ಮತ್ತು ಪ್ರಚಾರ ಇವುಗಳ ನಡುವೆ ಇರುವ ಪ್ರಮುಖ ವ್ಯತ್ಯಾಸವೆಂದರೆ ಜಾಹಿರಾತಿನ ಉದ್ದೇಶ ವ್ಯಾಪಾರ. ಈ ಕಾರಣದಿಂದಲೇ ಸಾರ್ವಜನಿಕರು ಜಾಹಿರಾತನ್ನು ಸುಲಭವಾಗಿ ಗುರುತಿಸುತ್ತಾರೆ. ಜಾಹಿರಾತಿನ ಬಗ್ಗೆ ಭಾವಪೂರಿತ ಒಲವು ಇರುವುದಿಲ್ಲ. ಆದರೆ, ದುರುದ್ದೇಶದಿಂದ ಕೂಡಿದ ಪ್ರಚಾರವನ್ನೂ ಸುಲಭವಾಗಿ ಗುರುತಿಸಲಾಗದೆ, ಅದರಲ್ಲಿ ಹೇಳಿದ್ದೆಲ್ಲ ಸತ್ಯವಾದುದೆಂದು ನಂಬುವ ಅಪಾಯವುಂಟು. ಪ್ರಚಾರವೂ ಜಾಹಿರಾತೇ ಆಗಿದ್ದರು ಆದರ ಉದ್ದೇಶ ಅಷ್ಟಕ್ಕೇ ಸೀಮಿತವಾಗಿಲ್ಲದೆ, ವಿಚಾರವನ್ನು ವಾಸ್ತವವಾಗಿ ಹೆಚ್ಚು ಜನರಿಗೆ ತಿಳಿಯಪಡಿಸುವುದೇ ಆಗಿರುತ್ತದೆ. ಮನೋರಂಜನೆ, ಆಟಗಳು, ಧಾರ್ಮಿಕ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಸಂಸ್ಥೆಗಳು ಇವೆಲ್ಲವೂ ಪ್ರಚಾರ ಸಾಧನವನ್ನು ಸಾಕಷ್ಟು ಬಳಸಿಕೊಂಡಿವೆ, ಬಳಸಿಕೊಳ್ಳುತ್ತಿವೆ.
ಸಾರ್ವಜನಿರಲ್ಲಿ ತಿಳಿವಳಿಕೆ ಉಂಟುಮಾಡಲು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುವುದು, ತಪ್ಪು ತಿಳಿವಳಿಕೆಯನ್ನು ತಿದ್ದುವುದು ಸಾರ್ವಜನಿರಿಗೆ ಯಾವುದೇ ವ್ಯಕ್ತಿಯ ಸಂಸ್ಥೆಯ ಅಥವಾ ಗುಂಪಿನಿಂದ ಅನ್ಯಾಯವಾಗುತ್ತಿದ್ದರೆ ಅದನ್ನು ಬಹಿರಂಗಪಡಿಸಿ ಸಮಾಜದ ನ್ಯೂನತೆಗಳನ್ನು ತೊಡೆದುಹಾಕಲು ತಕ್ಕ ಕಾರ್ಯಕ್ರಮಗಳನ್ನು ಸಮಾಜ ಕೈಗೊಳ್ಳುವಂತೆ ಮಾಡುವುದು-ಇವನ್ನು ಒಳ್ಳೆಯ ಪ್ರಚಾರ ಸಾಧಿಸುತ್ತದೆ.
ಅಲ್ಲದೆ, ಸರ್ಕಾರ ಹಾಗೂ ಕೈಗಾರಿಕಾ ಚಟುವಟಿಕೆಗಳ ಮೇಲಿನ ಸಾರ್ವಜನಿಕ ನಿಯಂತ್ರಣದ ಸಾಧನವಾಗಿ ಮತ್ತು ಒಬ್ಬ ವ್ಯಕ್ತಿ ಇಲ್ಲವೇ ಒಂದು ಸಂಸ್ಥೆಯ ಪರವಾಗಿ ಸಾರ್ವಜನಿಕರ ಆಸಕ್ತಿ ಅಥವಾ ಒಲವನ್ನು ನಿರ್ದೇಶಿಸುವ ತಂತ್ರವಾಗಿ ಮಹತ್ವವಾದ ಈ ಅನುಕೂಲತೆಗಳನ್ನು ಸಮಾಜಕ್ಕೆ ದೊರಕಿಸಿಕೊಡುವಲ್ಲಿ ಪ್ರಚಾರ ಗಮನಾರ್ಹವಾದ್ದಾಗಿದೆ. ಈ ಎರಡೂ ಬಗೆಗಳಲ್ಲಿ ಮುಖ್ಯವಾದ ಆಧುನಿಕ ಬೆಳವಣಿಗೆಯಾದ ಪ್ರಚಾರ ಕಾರ್ಯ ಬೃಹತ್ ಸಮಾಜದ ಪರಿಣಾಮವಾಗಿದೆ. ಇಂಥ ಸಮಾಜ ಆಧುನಿಕ ವ್ಯವಸ್ಥೆ ಹಾಗೂ ಅದರ ಮುಖ್ಯ ಲಕ್ಷಣಗಳಾದ ನವ್ಯ ರೀತಿಯ ಸಂಪರ್ಕ ಸಾಧನಗಳಾದ ವೃತ್ತಪತ್ರಿಕೆಗಳು ಮುಂತಾದವುಗಳಿಂದ ಆದುದು. ಈ ಸಾಧನಗಳನ್ನು ರಾಜಕೀಯ ಮತ್ತು ಆರ್ಥಿಕ ಶಕ್ತಿಗಳು ದುರುಪಯೋಗಪಡಿಸಿಕೊಳ್ಳದಂತೆ 19 ನೆಯ ಶತಮಾನದಿಂದೀಚೆಗೆ ಪ್ರಯತ್ನಗಳು ನಡೆದಿವೆ. ಅಮೆರಿಕದ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನರು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಂಪುಟ ಸರ್ಕಾರ ಕುರಿತು ಬರೆದಿರುವ ಪ್ರಬಂಧದಲ್ಲಿ, ಶಾಸನ ಕಾರ್ಯವನ್ನು ಪರಿಣಾಮಕಾರಿಯಾಗಿಸಲು ಸಮಿತಿ ವ್ಯವಸ್ಥೆಯ ಉಪಯೋಗವನ್ನು ಕುರಿತು ಹೇಳುತ್ತ, ದೇಶದ ಜನತೆ ತಮ್ಮ ಮುಂದೆ ಇದೆ ಎಂಬ ಭಾವನೆಯಿಂದ ಶಾಸನಗಳನ್ನು ರೂಪಿಸಬೇಕು ಎಂದು ಎಲ್ಲ ಕಾಂಗ್ರೆಸ್ ಸದಸ್ಯರನ್ನು ಒತ್ತಾಯಿಸಿರುವರಲ್ಲದೆ ಅಂಥ ಪ್ರಚಾರದ ವಾತಾವರಣದಲ್ಲಿ ಮಾತ್ರ ಪ್ರತಿನಿಧಿ ಸರ್ಕಾರ ಸಫಲಗೊಳ್ಳುವುದು ಎಂದು ತಿಳಿಸಿದ್ದಾರೆ. ಏಕಸ್ವಾಮ್ಯವನ್ನು ನಿವಾರಿಸುವಂಥದೇ ಸಾರ್ಥಕವಾದ ಪ್ರಚಾರ ಕಾರ್ಯ ಎಂಬ ಅಭಿಪ್ರಾಯ. 19 ನೆಯ ಶತಮಾನದ ಕೊನೆಯಲ್ಲಿ ಮೂಡಿತು. ಇಪ್ಪತ್ತನೆಯ ಶತಮಾನದ ಅಗಾಧ ವೈಜ್ಞಾನಿಕ ತಾಂತ್ರಿಕ ಬೆಳವಣಿಗೆಯ ಫಲವಾಗಿ ಪ್ರಚಾರ ಮಾಧ್ಯಮಗಳು ವೈವಿಧ್ಯಮಯವೂ ಹಲವು ಆಯಾಮಗಳಿಂದ ಕೂಡಿದವೂ ವಿಶ್ವರೂಪಿಗಳೂ ಆಗಿವೆ. ಮಾಧ್ಯಮವೇ ಸಂದೇಶ ಎನ್ನುವ ಮಟ್ಟಿಗೆ ಇದು ಸಂಕೀರ್ಣವಾಗುತ್ತಿದೆ.
ಈಚೆಗಂತೂ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಪ್ರಚಾರ ವ್ಯವಸ್ಥೆಯನ್ನು ತೀಕ್ಷ್ಣವಾಗಿ ಪರೀಕ್ಷಿಸಿ ತೀರ ಹೊಸವೆನಿಸುವ ವಿಧಾನಗಳನ್ನು ಬಳಸಲಾರಂಭಿಸಿದ್ದಾರೆ. ಈ ಮಾತು ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಅನ್ವಯಿಸುವಂತೆ ರಾಷ್ಟ್ರಗಳಿಗೂ ಅನ್ವಯಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]